ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂಬ ಚರ್ಚೆಯನ್ನು ಚುನಾವಣೆಗೆ ಎರಡು ವರ್ಷಗಳು ಬಾಕಿ ಇರುವಾಗಲೇ ಹುಟ್ಟುಹಾಕುವ ಮೂಲಕ, ರಾಜ್ಯ ಕಾಂಗ್ರೆಸ್ ನಾಯಕರು ತಮ್ಮ ಸದ್ಯದ ಆದ್ಯತೆ ಏನು ಎಂಬುದನ್ನು ಜಗಜ್ಜಾಹೀರುಗೊಳಿಸಿದ್ದಾರೆ.
ಒಂದು ಕಡೆ ಕರೋನಾ ಸಂಕಷ್ಟ ಜನರ ಬದುಕನ್ನು ಹೈರಾಣು ಮಾಡಿದ್ದರೆ, ಮತ್ತೊಂದು ಕಡೆ ಕರೋನಾ ಮತ್ತು ಲಾಕ್ ಡೌನ್ ಅವಕಾಶವನ್ನೇ ಬಳಸಿಕೊಂಡು ರಾಜ್ಯ ಬಿಜೆಪಿ ಸರ್ಕಾರ ಜಾರಿಗೆ ತರುತ್ತಿರುವ ಜನವಿರೋಧಿ ಕಾನೂನುಗಳು, ನಡೆಸುತ್ತಿರುವ ಭಾರೀ ಭ್ರಷ್ಟಾಚಾರಗಳು ಜನಸಾಮಾನ್ಯರ ಭವಿಷ್ಯವನ್ನೂ ಅಪಾಯಕ್ಕೆ ನೂಕಿವೆ. ಇಂತಹ ಹೊತ್ತಲ್ಲಿ ಸಕ್ರಿಯ ಪ್ರತಿಪಕ್ಷವಾಗಿ ಜನರ ಬದುಕು ಮತ್ತು ಭವಿಷ್ಯದ ಭದ್ರತೆಗಾಗಿ ರಾಜಕೀಯ ಹೋರಾಟ ನಡೆಸಬೇಕಿದ್ದ, ಜನವಿರೋಧಿ ನೀತಿಗಳ ವಿರುದ್ಧ ಜನಾಂದೋಲನ ರೂಪಿಸಬೇಕಿದ್ದ ಕಾಂಗ್ರೆಸ್, ಮುಂದಿನ ಚುನಾವಣೆಗೆ ಮತ್ತು ಆ ಬಳಿಕದ ಅಧಿಕಾರದ ಕುರ್ಚಿಗಾಗಿ ಈಗಾಗಲೇ ಮೇಲಾಟ ಶುರುಮಾಡಿದೆ.

ಮುಂಚೂಣಿ ನಾಯಕರ ಬೆಂಬಲಿಗ ಶಾಸಕರು ಮತ್ತು ಪಕ್ಷದ ಇತರೆ ಮುಖಂಡರ ನಡುವಿನ ಚರ್ಚೆಯಾಗಿ, ವಾಗ್ವಾದವಾಗಿ ಕಳೆದ ಕೆಲವು ದಿನಗಳಿಂದ ಕಾಂಗ್ರೆಸ್ ಪಾಳೆಯದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿರುವ ಮುಂದಿನ ಮುಖ್ಯಮಂತ್ರಿಯ ವಿಷಯಕ್ಕೆ ಕೊನೆಗೆ ಪಕ್ಷದ ಹೈಕಮಾಂಡ್ ಮಧ್ಯಪ್ರವೇಶದೊಂದಿಗೆ ಸದ್ಯಕ್ಕೆ ವಿರಾಮ ಬಿದ್ದಿದೆ. ಅಲ್ಲದೆ, ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಸ್ಥಾನಾಕಾಂಕ್ಷಿ ಡಿ ಕೆ ಶಿವಕುಮಾರ್ ಅವರ ಹಿಂಬಾಲಕರ ನಡುವೆ ನಡೆದ ಈ ವಾಗ್ವಾದದ ವಿಷಯದಲ್ಲಿ ಸ್ವತಃ ಆ ನಾಯಕರಿಬ್ಬರೂ ಸ್ಪಷ್ಟನೆ ನೀಡಿ, ಮುಂದಿನ ಮುಖ್ಯಮಂತ್ರಿ ಕುರಿತ ಚರ್ಚೆ ಈಗ ಅಪ್ರಸ್ತುತ ಮತ್ತು ಪಕ್ಷದಲ್ಲಿ ಹಾಗೆ ಯಾವುದೇ ಬಣಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ಹಾಗೆ ಮುಖ್ಯಮಂತ್ರಿ ಸ್ಥಾನದ ಇಬ್ಬರು ಪ್ರಬಲ ಆಕಾಂಕ್ಷಿಗಳ ಸ್ಪಷ್ಟನೆ ಹೊರಬೀಳುವ ಮುನ್ನವೇ ವಿಷಯ ಸಾಕಷ್ಟು ತಾರಕಕ್ಕೆ ಹೋಗಿತ್ತು ಮತ್ತು ಸ್ವತಃ ಪಕ್ಷದ ದೆಹಲಿಯ ಹೈಕಮಾಂಡ್ ಎಚ್ಚರಿಕೆ ನೀಡುವವರೆಗೆ ಮುಂದುವರಿದಿತ್ತು ಎಂಬುದು ವಾಸ್ತವ.
ಆದರೆ, ಮುಂದಿನ ಮುಖ್ಯಮಂತ್ರಿಯ ಕನಸು ಕಾಣುತ್ತಿರುವ ಕಾಂಗ್ರೆಸ್ಸಿನ ಮುಂಚೂಣಿ ನಾಯಕರು, ಸದ್ಯ ಪ್ರತಿಪಕ್ಷದ ಪ್ರಮುಖ ನಾಯಕರಾಗಿ, ಅತ್ಯಂತ ಬಿಕ್ಕಟ್ಟಿನ ಹೊತ್ತಿನಲ್ಲಿ ತೀರಾ ಹೊಣೆಗೇಡಿಯಾಗಿ ನಾಯಕತ್ವ ಬದಲಾವಣೆಯ ಸರ್ಕಸ್ಸಿನಲ್ಲಿ ಮುಳುಗಿರುವ ಬಿಜೆಪಿ ಸರ್ಕಾರ ಮತ್ತು ಪಕ್ಷದ ವಿರುದ್ಧ ಎಷ್ಟು ಪ್ರಬಲವಾಗಿ ದನಿ ಎತ್ತಿದ್ದಾರೆ. ಆಡಳಿತ ಪಕ್ಷದ ನಾಯಕರ ಹೊಣೆಗೇಡಿತನವನ್ನು ಜನತೆಯ ಮುಂದಿಟ್ಟು, ಜನರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ, ಆಡಳಿತ ಯಂತ್ರ ಕುಸಿದುಬಿದ್ದಿರುವ ಬಗ್ಗೆ ಯಾವ ಮಟ್ಟದಲ್ಲಿ ಮತ್ತು ಎಷ್ಟು ಪ್ರಬಲವಾಗಿ ಪ್ರತಿರೋಧ ತೋರಿದ್ದಾರೆ? ಎಂಬುದು ಪ್ರಶ್ನೆ.

