• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, November 7, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಕಮ್ಯುನಿಸ್ಟ್ ಐಕ್ಯತೆ-ಆದ್ಯತೆ ಮತ್ತು ಬಾಧ್ಯತೆ

ಭಿನ್ನ ಸಿದ್ಧಾಂತಿಗಳು ಎಷ್ಟೇ ನಿರಾಕರಿಸಿದರೂ ಭಾರತದ ಅಭ್ಯುದಯಕ್ಕೆ ಮಾರ್ಕ್ಸ್ ಬೇಕೇಬೇಕು

Shivakumar by Shivakumar
October 30, 2026
in Top Story, ಕರ್ನಾಟಕ, ವಿಶೇಷ
0
Communist Unity Priority and Obligation
Share on WhatsAppShare on FacebookShare on Telegram

ನಾ ದಿವಾಕರ

ADVERTISEMENT

ಭಾಗ 2

ಕಮ್ಯುನಿಸ್ಟ್ ಪಕ್ಷಗಳ ಐಕ್ಯತೆ ಇಂದಿನ ಪರಿಸ್ಥಿತಿಯಲ್ಲಿ ಅತ್ಯವಶ್ಯಕವಾಗಿ ಏಕೆ ಕಾಣುತ್ತದೆ ? ಇದನ್ನು ಉತ್ತರಿಸುವ ಮುನ್ನ ವರ್ತಮಾನದ ಭಾರತಕ್ಕೆ ಮಾರ್ಕ್ಸ್ ಏಕೆ ಬೇಕು ಎಂದೂ ಯೋಚಿಸುವುದು ಸೂಕ್ತ. ವಸಾಹತು ಆಳ್ವಿಕೆಯಿಂದ ಹೊರಬಂದು ಸ್ವತಂತ್ರ ಗಣರಾಜ್ಯವಾಗಿ ರೂಪುಗೊಂಡ ಭಾರತ 80 ವರ್ಷಗಳ ಪಯಣದಲ್ಲಿ ಹಲವು ಏಳುಬೀಳುಗಳನ್ನು ಕಂಡಿದೆ. ರಾಜಕೀಯವಾಗಿ ತೀವ್ರತೆರನಾದ ಪಲ್ಲಟಗಳನ್ನು ಎದುರಿಸಿದರೂ ತನ್ನ ಪ್ರಜಾಪ್ರಭುತ್ವೀಯ ತಳಹದಿಯನ್ನು ಇನ್ನೂ ಉಳಿಸಿಕೊಂಡಿದೆ. ಆದರೆ ಕಳೆದ 12 ವರ್ಷಗಳ ಬಿಜೆಪಿ ಆಳ್ವಿಕೆಯಲ್ಲಿ ಈ ಅಡಿಪಾಯ ಅಲುಗಾಡುತ್ತಿದೆ. ಮೇಲ್ನೋಟಕ್ಕೆ ಸಂವಿಧಾನ ದಿನ, ಪ್ರಜಾಪ್ರಭುತ್ವ ದಿನ ಮೊದಲಾದ ಆಚರಣೆಗಳನ್ನು ವೈಭವೀಕರಿಸಿದರೂ, ಆಂತರಿಕವಾಗಿ ಬಿಜೆಪಿಯ ಹಿಂದುತ್ವ ರಾಜಕಾರಣದ ಅಂತಿಮ ಗುರಿ ಹಿಂದೂ ರಾಷ್ಟ್ರದ ಚೌಕಟ್ಟಿನಲ್ಲಿ ಪ್ರಜಾಪ್ರಭುತ್ವದ ಆಂತರಿಕ ನರನಾಡಿಗಳನ್ನು ಹಂತಹಂತವಾಗಿ ಕತ್ತರಿಸುವುದೇ ಆಗಿದೆ.

ಈ ಸಂಭಾವ್ಯ ಅಪಾಯದ ಹಾದಿಯಲ್ಲೇ ನವ ಉದಾರವಾದಿ ಮಾರುಕಟ್ಟೆ ಆರ್ಥಿಕತೆ ಭಾರತದ ದುಡಿಯುವ ವರ್ಗಗಳ ಸ್ವಾಯತ್ತ ಬದುಕು ಮತ್ತು ಸ್ವತಂತ್ರ ಅಸ್ತಿತ್ವವನ್ನು ಅಸ್ಥಿರಗೊಳಿಸುತ್ತಲೇ ಹೋಗುತ್ತದೆ. 1990ಕ್ಕೂ ಮುನ್ನ ʼ ಕಾರ್ಮಿಕ ವರ್ಗವನ್ನು ʼ (Labour Class) ನಾವು ನಿರ್ವಚಿಸುತ್ತಿದ್ದ ರೀತಿಗೂ, ಡಿಜಿಟಲ್ ಯುಗದ ನಿರ್ವಚನೆಗೂ ತಾತ್ವಿಕವಾಗಿ ಅಪಾರ ಅಂತರ ಇದೆ. ವಿಶಾಲ ನೆಲೆಯಲ್ಲಿ ʼದುಡಿಯುವ ವರ್ಗಗಳʼ (Working Class) ಕಲ್ಪನೆ ಇಂದು ಭಿನ್ನ ಆಯಾಮಗಳಲ್ಲಿ ತೆರೆದುಕೊಳ್ಳುತ್ತದೆ. ಸಂಘಟಿತ ಕೈಗಾರಿಕಾ ಕಾರ್ಮಿಕರೇ ಪ್ರಧಾನವಾಗಿದ್ದ ಭಾರತದಲ್ಲಿ ʼ ದುಡಿಯುವ ವರ್ಗಗಳ ಐಕ್ಯತೆ ʼ (Unity of Working class) ಮಾರ್ಕ್ಸ್ವಾದಿ ಚಿಂತಕರ ಘೋಷವಾಕ್ಯವಾಗಿತ್ತು. ಈಗಲೂ ಇದು ಬದಲಾಗಿಲ್ಲ ಆದರೆ ಶ್ರಮಿಕ ಜಗತ್ತನ್ನು ಒಟ್ಟಾರೆಯಾಗಿ ವ್ಯಾಖ್ಯಾನಿಸುವಾಗ ದುಡಿಯುವ ವರ್ಗದ ಮರುವರ್ಗೀಕರಣವನ್ನು ನಿರ್ಲಕ್ಷಿಸಲಾಗುವುದಿಲ್ಲ.

