“ಬಿಜೆಪಿ ಕಾರ್ಯಕರ್ತರನ್ನು ಮೈಮುಟ್ಟಿ ನೋಡಲಿ, ಅದರ ಪರಿಣಾಮವೇ ಬೇರೆಯಾಗಲಿದೆ” ಎಂಬ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಸಚಿವ ಕೆ ಎಸ್ ಈಶ್ವರಪ್ಪ ಅವರ ವಿವಾದಿತ ಹೇಳಿಕೆಯ ಹಿನ್ನೆಲೆಯಲ್ಲಿ ಅವರ ವಿರುದ್ಧ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ(ಎಸ್ಪಿ)ಗೆ ದೂರು ನೀಡಲಾಗಿದೆ.
ಸಚಿವ ಕೆ.ಎಸ್.ಈಶ್ವರಪ್ಪ ಅಧಿಕಾರ ಸ್ಥಾನದಲ್ಲಿದ್ದು ಪ್ರಚೋದನಕಾರಿ ಭಾಷಣ ಮಾಡಿದ್ದಾರೆ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಎಸ್‌ಡಿಪಿಐ ಜಿಲ್ಲಾ ಸಮಿತಿ ಎಸ್ಪಿಗೆ ಮಂಗಳವಾರ ದೂರು ನೀಡಿದೆ.
ಶಿವಮೊಗ್ಗದಲ್ಲಿ ಕಳೆದ ವಾರ ಬಿಜೆಪಿಯ ಕಾರ್ಯಕರ್ತರ ಸಭೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿರುವ ಸಚಿವ ಈಶ್ವರಪ್ಪ ಅವರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಜಿಲ್ಲಾ ಸಮಿತಿ ದೂರಿನಲ್ಲಿ ಹೇಳಿದೆ.

ಜವಾಬ್ದಾರಿಯುತ ಸ್ಥಾನದಲ್ಲಿರುವ ಕೆ ಎಸ್ ಈಶ್ವರಪ್ಪ ಅವರು ತಾವೊಬ್ಬ ಸಚಿವರೆನ್ನುವುದನ್ನು ಮರೆತು, ಒಂದು ಕೋಮಿನ ವಿರುದ್ಧ ಪ್ರಚೋದನೆ ನೀಡಲು ಮುಂದಾಗಿದ್ದಾರೆ. ಸಚಿವರ ಪ್ರಚೋದನಕಾರಿ ಭಾಷಣ ರಾಜ್ಯದಲ್ಲಿ ಕೋಮು ಗಲಭೆಗೆ, ಸಂಘರ್ಷಕ್ಕೆ ಕುಮ್ಮಕ್ಕು ನೀಡುವಂತಿದೆ. ಆ ಹಿನ್ನೆಲೆಯಲ್ಲಿ ಸಮಾಜದ ಸಾಮರಸ್ಯ ಕದಡುವಂಥ ಹೇಳಿಕೆ ನೀಡಿರುವವರನ್ನು ಕೂಡಲೇ ಸಚಿವ ಸ್ಥಾನದಿಂದ ವಜಾಗೊಳಿಸಿ, ಕಾನೂನಿನ ಪಾಠ ಕಲಿಸಬೇಕಾಗಿದೆ. ಆ ಮೂಲಕ ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಬೇಕು ಎಂದು ಸಮಿತಿ ಆಗ್ರಹಿಸಿದೆ.
ಕಳೆದ ವಾರ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಸಚಿವ ಈಶ್ವರಪ್ಪ “ನಮ್ಮ ಕಾರ್ಯಕರ್ತರ ಮೈಮುಟ್ಟಿ ನೋಡಲಿ, ಅದರ ಪರಿಣಾಮವೇ ಬೇರೆಯಾಗಲಿದೆ”‘ ಎಂಬ ಹೇಳಿಕೆ ನೀಡಿದ್ದರು.
ಬಿಜೆಪಿ ಮತ್ತು ಸಂಘಪರಿವಾರದ ಪ್ರಾಬಲ್ಯದ ಕುರಿತು ಅವರು ನೀಡಿದ ಆ ಹೇಳಿಕೆ ರಾಜ್ಯವ್ಯಾಪಿ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೆ ತಮ್ಮ ಹೇಳಿಕೆ ವಿವಾದಕ್ಕೀಡಾದ ಹಿನ್ನೆಲೆಯಲ್ಲಿ ಮತ್ತೆ ತಮ್ಮನ್ನು ಸಮರ್ಥಿಸಿಕೊಂಡಿದ್ದ ಈಶ್ವರಪ್ಪ, “ನಾನು ನನ್ನ ಹೇಳಿಕೆಗೆ ಈಗಲೂ ಬದ್ಧವಾಗಿದ್ದೇನೆ. ಯಾವುದೇ ವಿವಾದಾತ್ಮಕ ಹೇಳಿಕೆ ನೀಡಿಲ್ಲ. ನಾನೇನು ತಪ್ಪು ಹೇಳಿಕೆ ನೀಡಿಲ್ಲ. ನಾನು ಬಹಿರಂಗವಾಗಿ ಸಾರ್ವಜನಿಕ ಸಭೆಯಲ್ಲಿ ಈ ಹೇಳಿಕೆ ನೀಡಿಲ್ಲ. ನಮ್ಮ ಕಾರ್ಯಕರ್ತರ ಸಭೆಯಲ್ಲಿ ಹೇಳಿಕೆ ನೀಡಿದ್ದೇನೆ. ಯಾರಾದ್ರೂ ನಮ್ಮ ಕಾರ್ಯಕರ್ತರನ್ನು ಮುಟ್ಟಿದರೆ ನಾವು ಸುಮ್ಮನಿರಬೇಕಾ” ಎಂದು ಪ್ರಶ್ನಿಸಿದ್ದರು.
“ಈ ಹಿಂದೆ ನಮ್ಮ ಕಾರ್ಯಕರ್ತರನ್ನು ಯಾರು ಕೊಲೆ ಮಾಡಿದರು ಎಂದು ತಿಳಿಯಲು ಕೂಡ ನಮಗೆ ಶಕ್ತಿ ಇರಲಿಲ್ಲ. ಈಗ ನಮ್ಮ ಬಳಿ ಶಕ್ತಿ ಇದೆ. ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದರೆ, ಸುಮ್ಮನಿರಬೇಕಾ? ನಾನು ಸಭೆಯಲ್ಲೂ ಇದನ್ನೇ ಹೇಳಿದ್ದೇನೆ. ಇದು ಪ್ರಚೋದನಕಾರಿ ಭಾಷಣ ಹೇಗೆ?” ಎಂದು ಮರುಪ್ರಶ್ನೆ ಹಾಕುವ ಮೂಲಕ ತಮ್ಮ ಹೇಳಿಕೆಗೆ ತಾವು ಬದ್ಧ. ಆ ಮಾತನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಸಮರ್ಥಿಸಿಕೊಂಡಿದ್ದರು.
ಇದೀಗ ಸಚಿವರ ಇಂಥ ಹೇಳಿಕೆ ಪ್ರಚೋದನಕಾರಿ ಮತ್ತು ಸಮಾಜದ ಶಾಂತಿ ಕದಡುವ ದುರುದ್ದೇಶದ್ದು ಎಂದು ಆರೋಪಿಸಿ ಎಸ್ ಡಿ ಪಿಐ ಸಂಘಟನೆ ಶಿವಮೊಗ್ಗ ಎಸ್ಪಿಗೆ ದೂರು ನೀಡಿದೆ.