ಹಾಗೆ ನೋಡಿದರೆ, ಎರಡು ವರ್ಷಗಳ ಬಿಜೆಪಿ ಆಡಳಿತದ ಉದ್ದಗಲಕ್ಕೂ ಅದು ಭೂ ಸುಧಾರಣಾ ತಿದ್ದುಪಡಿ ಮಸೂದೆ, ಗೋ ಹತ್ಯೆ ನಿಷೇಧ ತಿದ್ದುಪಡಿ ಕಾನೂನು, ಅದೇ ಬಿಜೆಪಿಯ ಕೇಂದ್ರ ಸರ್ಕಾರದ ಮೂರು ವಿವಾದಿತ ಕೃಷಿ ಕಾನೂನು, ಎನ್ ಆರ್ ಸಿ- ಸಿಸಿಎ ಮತ್ತಿತರ ಹಲವು ಜನವಿರೋಧಿ ಕಾಯ್ದೆ-ಕಾನೂನುಗಳನ್ನು ಕೋವಿಡ್ ಲಾಕ್ ಡೌನ್ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ಜಾರಿಗೊಳಿಸಲಾಗಿದೆ(ಕೆಲವನ್ನು ಜನವಿರೋಧದ ಕಾರಣಕ್ಕೆ ತಾತ್ಕಾಲಿಕವಾಗಿ ಹಿಡಿದಿಡಲಾಗಿದೆ). ಇಂತಹ ಜನರ ಭವಿಷ್ಯದ ಬದುಕಿನ ಮೇಲೆ ಗಾಢ ಪರಿಣಾಮಬೀರುವ ಕಾಯ್ದೆ-ಕಾನೂನುಗಳ ವಿಷಯದಲ್ಲಿ ರಾಜ್ಯದ ಪ್ರಮುಖ ಪ್ರತಿಪಕ್ಷವಾಗಿ ಕಾಂಗ್ರೆಸ್ ಮತ್ತು ಅದರ ಮುಂಚೂಣಿ ನಾಯಕರಾಗಿ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಎಷ್ಟು ಪ್ರಬಲ ಹೋರಾಟ ನಡೆಸಿದರು ಎಂಬುದು ಮುಖ್ಯಮಂತ್ರಿ ಕುರ್ಚಿಗೆ ಕರ್ಚೀಫ್ ಹಾಕಲು ಪೈಪೋಟಿ ನಡೆಸುತ್ತಿರುವ ಅವರಿಬ್ಬರು ಹಿಂಬಾಲಕರು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾದ ಸಂಗತಿ.
ಹಾಗೇ, ರಾಜ್ಯ ಬಿಜೆಪಿ ಆಡಳಿತದಲ್ಲಿ ನಡೆದಿರುವ ಬ್ರಹ್ಮಾಂಡ ಭ್ರಷ್ಟಾಚಾರ, ಅಕ್ರಮ, ವಸೂಲಿಬಾಜಿ, ಸ್ವಜನಪಕ್ಷಪಾತಗಳ ವಿಷಯದಲ್ಲಿ ಪ್ರತಿಪಕ್ಷ ನಾಯಕರಾಗಲೀ, ಕೆಪಿಸಿಸಿ ಅಧ್ಯಕ್ಷರಾಗಲೀ ಎಷ್ಟು ಸಕ್ರಿಯವಾಗಿ ಕೆಲಸ ಮಾಡಿದ್ದಾರೆ? ರಾಜ್ಯದ ಪ್ರಭಾವಿ ನಾಯಕರಾಗಿ ಈ ನಾಯಕರಿಬ್ಬರು ತಮ್ಮ ಸಂಪರ್ಕ ಮತ್ತು ಪ್ರಭಾವ ಬಳಸಿ ಬಿಜೆಪಿ ಸರ್ಕಾರದ ಎಷ್ಟು ಅಕ್ರಮಗಳನ್ನು, ಸಿಎಂ ಮತ್ತು ಅವರ ಪುತ್ರರ ಎಷ್ಟು ಹಗರಣಗಳನ್ನು ಬಯಲಿಗೆಳೆದಿದ್ದಾರೆ? ಕೋವಿಡ್ ಹಣಕಾಸು ಅಕ್ರಮದಿಂದ ಹಿಡಿದು, ಡಿನೋಟಿಫಿಕೇಷನ್, ವರ್ಗಾವಣೆ, ಭೂ ಅಕ್ರಮಗಳ ವಿಷಯದಲ್ಲಿ ಕೂಡ ಸ್ವತಃ ಆಡಳಿತ ಪಕ್ಷದವರೇ ದಾಖಲೆ ಸಹಿತ ಬಹಿರಂಗ ಆರೋಪ ಮಾಡಿದಾಗಲೂ ಅಂತಹ ಪ್ರಕರಣಗಳ ವಿಷಯದಲ್ಲಿ ಒಂದು ತಾರ್ತಿಕ ಅಂತ್ಯ ಕಾಣಿಸುವ ವಿಷಯದಲ್ಲಿ ಕೂಡ ಕಾಂಗ್ರೆಸ್ ನಾಯಕರು ಆಸಕ್ತಿ ತೋರಿಸಿಲ್ಲ ಎಂಬುದು ಗುಟ್ಟೇನಲ್ಲ.

