ಕುರುಬರ ಪೇಟೆಯ ಮಿನಿ ಕ್ರೀಡಾಂಗಣದಲ್ಲಿ ವೇದಿಕೆ ನಿರ್ಮಾಣಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಮುಂದಾಗಿದ್ದರು. ಅಲ್ಲದೇ ವೇದಿಕೆ ನಿರ್ಮಾಣದ ವೇಳೆ ಕಾಂಗ್ರೆಸ್ ಮುಖಂಡರು ಬಾಸ್ಕೆಟ್ ಬಾಲ್ ಪೆವಿಲಿಯನ್ ತೆರವು ಮಾಡಿದ್ದರು
ಕೋಲಾರ: ಕಾರ್ಯಕ್ರಮದ ವೇದಿಕೆ ನಿರ್ಮಾಣ ವಿಚಾರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವೆ ಮಾತಿನ ಚಕಮಕಿ ನಡೆದಿರುವ ಘಟನೆ ಕೋಲಾರದಲ್ಲಿ ನಡೆದಿದೆ.

ಕೋಲಾರದ ಕಾಂಗ್ರೆಸ್ ಮುಖಂಡ ಸೋಮಶೇಖರ್ ಹಾಗೂ ಬಿಜೆಪಿ ಮುಖಂಡ ಛಲಪತಿ ನಡುವೆ ವಾಗ್ವಾದ ನಡೆದಿದೆ. ಜನವರಿ 9ರಂದು ಕೋಲಾರದಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾರ್ಯಕರ್ತರ ಸಭೆ ಆಯೋಜಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಕುರುಬರ ಪೇಟೆಯ ಮಿನಿ ಕ್ರೀಡಾಂಗಣದಲ್ಲಿ ವೇದಿಕೆ ನಿರ್ಮಾಣಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಮುಂದಾಗಿದ್ದರು. ಅಲ್ಲದೇ ವೇದಿಕೆ ನಿರ್ಮಾಣದ ವೇಳೆ ಕಾಂಗ್ರೆಸ್ ಮುಖಂಡರು ಬಾಸ್ಕೆಟ್ ಬಾಲ್ ಪೆವಿಲಿಯನ್ ತೆರವು ಮಾಡಿದ್ದರು.

ಆದರೆ ಬಿಜೆಪಿ ಮುಖಂಡ ಛಲಪತಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಈ ವಿಷಯದಲ್ಲಿ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ನಗರಸಭೆ ಸದಸ್ಯ ಸೋಮಶೇಖರ್ ಹಾಗೂ ಛಲಪತಿ ನಡುವೆ ಮಾತಿನ ಚಕಮಕಿ ನಡೆದಿದೆ. ಅಲ್ಲದೇ ಈ ವೇಳೆ ಛಲಪತಿ ವಿರುದ್ಧ ಏಕವಚನದಲ್ಲಿ ಮಾತನಾಡಿದ ಸೋಮಶೇಖರ್, ʼನಾವು ಕಾರ್ಯಕ್ರಮ ಮಾಡೋದೆ ಇಲ್ಲಿ, ಡಿಚ್ಚಿ ಹೊಡೀತೀನಿ, ತಲೆ ಬೀಳುತ್ತೆʼ ಎಂದು ಎಂದು ಅವಾಜ್ ಹಾಕಿದ್ದಾರೆ ಎನ್ನಲಾಗಿದೆ.
ಈ ನಡುವೆ ಕ್ರೀಡಾ ಇಲಾಖೆಗೆ ಸೇರಿದ ಜಾಗದಲ್ಲಿ ಅತಿಕ್ರಮ ಪ್ರವೇಶದ ಆರೋಪದ ಹಿನ್ನೆಲೆಯಲ್ಲಿ ಸ್ಥಳಕ್ಕಾಗಮಿಸಿದ ಕೋಲಾರ ನಗರ ಠಾಣೆ ಸರ್ಕಲ್ ಇನ್ಸ್ ಪೆಕ್ಟರ್ ಹರೀಶ್, ಎರಡೂ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನ ಸ್ಥಳದಿಂದ ಹೊರಗೆ ಕಳುಹಿಸಿದ್ದಾರೆ.