ಕಲಬುರಗಿ : ಕಲಬುರಗಿ ಜಿಲ್ಲೆಯ ಇನ್ನೊಂದು ಜಿದ್ದಾ ಜಿದ್ದಿನ ಕ್ಷೇತ್ರ ಅಫಜಲಪುರ ವಿಧಾನ ಸಭಾ ಕ್ಷೇತ್ರವಾಗಿದ್ದು, ಕಳೆದ ಬಾರಿ 10000 ಸಾವಿರಕ್ಕಿಂತ ಹೆಚ್ಚು ಮತಗಳ ಅಂತರದಿಂದ ಸೋತ ಬಿಜೆಪಿ ಅಭ್ಯರ್ಥಿ ಮಾಲಿಕಯ್ಯ ಗುತ್ತೇದಾರ ಈ ಬಾರಿ ಚುನಾವಣೆಯಲ್ಲಿ ಗೆದ್ದೆ ಬಿಟ್ಟರು ಎನ್ನುವಷ್ಟರಲ್ಲಿ ಸಹೋದರ ನಿತೀನ್ ಗುತ್ತೇದಾರ ನನಗೂ ಬಿಜೆಪಿ ಟಿಕೆಟ್ ಬೇಕು ಎಂದು ಪಟ್ಟು ಹಿಡಿದರು. ಇದರ ಪರಿಣಾಮವಾಗಿ ಚುನಾವಣೆಯ ಕೊನೆಯವರೆಗೂ ಸಹೋದರರ ಸವಾಲು ಮುಂದುವರೆಯಿತು. ಕೊನೆಗೆ ಬಿಜೆಪಿ ಹೈಕಮಾಂಡ್ ಮಾಲಿಕಯ್ಯ ಗುತ್ತೇದಾರಗೆ ಬಿಜೆಪಿ ಟಿಕೆಟ್ ನೀಡಿತ್ತು. ಆದರೆ ಸುಮ್ಮನಿರದ ಸಹೋದರ ನಿತೀನ್ ಗುತ್ತೇದಾರ ಪಕ್ಷೇತರ ಅಭ್ಯರ್ಥಿಯಾಗಿ ಅಣ್ಣನ ವಿರುದ್ದ ತೊಡೆ ತಟ್ಟಿದರು.
ಇವೆಲ್ಲ ಬೆಳವಣಿಗೆ ನಡುವೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಮ್.ವೈ.ಪಾಟೀಲ ಸರಳವಾಗಿ ಗೆಲುವು ಸಾಧಿಸುತ್ತಾರೆ ಎಂಬ ಊಹೇಗಳು ಕ್ಷೇತ್ರದ ಜನರ ಬಾಯಲ್ಲಿ ಹರಿದಾಡುತ್ತಿದ್ದವು. ಕೊನೆಗೆ ನಿರೀಕ್ಷೆಗೂ ಮೀರಿ ಪಕ್ಷೇತರ ಅಭ್ಯರ್ಥಿ ನಿತೀನ್ ಗುತ್ತೇದಾರ ಮತಗಳನ್ನು ಪಡೆದು ಅಲ್ಪ ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಪರಾಭವಗೊಂಡರು. ಕೊನೆಯವರೆಗೂ ಬಿರುಸಿನ ಪೈಪೋಟಿ ನೀಡಿದ್ದ ನಿತೀನ್ ಗುತ್ತೇದಾರ ಬಿಜೆಪಿ ಅಭ್ಯರ್ಥಿ ಸಹೋದರ ಮಾಲಿಕಯ್ಯ ಗುತ್ತೇದಾರಗೆ ಸಡಿಗಟ್ಟಿದರು. ಕಾಂಗ್ರೆಸ್ ಅಭ್ಯರ್ಥಿ ವಿರುದ್ದ ಕೊನೆಯವರೆಗೆ ಸೆಣಸಾಡಿ 4600 ಮತಗಳ ಅಂತರದಿಂದ ಸೋಲನುಭವಿಸಿದರು. ಕಾಂಗ್ರೆಸ್ ಅಭ್ಯರ್ಥಿ ಎಮ್.ವೈ.ಪಾಟೀಲ 56313 ಮತಗಳನ್ನು ಪಡೆದು ಜಯ ಸಾಧಿಸಿದರು. ಬಿಜೆಪಿ ಅಭ್ಯರ್ಥಿ ಮಾಲಿಕಯ್ಯ ಗುತ್ತೇದಾರ 31394 ಮತಗಳಿಗೆ ತೃಪ್ತಿ ಪಟ್ಟರು. ಜೆಡಿಎಸ್ ಅಭ್ಯರ್ಥಿ ಶಿವಕುಮಾರ್ ನಾಟಿಕಾರ 8534 ಮತಗಳನ್ನು ಪಡೆದರು.