ಕಾಂಗ್ರೆಸ್ ಸರ್ಕಾರ ಜಾರಿಗೆ ಬಂದರೆ ಪ್ರತಿ ತಿಂಗಳು ಗೃಹಿಣಿಗೆ 2 ಸಾವಿರ ರೂಪಾಯಿ ಕೊಡಲಾಗುವುದು ಎಂದು ಘೋಷಣೆ ಮಾಡಲಾಗಿತ್ತು. ಇದೀಗ ನೂತನ ಸರ್ಕಾರ ರಚನೆ ಆಗಿದೆ. ಸಚಿವ ಸಂಪುಟ ಸಭೆಯಲ್ಲೂ ಕಾಂಗ್ರೆಸ್ ನೀಡಿದ್ದ 5 ಗ್ಯಾರಂಟಿಗಳನ್ನು ಜಾರಿ ಮಾಡುವುದಕ್ಕೆ ತಾತ್ವಿಕ ಒಪ್ಪಿಗೆ ನೀಡಿದೆ. ಮತ್ತೊಮ್ಮೆ ಇನ್ನೊಂದು ವಾರದಲ್ಲಿ ಜಾರಿ ಮಾಡುವ ಬಗ್ಗೆ ಅಂತಿಮ ಆದೇಶ ಹೊರ ಬೀಳಲಿದೆ ಎನ್ನಲಾಗಿದ್ದು, ಈ ಸರ್ಕಾರದ ಗ್ಯಾರಂಟಿ ಯೋಜನೆಗಳು ಜೂನ್ ತಿಂಗಳಿನಿಂದಲೇ ಜಾರಿ ಆಗಲಿವೆ ಎನ್ನಲಾಗಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಜನಧನ್ ಅಕೌಂಟ್ ಎಂದು ಪ್ರತಿಯೊಬ್ಬರಿಗೂ ಬ್ಯಾಂಕ್ ಖಾತೆ ಮಾಡಿಕೊಡಲಾಗಿತ್ತು. ಝೀರೋ ಬ್ಯಾಲೆನ್ಸ್ ಖಾತೆ ಎನ್ನುವ ಜೊತೆಗೆ ಸರ್ಕಾರದ ಯೋಜನೆಗಳ ಹಣವನ್ನು ಈ ಖಾತೆಗೆ ಜಮಾ ಮಾಡುವ ಬಗ್ಗೆ ಭಾರೀ ಚರ್ಚೆ ಹುಟ್ಟುಹಾಕಿತ್ತು.
ಜನಧನ್ ಅಕೌಂಟ್ಗೆ ಮೋದಿ ಅಕೌಂಟ್ ಅಂತಾರೆ ಜನ..!

ನರೇಂದ್ರ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬರುವ ಮುನ್ನವೇ ಕಪ್ಪು ಹಣ ವಾಪಸ್ ತಂದು ಪ್ರತಿಯೊಬ್ಬರ ಅಕೌಂಟ್ಗೂ 15 ಲಕ್ಷ ಹಾಕುವ ಮಾತುಗಳು ಕೇಳಿ ಬಂದಿದ್ದವು. ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಎಲ್ಲರನ್ನೂ ಬ್ಯಾಂಕಿಂಗ್ ವ್ಯವಸ್ಥೆ ಒಳಕ್ಕೆ ತರುವ ಉದ್ದೇಶದಿಂದ ಕೇಂದ್ರ ಸರ್ಕಾರ ಝೀರೋ ಬ್ಯಾಲೆನ್ಸ್ ಇದ್ದರೂ ಅಕೌಂಟ್ ಚಾಲ್ತಿಯಲ್ಲಿ ಇರುವಂತೆ ಜನಧನ್ ಅಕೌಂಟ್ ತೆರೆಯಲು ಅವಕಾಶ ಮಾಡಿಕೊಟ್ಟಿತ್ತು. ಈ ಸಮಯದಲ್ಲಿ ಬಿಜೆಪಿ ಕಾರ್ಯಕರ್ತರು, ಮೋದಿ ಹಣ ಹಾಕ್ತಾರೆ, ಹೊಸದಾಗಿ ಅಕೌಂಟ್ ಮಾಡಿಸಬೇಕು ಎಂದು ಸುಳ್ಳು ಸುದ್ದಿ ಹಬ್ಬಿಸಿ, ಅಕೌಂಟ್ ಇದ್ದವರಿಗೂ ಮತ್ತೊಂದು ಜನಧನ್ ಅಕೌಂಟ್ ಮಾಡಿಸುವಲ್ಲಿ ಯಶಸ್ವಿ ಆಗಿದ್ದರು. ಕೇಂದ್ರ ಸರ್ಕಾರದಿಂದ ಹಣ ಬರುತ್ತೆ ಎಂದು ಆಸೆಗಣ್ಣಿನಿಂದ ಕಾಯುತ್ತಿದ್ದ ಜನರಿಗೆ ಮೋದಿ ಹಣ ಬರಲಿಲ್ಲ. ಆದರೂ ಪ್ರಧಾನಿ ಮೋದಿ ಹೆಸರಲ್ಲಿ ಮಾಡಿಸಿಕೊಟ್ಟಿದ್ದ ಅಕೌಂಟ್ ಆಗಿರುವ ಕಾರಣಕ್ಕೆ ಜನ ಅದನ್ನು ಮೋದಿ ಅಕೌಂಟ್ ಅಂತಾರೆ. ಇದು ಕಾಂಗ್ರೆಸ್ಗೆ ನುಂಗಲಾರದ ಬಿಸಿ ತುಪ್ಪ ಆಗಿದೆ.
ಇದೀಗ ಕಾಂಗ್ರೆಸ್ ಸರ್ಕಾರದಲ್ಲಿ ಸಮಸ್ಯೆ ಆಗಿದ್ಯಾಕೆ..!?

