ಮೈಸೂರು : ಸ್ಯಾಂಟ್ರೋ ರವಿ ವಿರುದ್ದ IT, ED, CBIಗೆ ಒಡನಾಡಿ ಸಂಸ್ಥೆ ದೂರು ನೀಡಿದ್ಧಾರೆ. ಪರಶು ಹಾಗೂ ಸ್ಟಾನ್ಲಿ ಬೆಂಗಳೂರಲ್ಲಿ ದೂರು ದಾಖಲಿಸಿದ್ದಾರೆ. ಸ್ಯಾಂಟ್ರೋ ರವಿ ವಿರುದ್ಧ ಗೂಂಡಾ ಕಾಯ್ದೆ ದಾಖಲಾಗಿತ್ತು, ಹೆಣ್ಣು ಮಕ್ಕಳನ್ನು ಅಕ್ರಮವಾಗಿ ಬಳಸಿಕೊಂಡಿದ್ದಾನೆ.
ಹಣದ ಆಸೆ ತೋರಿಸಿ ವೇಶ್ಯಾವಾಟಿಕೆಗೆ ದೂಡುತ್ತಿದ್ದಾನೆ. ಈತನ ಜೊತೆ IAS, IPS ಅಧಿಕಾರಿಗಳು ಶಾಮೀಲಾಗಿದ್ದಾರೆ.
ಯಾವುದೇ ನಿರ್ದಿಷ್ಟ ಕೆಲಸ ಮಾಡದಿದ್ರೂ ಕೋಟಿ-ಕೋಟಿ ಹಣ ಮಾಡಿದ್ದಾನೆ. ಅಕ್ರಮವಾಗಿ ಹಣ ಮಾಡಿ ಮನೆಯಲ್ಲಿ ದಾಸ್ತಾನು ಮಾಡಿಕೊಂಡಿದ್ದಾನೆ. ಬೆಂಗಳೂರು, ಮೈಸೂರಲ್ಲಿ ಅಕ್ರಮ ಸೈಟ್, ಮನೆ ಹೊಂದಿದ್ದಾನೆ-ಸ್ಯಾಂಟ್ರೋ ರವಿ ವಿರುದ್ಧ ಸೂಕ್ತ ತನಿಖೆ ಮಾಡಿ ಎಂದು ದೂರು ನೀಡಿದ್ಧಾರೆ. ಪೊಲೀಸ್ ಅಧಿಕಾರಿಗಳ ಜತೆಗಿನ ವಾಟ್ಸಾಪ್ ಚಾಟ್, ಕಾಲ್ ಡಿಟೇಲ್ಸ್ ಸಮೇತ ದೂರು ದಾಖಲಿಸಿದ್ದಾರೆ.
ತನಿಖೆ ಚುರುಕುಗೊಳಿಸಿದ ಪೊಲೀಸರು, 11 ವಿಶೇಷ ತಂಡ ರಚನೆ
ವಂಚನೆ, ಅತ್ಯಾಚಾರ, ವೇಶ್ಯವಾಟಿಕೆ ಇತ್ಯಾದಿ ಪ್ರಕರಣಗಳಲ್ಲಿ ಸಿಲುಕಿಕೊಂಡಿರುವ ಸ್ಯಾಂಟ್ರೋ ರವಿ ಪ್ರಕರಣ ಕುರಿತು ತನಿಖೆ ಚುರುಕುಗೊಳಿಸಿರುವ ಮೈಸೂರು ನಗರ ಪೊಲೀಸರು, ರವಿ ಬಂಧನಕ್ಕಾಗಿ 11 ವಿಶೇಷ ತಂಡಗಳನ್ನು ರಚನೆ ಮಾಡಿದ್ದಾರೆಂದು ತಿಳಿದುಬಂದಿದೆ.
ಉಪ ಪೊಲೀಸ್ ಆಯುಕ್ತ ಎಂ ಮುತ್ತುರಾಜ್ ಮಾತನಾಡಿ, ಸ್ಯಾಂಟ್ರೋ ರವಿ ಬಂಧನಕ್ಕಾಗಿ 11 ವಿಶೇಷ ತಂಡಗಳನ್ನು ರಚಿಸಲಾಗಿದೆ. ಆರೋಪಿ ಪತ್ತೆಗಾಗಿ ಈ ತಂಡಗಳು ವಿವಿಧ ಸ್ಥಳಗಳಿಗೆ ಭೇಟಿ ನೀಡಿ, ಕಾರ್ಯಾಚರಣೆ ಆರಂಭಿಸಿದ್ದಾರೆ. ಪ್ರತಿ ತಂಡದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ನೇತೃತ್ವದಲ್ಲಿ 6-10 ಪೊಲೀಸರು ಇದ್ದಾರೆಂದು ಮಾಹಿತಿ ನೀಡಿದ್ದಾರೆ.
ಸ್ಯಾಂಟ್ರೋ ರವಿಗಾಗಿ ಬೆಂಗಳೂರು, ರಾಮನಗರ, ಮಂಡ್ಯ ಮತ್ತು ಮೈಸೂರಿನಲ್ಲಿ ಪೊಲೀಸರು ಶೋಧ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೆಲವು ತಂಡಗಳು ಕೇರಳ, ತಮಿಳುನಾಡು, ಆಂಧ್ರಪ್ರದೇಶಗಳಿಗೂ ಭೇಟಿ ನೀಡಿವೆ ಎಂದು ತಿಳಿದುಬಂದಿದೆ.