ಭಜರಂಗದಳ, ಪಿಎಫ್ಐ ಸೇರಿದಂತೆ ಯಾವುದೇ ಸಂಘಟನೆಗಳು ಶಾಂತಿ ಕದಡುವ ಕೆಲಸ ಮಾಡಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ಅವರು ವಾಗ್ದಾಳಿ ನಡೆಸಿದ್ದು, ಹನುಮನನ್ನು ಕಾಂಗ್ರೆಸ್ ಕೂಡಿ ಹಾಕಲು ಹೊರಟಿದೆ ಎಂದಿದ್ದರು. ಈ ಬಗ್ಗೆ ಕೆಪಿಸಿಸಿ ಉಸ್ತುವಾರಿ ರಣದೀಪ್ ಸುರ್ಜೇವಾಲ ಆಕ್ಷೇಪವೆತ್ತಿದ್ದಾರೆ.
ಬಜರಂಗದಳವನ್ನು ಹನುಮಂತನಿಗೆ ಹೋಲಿಕೆ ಮಾಡುವುದು ಹನುಮಂತನಿಗೆ ಮಾಡಬಹುದಾದ ದೊಡ್ಡ ಅಪಮಾನ. ಹನುಮಂತ ಕರ್ತವ್ಯನಿಷ್ಠೆ, ಸೇವೆಯ ಪ್ರತೀಕವಾಗಿದ್ದಾರೆ. ಹನುಮಂತ ತ್ಯಾಗದ ಪ್ರತೀಕ. ಹನುಮಂತ ಬೇರೆಯವರ ಕಷ್ಟಗಳನ್ನು ತನ್ನದೆಂದು ಭಾವಿಸುತ್ತಾರೆ. ಇಂತಹ ಹನುಮಂತನನ್ನು ಹಿಂಸಾಚಾರ ಮಾಡುವವರ ಜತೆ ಹೋಲಿಕೆ ಮಾಡುವುದು ಹನುಮಂತನಿಗೆ ಮಾಡುವ ಅಗೌರವ. ಇದರಿಂದ ಲಕ್ಷಾಂತರ ಹನುಮ ಭಕ್ತರಿಗೆ ನೋವಾಗಿದೆ. ಹೀಗಾಗಿ ಅವರು ಕ್ಷಮೆ ಕೇಳಬೇಕು ಎಂದು ಸುರ್ಜೇವಾಲ ಆಗ್ರಹಿಸಿದರು.
‘ಬಿಜೆಪಿ ಹಾಗೂ ಅದರ ನಾಯಕರಿಗೆ ಹನುಮಾನ್ ಚಾಲೀಸ ಓದಲು ಬರುವುದಿಲ್ಲ. ಅವರಿಗೆ 40% ಕಮಿಷನ್ ತೆಗೆದುಕೊಳ್ಳುವುದಷ್ಟೇ ಗೊತ್ತು ಎಂದು ಹೇಳಿದ ಅವರು ರಾಜ್ಯದಲ್ಲಿ ನಾಲ್ಕು ವರ್ಷಗಳಲ್ಲಿ 1500 ದೇವಾಲಯಗಳನ್ನು ಬಿಜೆಪಿ ಸರ್ಕಾರ ಕೆಡವಿದ್ದು, ಇದರ ವಿರುದ್ಧ ಯಾಕೆ ಯಾರೂ ಪ್ರತಿಭಟನೆ ಮಾಡಲಿಲ್ಲ? ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿಯ ಹಾಲಿ ಸರ್ಕಾರ ಕಳೆದ ನಾಲ್ಕು ವರ್ಷಗಳಲ್ಲಿ ಅತ್ಯಂತ ಪುರಾತನ ಹನುಮ ದೇವಾಲಯಗಳನ್ನು ಕೆಡವಿದೆ. ನಂಜನಗೂಡಿನಲ್ಲಿ 3 ಸಾವಿರ ಹಳೆಯ ಹನುಮಂತನ ದೇವಾಲಯ ಕೆಡವಿದವರು ಯಾರು? ಇದನ್ನು ಕೆಡವಿದವರು ಬಿಜೆಪಿ ಸರ್ಕಾರ. ಇದರ ವಿರುದ್ಧ ವಿಹೆಚ್ ಪಿ, ಬಜರಂಗದಳ ಯಾಕೆ ವಿರೋಧಿಸಲಿಲ್ಲ? ಬೆಂಗಳೂರಿನಲ್ಲಿ ಮೆಟ್ರೋ ನಿರ್ಮಾಣಕ್ಕೆ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರು 150 ವರ್ಷಗಳ ಹಳೆಯ ಹನುಮಂತನ ದೇವಾಲಯವನ್ನು ಜ.27, 2020ರಂದು ಕೆಡವಿದ್ದರು. ಇದರ ವಿರುದ್ಧ ವಿಹೆಚ್ ಪಿ ಹಾಗೂ ಬಜರಂಗದಳದವರು ಹೋರಾಟ ಮಾಡಿದ್ದರೆ? ಶಿವಮೊಗ್ಗ ನಗರದಲ್ಲಿ ಫೆ.17, 2021ರಂದು ಹಳೆಯ ದೇವಾಲಯ ಕೆಡವಲಾಗಿತ್ತು. ಇದರ ವಿರುದ್ಧ ಪ್ರತಿಭಟನೆ ನಡೆಸಲಾಗಿತ್ತೇ? ಆಗ ಹನುಮಾನ್ ಚಾಲೀಸ ಪಠಿಸಲಾಗಿತ್ತೇ? ಇಲ್ಲ. ಚಿತ್ರದುರ್ಗದ ಹೊಳಲ್ಕೆರೆಯಲ್ಲಿ ಫೆ.28, 2022ರಂದು ಬಿಜೆಪಿ ಹನುಮ ದೇವಾಲಯ ಕೆಡವಿತ್ತು. ಇದರ ವಿರುದ್ಧ ಪ್ರತಿಭಟನೆ ನಡೆದಿತ್ತೇ? ಇಲ್ಲ. 1500 ದೇವಾಲಯಗಳನ್ನು ಬಿಜೆಪಿ ಸರ್ಕಾರ ಕಳೆದ ನಾಲ್ಕು ವರ್ಷಗಳಲ್ಲಿ ಕೆಡವಿದೆ. ಇದರ ಬಗ್ಗೆ ಮೋದಿ ಅವರು ಮಾತನಾಡಿದ್ದಾರಾ? ಇದಕ್ಕೆ ನೀವು ಸಾರ್ವಜನಿಕವಾಗಿ ಕ್ಷಮೆ ಕೇಳುತ್ತೀರಾ? ಈಗ ಚುನಾವಣೆ ಬಂದಿದೆ ಎಂಬ ವಿಚಾರವಾಗಿ ಈ ವಿಚಾರವನ್ನು ಬಳಸಿಕೊಳ್ಳುತ್ತಿದ್ದಾರೆ. ನಾನು ಹಿಂದೂ, ನಾನು ಹನುಮಭಕ್ತ. ನನ್ನ ಕ್ಷೇತ್ರದಲ್ಲಿ ಹನುಮ ದೇವಾಲಯ ಕಟ್ಟಿದ್ದೇನೆ. ಆದರೂ ನನಗೆ ಸಂವಿಧಾನವೇ ದೇವರು. ಈ ಸಂವಿಧಾನ ನಮ್ಮ ಧಾರ್ಮಿಕ ಹಕ್ಕನ್ನು ರಕ್ಷಿಸುತ್ತದೆ. ನಾವು ಸಮಾಜದಲ್ಲಿ ಯಾರು ಕಾಾನೂನನ್ನು ಕೈಗೆತ್ತಿಕೊಳ್ಳುತ್ತಾರೋ ಅಂತಹವರ ವಿರುದ್ಧ ಕ್ರಮಕೈಗೊಳ್ಳುವುದಾಗಿ ಹೇಳಿದ್ದೇವೆ’ ಎಂದು ಅವರು ಹೇಳಿದ್ದಾರೆ.