ಮನೆ ನಿರ್ವಹಣೆ ಮಾಡುವ ಪ್ರತಿ ಕುಟುಂಬದ ಹೆಣ್ಣು ಮಗಳಿಗೆ ಕಾಂಗ್ರೆಸ್ ಸರ್ಕಾರ ಪ್ರತಿ ತಿಂಗಳು 2 ಸಾವಿರ ರೂಪಾಯಿ ಹಣವನ್ನು ನೀಡುವುದಕ್ಕೆ ತಯಾರಿ ಮಾಡಿಕೊಂಡಿದೆ. ಅದೇ ರೀತಿ ಇತ್ತೀಚಿಗೆ ಪಧವಿ ಪೂರೈಸಿರುವ ಪಧವೀಧರರಿಗೆ 3 ಸಾವಿರ ರೂಪಾಯಿ ಹಾಗು ಡಿಪ್ಲೋಮಾ ಪೂರೈಸಿ ಪಾಸ್ ಆದವರಿಗೆ ಒಂದೂವರೆ ಸಾವಿರ ರೂಪಾಯಿ ಹಣ ಕೊಡಬೇಕಿದೆ. ಇನ್ನುಳಿದಂತೆ 200 ಯೂನಿಟ್ ವಿದ್ಯುತ್ ಉಚಿತ, ಪ್ರತಿ ವ್ಯಕ್ತಿಗೆ ತಿಂಗಳಿಗೆ 10 ಕೆಜಿ ಅಕ್ಕಿ, ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡುವುದಕ್ಕೆ ಯಾವುದೇ ಅಡ್ಡಿಯಿಲ್ಲ. ಆದರೆ ಗೃಹಲಕ್ಷ್ಮೀ ಹಾಗು ಯುವನಿಧಿ ಯೋಜನೆಯ ಹಣವನ್ನು ಮೋದಿ ಅಕೌಂಟ್ಗೆ ಹಾಕುವುದು ಹೇಗೆ ಅನ್ನೋ ಚಿಂತೆ ಕಾಂಗ್ರೆಸ್ ಸರ್ಕಾರವನ್ನು ಕಾಡುವುದಕ್ಕೆ ಶುರುವಾಗಿದೆ. ಕಾಂಗ್ರೆಸ್ ಸರ್ಕಾರದ ಯೋಜನೆ ಆದರೂ ಮೋದಿ ಅಕೌಂಟ್ಗೆ ಬಂದ ದುಡ್ಡು ಎಂದು ಜನರು ಮಾತನಾಡುವ ಕಾರಣಕ್ಕೆ ಅಷ್ಟೊಂದು ಉತ್ತಮ ಪ್ರಚಾರ ಸಿಗುವುದು ಅನುಮಾನ ಎನ್ನಲಾಗ್ತಿದೆ.
ಕಾಂಗ್ರೆಸ್ ಸರ್ಕಾರದ ಮುಂದಿರುವ ಆಯ್ಕೆ ಏನು..?

ಕಾಂಗ್ರೆಸ್ ಸರ್ಕಾರದ ಯೋಜನೆ ಜನರಿಗೆ ಮುಟ್ಟಬೇಕು ಎನ್ನುವ ಜೊತೆಗೆ ಪ್ರಚಾರವೂ ಸಿಗಬೇಕು ಅನ್ನೋದು ಸರ್ಕಾರಗಳ ಉದ್ದೇಶ ಆಗಿರುತ್ತದೆ. ಇದೀಗ ಜನಧನ್ ಅಕೌಂಟ್ಗೆ ಹಣ ಹಾಕಿದ್ರೆ ಪ್ರಚಾರ ಸಿಗದೆ ಎಡವಟ್ಟು ಆಗುವ ಸಾಧ್ಯತೆಗಳು ಇರುವ ಕಾರಣಕ್ಕೆ ಹಣ ವರ್ಗಾವಣೆಗೆ ಇರುವ ಮಾರ್ಗ ಯಾವುದು ಅನ್ನೋ ಬಗ್ಗೆ ಬಗ್ಗೆ ಚಿಂತನೆ ನಡೆದಿದೆ. ಇದೇ ಕಾರಣಕ್ಕೆ ಪೋಸ್ಟ್ ಆಫೀಸ್ ಮೂಲಕ ಜನರಿಗೆ ಪ್ರತಿ ತಿಂಗಳು ಹಣ ತಲುಪಿಸಲು ಸಾಧ್ಯವೇ..? ಅನ್ನೋ ಬಗ್ಗೆ ಚರ್ಚೆ ಆರಂಭ ಆಗಿದೆ. ಇನ್ನು ಬೇರೊಂದು ಖಾತೆ ತೆರೆದು ಮೋದಿ ಸರ್ಕಾರಕ್ಕೆ ಸಡ್ಡು ಹೊಡೆದರೆ ಹೇಗೆ ಅನ್ನೋದು ಮಾತುಗಳೂ ಚಾಲ್ತಿಗೆ ಬಂದಿವೆ. ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಈ ಬಗ್ಗೆ ಅಂತಿಮ ಆದೇಶ ಹೊರ ಬೀಳಲಿದ್ದು, ಸರ್ಕಾರ ಹಣ ವರ್ಗಾವಣೆಗೆ ಏನು ನಿರ್ಧಾರ ಮಾಡಲಿದೆ ಅನ್ನೋದನ್ನು ಕಾದು ನೋಡಬೇಕಿದೆ.
ಕೃಷ್ಣಮಣಿ