ಇನ್ನು ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ವಿಷಯದಲ್ಲಿ ಕೂಡ ಆರಂಭದಲ್ಲಿ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿ, ಕೊನೆಗೆ ಸ್ವತಃ ತಮ್ಮ ಮೇಲೆಯೇ ಷಢ್ಯಂತ್ರದ ಆರೋಪ ಬರುತ್ತಲೇ ತಣ್ಣಗಾದರು. ಕನಿಷ್ಟ ಸಂತ್ರಸ್ತ ಹೆಣ್ಣುಮಗಳು ಅತ್ಯಾಚಾರ ಪ್ರಕರಣ ದಾಖಲಿಸಿದ ಬಳಿಕವಾದರೂ ಪ್ರಕರಣವನ್ನು ಮುಂದಿಟ್ಟುಕೊಂಡು, ರಾಜ್ಯವ್ಯಾಪಿ ಆಡಳಿತದ ಪಕ್ಷವನ್ನು ಮುಜುಗರಕ್ಕೆ ಸಿಲುಕಿಸುವ ಅವಕಾಶವನ್ನು ಕೂಡ ಸಮರ್ಪಕವಾಗಿ ಬಳಸಿಕೊಳ್ಳಲಿಲ್ಲ. ಇನ್ನು ಇದೀಗ ನಾಯಕತ್ವ ಬದಲಾವಣೆಯ ಸರ್ಕಸ್ಸಿನ ಭಾಗವಾಗಿ ಬಿಜೆಪಿಯ ನಾಯಕರೇ ಸಿಎಂ ವಿರುದ್ಧ ಮಾಡಿರುವ ಸಾವಿರಾರು ಕೋಟಿ ರೂ. ನೀರಾವರಿ ಇಲಾಖೆಯ ಕಿಕ್ ಬ್ಯಾಕ್ ವಿಷಯವಾಗಲೀ, ಅಬಕಾರಿ ಸಚಿವರ ವಿರುದ್ಧ ಕೇಳಿಬಂದಿರುವ ಭ್ರಷ್ಟಾಚಾರ ಆರೋಪದ ವಿಷಯದಲ್ಲಾಗಲೀ ಕಾಂಗ್ರೆಸ್ ನಿರೀಕ್ಷಿತ ಮಟ್ಟದಲ್ಲಿ ದನಿ ಎತ್ತುತ್ತಿಲ್ಲ ಏಕೆ ಎಂಬುದು ಪ್ರಶ್ನೆ.
ಇನ್ನು ಬೆಡ್ ಬ್ಲಾಕಿಂಗ್, ವ್ಯಾಕ್ಸಿನ್ ಬ್ಲಾಕಿಂಗ್, ಕೋವಿಡ್ ನಿರ್ಹಹಣೆ ಹಣಕಾಸು ಅವ್ಯವಹಾರಗಳ ಸೇರಿದಂತೆ ಇಡೀ ಕೋವಿಡ್ ಕರ್ಮಕಾಂಡದ ವಿಷಯದಲ್ಲಂತೂ ರಾಜ್ಯ ಬಿಜೆಪಿಯ ಪ್ರತಿಷ್ಠಿತ ವ್ಯಕ್ತಿಗಳು, ಶಾಸಕರು, ಸಂಸದರ ವಿರುದ್ಧವೇ ಗಂಭೀರ ಆರೋಪಗಳು ಕೇಳಿಬಂದಿವೆ. ಆದಾಗ್ಯೂ ಈ ವಿಷಯಗಳನ್ನು, ಅದರನ್ನೂ ಜನರ ಸಾವು-ಬದುಕಿನ ಇಂತಹ ಗಂಭೀರ ವಿಷಯದಲ್ಲಿ ಕೂಡ ಆ ಪ್ರಕರಣಗಳನ್ನು ನಿರಂತರವಾಗಿ ಚಾಲ್ತಿಯಲ್ಲಿಟ್ಟು, ಅಗತ್ಯ ಸಾಕ್ಷ್ಯಧಾರಗಳೊಂದಿಗೆ ಒಂದು ತಾರ್ಕಿಕ ಅಂತ್ಯ ಕಾಣಿಸುವಲ್ಲಿ ಕಾಂಗ್ರೆಸ್ ರಾಜ್ಯ ನಾಯಕರು ಯಾಕೆ ಆಸಕ್ತಿ ತೋರಲಿಲ್ಲ ಎಂಬುದು ಕೂಡ ಒಗಟೇ.