ರಾಮನಾಗಲಿ, ಹನುಮಂತನಾಗಲಿ, ವಿಷ್ಣುವಾಗಲಿ, ಕಾಳಿಯಾಗಲಿ, ಶಿವ ಪಾರ್ವತಿಯಾಗಲಿ ಅಥವಾ ಭಾರತದಲ್ಲಿ ಪೂಜಿಸುವ 36 ಕೋಟಿ ದೇವತೆಗಳಲ್ಲಿ ಯಾವುದೇ ದೇವತೆ ಹೆಸರಲ್ಲಿ ಹಿಂಸಾಚಾರ ನಡೆಸುವಂತಿಲ್ಲ. ನನ್ನ ಹಿಂದೂ ಧರ್ಮ ಪ್ರಾಮಾಣಿಕತೆ ಕಲಿಸಿದೆ. ಹಿಂದೂ ಧರ್ಮದಲ್ಲಿ ವಸುದೈವ ಕುಟುಂಬಕಂ ಎಂಬ ಅಂಶ ನಮಗೆ ಇಡೀ ವಿಶ್ವ ನಮ್ಮ ಕುಟುಂಬ ಎಂಬ ಸಂದೇಶ ಕಲಿಸಿದೆ. ಅದರ್ಥ, ಹಿಂದೂಗಳು ಎಂದರೆ ಎಲ್ಲರನ್ನು ಒಳಗೊಳ್ಳುವುದು, ತ್ಯಾಗ, ಗೌರವ, ಸಾಮರಸ್ಯ ಆದರೆ ಕೆಲವರು ತಮ್ಮ ಸ್ವಾರ್ಥಕ್ಕೆ ನನ್ನ ಧರ್ಮದ ವಾಖ್ಯಾನವನ್ನು ತಿರುಚುತ್ತಿದ್ದಾರೆ. ನಾನು ಮಹಾಭಾರತದ ಭೂಮಿಯಿಂದ ಬಂದಿದ್ದು, ನೀವು ಭಗವದ್ಗೀತೆ ಓದಿದ್ದೀರಾ? ಮೋದಿ ಅವರು ಒಂದು ಬಾರಿಯಾದರೂ ಭಗವದ್ಗೀತೆ ಓದಿದ್ದರೆ ಉತ್ತಮವಾಗಿರುತ್ತಿತ್ತು. ಅವರಿಗೆ ಭಗವದ್ಗೀತೆಯಲ್ಲಿ ಎಷ್ಟು ಅಧ್ಯಾಯವಿದೆ ಎಂದು ತಿಳಿದಿದೆಯೋ ಇಲ್ಲವೋ. ಗೊತ್ತಿದ್ದರೆ ಈ ಭಾಷೆ ಬಳಸುತ್ತಿರಲಿಲ್ಲ. ನಮ್ಮನ್ನು ಪ್ರಶ್ನಿಸುತ್ತಿರುವವರು ಎಂದಾದರೂ ಹನುಮಾನ ಚಾಲೀಸ ಓದಿದ್ದಾರಾ? ನಾನು ಬೇಕಾದರೆ ನಾಲ್ಕು ಸಾಲು ಹೇಳುತ್ತೇನೆ. ಮಹಾವೀರ ವಿಕ್ರಮ ಭಜರಂಗಿ, ಕುಮತಿ ನಿವಾಸ ಸುಮತಿ ಕೇ ಸಂಗಿ. ಅಂದರೆ ಬಜರಂಗ ಬಲಿಯ ಸ್ಮರಣೆಯನ್ನು ಸದ್ಬುದ್ಧಿ ಹಾಗೂ ಉತ್ತಮ ನಡವಳಿಕೆ ಇರುವವರು ಮಾತ್ರ ಮಾಡಬೇಕು. ಯಾರ ಬುದ್ಧಿ ಭ್ರಷ್ಟವಾಗಿರುತ್ತದೆಯೋ ಅವರಿಗೆ ಹನುಮಂತನ ಆಶೀರ್ವಾದ ಸಿಗುವುದಿಲ್ಲ’ ಎಂದು ಹೇಳಿದ್ದಾರೆ.