ರಾಷ್ಟ್ರ ರಾಜಕಾರಣದಲ್ಲಿ ಮಹತ್ತರ ಬದಲಾವಣೆಗಳು ನಡೆಯುತ್ತಿದೆ. ಬಿಜೆಪಿ ವಿರೋಧಿ ಪಾಳಯ ಹೊಂದಾಗಿದ್ದು, ಈಗಾಗಲೇ ಮೊದಲ ಸಭೆಯನ್ನು ಬಿಹಾರದ ಪಾಟ್ನಾದಲ್ಲಿ ನಡೆಸಿದ್ದ ವಿರೋಧ ಪಕ್ಷ ದ ನಾಯಕರು, ಇಂದು ಬೆಂಗಳೂರಿನಲ್ಲಿ ಎರಡನೇ ಸಭೆ ಸೇರುತ್ತಿದ್ದಾರೆ. ಇಂದು ಮತ್ತು ನಾಳೆ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಮಹತ್ವದ ಸಭೆ ನಡೆಯಲಿದ್ದು, ಇಂದು ಕಾಂಗ್ರೆಸ್ ಒಕ್ಕೂಟದ ಮೈತ್ರಿಕೂಟಕ್ಕೆ ಹೆಸರು ಘೋಷಣೆ ಆಗುವ ಸಾಧ್ಯತೆಯಿದೆ. ಇನ್ನು ಕಳೆದ ಬಾರಿಯ ಸಭೆ ಬಳಿಕ ಕಾಂಗ್ರೆಸ್ ಮೈತ್ರಿ ಕೂಟ ಮತ್ತಷ್ಟು ಬಲವಾಗಿದ್ದು, ಈ ಬಾರಿ 24 ರಾಜಕೀಯ ಪಕ್ಷಗಳ ದಿಗ್ಗಜರಿಗೆ ಆಹ್ವಾನ ನೀಡಲಾಗಿದೆ. ಇಡೀ ಕಾರ್ಯಕ್ರಮದ ಮೇಲುಸ್ತುವಾರಿಯನ್ನು ಕರ್ನಾಟಕ ಸರ್ಕಾರ ವಹಿಸಿಕೊಂಡಿದ್ದು, ಕಾರ್ಯಕ್ರಮ ಯಶಸ್ಸಿಗೆ ಟೊಂಕ ಕಟ್ಟಿ ನಿಂತಿದ್ದಾರೆ.
ಇಡೀ ದೇಶದ ಚಿತ್ತ ಸೆಳೆದಿರುವ ಬೆಂಗಳೂರು ಸಭೆ..!
ಜುಲೈ 17 ಮತ್ತು 18 ರಂದು ಬೆಂಗಳೂರಿನಲ್ಲಿ ರಾಷ್ಟ್ರೀಯ ನಾಯಕರು ಸಭೆ ನಡೆಸುತ್ತಿದ್ದು, ಇಡೀ ದೇಶದ ರಾಜಕಾರಣಿಗಳ ಚಿತ್ತ ಬೆಂಗಳೂರಿನತ್ತ ನೆಟ್ಟಿದೆ. ರಾಷ್ಟ್ರ ಮಟ್ಟದ ಬಿಜೆಪಿ ವಿರೋಧ ಪಕ್ಷಗಳು ಒಗ್ಗಟ್ಟು ಪ್ರದರ್ಶನ ಮಾಡುತ್ತಿದ್ದು, ಕಾಂಗ್ರೆಸ್ ನೇತೃತ್ವದ ಮಹಾ ಘಟ್‌ಬಂಧನ್ ಮುಂದಿನ ನಡೆಗಳು ಹೇಗಿರಬೇಕು ಎನ್ನೋ ಬಗ್ಗೆ ಮಹತ್ವದ ನಿರ್ಧಾರ ಹೊರ ಬೀಳುವ ಸಾಧ್ಯತೆ ಇವೆ. ಕಳೆದ ಬಾರಿಯ ಸಭೆಗೆ 16 ಪಕ್ಷಗಳಿಗೆ ಆಹ್ವಾನ ಕೊಡಲಾಗಿತ್ತು. ಆದರೆ ಕಳೆದ ಬಾರಿ ಸಭೆಗೆ 15 ಪಕ್ಷಗಳಿಂದ ಒಟ್ಟು 32 ನಾಯಕರು ಹಾಜರಾಗಿದ್ದರು. ಈ ಬಾರಿ ಬಿಜೆಪಿ ವಿರೋಧಿ ಬಣಗಳ ಸಂಖ್ಯೆ ಕೊಂಚ ಹೆಚ್ಚಾಗಿದ್ದು, 24 ಪಕ್ಷಗಳಿಗೆ ಆಹ್ವಾನ ಕೊಡಲಾಗಿದೆ. ಇಂದಿನ ಸಭೆಯಲ್ಲಿ ಮೈತ್ರಿಕೂಟಕ್ಕೆ ಅಧಿಕೃತ ಹೆಸರು ಘೋಷಣೆ ಮಾಡುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
ಮೋದಿ ಮಣಿಸುವುದೇ ಒಂದು ಸಾಲಿನ ಅಜೆಂಡಾ..!