ಶ್ರಮಜೀವಿಗಳ ಮರುನಿರ್ವಚನೆ

ಸ್ವಂತ/ಖಾಸಗಿ ಆಸ್ತಿ ಇಲ್ಲದ, ತಮ್ಮ ಶ್ರಮ ಶಕ್ತಿಯನ್ನೇ ಅವಲಂಬಿಸಿ ಬದುಕುವ, ಶ್ರಮಮ ಮಾರುಕಟ್ಟೆಯ ಎಲ್ಲ ವ್ಯತ್ಯಯಗಳಿಗೂ ಒಡ್ಡಿಕೊಳ್ಳುತ್ತಾ , ತಮ್ಮ ಉತ್ಪಾದಕೀಯ ಶ್ರಮದಿಂದ ಒದಗಿಬರುವ ಆದಾಯದಲ್ಲೇ ಕುಟುಂಬ ಹಾಗೂ ಸಾಮಾಜಿಕ ಜವಾಬ್ದಾರಿಗಳನ್ನು ನಿರ್ವಹಿಸುವ ಒಂದು ವರ್ಗವನ್ನು ʼ ಶ್ರಮಜೀವಿ ವರ್ಗ ʼ (Proletariat) ಎಂದು ಬಣ್ಣಿಸಲಾಗುತ್ತದೆ. ಇದು ಮಾರ್ಕ್ಸ್ವಾದಿ ನಿರ್ವಚನೆಯೇ (Marxist Definition) ಆದರೂ ಯಾವುದೇ ತತ್ವಶಾಸ್ತ್ರೀಯ ನೆಲೆಯಲ್ಲಿ ನೋಡಿದರೂ, ಕಾಯಕ ಜೀವಿಗಳು ಹೀಗೆಯೇ ಕಾಣಲು ಸಾಧ್ಯ. ಭಾರತದ ಸಂದರ್ಭದಲ್ಲಿ ಜಾತಿ ವ್ಯವಸ್ಥೆ ನಿರ್ಣಾಯಕ ಪಾತ್ರ ವಹಿಸುವುದರಿಂದ, ಶ್ರಮಜೀವಿ ವರ್ಗದ ನಡುವೆಯೇ ಜಾತಿ ಶ್ರೇಣಿಯ ಗೋಡೆಗಳು ಸಹಜವಾಗಿ ಕಾಣುತ್ತವೆ. ಈ ಗ್ರಾಂಥಿಕ ವ್ಯಾಖ್ಯಾನಗಳಿಂದ ಹೊರಬಂದು, ವರ್ತಮಾನದ ಮಾರುಕಟ್ಟೆ ಆವರಣದಲ್ಲಿ ನಿಂತಾಗ ದುಡಿಯುವ ವರ್ಗಗಳು ಅಥವಾ ಶ್ರಮಜೀವಿ ವರ್ಗಗಳ ಮರುನಿರ್ವಚನೆ ಅನಿವಾರ್ಯವಾಗುತ್ತದೆ.

ಬಂಡವಾಳ ಮತ್ತು ಬಂಡವಾಳಶಾಹಿ ಎರಡೂ ಸಹ ಕಳೆದ ಐದು ದಶಕಗಳಲ್ಲಿ ರೂಪಾಂತರ ಹೊಂದಿವೆ. ಆದರೆ ಉತ್ಪಾದನೆ, ವಿತರಣೆ, ಸಂಗ್ರಹ ಮತ್ತು ವಿನಿಮಯ ಮಾರುಕಟ್ಟೆಯ ವಲಯಗಳಲ್ಲಿ ತಮ್ಮ ಹೊಸ ರೂಪದಲ್ಲೇ ಸಮಾಜದ ಮೇಲೆ ಆಧಿಪತ್ಯ ಸಾಧಿಸಿವೆ. ನವ ಉದಾರವಾದ ಈ ಆಧಿಪತ್ಯದ ಬಾಹುಗಳನ್ನು ಇನ್ನೂ ವಿಸ್ತರಿಸಿ ಬಲಪಡಿಸಿರುವುದನ್ನು ಗುರುತಿಸಬಹುದು. ಕೈಗಾರಿಕಾ ಬಂಡವಾಳ ಕ್ರಮೇಣ ಔದ್ಯಮಿಕ ಬಂಡವಾಳವಾಗಿ ತದನಂತರ ಹಣಕಾಸು ಬಂಡವಾಳದ ರೂಪ ಪಡೆದು 21ನೆಯ ಶತಮಾನದಲ್ಲಿ ಡಿಜಿಟಲ್ ರೂಪದಲ್ಲಿ ತನ್ನ ಅಸ್ತಿತ್ವವನ್ನು ಕಾಪಾಡಿಕೊಂಡಿದೆ. ಯಾವುದೇ ರೂಪದಲ್ಲಿದ್ದರೂ ಬಂಡವಾಳದ ಮೇಲೆ ನಿಯಂತ್ರಣ ಸಾಧಿಸುವ ಔದ್ಯಮಿಕ-ಔದ್ಯೋಗಿಕ ಜಗತ್ತು ಸಾಂವಿಧಾನಿಕ ಪ್ರಜಾಪ್ರಭುತ್ವಗಳ ಮೇಲೂ ತನ್ನ ಆಧಿಪತ್ಯ ಸಾಧಿಸಲು ಸಾಧ್ಯವಾಗಿರುವುದು ನವ ಉದಾರವಾದದ ವೈಶಿಷ್ಟ್ಯ.

