ದೇಶದ ಇಬ್ಬರು ಜನಪ್ರಿಯ ಯುವ ನಾಯಕರಾದ ಕನ್ಹಯ್ಯ ಕುಮಾರ್ ಮತ್ತು ಜಿಗ್ನೇಶ್ ಮೆವಾನಿ ಮಂಗಳವಾರ ಕಾಂಗ್ರೆಸ್ ಜೊತೆ ಕೈಜೋಡಿಸಿದ್ದಾರೆ.
ತಾವೇಕೆ ಕಾಂಗ್ರೆಸ್ ಸೇರಿದ್ದೇವೆ ಎಂದು ವಿವರಿಸುತ್ತಾ ಕನ್ಹಯ್ಯ, “ಕಾಂಗ್ರೆಸ್ ಪಕ್ಷ ಉಳಿಯದಿದ್ದರೆ, ದೇಶ ಕೂಡ ಉಳಿಯುವುದು ಕಷ್ಟ. ಹಾಗಾಗಿ ದೇಶದ ಉಳಿವಿಗಾಗಿ ಕಾಂಗ್ರೆಸ್ ಬಲಪಡಿಸುವುದು ಅನಿವಾರ್ಯವಾಗಿದೆ” ಎಂದಿದ್ದಾರೆ. ಕಾಂಗ್ರೆಸ್ ಮತ್ತು ದೇಶದ ಭವಿಷ್ಯದ ಕುರಿತ ನಂಟಿನ ಕುರಿತ ಪಕ್ಷ ಸೇರಿದ ಕನ್ಹಯ್ಯ ಹೇಳಿಕೆಯ ಬೆನ್ನಲ್ಲೇ, ಕಾಂಗ್ರೆಸ್ ಹಿರಿಯ ನಾಯಕರ ಕೂಟ ಜಿ-23ಯ ಪ್ರಮುಖರಲ್ಲಿ ಒಬ್ಬರಾದ ಕಪಿಲ್ ಸಿಬಲ್ ಕೂಡ ಅದೇ ದಾಟಿಯಲ್ಲಿ ಮಾತನಾಡಿದ್ದಾರೆ.
ಪ್ರಮುಖವಾಗಿ ಪಂಜಾಬ್ ಕಾಂಗ್ರೆಸ್ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮಾಧ್ಯಮದೊಂದಿಗೆ ಬುಧವಾರ ಮಾತನಾಡಿರುವ ಸಿಬಲ್, “ಪಕ್ಷದಲ್ಲಿ ಸದ್ಯ ಅಧ್ಯಕ್ಷರೇ ಇಲ್ಲ. ಆದರೂ ಕೆಲವು ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ. ಅಂತಹ ಪ್ರಮುಖ ನಿರ್ಧಾರಗಳನ್ನು ಯಾರು ತೆಗೆದುಕೊಳ್ಳುತ್ತಿದ್ದಾರೆ? ಯಾವ ಆಧಾರದಲ್ಲಿ ತೆಗೆದುಕೊಳ್ಳುತ್ತಿದ್ದಾರೆ ಎಂಬುದು ಯಾರಿಗೂ ಅರ್ಥವಾಗುತ್ತಿಲ್ಲ. ಇಂದಿನ ಸ್ಥಿತಿಯಲ್ಲಿ ಕಾಂಗ್ರೆಸ್ ಮಾತ್ರ ದೇಶವನ್ನು ಉಳಿಸಬಲ್ಲದು. ಹಾಗಾಗಿ ಕಾಂಗ್ರೆಸ್ ಒಗ್ಗಟ್ಟಿನಿಂದ ಉಳಿಯುವಂತೆ ನೋಡಿಕೊಳ್ಳುವುದು ನಾಯಕರ ಹೊಣೆ” ಎಂದಿದ್ದಾರೆ.
