ಕಾಂಗ್ರೆಸ್ ಪಾಳಯದಲ್ಲಿ ಟಿಕೆಟ್ ಹಂಚಿಕೆ ವಿಚಾರ ಭುಗಿಲೇಳುವ ಎಲ್ಲಾ ಸಾಧ್ಯತೆಗಳು ಇವೆ. ಸಿದ್ದರಾಮಯ್ಯ ಹಾಗು ಡಿ.ಕೆ ಶಿವಕುಮಾರ್ ಬಸ್ ಯಾತ್ರೆಗೂ ಮುನ್ನವೇ ಟಿಕೆಟ್ ಘೋಷಣೆ ಮಾಡಬೇಕು ಎಂದು ಸಿದ್ದರಾಮಯ್ಯ ಪಟ್ಟು ಹಿಡಿದಿದ್ದರೂ ಇನ್ನೂ ಟಿಕೆಟ್ ಘೋಷಣೆ ಆಗಿಲ್ಲ. ಆದರೆ ಇವತ್ತು ಟಿಕೆಟ್ ಹಂಚಿಕೆಯಲ್ಲಿ ಉಂಟಾಗಿರುವ ಗೊಂದಲ ನಿವಾರಣೆಗೆ ಕಾಂಗ್ರೆಸ್ ಪಕ್ಷದಲ್ಲಿ ಮಹತ್ವದ ಸಭೆ ನಡೆಯುತ್ತಿದೆ. ಕಾಂಗ್ರೆಸ್’ನಲ್ಲಿ ಹಲವಾರು ಟೀಂಗಳ ನಡುವೆ ಟೀಂ ರಾಜಕಾರಣ ಶುರುವಾಗಿದ್ದು, ಒಂದೊಂದು ಕ್ಷೇತ್ರದಲ್ಲಿ ಸಿದ್ದರಾಮಯ್ಯ ಹಾಗು ಡಿ.ಕೆ ಶಿವಕುಮಾರ್ ಬೆಂಬಲಿಗರು ಪ್ರತ್ಯೇಕವಾಗಿ ಅರ್ಜಿ ಹಾಕಿರುವುದು ಟಿಕೆಟ್ ಹಂಚಿಕೆಗೆ ಅಡ್ಡಗಾಲು ಹಾಕಿದೆ. ಕಾಂಗ್ರೆಸ್’ನಲ್ಲಿ ಟಿಕೆಟ್ ಜಟಾಪಟಿನ್ನು ನಿವಾರಣೆ ಮಾಡುವ ಉದ್ದೇಶದಿಂದ ಇಂದು 137 ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆಯ ಬಗ್ಗೆ ತೀರ್ಮಾನ ಆಗುವ ಸಾಧ್ಯತೆಯಿದೆ.
137 ಕ್ಷೇತ್ರದ ಟಿಕೆಟ್ ಫೈನಲ್ ಆಗಿದ್ರೂ ಗೊಂದಲ..!