ಈ ಸನ್ನಿವೇಶದಲ್ಲಿ ಭಾರತದ ಶ್ರಮಿಕ ಸಮಾಜಗಳ ಲಕ್ಷಣಗಳು ಹೇಗೆ ಬದಲಾಗಿವೆ ? ಐದಾರು ದಶಕಗಳ ಅರೆ-ಸಮಾಜವಾದಿ ಆರ್ಥಿಕ ನೀತಿಯ ಫಲಾನುಭವಿ ವರ್ಗಗಳು ಹಾಗೂ ಕಳೆದೆರಡು ದಶಕಗಳ ಕಾರ್ಪೋರೇಟ್ ಮಾರುಕಟ್ಟೆಯನ್ನು ಅವಲಂಬಿಸಿರುವ ಶ್ರಮಿಕ ವರ್ಗಗಳು ಹೇಗೆ ಭಿನ್ನವಾಗಿ ಕಾಣುತ್ತವೆ ? ಈ ಎರಡು ವರ್ಗಗಳ ನಿರೀಕ್ಷೆ, ಅಪೇಕ್ಷೆ ಹಾಗೂ ಅಸ್ತಿತ್ವ ಮೂರೂ ಸಹ ಆಧುನಿಕ ಕಾರ್ಪೋರೇಟ್ ಮಾರುಕಟ್ಟೆಯನ್ನೇ ಅವಲಂಬಿಸಿದ್ದರೂ, ಸಾಂಪ್ರದಾಯಿಕ ಅರ್ಥದ ʼ ಶ್ರಮಜೀವಿ ವರ್ಗಗಳನ್ನು ʼ (Proletariats) ಹೇಗೆ ಮರುವಿಮರ್ಶೆಗೊಳಪಡಿಸಬೇಕು ? ಶ್ರಮಜೀವಿಗಳ ಆವರಣದಲ್ಲಿ ಯಾರೆಲ್ಲಾ ಶ್ರಮಿಕರನ್ನು ಒಳಗೊಳ್ಳಬಹುದು ? ಅಥವಾ ನಿಶ್ಚಿತ ವೇತನ-ಉದ್ಯೋಗ ಮತ್ತು ಸೌಲಭ್ಯಗಳಿಂದ ವಂಚಿತರಾಗಿ ನಾಳೆಗಳ ಯೋಚನೆಯಲ್ಲೇ ತಮ್ಮ ಶ್ರಮಶಕ್ತಿಯನ್ನು ವ್ಯಯಿಸುತ್ತಿರುವ ಕೋಟ್ಯಂತರ ದುಡಿಮೆಗಾರರನ್ನು ಹೇಗೆ ವರ್ಗೀಕರಿಸುವುದು ? ಗೈ ಸ್ಟ್ಯಾಂಡಿಂಗ್ ಇವರನ್ನು ಪ್ರಿಕಾರಿಯಟ್ (precariat) ಎಂದು ಬಣ್ಣಿಸುತ್ತಾರೆ.

ಭಿನ್ನ ನೂತನ ವ್ಯಾಖ್ಯಾನಗಳು

ಗೈ ಸ್ಟ್ಯಾಂಡಿಂಗ್ ತಮ್ಮ The Precariat – The new dangerous Class ಕೃತಿಯಲ್ಲಿ ಪ್ರಿಕಾರಿಯಟ್ ವರ್ಗವನ್ನು ವಿಶಿಷ್ಟ ಸಾಮಾಜಿಕ-ಆರ್ಥಿಕ ಸಮೂಹವಾಗಿ ಗುರುತಿಸುತ್ತಾರೆ. ಇಲ್ಲಿ ವ್ಯಕ್ತಿಗಳನ್ನು ವಿಶ್ಲೇಷಣಾತ್ಮಕವಾಗಿ ಅಸ್ಥಿರತೆಯನ್ನು ಎದುರಿಸುತ್ತಿರುವ ಮತ್ತು ತತ್ಸಂಬಂಧಿತ ಶ್ರಮಜೀವಿ ಎಂದು ವರ್ಗೀಕರಿಸುತ್ತಾರೆ. ಪ್ರಿಕಾರಿಯಟ್ ಸಮೂಹವನ್ನು ರೂಪುಗೊಳ್ಳುತ್ತಿರುವ ವರ್ಗ ಎಂದು ವ್ಯಾಖ್ಯಾನಿಸಬಹುದೇ ಹೊರತು ಮಾರ್ಕ್ಸ್ನ ಪರಿಭಾಷೆಯಲ್ಲಿ ʼ ತನ್ನದೇ ಆದ ವರ್ಗ ʼ (Class for itself ) ಎಂದು ಕರೆಯಲಾಗುವುದಿಲ್ಲ ಎಂದು ಹೇಳುತ್ತಾರೆ. ಡಿಜಿಟಲ್ ಭಾರತದಲ್ಲಿ ಈ ವರ್ಗಕ್ಕೆ ಸೇರಿದ ದುಡಿಮೆಗಾರರ ಸಂಖ್ಯೆ ಹೆಚ್ಚಾಗುತ್ತಿದೆ. ಉತ್ಪಾದನಾ ವಲಯದ ಕಾರ್ಮಿಕರೂ ಸಹ ಖಾಸಗೀಕರಣ-ಕಾರ್ಪೋರೇಟ್ ದಾಳಿಯ ಪರಿಣಾಮ ತಮ್ಮ ಸುಸ್ಥಿರ ಬದುಕನ್ನು ಕಳೆದುಕೊಳ್ಳುತ್ತಿದ್ದಾರೆ. ಮತ್ತೊಂದೆಡೆ ಶ್ರಮ ಮಾರುಕಟ್ಟೆಯ ಹೊಸ್ತಿಲಲ್ಲಿರುವ ಕೋಟ್ಯಂತರ ಯುವ ಸಮೂಹ , ಉದ್ಯೋಗ ಮಾರುಕಟ್ಟೆಯಲ್ಲಿ ಅವಕಾಶ (Space) ಪಡೆಯಲು, ಯಾವುದೇ ರೀತಿಯ ದುಡಿಮೆಗೆ ತೆರೆದುಕೊಳ್ಳುತ್ತಿದೆ.