ಒಬ್ಬರು ಇದೀಗ ತಾನೆ ಕಾಂಗ್ರೆಸ್ ಪಕ್ಷಕ್ಕೆ ಪಾದಾರ್ಪಣೆ ಮಾಡಿರುವ ಯುವ ನಾಯಕರು. ಮತ್ತೊಬ್ಬರು ಪಕ್ಷದ ಅತ್ಯಂತ ಹಿರಿಯ, ಅನುಭವಿ ನಾಯಕರು. ಇಬ್ಬರ ಅಭಿಪ್ರಾಯ ಮಾತ್ರ, ಬಹುತೇಕ ಒಂದೇ. ಅದು; ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ, ಸಂವಿಧಾನ, ಬಹುತ್ವ, ವ್ಯಕ್ತಿ ಸ್ವಾತಂತ್ರ್ಯ, ಆರ್ಥಿಕ ಪ್ರಗತಿ ಸೇರಿದಂತೆ ಶಿಥಿಲವಾಗುತ್ತಿರುವ ದೇಶದ ಒಟ್ಟಾರೆ ವ್ಯವಸ್ಥೆಯನ್ನು ಬಲಪಡಿಸಲು ಕಾಂಗ್ರೆಸ್ ಅನಿವಾರ್ಯ ಎಂಬುದು. ಆದರೆ, ಸಮಸ್ಯೆ ಇರುವುದು, ಸದ್ಯ ಕಾಂಗ್ರೆಸ್ ಪಕ್ಷವೇ ತೀರಾ ಶಿಥಿಲಾವಸ್ಥೆಯಲ್ಲಿದ್ದು, ಮೊದಲು ಆ ಪಕ್ಷವನ್ನು ಉಳಿಸಬೇಕಾಗಿದೆ ಎಂಬ ಮಾತನ್ನು ಕೂಡ ಇದೇ ನಾಯಕರು ಆಡಿದ್ದಾರೆ. ದೇಶವನ್ನು ಉಳಿಸುವ ಮಾತಿಗೆ ಮುಂಚೆ ಇಬ್ಬರೂ ನಾಯಕರು ಕಾಂಗ್ರೆಸ್ ಪಕ್ಷವನ್ನು ಉಳಿಸುವ ಮಾತನ್ನಾಡಿದ್ದಾರೆ.
ಈ ನಡುವೆ, ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಪಕ್ಷಕ್ಕೆ ಪೂರ್ಣಾವಧಿ ಅಧ್ಯಕ್ಷರನ್ನು ನೇಮಕ ಮಾಡಿ ಎಂದು ಕಳೆದ ವರ್ಷದ ಆಗಸ್ಟ್ ನಲ್ಲಿಯೇ ಪತ್ರ ಬರೆದಿದ್ದ ಕಪಿಲ್ ಸಿಬಲ್ ಸೇರಿದಂತೆ ಕಾಂಗ್ರೆಸ್ಸಿನ ಹಿರಿಯ ನಾಯಕರ ಜಿ 23 ತಂಡದ ಕೋರಿಕೆ ಈವರೆಗೆ ಈಡೇರಿಲ್ಲ. ಕಳೆದ ಎರಡು ವರ್ಷದಿಂದಲೂ ಪಕ್ಷದ ಅಧ್ಯಕ್ಷ ಸ್ಥಾನ ಖಾಲಿ ಬಿದ್ದಿದೆ. ಪಕ್ಷದ ಹೈಕಮಾಂಡ್ ಮಟ್ಟದಲ್ಲಿ ಉಂಟಾಗಿರುವ ಈ ನಾಯಕನಿಲ್ಲದ, ಅರಾಜಕ ಸ್ಥಿತಿಯ ಪರಿಣಾಮವಾಗಿಯೇ ಅದು ಸದ್ಯ ಅಧಿಕಾರದಲ್ಲಿರುವ ಮೂರೂ ರಾಜ್ಯಗಳಲ್ಲಿ ನಾಯಕತ್ವದ ಬಿಕ್ಕಟ್ಟು, ಕುರ್ಚಿಯ ಕಚ್ಚಾಟಗಳು ಮುಗಿಲುಮುಟ್ಟಿವೆ ಎಂಬ ಮಾತುಗಳು ಪಕ್ಷದ ದೆಹಲಿಯ ಮಟ್ಟದಲ್ಲೇ ಕೇಳಿಬಂದಿವೆ.