ಕಾಂಗ್ರೆಸ್ನಲ್ಲಿ 137 ಕ್ಷೇತ್ರಗಳ ಟಿಕೆಟ್ ಹಂಚಿಕೆ ಹೆಚ್ಚೂ ಕಡಿಮೆ ಅಂತಿಮ ಆಗಿದೆ. ಆದರೂ ಕೂಡ ಅಂತಿಮ ಪಟ್ಟಿ ಪ್ರಕಟ ಮಾಡದಂತೆ ತಡೆ ಹಿಡಿಯಲಾಗಿದೆ. ಇದೇ ಕಾರಣಕ್ಕೆ ಇಂದು ರಾಜ್ಯಕ್ಕೆ ಎಐಸಿಸಿ ಸ್ಕ್ರೀನಿಂಗ್ ಕಮಿಟಿ ಆಗಮಿಸುತ್ತಿದೆ. AICC ಪ್ರಧಾನ ಕಾರ್ಯದರ್ಶಿ ಮೋಹನ್ ಪ್ರಕಾಶ್ ನೇತೃತ್ವದ ಕಮಿಟಿ ಇಂದಿನಿಂದ ಮೂರು ದಿನಗಳ ಕಾಲ ಕಾಂಗ್ರೆಸ್ ನಾಯಕರ ಜೊತೆ ಸರಣಿ ಸಭೆ ನಡೆಸಲಿದ್ದು, ಟಿಕೆಟ್ ಹಂಚಿಕೆ ಗೊಂದಲ, ನಾಯಕರ ನಡುವಿನ ಭಿನ್ನಾಭಿಪ್ರಾಯ ಶಮನಕ್ಕೂ ಸ್ಕ್ರೀನಿಂಗ್ ಕಮಿಟಿ ಮಹತ್ವದ ಚರ್ಚೆ ನಡೆಸಲಿದೆ. ರಾಜ್ಯ ನಾಯಕರ ಜೊತೆ ಸ್ಕ್ರೀನಿಂಗ್ ಕಮಿಟಿ ಪ್ರತ್ಯೇಕ ಸಭೆ ನಡೆಸಲಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷರುಗಳು, ಎಐಸಿಸಿ ಕಾರ್ಯದರ್ಶಿಗಳು, CWC ಸದಸ್ಯರು, ಪ್ರಚಾರ ಸಮಿತಿ ಜೊತೆಗೂ ಸ್ಕ್ರೀನಿಂಗ್ ಕಮಿಟಿ ಪ್ರತ್ಯೇಕ ಸಭೆ ಮಾಡಲಿದ್ದು, ಅಂತಿಮವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗು ಡಿ.ಕೆ ಶಿವಕುಮಾರ್ ಜೊತೆ ಪ್ರತ್ಯೇಕ ಸಭೆ ಮಾಡಿ ಅಂತಿಮ ಮಾಡಲಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್’ನಲ್ಲಿ ಟಿಕೆಟ್ ಹಂಚಿಕೆ ಮಾಡೋದು ಹೇಗೆ..!?
ಕಾಂಗ್ರೆಸ್’ನಲ್ಲಿ ಈಗಾಗಲೇ ಟಿಕೆಟ್ ಅಂತಿಮ ಘಟ್ಟಕ್ಕೆ ತಲುಪಿದೆ. ಒಂದೇ ಕ್ಷೇತ್ರದಿಂದ ಐದಾರು ಮಂದಿ ಟಿಕೆಟ್’ಗಾಗಿ ಅರ್ಜಿ ಸಲ್ಲಿಸಿದ್ದು, ಜಿಲ್ಲಾ ಚುನಾವಣಾ ಸಮಿತಿ ಸಭೆ ಬಳಿಕ ಆ ಪಟ್ಟಿಯಲ್ಲಿ ಗೆಲ್ಲ ಬಹುದಾದ ಮೂವರನ್ನು ಅಂತಿಮ ಮಾಡಲಾಗಿದೆ. ಇಂದಿನ ಸ್ಕ್ರೀನಿಂಗ್ ಕಮಿಟಿಯಲ್ಲಿ ಮೂವರಲ್ಲಿ ಒಬ್ಬರನ್ನು ಕೈಬಿಟ್ಟು ಇಬ್ಬರನ್ನು ಅಂತಿಮ ಸುತ್ತಿಗೆ ಮುಂದುವರಿಸುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ. ಆದರೆ ಆ ಮೂವರಲ್ಲಿ ಒಬ್ಬರನ್ನು ಕೈ ಬಿಡುವ ಮುನ್ನ ಟಿಕೆಟ್ ಆಕಾಂಕ್ಷಿಗಳ ಜೊತೆಗೆ ಸಭೆ ಮಾಡಲು ಸ್ಕ್ರೀನಿಂಗ್ ಕಮಿಟಿ ಚಿಂತನೆ ನಡೆಸಿದೆ. AICC ಪ್ರಧಾನ ಕಾರ್ಯದರ್ಶಿ ಮೋಹನ್ ಪ್ರಕಾಶ್ ನೇತೃತ್ವದ ಕಮಿಟಿ ಸಮಗ್ರವಾಗಿ ಚರ್ಚಿಸಿ, ಗೆಲ್ಲಬಹುದಾದಂತಹ ಸಮರ್ಥ ಅಭ್ಯರ್ಥಿಯನ್ನು ಮುಂದಿನ ಹಂತಕ್ಕೆ ಆಯ್ಕೆ ಮಾಡಲಿದೆ. ಸ್ಕ್ರೀನಿಂಗ್ ಕಮಿಟಿ ಮೂವರಲ್ಲಿ ಇಬ್ಬರನ್ನ ಆಯ್ಕೆ ಮಾಡಲಿದ್ದು, ಅಂತಿಮವಾಗಿ ಹೈಕಮಾಂಡ್ ನಾಯಕರು ಪರಿಶೀಲಿಸಿ ಒಬ್ಬರ ಹೆಸರನ್ನು ಫೈನಲ್ ಮಾಡಲಿದ್ದಾರೆ ಎನ್ನಲಾಗಿದೆ.