ಈ ಸನ್ನಿವೇಶದಲ್ಲಿ ಸ್ಥಾಪಿತ ಕಮ್ಯುನಿಸ್ಟ್ ಪಕ್ಷಗಳ ಜವಾಬ್ದಾರಿ ಹೆಚ್ಚಾಗುತ್ತದೆ. ಏಕೆಂದರೆ ಶ್ರಮ-ಶ್ರಮಿಕ-ಬಂಡವಾಳ ಮತ್ತು ಮಾರುಕಟ್ಟೆಯ ಸಂಬಂಧಗಳನ್ನು ನಿಖರವಾಗಿ ವಸ್ತುನಿಷ್ಠವಾಗಿ ವಿಶ್ಲೇಷಿಸಲು ಮಾರ್ಕ್ಸ್ವಾದ ಒಂದರಿಂದಲೇ ಸಾಧ್ಯ. ಡಾ. ಬಿ.ಆರ್. ಅಂಬೇಡ್ಕರ್ ಹಣಕಾಸು, ವಿನಿಮಯ, ಕರೆನ್ಸಿ ಮತ್ತು ಬಂಡವಾಳ ಹೂಡಿಕೆಯ ಬಗ್ಗೆ ವ್ಯಾಪಕ ವಿಶ್ಲೇಷಣೆ ಮಾಡಿದ್ದಾರೆ. ಆದರೆ ವರ್ತಮಾನದ ಆರ್ಥಿಕ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಅಂಬೇಡ್ಕರ್ ಅವರ ಅರ್ಥಶಾಸ್ತ್ರೀಯ ವ್ಯಾಖ್ಯಾನಗಳು (Economic Interpretations) ಸಂಪೂರ್ಣವಾಗಿ ನೆರವಾಗುವುದಿಲ್ಲ. ಹಾಗೆಂದ ಮಾತ್ರಕ್ಕೆ ಅಂಬೇಡ್ಕರ್ ಸ್ಪಷ್ಟವಾಗಿ ವ್ಯಾಖ್ಯಾನಿಸುವ ತಳಸಮಾಜದ ಆರ್ಥಿಕ ಸಂಬಂಧಗಳ ಜಾತಿಶ್ರೇಣಿಯ ಆಯಾಮಗಳನ್ನು ಅಲ್ಲಗಳೆಯಲೂ ಸಾಧ್ಯವಿಲ್ಲ. ಭಾರತದ ಕಮ್ಯುನಿಸ್ಟ್ ಪಕ್ಷಗಳು ಈ ಅನುಸಂಧಾನವನ್ನು ಗಂಭೀರವಾಗಿ ಮರುವಿಮರ್ಶೆಗೊಳಪಡಿಸಬೇಕಿದೆ.

ಇಲ್ಲವಾದಲ್ಲಿ ನವ ಉದಾರವಾದ ಸೃಷ್ಟಿಸುತ್ತಿರುವ ಅನಿಶ್ಚಿತತೆಗಳನ್ನು ಪರಿಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಕಾರ್ಪೋರೇಟ್ ಮಾರುಕಟ್ಟೆ ಆರ್ಥಿಕತೆಯ ಪ್ರಮುಖ ಫಲಾನುಭವಿಗಳಲ್ಲಿ ತಳಸಮುದಾಯಗಳನ್ನು ಗುರುತಿಸಬಹುದಾದರೂ, ಸಾಮಾಜಿಕ ಪಿರಮಿಡ್ಡಿನ ತಳಮಟ್ಟಕ್ಕೆ ಹೋದಂತೆಲ್ಲಾ ಅವಕಾಶ ವಂಚಿತರಲ್ಲಿ ಜಾತಿಶ್ರೇಣಿಯ ಕೆಳಸ್ತರದ ಸಮುದಾಯಗಳೇ ಪ್ರಧಾನವಾಗಿ ಕಾಣುತ್ತವೆ. ಈ ವರ್ಗಗಳನ್ನು ಕೃಷಿ ಕಾರ್ಮಿಕರಲ್ಲಿ, ಗ್ರಾಮೀಣ ದುಡಿಮೆಗಾರರಲ್ಲಿ, ವಲಸಿಗರಲ್ಲಿ ಹಾಗೂ ಉದ್ಯೋಗಾವಕಾಶವೇ ಇಲ್ಲದ ವಿದ್ಯಾವಂತ ಯುವ ಜನಾಂಗದಲ್ಲಿ ಗುರುತಿಸಬಹುದು. ವಿಶೇಷವಾಗಿ ಮಹಿಳೆಯರಲ್ಲಿ ಈ ಶ್ರಮಿಕ ಜಗತ್ತಿನ ವಿಭಿನ್ನ ಆಯಾಮವನ್ನು ವಿಶ್ಲೇಷಿಸಬೇಕಿದೆ. ಗ್ರಾಮೀಣ ಕೃಷಿ-ಗುಡಿ ಕೈಗಾರಿಕೆಗಳನ್ನೂ ಸೇರಿದಂತೆ ನಗರ ಪ್ರದೇಶಗಳ (Towns and Cities) ಮನೆಗೆಲಸ ಮಾಡುವ, ಗೃಹೋದ್ಯಮಗಳಲ್ಲಿ ದುಡಿಯುವ ಮಹಿಳೆಯರನ್ನು ಒಳಗೊಂಡಾಗ ಮಾತ್ರ ʼ ದುಡಿಯುವ ವರ್ಗ ʼ (Working Class) ಪರಿಪೂರ್ಣ ಎನಿಸುತ್ತದೆ.