ಹಾಗೇ ನೋಡಿದರೆ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೀರಾವರಿ ಇಲಾಖೆ ಹಗರಣದ ವಿಷಯದಲ್ಲಿ ಸಿಎಂ ವಿರುದ್ಧ ವಾಗ್ವಾಳಿ ನಡೆಸಿ, ಪ್ರಕರಣದ ಕುರಿತು ಎಸಿಬಿ ತನಿಖೆಗೆ ಒತ್ತಾಯಿಸಿದ್ದಾರೆ. ಎರಡು ವಾರದ ಹಿಂದೆ ಕೂಡ ಅವರು ಮೈಸೂರು ಅಧಿಕಾರಿಗಳಿಬ್ಬರ ಕಚ್ಚಾಟದ ಪ್ರಕರಣದ ವಿಷಯದಲ್ಲಿ ಕೂಡ ಅಕ್ರಮಗಳು, ಹಗರಣಗಳ ವಿಷಯದಲ್ಲಿ ದೂರು ನೀಡಿದರೂ ಎಸಿಬಿ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಎಸಿಬಿಯನ್ನು ರಚಿಸುವಾಗಲೇ ವಿರೋಧಿಸಿದ್ದ ಬಿಜೆಪಿ ಈಗ ತಾನು ಅಧಿಕಾರಕ್ಕೆ ಬಂದ ಬಳಿಕ ಆ ತನಿಖಾ ಸಂಸ್ಥೆಯನ್ನೇ ನಿಷ್ಕ್ರಿಯಗೊಳಿಸಿದೆ ಎಂದು ಟ್ವೀಟ್ ಮಾಡಿದ್ದರು. ಆದರೆ, ಸಿದ್ದರಾಮಯ್ಯ ಅವರ ಎಸಿಬಿ ಕುರಿತ ಈ ಕಾಳಜಿ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಟೀಕೆಗೊಳಗಾಯಿತು. ಭ್ರಷ್ಟಾಚಾರ ತನಿಖಾ ವ್ಯವಸ್ಥೆಯಾಗಿ ರಾಜ್ಯದ ಮುಖ್ಯಮಂತ್ರಿಯೊಬ್ಬರನ್ನೇ ಜೈಲಿಗೆ ಕಳಿಸಿದ ಖ್ಯಾತಿಯ ಲೋಕಾಯುಕ್ತ ಸಂಸ್ಥೆಯನ್ನು ವ್ಯವಸ್ಥಿತವಾಗಿ ದುರ್ಬಲಗೊಳಿಸಿ, ಅಪ್ರಸ್ತುತಗೊಳಿಸಿ, ಅದಕ್ಕಿಂತ ದುರ್ಬಲವಾದ ಮತ್ತು ನಾಮಕಾವಸ್ಥೆಯ ಎಸಿಬಿಯನ್ನು ರಚಿಸಿದ ಸಿದ್ದರಾಮಯ್ಯ ಈಗ ಮೊಸಳೆ ಕಣ್ಣೀರು ಸುರಿಸುತ್ತಿರುವುದು ಎಷ್ಟು ಸರಿ ಎಂಬುದೇ ಆ ಟೀಕೆಗಳ ಮುಖ್ಯ ಸಾರವಾಗಿತ್ತು.