ಜೊತೆಗೆ ಪಂಜಾಬ್ ಮುಖ್ಯಮಂತ್ರಿ ಬದಲಾವಣೆ, ಆ ಬಳಿಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ರಾಜೀನಾಮೆ, ಪಕ್ಷದ ರಾಜ್ಯ ಘಟಕ, ಮನೆಯೊಂದು ಮೂರು ಬಾಗಿಲು ಎಂಬಂತೆ ಮೂರು ಗುಂಪುಗಳಾಗಿ ಹೋಳಾಗಿರುವುದು, ಚುನಾವಣೆ ಹೊಸ್ತಿಲಲ್ಲಿ ಗಡಿ ರಾಜ್ಯದ ರಾಜಕೀಯ ಅಸ್ಥಿರತೆಗೆ ತೆರಬೇಕಾಗಬಹುದಾದ ಭಾರೀ ಬೆಲೆ ಮುಂತಾದ ಕಾರಣಗಳಿಂದಾಗಿ ಸಹಜವಾಗೇ ಪಕ್ಷದ ಬಿಕ್ಕಟ್ಟು ರಾಷ್ಟ್ರೀಯ ಮಟ್ಟದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇಡೀ ಪಂಜಾಬ್ ಬಿಕ್ಕಟ್ಟುಗಳಿಗೆ ಪಕ್ಷದ ಹೈಕಮಾಂಡ್ ನ ಅಪ್ರಬುದ್ಧ ತೀರ್ಮಾನಗಳು, ದುಡುಕಿನ ನಿರ್ಧಾರಗಳು ಮತ್ತು ಏಕಪಕ್ಷೀಯ ನಿಲುವುಗಳೇ ಕಾರಣ ಎಂಬುದು ಕಾಂಗ್ರೆಸ್ ವಲಯದಲ್ಲೇ ಬಹಿರಂಗ ಚರ್ಚೆಯ ವಸ್ತುವಾಗಿದೆ. ಇದೀಗ ಜಿ 23 ಗುಂಪಿನ ನಾಯಕರು ಕೂಡ ಅದನ್ನೇ ಹೇಳಿದ್ದಾರೆ. ಅಷ್ಟೇ ಅಲ್ಲದೆ, ಜಿ23 ಕೂಟದ ಮತ್ತೊಬ್ಬ ಪ್ರಮುಖ ನಾಯಕ ಗುಲಾಂ ನಬಿ ಆಜಾದ್ ಅವರು, ಪಕ್ಷದ ತುರ್ತು ಕಾರ್ಯಕಾರಿ ಸಮಿತಿ ಸಭೆ ಕರೆಯುವಂತೆ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಪತ್ರ ಬರೆದಿರುವುದಾಗಿ ವರದಿಯಾಗಿದೆ.
ಕಪಿಲ್ ಸಿಬಲ್ ಅವರು ಮಾಧ್ಯಮದೊಂದಿಗಿನ ತಮ್ಮ ಮಾತುಕತೆ ವೇಳೆ, ಮತ್ತೊಂದು ಪ್ರಮುಖ ಸಂಗತಿಯನ್ನೂ ಪ್ರಸ್ತಾಪಿಸಿದ್ದಾರೆ. “ನಾವು(ಜಿ-23 ಕೂಟ) ಯಾರೂ ಪಕ್ಷವನ್ನು ತೊರೆದು ಇನ್ನಾವುದೋ ಪಕ್ಷಕ್ಕೆ ಹೋಗುವವರಲ್ಲ. ನಮ್ಮ ಬಗ್ಗೆ ಹಾಗೆ ಹೇಳುವುದು ವಿಚಿತ್ರ. ಹಾಗೆ ನೋಡಿದರೆ, ಅವರಿಗೆ(ಗಾಂಧಿ ಕುಟುಂಬಕ್ಕೆ) ಬಹಳ ಪರಮಾಪ್ತರಾಗಿದ್ದವರೇ ಪಕ್ಷವನ್ನು ತೊರೆದು ಹೋಗಿದ್ದಾರೆ. ಅವರು ಯಾರನ್ನು ತಮ್ಮ ಹಿತೈಷಿಗಳೆಂದು ಪರಿಗಣಿಸಿಯೇ ಇಲ್ಲವೋ ಅವರೇ ಇಂದಿಗೂ ಅವರೊಂದಿಗೆ ಗಟ್ಟಿಯಾಗಿ ನಿಂತಿದ್ದಾರೆ” ಎಂಬ ಸಿಬಲ್ ಮಾತುಗಳು ಮಾರ್ಮಿಕವಾಗಿವೆ. ರಾಹುಲ್ ಗಾಂಧಿಯವರ ಪರಮಾಪ್ತರೆಂದೇ ಗುರುತಿಸಿಕೊಂಡಿದ್ದ ಜಿತಿನ್ ಪ್ರಸಾದ್, ಜ್ಯೋತಿರಾಧಿತ್ಯ ಸಿಂಧಿಯಾ, ಸುಶ್ಮಿತಾ ದೇವ್ ಸೇರಿದಂತೆ ಹಲವು ಯುವ ನಾಯಕರು ಕಳೆದ ಒಂದು ವರ್ಷದ ಅವಧಿಯಲ್ಲಿ ಸಾಲುಸಾಲಾಗಿ ಪಕ್ಷ ತೊರೆದುಹೋದ ಬಗ್ಗೆ ಪರೋಕ್ಷವಾಗಿ ಸಿಬಲ್ ಕುಟುಕಿದ್ದಾರೆ.