ಕಾರ್ಮಿಕ ಜಗತ್ತಿನ ಮರುವ್ಯಾಖ್ಯಾನ

ಕಮ್ಯುನಿಸ್ಟ್ ಪಕ್ಷಗಳ ʼ ವಿಶ್ವ ಕಾರ್ಮಿಕರೇ ಒಂದಾಗಿ ʼ ಅಥವಾ ʼ ದುಡಿಯುವ ವರ್ಗಗಳೇ ಒಂದಾಗಿ ʼ ಎಂಬ ಘೋಷವಾಕ್ಯಗಳ ಹಿಂದೆ ಈ ವೇತನವಂಚಿತ (Unpaid) ಮಹಿಳಾ ದುಡಿಮೆಗಾರರನ್ನು ಗುರುತಿಸಲು ಸಾಧ್ಯವೇ ? ಗ್ರಾಂಥಿಕವಾಗಿ ಇದನ್ನು ವ್ಯಾಖ್ಯಾನಿಸಲಾಗಿದೆಯಾದರೂ, ಕಾರ್ಮಿಕ ಚಳುವಳಿಗಳ ಹಿನ್ನೆಲೆಯಲ್ಲಿ ನೋಡಿದಾಗ ಈ ವರ್ಗಗಳು ನಿರ್ಲಕ್ಷ್ಯಕ್ಕೊಳಗಾಗಿರುತ್ತವೆ ಅಥವಾ ವಿಭಾಗೀಕರಣಕ್ಕೊಳಪಟ್ಟಿರುತ್ತವೆ. ಮೇ ದಿನದ ಮೆರವಣಿಗೆಗಳಲ್ಲಿ ಕೃಷಿ ಕಾರ್ಮಿಕರ ಪ್ರಾತಿನಿಧ್ಯವೇ ಇಲ್ಲದಿರುವುದು ಅಥವಾ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಕಾರ್ಮಿಕರ-ಗ್ರಾಮೀಣ ಮಹಿಳಾ ಶ್ರಮಿಕರ ಒಳಗೊಂಡಂತೆ ಮೇ ದಿನಾಚರಣೆಯನ್ನು ಆಚರಿಸದೆ ಇರುವುದು ಢಾಳಾಗಿ ಕಾಣುವ ವಿದ್ಯಮಾನ. ಇದನ್ನು ಹೇಗೆ ವ್ಯಾಖ್ಯಾನಿಸುವುದು ? ಇಷ್ಟು ವರ್ಷಗಳಿಂದಲೂ ನಾವು ಕಟ್ಟುತ್ತಿರುವ ಕಾರ್ಮಿಕ ಚಳುವಳಿಗಳು ಈ ವೈರುಧ್ಯವನ್ನು ಹೊತ್ತುಕೊಂಡೇ ಸಾಗಿಬರುತ್ತಿವೆ. ಆದರೆ ಮರುವಿಶ್ಲೇಷಣೆಗೆ ಪ್ರಯತ್ನಿಸಿದೆಯೇ ?

ಬದಲಾದ ಭಾರತದ ಡಿಜಿಟಲ್ ಅರ್ಥವ್ಯವಸ್ಥೆಯಲ್ಲಿ ಕಾರ್ಮಿಕ ಚಳುವಳಿಯ ವ್ಯಾಖ್ಯಾನಗಳೂ ಬದಲಾಗಬೇಕಿದೆ. ಎಡಪಂಥೀಯ ಕಾರ್ಮಿಕ ಹೋರಾಟಗಳ ನೆರಳಿನಲ್ಲೇ (ಸಾಂಕೇತಿಕವಾಗಿ ಕೆಂಬಾವುಟದಡಿಯಲ್ಲೇ ) ತಮ್ಮ ಬದುಕು ಭವಿಷ್ಯ ಕಟ್ಟಿಕೊಂಡಿರುವ ಬೃಹತ್ ಜನಸಂಖ್ಯೆ ನಮ್ಮ ನಡುವೆ ಇದೆ. ಈ ಫಲಾನುಭವಿ ವರ್ಗಗಳ ಹಿತವಲಯಗಳಲ್ಲಿ (Comfort zones) ದುಡಿಯುತ್ತಿರುವ ಶ್ರಮಿಕರನ್ನು ಈ ಮರುವಿಶ್ಲೇಷಣೆಯಲ್ಲಿ ಒಳಗೊಳ್ಳಬೇಕಾಗುತ್ತದೆ. ಏಕೆಂದರೆ ಸ್ವತಃ ಮಧ್ಯಮ ವರ್ಗ ಅಥವಾ ಮೇಲ್ವರ್ಗ ಎಂದು ಪರಿಭಾವಿಸಿರುವ ಮೇಲ್ಪದರ ಸಮಾಜ (Elite society) ದುಡಿಮೆಯ ಸಂಕಟಗಳಿಗೆ ಸದಾ ವಿಮುಖವಾಗಿರುತ್ತವೆ. ಸವೆದು ಬಂದ ಹಾದಿಯನ್ನು ಮರೆತು ಮುಂದೆ ಸಾಗುವ ಈ ಸಮಾಜಗಳಲ್ಲಿ ದಲಿತರೂ, ಅಲ್ಪಸಂಖ್ಯಾತರೂ ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ.

ವಿಪರ್ಯಾಸವೆಂದರೆ ಕಾರ್ಮಿಕ ಚಳುವಳಿಗಳ ನಾಯಕತ್ವ ಈ ಮೇಲ್ವರ್ಗಗಳ ಆವರಣದಲ್ಲೇ ನಿಷ್ಕರ್ಷೆಯಾಗುತ್ತದೆ. ತಳಮಟ್ಟದ ಸಮಾಜದಲ್ಲಿ ನಿತ್ಯ ಆತಂಕಗಳನ್ನು ಎದುರಿಸುತ್ತಿರುವ ಶ್ರಮಿಕರು ಒಂದೆಡೆ ಪ್ರಾತಿನಿಧ್ಯದ ಕೊರತೆ ಮತ್ತೊಂದೆಡೆ ಮುಂದಾಳತ್ವದ ಕೊರತೆಯನ್ನು ಎದುರಿಸುತ್ತಲೇ ಬಂದಿದ್ದಾರೆ. ನಿರ್ದಿಷ್ಟವಾಗಿ ಮಹಿಳೆಯರು ಇಲ್ಲಿ ಪ್ರಧಾನವಾಗಿ ಕಾಣುತ್ತಾರೆ. ಕಾರ್ಮಿಕ ಚಳುವಳಿಗಳಲ್ಲೂ ಆಂತರಿಕವಾಗಿ ಪಿತೃಪ್ರಧಾನ ಮೌಲ್ಯಗಳು ಗಟ್ಟಿಯಾಗಿರುವುದು ಇದಕ್ಕೆ ಒಂದು ಕಾರಣ. ಆದರೆ ಪರಿಣಾಮ ? ತಳಸ್ತರದಲ್ಲಿ ಬೆವರು ಹನಿಸುವ ಮಹಿಳಾ ಶ್ರಮಜೀವಿಗಳ ಒಳಸಂಕಟಗಳು ಮುಕ್ತವಾಗಿ ಚರ್ಚೆಗೊಳಗಾಗುವುದಿಲ್ಲ. ಸಂಘಟಿತ ಕಾರ್ಮಿಕರ (Organised Workers) ಕುಟುಂಬಗಳಲ್ಲೇ ಇರಬಹುದಾದ ಮಹಿಳೆಯರ ವೈಯುಕ್ತಿಕ-ಕೌಟುಂಬಿಕ ಸಮಸ್ಯೆಗಳೂ ಸಹ ಸಂಘಟನಾತ್ಮಕ ಚರ್ಚೆಗೊಳಗಾಗುವುದಿಲ್ಲ.

