ಕೆಂಪುಕೋಟೆ ಮೇಲೆ ಭಾಗಧ್ವಜ ಹಾರಿಸುವ ಈಶ್ವರಪ್ಪ (KS Eshwarappa) ಹೇಳಿಕೆ ಖಂಡಿಸಿ ಕಾಂಗ್ರೆಸ್ (congress) ಉಭಯ ಸದನಗಳಲ್ಲೂ ಧರಣಿ ಕೂತಿದೆ. ಎಲ್ಲಿಯವರೆಗೆ ಈಶ್ವರಪ್ಪನವರನ್ನು ಬಿಜೆಪಿ ವರಿಷ್ಠರು ವಜಾಗೊಳಿಸುವುದಿಲ್ಲವೋ ಅಲ್ಲಿಯವರೆಗೆ ಧರಣಿ ಕೈಬಿಡುವುದಿಲ್ಲ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯನವರು ಸ್ಪಷ್ಟವಾಗಿ ಹೇಳಿದ್ದಾರೆ. ಇದು ಈಗ ಅಧಿವೇಶನವನ್ನು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿಸಿದೆ.
ಸದ್ಯ ಎರಡು ದಿನಗಳ ಅಹೋರಾತ್ರಿ ಧರಣಿ ನಡೆಸಿರುವ ಕಾಂಗ್ರೆಸ್ ನಾಯಕರು ಧರಣಿಯನ್ನು ಅಧಿವೇಶನ ಮುಗಿಯುವವರೆಗೆ ಮುಂದುವರೆಸಲು ನಿರ್ಧರಿಸಿದ್ದಾರೆ. ಹಿಜಾಬ್ ವಿವಾದದಲ್ಲಿ (Hijab Row) ಪೇಚಿಗೆ ಸಿಲುಕಿದ್ದ ಕಾಂಗ್ರೆಸ್‌ಗೆ ಹರಿಯುವ ನೀರಿನಲ್ಲಿ ದಡ ಸೇರಲು ಸಿಕ್ಕ ಕಡ್ಡಿಯಾಗಿ ಈಶ್ವರಪ್ಪನವರ ಹೇಳಿಕೆ ಸಿಕ್ಕಿರುವುದಂತೂ ನಿಜ. ಇದರ ನಡುವೆ ನಾಡಿನ ಜ್ವಲಂತ ಸಮಸ್ಯೆಗಳನ್ನು ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕಿದ್ದ ಆಡಳಿತರೂಢ ಬಿಜೆಪಿ ಸರ್ಕಾರ ಕೂಡ ಕ್ರಮ ಕೈಗೊಳ್ಳದೆ ಈಶ್ವರಪ್ಪನವರ ಪರವೇ ವಹಿಸಿಕೊಂಡು ಅಧಿವೇಶನ ಮೊಟಕಿಗೂ ಅವಕಾಶ ಮಾಡಿಕೊಟ್ಟಿರುವುದು ನಾಡಿನ ಜನರ ದುರಾದೃಷ್ಟ.
ಕಾಂಗ್ರೆಸ್ ಹೈಕಮಾಂಡ್ (Congress high command) ನಿಂದಲೂ ಕೂಡ ಈ ಪ್ರಕರಣವನ್ನು ರಾಜಕೀಯವಾಗಿ (Politics) ಬಳಸಿಕೊಳ್ಳಲು ಸೂಚನೆ ನೀಡಲಾಗಿದೆ. ಈ ಧರಣಿ ಹಾಗೂ ಹೋರಾಟವನ್ನು ಸಶಕ್ತವಾಗಿ ಬಳಸಿಕೊಳ್ಳಲು AICC ಕೂಡ ನಿರ್ದೇಶನ ಕೊಟ್ಟಿದೆ. ಹೀಗಾಗಿ ರಾಜ್ಯ ಕಾಂಗ್ರೆಸ್ ನಾಯಕರ ಮೇಲೆ ಈ ಪ್ರಕರಣವನ್ನು ಮುಂದಿಟ್ಟುಕೊಂಡು ಸಾಧ್ಯವಾದಷ್ಟು ರಾಜಕೀಯ ಲಾಭ ಪಡೆಯಲು ನಿರ್ಧರಿಸಿದ್ದಾರೆ. ಅಸಲಿಗೆ ಕೆಲ ಕಾಂಗ್ರೆಸ್ ಶಾಸಕರಿಗೆ (Congress MLA) ಈ ಅಹೋರಾತ್ರಿ ಧರಣಿ ಬಗ್ಗೆ ಕಿಂಚಿತ್ತೂ ಒಲವಿಲ್ಲದಿದ್ದರೂ ಹಿರಿಯ ನಾಯಕರ ಮಾತಿಗೆ ಬಗ್ಗಿ ಸದನದ ಬಾವಿಯಲ್ಲಿ ಧರಣಿಗೆ ಕೂರುತ್ತಿದ್ದಾರೆ.
ಈ ಹಿನ್ನೆಲೆ KPCC ಅಧ್ಯಕ್ಷ ಡಿಕೆ ಶಿವಕುಮಾರ್ ನಿನ್ನೆ ರಾತ್ರಿ ವಿಧಾನಸಭೆಯ ಬಾವಿಯಲ್ಲಿ ಎಲ್ಲಾ ಶಾಸಕರನ್ನು ಕರೆದು ʼʼಎಲ್ಲಿಯ ವರಗೆ ಹೋರಾಟ.?” ಎಂಬ ವಿಷಯದ ಮೇಲೆ ಪಾಠ ಮಾಡಿದ್ದಾರೆ. ಈ ವೇಳೆ ಕೆಲ ಕಾಂಗ್ರೆಸ್ ಶಾಸಕರಿಂದ ಅಸಮಾಧನ ವ್ಯಕ್ತವಾಗಿದೆ. ಆದರೂ ಹೈಕಮಾಂಡ್ ಹಿಜಾಬ್ ವಿವಾದದ ಹೊತ್ತಲ್ಲಿ ಇದನ್ನು ಗಟ್ಟಿಯಾಗಿ ಹಿಡಿದುಕೊಳ್ಳಲು ನಿರ್ಧರಿಸಲಾಗಿದೆ.

