ಅವಧಿಗೂ ಮುನ್ನವೇ ವರ್ಗಾವಣೆಗೆ ಬೇಸರಗೊಂಡ ರಾಜ್ಯ ಪೊಲೀಸ್ ತರಬೇತಿ ವಿಭಾಗದ ಡಿಜಿಪಿ ಡಾ.ಪಿ. ರವೀಂದ್ರನಾಥ್ ಅವರು ತಮ್ಮ ಹುದ್ದೆಗೆ ಮಂಗಳವಾರ ರಾಜೀನಾಮೆ ನೀಡಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅವರಿಗೆ ಪತ್ರ ಸಲ್ಲಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಕುಮಾರಸ್ವಾಮಿ, ರವೀಂದ್ರನಾಥ್ ವರ್ಗಾವಣೆ ವಿಷಯದಲ್ಲಿ ಕಾಂಗ್ರೆಸ್- ಬಿಜೆಪಿ ಶಾಮೀಲಾಗಿದೆ ಎಂದು ಆರೋಪಿಸಿದ್ದಾರೆ.
ಬಸವನಗುಡಿ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಹಮ್ಮಿಕೊಂಡಿದ್ದ ʼಜನತಾ ಜಲಧಾರೆʼ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಐಪಿಎಸ್ ಅಧಿಕಾರಿ ರವೀಂದ್ರನಾಥ್ ರಾಜೀನಾಮೆಯನ್ನು ಸರ್ಕಾರ ಅಂಗೀಕಾರ ಮಾಡಬಾರದು. ಸರ್ಕಾರದ ನಡವಳಿಕೆ ಖಂಡಿಸಿ ಅವರು ರಾಜೀನಾಮೆ ನೀಡಿದ್ದಾರೆ. ಅನೇಕ ಜನ ನಕಲಿ ಮೀಸಲಾತಿ ಸರ್ಟಿಫಿಕೇಟ್ ಪಡೆದಿದ್ದರು. ಇದನ್ನು ತನಿಖೆ ಮಾಡಲು ಹೋದರೆ ವರ್ಗಾವಣೆ ಮಾಡಿದ್ದಾರೆ. ಸಿಎಂ ರಾಜಕೀಯ ಕಾರ್ಯದರ್ಶಿ ಬಗ್ಗೆ ಸಿದ್ದರಾಮಯ್ಯ ಅಧಿವೇಶನದಲ್ಲಿ ಭಾಷಣ ಮಾಡಿದ್ದರು. ಸಿದ್ದರಾಮಯ್ಯ ಅವಧಿಯಲ್ಲಿ ನಕಲಿ ದಾಖಲಾತಿ ಕೊಟ್ಟು ಪೊಲೀಸ್ ಅಧಿಕಾರಿಯಾಗಿದ್ದ ಕೆಂಪಯ್ಯ ಆಯಕಟ್ಟಿನ ಅಧಿಕಾರ ಪಡೆದಿದ್ದರು. ಅಂತಹವರಿಗೆ ಪೊಲೀಸ್ ಇಲಾಖೆಯ ಜವಾಬ್ದಾರಿ ಕೊಟ್ಟಿದ್ದರು. ಸಿದ್ದರಾಮಯ್ಯಗೆ ಈ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ ಎಂದು ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದರು.

ಕೆಂಪಯ್ಯಗೆ ನೊಟೀಸ್ ಕೊಟ್ಟ ಎರಡು ದಿನಕ್ಕೆ ಅಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ. ಇದರಲ್ಲಿ ಕಾಂಗ್ರೆಸ್- ಬಿಜೆಪಿ ಶಾಮೀಲಾಗಿವೆ. ಇದರಲ್ಲಿ ಯಾರು ಎ ಟೀಂ ಮತ್ತು ಯಾರು ಬಿ ಟೀಂ ಅಂತ ಗೊತ್ತಾಗುತ್ತದೆ. ಅಧಿಕಾರಿಯನ್ನು ವರ್ಗಾವಣೆ ಯಾಕೆ ಮಾಡಿದಿರಿ? ಸಿದ್ದರಾಮಯ್ಯ ಹೇಳಿದ್ದಕ್ಕೆ ಮಾಡಿದಿರಾ? ಅವರು ಮಾತೆತ್ತಿದರೆ ದಲಿತರು, ಹಿಂದುಳಿದವರ ಬಗ್ಗೆ ಮಾತಾಡುತ್ತಾರೆ. ಆದರೆ, ಅವರಿಗೆ ಸಿಗಬೇಕಾದ ಸೌಲಭ್ಯದಲ್ಲಿ ಅನ್ಯಾಯ ಆಗುತ್ತಿದೆ. ಅದನ್ನು ಸರಿ ಮಾಡಲು ಹೋದರೆ ಅಧಿಕಾರಿಯನ್ನೇ ವರ್ಗವಣೆ ಮಾಡಿದ್ದಾರೆ ಎಂದು ಮಾಜಿ ಸಿಎಂ ಕಿಡಿ ಕಾರಿದರು.
ಈ ಸರಕಾರದಲ್ಲಿ ದಲಿತರಿಗೆ ಮತ್ತು ದಲಿತ ಅಧಿಕಾರಿಗಳಿಗೆ ಎಲ್ಲಿದೆ ರಕ್ಷಣೆ? ಅವರು ಕೇಳಿದರು.