ಬದಲಾದ ಭಾರತದಲ್ಲಿ,,,,

ಈ ವಾತಾವರಣ ಬದಲಾಗಬೇಕಿದೆ. ದಲಿತರನ್ನೇ ಪ್ರತಿನಿಧಿಸುವ ಕಾರ್ಮಿಕ ಸಂಘಟನೆಗಳಲ್ಲೂ ಇದೇ ಸಮಸ್ಯೆ ಇದೆ. ಸಂಘಟಿತ-ಅಸಂಘಟಿತ ವರ್ಗೀಕರಣವನ್ನೂ ದಾಟಿ ಕಮ್ಯುನಿಸ್ಟ್-ದಲಿತ ಸಂಘಟನೆಗಳು ಗಮನಿಸಬೇಕಾದ ದುಡಿಮೆಗಾರರ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಿದೆ. ನಿರುದ್ಯೋಗಿ ಯುವ ಸಮೂಹ ಅವಲಂಬಿಸುವ ವಿತರಣಾ ಪ್ಲಾಟ್ಫಾರಂಗಳು (Delivery Platforms), ಬೀದಿ ಬದಿ ವ್ಯಾಪಾರಿಗಳು ಇಲ್ಲಿ ಗಮನಾರ್ಹವಾಗಿ ಕಾಣುತ್ತಾರೆ. ದೊಡ್ಡ ವ್ಯಾಪಾರಿ ಮಳಿಗೆಗಳಲ್ಲಿ, ಬಟ್ಟೆ ಅಂಗಡಿಗಳಲ್ಲಿ, ಷಾಪಿಂಗ್ ಮಾಲ್ಗಳಲ್ಲಿ ದುಡಿಮೆ ಮಾಡುವ ಹೆಚ್ಚಿನ ಪಾಲು ಹೆಣ್ಣು ಮಕ್ಕಳು ಯಾವುದೇ ಸಂಘಟನಾ ಸಾಮರ್ಥ್ಯ-ಬೆಂಬಲ ಇಲ್ಲದೆ ಮಾರುಕಟ್ಟೆಯ ಶೋಷಣೆಗೊಳಗಾಗಿರುತ್ತಾರೆ. ಇತ್ತೀಚೆಗೆ ಕರ್ನಾಟಕದ ಪ್ರಮುಖ ನಗರಗಳಲ್ಲಿ ನಗರ ಸೌಂದರ್ಯದ ನೆಪದಲ್ಲಿ ರಸ್ತೆ ಬದಿ ವ್ಯಾಪಾರಿಗಳನ್ನು ನಿರ್ದಾಕ್ಷಿಣ್ಯವಾಗಿ ಎತ್ತಂಗಡಿ ಮಾಡಿದಾಗ ಈ ಮಾರುಕಟ್ಟೆ ಕ್ರೌರ್ಯದ ಅನಾವರಣವಾಗಿದೆ.

ಮುಂಬರುವ ದಿನಗಳಲ್ಲಿ ಈ ದುಡಿಮೆಗಾರರ ಸಂಖ್ಯೆ ಹೆಚ್ಚಾಗಲಿದೆ. ಜೊತೆಗೆ ಗ್ರಾಮೀಣ ಪ್ರದೇಶದಿಂದ ನಗರಗಳಿಗೆ ವಲಸೆ ಬರುವವರ ಸಂಖ್ಯೆಯೂ ಹೆಚ್ಚಾಗಲಿದೆ. ಈ ದುಡಿಮೆಗಾರರ ಪರ ಹೋರಾಡುವ ಹಲವು ಸಂಘಟನೆಗಳು ಹುಟ್ಟಿಕೊಂಡಿದ್ದರೂ, ಮಧ್ಯವರ್ತಿ ಗುತ್ತಿಗೆದಾರರ ಪ್ರಭಾವದಿಂದ ಹೋರಾಟಗಳೂ ಸಹ ರಾಜಿಯಾಗುತ್ತಿರುವ ಪ್ರಸಂಗಗಳನ್ನು ನೋಡಿದ್ದೇವೆ. ಈ ಗುತ್ತಿಗೆದಾರರ ಮಾಫಿಯಾಗಳು ದುಡಿಮೆಗಾರರ ಶ್ರಮದ ಆದಾಯವನ್ನೂ ದೋಚುವ ಒಂದು ಕ್ರೂರ ಪರಂಪರೆ ಈಗಾಗಲೇ ಬೇರೂರಿದೆ. ಇದನ್ನು ಭೇದಿಸುವ ಪ್ರಯತ್ನ ನಡೆದಿದೆಯೇ ? ಇಲ್ಲ ಎಂದಾದರೆ ಕಮ್ಯುನಿಸ್ಟ್ ಪಕ್ಷಗಳು ಈ ಜವಾಬ್ದಾರಿಯನ್ನು ಹೊರಬೇಕಿದೆ. ಇಲ್ಲಿ ಪುನಃ ಅಡ್ಡಬರಬಹುದಾದ ಜಾತಿ ಅಸ್ಮಿತೆಗಳ ಗೋಡೆಗಳನ್ನು ಕೆಡವಿ, ಶ್ರಮಿಕರ ಐಕ್ಯತೆ ಮತ್ತು ಐಕ್ಯ ದನಿಗೆ ಅವಕಾಶ ಕಲ್ಪಿಸಬೇಕಿದೆ.