ಸಿದ್ದರಾಮಯ್ಯ ಹಾಗು ಡಿ.ಕೆ ಶಿವಕುಮಾರ್ ಜಿದ್ದಾಜಿದ್ದಿ ಯಾಕೆ..?
ಸಿದ್ದರಾಮಯ್ಯ ಹಾಗು ಡಿ.ಕೆ ಶಿವಕುಮಾರ್ ನಡುವೆ ಸಿಎಂ ಕುರ್ಚಿಗಾಗಿ ಫೈಟಿಂಗ್ ನಡೆಯುತ್ತಿದೆ. ಬಹಿರಂಗವಾಗಿ ಎಲ್ಲವೂ ಚೆನ್ನಾಗಿದೆ ಎನ್ನುವಂತೆ ಇಬ್ಬರೂ ನಾಯಕರು ತೋರಿಸಿಕೊಳ್ತಿದ್ದಾರೆ. ಆದರೆ ಒಳಗೊಳಗೆ ಇಬ್ಬರು ನಾಯಕರು ಟಿಕೆಟ್ ಹಂಚಿಕೆಯಿಂದಲೇ ಹಿಡಿತ ಸಾಧಿಸಲು ಮುಂದಾಗಿದ್ದು, ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸಲು ದುಂಬಾಲು ಬಿದ್ದಿದ್ದಾರೆ. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗಳು ಹೆಚ್ಚಿನ ಮಟ್ಟದಲ್ಲಿ ಗೆಲ್ಲುವ ಸಾಧ್ಯತೆ ಇರುವ ಕಾರಣಕ್ಕೆ ಟಿಕೆಟ್ ಸಿಕ್ಕರೆ ಗೆಲ್ಲಿಸಿಕೊಳ್ಳಬಹುದು, ಆ ಬಳಿಕ ಮುಖ್ಯಮಂತ್ರಿ ಆಯ್ಕೆ ವೇಳೆ ಬೆಂಬಲ ಸಿಗುತ್ತದೆ ಎನ್ನುವ ಲೆಕ್ಕಾಚಾರದಲ್ಲಿ ಉಭಯ ನಾಯಕರಿದ್ದಾರೆ. ಸಿದ್ದರಾಮಯ್ಯ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಭಾವ ಹೊಂದಿದ್ದು, ಹಳೇ ಮೈಸೂರು ಹಾಗು ಕರಾವಳಿ ಭಾಗದಲ್ಲಿ ಡಿ.ಕೆ ಶಿವಕುಮಾರ್ ಪ್ರಭಾವ ಬಳಸುತ್ತಿದ್ದಾರೆ. ಈಗ ಟಿಕೆಟ್ ಕೊಡಿಸಿದ ಬಳಿಕ ಯಾರು ಹೆಚ್ಚಿನ ಟಿಕೆಟ್ ಪಡೆದುಕೊಳ್ತಾರೆ ಅನ್ನೋದ್ರ ಮೇಲೆ ಕಾಂಗ್ರೆಸ್ನಲ್ಲಿ ಯಾರು ಪ್ರಭಾವಿಗಳು ಅನ್ನೋದು ಕೂಡ ನಿರ್ಧಾರ ಆಗಲಿದೆ.