ಇನ್ನು ರೋಗಿ ಇಚ್ಚಿಸಿದ್ದು ಹಾಲು ವೈದ್ಯ ಕಲ್ಪಿಸಿದ್ದು ಹಾಲು ಎಂಬ ಖುಷಿಯಲ್ಲಿದೆ ಬಿಜೆಪಿ. ಅಧಿವೇಶನದಲ್ಲಿ ವಿಪಕ್ಷವನ್ನು ಟೆಕ್ನಿಕಲ್ ಆಗಿ ಎದುರಿಸಲು ಶಕ್ತವಲ್ಲದ ಬಿಜೆಪಿ ನಾಯಕರು ಲಸಿಕೆ, ಕೊರೋನಾ (Corona) ಮುಂತಾದ ವಿಷಯವನ್ನು ಮುಂದಿಟ್ಟುಕೊಟ್ಟು ಮೋದಿ ಇಮೇಜ್ ಫ್ರೇಮಿಂಗ್ ಕೆಲಸ ಮಾಡಿಕೊಂಡು ಬರುತ್ತಿದೆ. ಈ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯನವರ (Siddaramaiah) ಪ್ರಶ್ನೆಗೆ ಬಿಜೆಪಿ ನಾಯಕರು ಗಲಿಬಿಲಿಗೊಂಡಿರುವ ವಿಡಿಯೋಗಳೆಲ್ಲಾ ಈಗ ವೈರಲ್ ಆಗಿದೆ. ಹೀಗಾಗಿ ವಿಪಕ್ಷದ ಮರುಪ್ರಶ್ನೆಗಳಿಂದ ತಪ್ಪಿಸಿಕೊಳ್ಳುವ ಯೋಚನೆಯಲ್ಲಿದ್ದ ಬಿಜೆಪಿಗೂ ಕೈ ನಾಯಕರ ಈ ಅಹೋರಾತ್ರಿ ಧರಣಿ ವರದಾನವಾಗಿ ಪರಿಣಮಿಸಿದೆ.
ಇದರ ನಡುವೆ ಬಿಜೆಪಿ ಹಿರಿಯ ನಾಯಕಾರದ ಬಿಎಸ್ ಯಡಿಯೂರಪ್ಪ (BS Yediyurappa), ಸಿಎಂ ಬೊಮ್ಮಾಯಿ ( CM Bommai), ಅರ್ ಅಶೋಕ್ (R Ashok), ಅರಗ ಜ್ಞಾನೇಂದ್ರ (Araga jnandra) ಮುಂದಾವದರು ಕಾಂಗ್ರೆಸ್ ಗೆ ನಾಡಿನ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಆಸಕ್ತಿ ಇಲ್ಲ ಎಂದು ಮತ್ತೊಂದು ದಾಳ ಉರುಳಿಸಿದ್ದು ಕಾಂಗ್ರೆಸ್ ಅನ್ನು ಅಲ್ಪ ಮಟ್ಟಿಗೆ ಇಕ್ಕಟ್ಟು ತಂದಿಟ್ಟಿದೆ. ವಾಸ್ತವದಲ್ಲಿ ತಮ್ಮ ನಿಲುವನ್ನು ಬಿಜೆಪಿ ನಾಯಕರು ಕಾಂಗ್ರೆಸ್ ತಲೆ ಮೇಲೆ ಕಟ್ಟಿ ಹಿಟ್ ಆಂಡ್ ರನ್ ಕೆಲಸ ಮಾಡುತ್ತಿದೆ. ಸಿಎಂ ಬೊಮ್ಮಾಯಿ ಮುಖ್ಯಮಂತ್ರಿಗಳಾದ ಬಳಿಕ ಕೊರೋನಾ ಅಲೆಗಳ ಮೇಲೆ ಆಡಳಿತ ನಡೆಸಿದ್ದು ಬಿಟ್ಟರೆ ಹೇಳಿಕೊಳ್ಳುವ ಯಾವುದೇ ಉತ್ತಮ ನಡೆಗಳು ಮುಂದಿಟ್ಟಿಲ್ಲ. ಅದೇ ಸಮಯಕ್ಕೆ ತಕ್ಕಂತೆ ಹಿಜಾಬ್ ವಿವಾದ ಮುನ್ನೆಲೆಗೆ ಬಂದಿದ್ದು ಮತ್ತು ಬರಿಸಿದ್ದು ನಿಟ್ಟುಸಿರುವ ಬಿಡುವಂತೆ ಮಾಡಿದೆ.
ಅದರೆ ಈಶ್ವರಪ್ಪನವರ ವಿರುದ್ಧ ಯಾವುದೇ ಕ್ರಮ ಇಲ್ಲ ಎಂದು ಗಟ್ಟಿಯಾಗಿ ನಿಂತಿರುವ ಬಿಜೆಪಿ ಹಿರಿಯ ನಾಯಕರ ಹೇಳಿಕೆ ಕಾಂಗ್ರೆಸ್ ಅನ್ನು ಕೊತ ಕೊತ ಕುದಿಯುವಂತೆ ಮಾಡಿದೆ. ಆದರೆ ಈ ಪ್ರಕರಣದ ಕೊನೆಯೇನು ಕಾದು ನೋಡಬೇಕಿದೆ.