ಇದೀಗ ಭದ್ರಾ ಮೇಲ್ಡಂಡೆ ಕಿಕ್ ಬ್ಯಾಕ್ ವಿಷಯದಲ್ಲಿ, ತಾವೇ ದುರ್ಬಲವೆಂದು ಹಣೆಪಟ್ಟಿ ಅಂಟಿಸಿರುವ ಎಸಿಬಿಯಿಂದ ತನಿಖೆಯಾಗಬೇಕು ಎಂದು ಸಿದ್ದರಾಮಯ್ಯ ಹೇಳುತ್ತಿರುವುದು ವಿಚಿತ್ರವಾಗಿದೆ. ಹಾಗಾಗಿಯೇ ಆಡಳಿತ ಪಕ್ಷದ ನಾಯಕರು ಮತ್ತು ಸರ್ಕಾರದ ಅಕ್ರಮಗಳ ವಿಷಯದಲ್ಲಿ ಕೇವಲ ಇಂತಹ ಹೇಳಿಕೆ, ಟೀಕೆಗಳಿಗೆ ಸೀಮಿತವಾಗಿರುವ ಕಾಂಗ್ರೆಸ್ ನಾಯಕರ ಅಂತಹ ವರಸೆಗಳೇ ಅನುಮಾನಾಸ್ಪದವಾಗಿ ಕಾಣುತ್ತಿವೆ.
ಮಾಜಿ ಮುಖ್ಯಮಂತ್ರಿಗಳ ವಿಷಯದಲ್ಲಿ ಇಂತಹ ಇಕ್ಕಟ್ಟಿನ ಪರಿಸ್ಥಿತಿಯಾದರೆ, ಸ್ವತಃ ಅಕ್ರಮ ಆಸ್ತಿ, ತೆರಿಗೆ ವಂಚನೆಯಂತಹ ಗಂಭೀರ ಪ್ರಕರಣಗಳಲ್ಲಿ ಆರೋಪಿಗಳಾಗಿ, ಈಗಲೂ ಕಾನೂನು ತೂಗುಗತ್ತಿಯ ಅಡಿಯಲ್ಲೇ ಇರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಅಂತಹ ತಮ್ಮ ವೈಯಕ್ತಿಕ ತೊಡಕುಗಳು ಮತ್ತು ಸ್ವತಃ ಸಿಎಂ ಯಡಿಯೂರಪ್ಪ ಜೊತೆಗೆ ಅವರು ಹೊಂದಿರುವ ಬೇರೆಬೇರೆ ರೀತಿಯ ನಂಟಿನ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧದ ಭ್ರಷ್ಟಾಚಾರ, ಅಕ್ರಮಗಳ ವಿಷಯದಲ್ಲಿ, ಅದರಲ್ಲೂ ನೇರವಾಗಿ ಸಿಎಂ ಮತ್ತು ಅವರ ಕುಟುಂಬದ ವಿರುದ್ಧದ ಆರೋಪಗಳ ವಿಷಯದಲ್ಲಿ ಜಾಣ ಮೌನಕ್ಕೆ ಶರಣಾಗುತ್ತಾರೆ ಎಂಬ ಮಾತೂ ಇದೆ.
ಹಾಗಾಗಿ, ಒಟ್ಟಾರೆ, ಸರ್ಕಾರದ ಜನ ವಿರೋಧಿ ಕಾಯ್ದೆ- ಕಾನೂನುಗಳ ವಿಷಯದಲ್ಲಾಗಲೀ, ಅಕ್ರಮಗಳ ವಿಷಯದಲ್ಲಾಗಲೀ, ಸಾವಿರಾರು ಕೋಟಿ ರೂಪಾಯಿಗಳ ಸಾರ್ವಜನಿಕ ತೆರಿಗೆ ಹಣದ ಲೂಟಿಯ ವಿಷಯದಲ್ಲಾಗಲೀ ಗಟ್ಟಿಯಾಗಿ ದನಿ ಎತ್ತಲಾಗದ, ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಾಗದ ಒಂದು ರೀತಿಯ ಅಸಹಾಯಕ ಸ್ಥಿತಿಯಲ್ಲಿರುವ ಕಾಂಗ್ರೆಸ್ ನಾಯಕರು, ಭಾವೀ ಮುಖ್ಯಮಂತ್ರಿಯ ವಿಷಯದಲ್ಲಿ ಮಾತ್ರ ಈಗಲೇ ಪೈಪೋಟಿಗೆ ಇಳಿದಿರುವುದು ನಗೆಪಾಟಲಿನ ಸಂಗತಿ!