ಐಕ್ಯತೆಯ ಅನಿವಾರ್ಯತೆಗಳು

ಭಾರತದಲ್ಲಿ ಕಮ್ಯುನಿಸ್ಟ್ ಪಕ್ಷಗಳ ಐಕ್ಯತೆ ಏಕೆ ಮುಖ್ಯವಾಗುತ್ತದೆ ಎಂದರೆ ಈ ದುಡಿಯುವ ವರ್ಗಗಳ ನಡುವೆ ಎದ್ದಿರುವ ಗೋಡೆಗಳನ್ನು ಭೇದಿಸುವ ಸೈದ್ಧಾಂತಿಕ ಅರಿವು ಮತ್ತು ಶಕ್ತಿ ಇರುವುದು ಮಾರ್ಕ್ಸ್ನ ಸೈದ್ಧಾಂತಿಕ ಚಿಂತನೆಗಳಲ್ಲಿ ಮಾತ್ರ. ಕಮ್ಯುನಿಸ್ಟ್ ಪಕ್ಷಗಳ ವಿಘಟನೆ ಅಥವಾ ವಿಭಜನೆ ಪ್ರಯತ್ನಗಳಿಗೆ ಅಡ್ಡಿಯಾಗಿರುವುದು ಸತ್ಯ. ಏಕೆಂದರೆ ಪ್ರತಿಯೊಂದು ಕಾರ್ಮಿಕ ಸಂಘಟನೆಗೂ ತನ್ನದೇ ಆದ ಅಸ್ತಿತ್ವ-ಅಸ್ಮಿತೆ ಮತ್ತು ಕಾರ್ಯಸೂಚಿ ಮುಖ್ಯವಾಗುತ್ತದೆ. ಮಾರ್ಕ್ಸ್ವಾದ ಅಥವಾ ಕಮ್ಯುನಿಸಂ ಇದನ್ನು ಅಪೇಕ್ಷಿಸುವುದಿಲ್ಲ. ಸಾಂಘಿಕ ವಿಘಟನೆಗಳು ಸೈದ್ಧಾಂತಿಕ ಚಿಂತನೆಗಳನ್ನು ವಿಭಾಗೀಕರಿಸಲು ಸಾಧ್ಯವೇ ಹೊರತು, ವಿಭಜಿಸಲಾಗುವುದಿಲ್ಲ. ಈ ವಾಸ್ತವವನ್ನು ಭಾರತದ ಕಮ್ಯುನಿಸ್ಟ್ ಪಕ್ಷಗಳು ಇನ್ನಾದರೂ ಅರ್ಥಮಾಡಿಕೊಳ್ಳಬೇಕಿದೆ. ಭಾರತದ ಶ್ರಮಿಕ ವರ್ಗ ಎಲ್ಲ ಎದುರಿಸುತ್ತಿರುವ ಎಲ್ಲ ಸಮಸ್ಯೆಗಳಿಗೂ ಪರಿಹಾರೋಪಾಯಗಳಿರುವುದು ಮಾರ್ಕ್ಸ್ವಾದದ ವೈಜ್ಞಾನಿಕ ಚಿಂತನೆಗಳಲ್ಲಿ.

ಈ ಚಿಂತನೆಗಳನ್ನು ತಮ್ಮದೇ ಆದ ಪ್ರತ್ಯೇಕ ಬಾವುಟ, ಬ್ಯಾನರ್ಗಳಲ್ಲಿ ಅಡಗಿಸಿಡುವ ಪರಂಪರೆಯನ್ನು ಭಾರತದ ಕಮ್ಯುನಿಸ್ಟ್ ಚಳುವಳಿ ಕೊನೆಗೊಳಿಸಬೇಕಿದೆ. ಮಾರ್ಕ್ಸ್ವಾದ ಬೇಕಿರುವುದು ಅನಿಶ್ಚಿತ ನಾಳೆಗಳನ್ನು ಎದುರಿಸುತ್ತಿರುವ ದುಡಿಯುವ ಜನತೆಗೆ. ಅದು ಪಸರಿಸಬೇಕಿರುವುದು ಈ ಶ್ರಮಿಕರ ಸಮುದಾಯಗಳಲ್ಲಿ, ಕುಟುಂಬಗಳಲ್ಲಿ, ವೈಯುಕ್ತಿಕ ಜೀವನದಲ್ಲಿ. ಕೆಂಬಾವುಟ ಇದನ್ನು ಸಂಕೇತಿಸಬಹುದೇ ಹೊರತು ಸಂಭಾಷಿಸಲು ನೆರವಾಗುವುದಿಲ್ಲ. ಈ ತಳಸ್ತರದ ಜನಸಮುದಾಯಗಳೊಡನೆ ಸಂವಾದಿಸಲು ಮಾರ್ಕ್ಸ್ನನ್ನು ಅವರ ನಡುವೆ ನಿಲ್ಲಿಸಬೇಕಿದೆ. ರಾಜಕೀಯವಾಗಿ ಕಮ್ಯುನಿಸ್ಟ್ ಪಕ್ಷಗಳು ತಮ್ಮ ಸ್ವ ಪ್ರತಿಷ್ಠೆ ಅಥವಾ ಆಲೋಚನಾ ಕ್ರಮದ (Line of Thought) ಶ್ರೇಷ್ಠತೆಯನ್ನು ಪ್ರತಿಪಾದಿಸಿದರೂ, ಸಾಮಾಜಿಕ ನೆಲೆಯಲ್ಲಿ ಇದನ್ನು ವಿಸರ್ಜಿಸುವುದು (Dissolve) ಅನಿವಾರ್ಯವಾಗಿದೆ.

ತಮ್ಮ ನಡುವಿನ ಭೇದಭಾವಗಳನ್ನು ಬದಿಗಿಟ್ಟು ಕಮ್ಯುನಿಸ್ಟ್ ಪಕ್ಷಗಳು ಐಕ್ಯತೆಯೆಡೆಗೆ ನಡೆಯಬೇಕಿರುವುದು ಈ ಕಾರಣಗಳಿಗಾಗಿ.