ಆ ಮೂಲಕ ಪಕ್ಷದ ನಾಯಕತ್ವಕ್ಕೆ, ನಿಜವಾಗಿಯೂ ಪಕ್ಷ ನಿಷ್ಠರು ಯಾರು ಮತ್ತು ಅಧಿಕಾರ ಮತ್ತು ಅವಕಾಶಕ್ಕಾಗಿ ತಮ್ಮೊಂದಿಗೆ ಇರುವವರು ಯಾರು ಎಂಬುದನ್ನು ಗ್ರಹಿಸುವುದು ಸಾಧ್ಯವಾಗುತ್ತಿಲ್ಲ ಎಂದು ಜಿ23 ಕೂಟದ ನಾಯಕರು ಹೇಳುತ್ತಿದ್ದಾರೆ. ಪಂಜಾಬಿನ ಇತ್ತೀಚಿನ ಬೆಳವಣಿಗೆಗಳು ಕೂಡ, ಬಹುತೇಕ ಇದೇ ಸಂಗತಿಯನ್ನು ಮತ್ತೆ ಮತ್ತೆ ಸಾರಿ ಹೇಳುತ್ತಿವೆ ಎಂಬುದಕ್ಕೆ ಅಲ್ಲಿನ ಪ್ರಭಾವಿ ನಾಯಕ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರ ಮಾತುಗಳೇ ಸಾಕ್ಷಿ. ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನವಜೋತ್ ಸಿಂಗ್ ಸಿಧು ಅವರ ನೇಮಕದ ಸಂದರ್ಭದಿಂದಲೇ ಸಿಂಗ್, ಪಕ್ಷದ ಹೈಕಮಾಂಡ್ ಎಡವುತ್ತಿದೆ ಎಂಬುದನ್ನು ಬಹಿರಂಗವಾಗಿಯೇ ಹೇಳಿದ್ದರು. ಬಳಿಕ ಸಿಧು ಬಂಡಾಯ ಶಮನಕ್ಕಾಗಿ ಸ್ವತಃ ಪಕ್ಷದ ಬೆನ್ನೆಲುಬಾಗಿದ್ದ ಸಿಂಗ್ ಅವರನ್ನೇ ಮುಖ್ಯಮಂತ್ರಿ ಸ್ಥಾನದಿಂದ ಇಳಿಸಲಾಯಿತು. ಬಳಿಕ ಚರಣ್ ಜಿತ್ ಸಿಂಗ್ ಚನ್ನಿ ಅವರನ್ನು ಸಿಎಂ ಮಾಡುತ್ತಲೇ ಸ್ವತಃ ಸಿಧು ಸಿಡಿದೆದ್ದು, ಪಕ್ಷದ ಅಧ್ಯಕ್ಷ ಸ್ಥಾನಕ್ಕೇ ರಾಜೀನಾಮೆ ನೀಡಿದ್ದಾರೆ. ಸಿಧು ಅಪ್ರಬುದ್ಧತೆ ಮತ್ತು ಅಧಿಕಾರಲಾಲಸೆಯನ್ನು ಅರಿಯದೇ ಹೋದ ಪಕ್ಷದ ಹೈಕಮಾಂಡ್ ಈಗ ಎಡವಿಬಿದ್ದಿದೆ.
ಈ ನಡುವೆ, ಪಕ್ಷ ಅಧಿಕಾರದಲ್ಲಿರುವ ಮತ್ತೊಂದು ರಾಜ್ಯ ಛತ್ತೀಸಗಢದಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ. ಅಲ್ಲಿನ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಮತ್ತು ಸಚಿವ ಸಿಂಗ್ ದೇವ್ ನಡುವಿನ ಅಧಿಕಾರದ ಹಗ್ಗಜಗ್ಗಾಟ ತಿಂಗಳುಗಳ ಬಳಿಕ ನಿರ್ಣಾಯಕ ಘಟ್ಟಕ್ಕೆ ತಲುಪಿದೆ. ನಿರಂತರ ಸಂಧಾನಸಭೆಗಳು, ಮಾತುಕತೆಗಳು ವಿಫಲವಾಗಿದ್ದು, ಮುಖ್ಯಮಂತ್ರಿ ಬದಲಾವಣೆ ಅನಿವಾರ್ಯ ಎಂಬ ಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ, ಬುಧವಾರ 20ಕ್ಕೂ ಹೆಚ್ಚು ಭೂಪೇಶ್ ಬೆಂಬಲಿಗರ ಶಾಸಕರು ದೆಹಲಿಗೆ ತಲುಪಿದ್ದು, ಸಿಎಂ ಆಗಿ ಭೂಪೇಶ್ ಮುಂದುವರಿಸುವಂತೆ ನೇರ ಹೈಕಮಾಂಡ್ ನೊಂದಿಗೆ ಮಾತನಾಡಲು ಪ್ರಯತ್ನಿಸಿದ್ದಾರೆ.
ಹಾಗಾಗಿ, ಒಟ್ಟಾರೆ ಸದ್ಯಕ್ಕೆ, ದೇಶವನ್ನು ಉಳಿಸಬೇಕಾದ ಪಕ್ಷವನ್ನೇ ಉಳಿಸಬೇಕಾದ ತುರ್ತು ಎದುರಾಗಿದೆ. ಪಕ್ಷದ ಇಂತಹ ಸ್ಥಿತಿಯ ಹಿನ್ನೆಲೆಯಲ್ಲಿ, ಪಕ್ಷಕ್ಕೆ ಹೊಸದಾಗಿ ಸೇರಿರುವ ಅತ್ಯುತ್ಸಾಹಿ ಯುವ ನಾಯಕರಿಬ್ಬರ ಮುಂದಿರುವ ಸವಾಲು ಸಾಮಾನ್ಯದ್ದಲ್ಲ. ಒಂದು ಕಡೆ ಪಕ್ಷದಿಂದ ವಿಮುಖವಾಗುತ್ತಿರುವ ಯುವ ನಾಯಕರನ್ನು ವಿಶ್ವಾಸಕ್ಕೆ ಪಡೆದು ಹಿಡಿದಿಟ್ಟುಕೊಳ್ಳಬೇಕಿದೆ. ಅದೇ ಹೊತ್ತಿಗೆ ಪಕ್ಷದ ನಿಷ್ಕ್ರಿಯ ವ್ಯವಸ್ಥೆಯ ವಿರುದ್ಧ ಬಂಡೆದ್ದಿರುವ ಹಿರಿಯ ನಾಯಕರ ಜಿ-23 ಕೂಟದ ವಿಶ್ವಾಸ ಗಳಿಸಿ, ಅವರು ನಾಳೆ ತಮ್ಮ ದಾರಿಗೆ ಮುಳ್ಳಾಗದಂತೆ ಎಚ್ಚರಿಕೆ ವಹಿಸಬೇಕಾಗಿದೆ. ಜೊತೆಗೆ, ಪಕ್ಷ ಅಧಿಕಾರದಲ್ಲಿರುವ ಪಂಜಾಬ್, ಛತ್ತೀಸಗಢ ಮತ್ತು ರಾಜಸ್ತಾನದಲ್ಲಿ ಪಕ್ಷ ಬಣಗಳಲ್ಲಿ ಒಡೆದು ಹೋಳಾಗಿರುವಾಗ, ಆ ರಾಜ್ಯಗಳಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪಕ್ಷಕ್ಕೆ ಈ ಯುವ ನಾಯಕರ ವರ್ಚಸ್ಸು ಹೇಗೆ ಒದಗಿಬರಲಿದೆ ಎಂಬುದು ಕೂಡ ಪ್ರಶ್ನೆಯಾಗಿದೆ. ಆದರೆ, ಸದ್ಯದ ಕಾಂಗ್ರೆಸ್ ಸ್ಥಿತಿಯಲ್ಲಿ ಪಕ್ಷ ಇನ್ನಷ್ಟು ಕುಸಿಯದಂತೆ ತಡೆಯುವಲ್ಲಿ ಕನ್ಹಯ್ಯ ಮತ್ತು ಮೆವಾನಿ ಹಾಗೂ ಅವರ ಬೆಂಬಲಿಗ ಯುವ ಸಮೂಹದ ಪಾತ್ರ ಏನಿರಲಿದೆ? ಅವರದೇ ಮಾತಿನ ಪ್ರಕಾರ, ದೇಶ ಉಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಉಳಿಸಲು ನಿಜವಾಗಿಯೂ ಈ ನಾಯಕರು ಎಷ್ಟು ಪ್ರಯೋಜನಕಾರಿಯಾಗಲಿದ್ದಾರೆ ಎಂಬುದು ಸದ್ಯಕ್ಕೆ ಇರುವ ಕುತೂಹಲ