ಒಟ್ಟು 24 ರಾಜಕೀಯ ಪಕ್ಷಗಳು ಸೇರಿ ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ 150 ಲೋಕಸಭಾ ಸದಸ್ಯರನ್ನ ಹೊಂದಿವೆ. ಈ ಬಾರಿ ಲೋಕಸಭಾ ಸ್ಥಾನ ಹೆಚ್ಚಿಸಿಕೊಳ್ಳುವುದು ಮೈತ್ರಿ ಪಕ್ಷಗಳ ಲೆಕ್ಕಾಚಾರ. ಲೋಕಸಭಾ ಚುನಾವಣೆಯಲ್ಲಿ ಸೀಟು ಹಂಚಿಕೆ ಪ್ರಕ್ರಿಯೆ ಹೇಗಿರಬೇಕು. ಲೋಕಸಭಾ ಚುನಾವಣೆಯಲ್ಲಿ ಯಾವ ಪಕ್ಷದ ಅಭ್ಯರ್ಥಿ ಗೆಲುವುದು ಸಾಧಿಸುತ್ತಾರೆ ಅನ್ನೋದನ್ನು ಸರ್ವೇ ಮೂಲಕ ಪತ್ತೆ ಮಾಡಿಕೊಳ್ಳುವುದು ಹೇಗೆ..? ಸೀಟು ಹಂಚಿಕೆಯಲ್ಲಿ ಗೊಂದಲ ಮಾಡಿಕೊಳ್ಳದೆ ಗೆಲ್ಲುವ ಅಭ್ಯರ್ಥಿಯ ಆಯ್ಕೆ ಮಾಡುವ ಮೂಲಕ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವನ್ನು ಮಣಿಸುವ ಬಗ್ಗೆ ಹಲವು ವಿಚಾರಗಳು ಚರ್ಚೆ ಆಗಲಿವೆ. ಇಂದು ರಾತ್ರಿ ಮೈತ್ರಿಕೂಟದ ನಾಯಕರಿಗೆ ಸಿಎಂ ಭೋಜನ ಕೂಟ ಏರ್ಪಾಡು ಮಾಡಿದ್ದು, ನಾಳೆ ಮಧ್ಯಾಹ್ನ DCM ಡಿ.ಕೆ ಶಿವಕುಮಾರ್ ಭೋಜನ ಕೂಟ ಆಯೋಜನೆ ಮಾಡಿದ್ದಾರೆ.
ಬಿಜೆಪಿಗೆ ಶುರುವಾಗಿದೆ ಢವಢವ.. ಟ್ರಾಫಿಕ್ ಕಿರಿಕಿರಿ ಫಿಕ್ಸ್..
ಕಾಂಗ್ರೆಸ್ ಮೈತ್ರಿಕೂಟ ದಿನದಿಂದ ದಿನಕ್ಕೆ ಪ್ರಬಲ ಆಗುತ್ತಲೇ ಸಾಗುತ್ತಿದೆ. ಇಂದು ಮತ್ತು ನಾಳಿನ ಸಭೆ ಯಶಸ್ಸು ಸಾಧಿಸಿದರೆ ಮೋದಿ ಸರ್ಕಾರದ ವಿರುದ್ಧ ಮತ್ತೊಂದು ಶಕ್ತಿ ಜನ್ಮತಾಳಿದಂತೆಯೇ ಸರಿ ಎನ್ನಲಾಗ್ತಿದೆ. ಇದೇ ಕಾರಣಕ್ಕೆ ನಾಳೆ ಎನ್‌ಡಿಎ ಮೈತ್ರಿಕೂಟದ ಸಭೆ ಕೂಡ ನಿಗದಿಯಾಗಿದೆ. ಇನ್ನು ಇಂದು ಮತ್ತು ನಾಳೆ ಗಣ್ಯ ವ್ಯಕ್ತಿಗಳ ಸಂಚಾರ ಇರುವ ಕಾರಣ, ಟ್ರಾಫಿಕ್ ಕಿರಿಕಿರಿ ನಿಶ್ಚಿತ. ವಾಹನ ಸವಾರರು ಬದಲಿ ಮಾರ್ಗ ಬಳಸಲು ಸೂಚನೆ ನೀಡಲಾಗಿದೆ. ತಾಜ್ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಸಭೆ ನಡೆಯಲಿದ್ದು, ಡಾ ಬಿ.ಆರ್. ಅಂಬೇಡ್ಕರ್ ರಸ್ತೆ, ಕಬ್ಬನ್ ರಸ್ತೆ, ರಾಜಭವನ ರಸ್ತೆ, ರೇಸ್ ಕೋರ್ಸ್ ರಸ್ತೆ, ಶೇಷಾದ್ರಿ ರಸ್ತೆ, ಬಳ್ಳಾರಿ ರಸ್ತೆ ಬಳಸುವ ವಾಹನ ಸವಾರರು ಬದಲಿಗೆ ಮಾರ್ಗ ಬಳಸಲು ಪೊಲೀಸರು ಸೂಚನೆ ಕೊಟ್ಟಿದ್ದಾರೆ. ಇನ್ನು ಬಿ.ಆರ್. ಅಂಬೇಡ್ಕರ್ ರಸ್ತೆ, ಬಳ್ಳಾರಿ ರಸ್ತೆ, ರೇಸ್ ಕೋರ್ಸ್ ರಸ್ತೆಯಲ್ಲಿ ಪಾರ್ಕಿಂಗ್ ನಿಷೇಧ ಮಾಡಿ ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಕೃಷ್ಣಮಣಿ