ಆದರೂ ಏಕೆ ಮುಂದಣ ಹೆಜ್ಜೆ ಕಾಣಲಾಗುತ್ತಿಲ್ಲ ?

20ನೆಯ ಶತಮಾನದ ಮಾರ್ಕ್ಸ್ವಾದಿ ಚಿಂತಕ ಪಾಲೋ ಫ್ರೇರಿ ತಮ್ಮ Pedagogy of the Oppressed ಕೃತಿಯಲ್ಲಿ “ ಜನರಿಗಾಗಿ ಯೋಚಿಸುವಾಗ, ಅಧಿಕಾರದಲ್ಲಿರುವವರು ಮಾಡುವಂತೆ, ಅದರಲ್ಲಿ ಯಾವುದೇ ರೀತಿಯ ಸ್ವ ವಿಮರ್ಶೆ-ಸ್ವ ಅರ್ಪಣೆಯ ಭಾವವಿಲ್ಲದೆ ಮುಂದುವರೆದರೆ , ಅಂದರೆ ಜನರೊಂದಿಗೆ ಸೇರಿ ಯೋಚಿಸಲು ವಿಫಲರಾದರೆ, ಅಂತಹವರು ಕ್ರಾಂತಿಕಾರಿ ನಾಯಕರಾಗಿ ಉಳಿಯಲು ಸಾಧ್ಯವಿಲ್ಲ ” ಎಂದು ಹೇಳುತ್ತಾರೆ. ಇದನ್ನು ಗಮನದಲ್ಲಿಡೋಣ.

(ಚರ್ಚೆ ಮುಂದುವರೆಯಲಿದೆ)

Tags: CommunistObligationUnity Priority
Previous Post

ಬೆಂಗಳೂರು ವಿಮಾನ ನಿಲ್ದಾಣ: ಬಟ್ಟೆಯಲ್ಲಿ ಬಚ್ಚಿಟ್ಟು ಚಿನ್ನ ಸಾಗಿಸುತ್ತಿದ್ದ ಪ್ರಯಾಣಿಕ ಬಂಧನ!

Next Post

ಮೈಸೂರು ದಸರಾ ವಿವಾದಕ್ಕೆ ಹೊಸ ತಿರುವು: ಪ್ರಮೋದಾದೇವಿ ಆರೋಪಕ್ಕೆ ಪತ್ರದ ಮೂಲಕ ಅಧಿಕಾರಿಗಳಿಂದ ಸ್ಪಷ್ಟನೆಗಳ ಸುರಿಮಳೆ

Related Posts

ಬೆಂಗಳೂರಿನಲ್ಲಿ ನಾಲ್ಕು ದಿನ ವಿದ್ಯುತ್ ವ್ಯತ್ಯಯ; ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ!
ಕರ್ನಾಟಕ

ಬೆಂಗಳೂರಿನಲ್ಲಿ ನಾಲ್ಕು ದಿನ ವಿದ್ಯುತ್ ವ್ಯತ್ಯಯ; ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ!

by Shivakumar
November 6, 2026
0

ಬೆಂಗಳೂರಿನಲ್ಲಿ ಒಂದು ದಿನ ವಿದ್ಯುತ್ ವ್ಯತ್ಯಯವಾದರೂ ಜನರು ಪರದಾಡುವ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಸತತ ನಾಲ್ಕು ದಿನಗಳ ಕಾಲ ಹಲವು ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ...

Read moreDetails
Awareness for Eco-friendly Diwali Celebrations in State Schools and Colleges: Education Department Order

ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಪರಿಸರ ಸ್ನೇಹಿ ದೀಪಾವಳಿ ಆಚರಣೆಗೆ ಜಾಗೃತಿ : ಶಿಕ್ಷಣ ಇಲಾಖೆ ಆದೇಶ

November 6, 2026
Scouts and Guides Foundation Day: Flag sticker released by Higher Education Minister Basavaraj Rayareddy

ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥಾಪನಾ ದಿನ: ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರಿಂದ ಧ್ವಜ ಚೀಟಿ ಬಿಡುಗಡೆ

November 6, 2026
Recruitment for Kalyana Karnataka to be conducted via KEA instead of KPSC: Minister Priyank Kharge issues firm directive

ಕೆಪಿಎಸ್‌ಸಿ ಬದಲು ಕೆಇಎ ಮೂಲಕ ಕಲ್ಯಾಣ ಕರ್ನಾಟಕದ ನೇಮಕಾತಿ : ಸಚಿವ ಪ್ರಿಯಾಂಕ್ ಖರ್ಗೆ ಖಡಕ್ ಸೂಚನೆ

November 6, 2026
Blending of up to 31.2% ethanol in petrol: Karnataka government seeks clarification from the Centre

ಪೆಟ್ರೋಲ್‌ನಲ್ಲಿ ಶೇ. 31.2 ರವರೆಗೆ ಎಥೆನಾಲ್ ಮಿಶ್ರಣ : ಕೇಂದ್ರದಿಂದ ವಿವರಣೆ ಕೇಳಿದ ಕರ್ನಾಟಕ ಸರ್ಕಾರ

November 6, 2026
Next Post
ಮೈಸೂರು ದಸರಾ ವಿವಾದಕ್ಕೆ ಹೊಸ ತಿರುವು: ಪ್ರಮೋದಾದೇವಿ ಆರೋಪಕ್ಕೆ ಪತ್ರದ ಮೂಲಕ ಅಧಿಕಾರಿಗಳಿಂದ ಸ್ಪಷ್ಟನೆಗಳ ಸುರಿಮಳೆ

ಮೈಸೂರು ದಸರಾ ವಿವಾದಕ್ಕೆ ಹೊಸ ತಿರುವು: ಪ್ರಮೋದಾದೇವಿ ಆರೋಪಕ್ಕೆ ಪತ್ರದ ಮೂಲಕ ಅಧಿಕಾರಿಗಳಿಂದ ಸ್ಪಷ್ಟನೆಗಳ ಸುರಿಮಳೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada