ಮುಸ್ಲಿಂ ಮಹಿಳೆಯರು ಧಾರ್ಮಿಕ ಗುಂಪುಗಳು ಮತ್ತು ಸಂಪ್ರದಾಯವಾದಿಗಳ ಅಣತಿಯಂತೆ ಇರಲು ಬಯಸುವುದಿಲ್ಲ.
ಮೂಲ : ಹಸೀನಾ ಖಾನ್
ನ್ಯೂಸ್ ಕ್ಲಿಕ್ 30 ಜುಲೈ 2023
ಅನುವಾದ : ನಾ ದಿವಾಕರ
ನಿಜವಾದ ಆಯ್ಕೆಗಳೂ ಇವೆ
ಹಾಗಾದರೆ ಏನಾಸಂ ಬೇಡ ಎನ್ನಲಾಗುವುದೇ ? ಈ ಕಥೆ ಅಷ್ಟು ಸರಳವಲ್ಲ ಏಕೆಂದರೆ ಈ ನಿಲುವಿನ ಮೂಲಕ, ಎಲ್ಲಾ ರೀತಿಯ ಮುಸ್ಲಿಮರನ್ನು ಪ್ರತಿನಿಧಿಸುತ್ತೇವೆ ಎಂದು ಹೇಳಿಕೊಳ್ಳುವ ಆದರೆ ಮುಸ್ಲಿಂ ಮಹಿಳೆಯರ ಬೇಡಿಕೆಗಳನ್ನು ಎಂದಿಗೂ ಪರಿಹರಿಸದ ನಮ್ಮ ಸಮುದಾಯಗಳ ಧಾರ್ಮಿಕ ಮುಖ್ಯಸ್ಥರು ಮತ್ತು ಇತರರೊಂದಿಗೆ ನಾವೂ ನಿಲ್ಲುವಂತೆ ಮಾಡುತ್ತದೆ.
ನಾವು ಮುಸ್ಲಿಂ ಧಾರ್ಮಿಕ ದೃಷ್ಟಿಕೋನವನ್ನು ನೋಡಿದ್ದೇವೆ ಮತ್ತು ದುರದೃಷ್ಟವಶಾತ್ ಅದು ನಮ್ಮ ಪಾಲಿಗೆ ಕಿವುಡಾಗಿದೆ ಎಂದೂ ಅರಿತಿದ್ದೇವೆ. 1985ರ ಶಾಹಬಾನು ಪ್ರಕರಣದ ನಂತರ, ಇಸ್ಲಾಂ ಅಪಾಯದಲ್ಲಿದೆ ಎಂದು ಉಲೇಮಾಗಳು ಬೊಬ್ಬೆ ಹೊಡೆದರು ಮತ್ತು ವಿಚ್ಛೇದಿತ ಮುಸ್ಲಿಂ ಮಹಿಳೆಗೆ ನ್ಯಾಯಾಲಯ ಆದೇಶಿಸಿದ ಕನಿಷ್ಠ ಜೀವನಾಂಶವನ್ನು ವಿರೋಧಿಸಿ ಲಕ್ಷಾಂತರ ಜನರು ಬೀದಿಗಳಲ್ಲಿ ಜಮಾಯಿಸಿದರು. ಆ ತೀರ್ಪನ್ನು ಬುಡಮೇಲು ಮಾಡುವುದು ಉಲೇಮಾಗಳ ಪ್ರಭಾವವನ್ನು ಹೆಚ್ಚಿಸಿತು. ಮಹಿಳೆಯರ ಹಕ್ಕುಗಳನ್ನು ವಿರೋಧಿಸಿದ ಮುಸ್ಲಿಂ ಸಂಪ್ರದಾಯವಾದಿಗಳು ಧಾರ್ಮಿಕ ಅಧಿಕಾರದಿಂದ ಬೆಂಬಲಿತರಾಗಿದ್ದರಿಂದ ಮಾತ್ರ ಜನರನ್ನು ತಮ್ಮ ಕಡೆಗೆ ಸೆಳೆಯಲು ಸಾಧ್ಯವಾಯಿತು.
ನಮ್ಮ ವೈಯುಕ್ತಿಕ ಕಾನೂನುಗಳ ಭಾರವನ್ನು ಹೊರಬೇಕಾದ ಮುಸ್ಲಿಂ ಮಹಿಳೆಯರ ಪ್ರತಿನಿಧಿಗಳಾಗಿ, ನಾವು ಮೊದಲು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ಯಂತಹ ಧಾರ್ಮಿಕ ಸಂಸ್ಥೆಗಳ ಮಧ್ಯಪ್ರವೇಶವನ್ನು ಕೋರಿದ್ದೇವೆ. ಈ ಸಂಸ್ಥೆಯನ್ನು ಎಲ್ಲಾ ಸರ್ಕಾರಗಳು ವೈಯಕ್ತಿಕ ಕಾನೂನುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಮುಸ್ಲಿಂ ಸಮುದಾಯಗಳ ಪ್ರತಿನಿಧಿ ಎಂದು ಪರಿಗಣಿಸಿವೆ. ನಾವು ಈ ಸಂಸ್ಥೆಗೆ ನಿರಂತರವಾಗಿ ಪತ್ರ ಬರೆಯುತ್ತಿದ್ದೆವು. ಆದರೆ 2001ರಲ್ಲಿ ಎರಡು ದಿನಗಳ ಸಭೆಗೆ ಒಪ್ಪಿಕೊಳ್ಳುವ ಮೂಲಕ ಮಂಡಳಿಯು ನಮಗೆ ಒಮ್ಮೆ ಮಾತ್ರ ಪ್ರತಿಕ್ರಿಯಿಸಲು ಮುಂದಾಗಿತ್ತು. ಆ ಚರ್ಚೆಯು ನಮ್ಮ ಹೋರಾಟದಲ್ಲಿ ಒಂದು ತಿರುವು ಪಡೆಯಿತು, ಏಕೆಂದರೆ ನಾವು ಅದರ ಮಧ್ಯಪ್ರವೇಶವನ್ನು ಕೋರಿದಾಗ ಅದರ ಸದಸ್ಯರು ಮಂಡಳಿಯು ಶಾಸನಬದ್ಧ ಸಂಸ್ಥೆಯಲ್ಲ ಎಂದು ಹೇಳಿದರು. ಮಂಡಲಿಯೂ ಸಹ ನಮ್ಮಂತೆಯೇ ಕೇವಲ ಒಂದು ಸ್ವಯಂಸೇವಾ ಸಂಸ್ಥೆ ಎಂದು ಹೇಳಿದರು. ಇದರರ್ಥ ನಾವು ಅವರ ಬಗ್ಗೆ ಯಾವುದೇ ಭರವಸೆಯನ್ನು ಹೊಂದುವಂತಿರಲಿಲ್ಲ.
ಆದರೂ, ನಾವು ಅವರೊಂದಿಗೆ ಮತ್ತು ಮುಸ್ಲಿಂ ಸಮುದಾಯದ ಕಾಳಜಿಗಳನ್ನು ಪ್ರತಿನಿಧಿಸುವ ಪಾತ್ರವನ್ನು ವಹಿಸಿಕೊಂಡ ಇತರರೊಂದಿಗೆ ತೊಡಗುವುದನ್ನು ಮುಂದುವರಿಸಿದೆವು. ಆದಾಗ್ಯೂ ವಿಚ್ಛೇದನವನ್ನು ದೇವರು ಮೆಚ್ಚುವುದಿಲ್ಲ ಎಂದು ನಾವು ಅವರಿಗೆ ಮನವರಿಕೆ ಮಾಡಿದ ನಂತರದಲ್ಲಿ ತ್ವರಿತ ತ್ರಿವಳಿ ತಲಾಖ್ ವಿಷಯದ ಬಗ್ಗೆ ಅವರು ಎಂದಿಗೂ ನಮಗೆ ಪ್ರತಿಕ್ರಿಯೆ ನೀಡಲು ಸಾಧ್ಯವಾಗಲಿಲ್ಲ. ಆದರೆ ಅದು ಸಮುದಾಯದೊಳಗೆ ಆಂತರಿಕವಾಗಿ ಅವರ ಶಕ್ತಿಯ ವಿರುದ್ಧ ನಮ್ಮ ಧ್ವನಿಯಾಗಿತ್ತು. ಈ ಅಧಿಕಾರವನ್ನು ಬಳಸಿಕೊಂಡು ಅವರು 2005 ರಲ್ಲಿ ಒಂದು ಮಾದರಿ ನಿಖಾಹ್‌ನಾಮಾ (ಮದುವೆಯ ಒಪ್ಪಂದ) ರೂಪಿಸಿದರು. ಈ ಒಪ್ಪಂದವು ಮಹಿಳೆಯರ ದೃಷ್ಟಿಯಿಂದ ಎಷ್ಟು ಅನ್ಯಾಯವಾಗಿತ್ತೆಂದರೆ ನಾವು ಅದನ್ನು ಪತ್ರಿಕಾಗೋಷ್ಠಿಯಲ್ಲಿ ಹರಿದು ಬಿಸಾಡಬೇಕಾಯಿತು. ಅವರ ಮಾದರಿ ನಿಖಾಹ್‌ನಾಮಾದಲ್ಲಿ ಹೆಂಡತಿಯ ತಪ್ಪು ಕೃತ್ಯಗಳೇ ವಿಚ್ಛೇದನಕ್ಕೆ ಕಾರಣವಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ತಪ್ಪು ಕೃತ್ಯವನ್ನು ನಿಷ್ಕರ್ಷೆ ಮಾಡುವವರು ಯಾರು ? ವ್ಯಾಖ್ಯಾನಿಸುವವರು ಯಾರು ? ಈ ಪ್ರಶ್ನೆಗಳ ಬಗ್ಗೆ ಅವರ ಒಪ್ಪಂದವು ಮೌನ ವಹಿಸುತ್ತದೆ.
ಆದರೆ ನಮಗೆ ವಾಸ್ತವ ಪರಿಸ್ಥಿತಿಯ ತಿಳುವಳಿಕೆ ಇತ್ತು. ಏಕೆಂದರೆ ಲೈಂಗಿಕ ಕ್ರಿಯೆ ನಡೆಸಲು ನಿರಾಕರಿಸುವುದು, ಆಹಾರ ಸಿದ್ಧಪಡಿಸಲು ನಿರಾಕರಿಸುವುದು ಅಥವಾ ಗಂಡನ ಆದೇಶವನ್ನು ಉಲ್ಲಂಘಿಸುವುದು ಮುಂತಾದ ತಪ್ಪುಗಳ ಮೇಲೆ ನೀಡಲಾದ ವಿಚ್ಛೇದನಗಳಿಗೆ ಸಹಾಯ ಕೋರಿ ಮಹಿಳೆಯರಿಂದ ಅರ್ಜಿಗಳು ಪ್ರವಾಹೋಪಾದಿಯಲ್ಲಿ ನಮ್ಮನ್ನು ತಲುಪುತ್ತಲೇ ಇತ್ತು. ಮಹಿಳೆಯರಿಗೆ ನೀಡಲಾಗುವ ವಿಚ್ಛೇದನ ಪ್ರಮಾಣಪತ್ರಗಳಲ್ಲಿ ಮೂಲಭೂತವಾಗಿ ವಿಚ್ಚೇದಿತ ಮಹಿಳೆಯನ್ನು ಚರಿತ್ರಹೀನರೆಂದು ಪ್ರಮಾಣೀಕರಿಸಲಾಗುತ್ತಿತ್ತು. ಆದರೆ ಅವರು ಏನೋ ತಪ್ಪು ಮಾಡಿದ್ದಾರೆ ಎಂದು ಆರೋಪಿಸಲಾಗುತ್ತಿತ್ತು.
ಬದಲಾವಣೆ ಅಥವಾ ಸುಧಾರಣೆಯ ಬಗ್ಗೆ ಸಮುದಾಯದೊಳಗಿನ ಅಪಾರದರ್ಶಕತೆಯನ್ನು ಗಮನಿಸಿ ನಾವು ನಮ್ಮ ಕಾರ್ಯತಂತ್ರವನ್ನು ಬದಲಾಯಿಸಿದೆವು. ಮಹಿಳೆಯರ ಸಮಸ್ಯೆಗಳನ್ನು ಕೇವಲ ಧಾರ್ಮಿಕ ಸಂಘಟನೆಗಳಿಗೆ ವರದಿ ಮಾಡುವ ಬದಲು ನಾವು ನ್ಯಾಯಾಲಯಗಳನ್ನು ಸಂಪರ್ಕಿಸಲು ನಿರ್ಧರಿಸಿದೆವು. ಆದರೆ ಅನೇಕ ಮುಸ್ಲಿಂ ಮಹಿಳೆಯರು ಸುದೀರ್ಘ ಕಾನೂನು ಹೋರಾಟಗಳನ್ನು ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹಾಗಾಗಿ ನಾವು ಪುನಃ ಹೊಸ ಕಾರ್ಯತಂತ್ರ ರೂಪಿಸುವಂತೆ ಮಾಡಿತು. ಆದ್ದರಿಂದ 2001ರ ನಂತರ ಕೇವಲ ವ್ಯಕ್ತಿಗತವಾಗಿ ಮಾತ್ರವಲ್ಲದೆ ಸಮಸ್ತ ಮಹಿಳೆಯರಿಗೆ ಸಂಬಂಧಿಸಿದ ಕಾರಣಗಳಿಗಾಗಿ ನಾವು ನ್ಯಾಯಾಲಯಗಳನ್ನು ಸಂಪರ್ಕಿಸಲು ಪ್ರಾರಂಭಿಸಿದ್ದೇವೆ. ಉದಾಹರಣೆಗೆ, ಮುಸ್ಲಿಂ ವೈಯುಕ್ತಿಕ ಕಾನೂನಿನಲ್ಲಿನ ತಾರತಮ್ಯದ ಅಭ್ಯಾಸಗಳ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲು ನಾವು ಅಹಮದಾಬಾದ್ ಮೂಲದ ಆವಾಜ್‌ನೊಂದಿಗೆ ಕೆಲಸ ಮಾಡಿದ್ದೇವೆ. ನ್ಯಾಯಾಲಯವು ಮೊದಲ ವಿಚಾರಣೆಯಲ್ಲೇ ನಮ್ಮ ವಾದಗಳನ್ನು ತಿರಸ್ಕರಿಸಿತ್ತು.
ಆದರೂ, ನಾವು ಪಟ್ಟುಹಿಡಿದೆವು ಮತ್ತು ಏಕಪಕ್ಷೀಯ ತ್ರಿವಳಿ ತಲಾಖ್ ಪದ್ಧತಿಯ ಸಾಂವಿಧಾನಿಕ ಮರುಪರಿಶೀಲನೆಯನ್ನು ಕೋರಿ ನಾವು ನ್ಯಾಯಾಲಯಕ್ಕೆ ಹೋದೆವು. ಇದರಲ್ಲಿ ಸುಪ್ರೀಂ ಕೋರ್ಟ್ ನಮ್ಮ ಪರವಾಗಿ ಸರಿಯಾಗಿ ತೀರ್ಪು ನೀಡಿತು ಮತ್ತು ಅದನ್ನು ಕಾನೂನುಬಾಹಿರವೆಂದು ಪರಿಗಣಿಸಿತು.
ಅಸ್ಮಿತೆ ಮತ್ತು ಆಕ್ರಮಣ
ಹಲವು ವರ್ಷಗಳಿಂದ ಹಿಂಸಾತ್ಮಕ ಮುಸ್ಲಿಂ ವಿರೋಧಿ ಪ್ರಕರಣಗಳ ಕಾರಣ ಮುಸ್ಲಿಂ ಅಸ್ಮಿತೆ ಮತ್ತು ಅಸ್ತಿತ್ವವು ಮುತ್ತಿಗೆಗೆ ಒಳಗಾಗಿರುವುದರಿಂದ ಸಮುದಾಯವು ಒಗ್ಗಟ್ಟಿನಿಂದ ಒಂದಾಗಿ ನಿಲ್ಲುವ ಅವಶ್ಯಕತೆ ಹೆಚ್ಚಾಗಿದೆ. 1990ರ ದಶಕದ ಗಲಭೆಗಳ ನಂತರ 2002 ರ ಹತ್ಯಾಕಾಂಡ ಸಂಭವಿಸಿತ್ತು. ಇದು ಮುಸ್ಲಿಂ ಮಹಿಳೆಯರನ್ನು ಇನ್ನಷ್ಟು ಹಿಂದಕ್ಕೆ ತಳ್ಳಿತ್ತು. . ಹಿಂಸಾತ್ಮಕ ದಾಳಿಗಳು ಮತ್ತು ತೀವ್ರ ನಷ್ಟಗಳ ಇಂತಹ ಸಮಯದಲ್ಲಿ ಈ ಧಾರ್ಮಿಕ ಸಂಸ್ಥೆಗಳು ಸಮುದಾಯದ ಪರವಾಗಿ ನಿಂತವು. ಪ್ರಭುತ್ವ ನಿಲ್ಲಲಿಲ್ಲ. ಮತ್ತು ಸಮುದಾಯದ ಈ ಸಂಸ್ಥೆಗಳ ವಕ್ತಾರರು ಸುಧಾರಣೆಗಳನ್ನು ಒತ್ತಾಯಿಸದಂತೆ ಜನರನ್ನು ನಿರುತ್ಸಾಹಗೊಳಿಸಿದ್ದಷ್ಟೇ ಅಲ್ಲದೆ ಮಹಿಳೆಯರು ತಮ್ಮ ಸಮಸ್ಯೆಗಳನ್ನು ಎಂದಿಗೂ ಸಾರ್ವಜನಿಕವಾಗಿ ಬಹಿರಂಗಪಡಿಸಬಾರದು ಎಂದು ಅಪೇಕ್ಷಿಸಿದ್ದರು.
ತತ್ಪರಿಣಾಮವಾಗಿ ಈ ಸಂಸ್ಥೆಗಳು ಈಗ ಮುಸ್ಲಿಂ ಮಹಿಳೆಯರಾದ ನಮ್ಮ ಮೇಲೆ ಅವಳಿ ಅಧಿಕಾರಗಳನ್ನು ಪಡೆದುಕೊಂಡಿವೆ. ಅವು ನಮ್ಮ ಹಿತಾಸಕ್ತಿಗಳಿಗೆ ಧಕ್ಕೆ ತರಬಹುದಷ್ಟೇ ಅಲ್ಲದೆ ಇದರ ಹೊರತಾಗಿಯೂ ನಮ್ಮ ಮೇಲೆ ನೈತಿಕ ಒತ್ತಡವನ್ನು ಹೇರಬಹುದು. ಇಂದು ಪರಿಸ್ಥಿತಿ ಹೇಗಿದೆಯೆಂದರೆ ವೈಯುಕ್ತಿಕ ಕಾನೂನು ಸುಧಾರಣೆಯ ಬಗ್ಗೆ ಮಾತನಾಡುವುದು ಸಹ ಮುಸ್ಲಿಂ ಅಸ್ಮಿತೆಗೆ ಬೆದರಿಕೆಯಾಗಿ ಕಂಡುಬರುತ್ತದೆ. ಎಐಎಂಪಿಎಲ್‌ಬಿ ಯಂತಹ ಸಂಸ್ಥೆಗಳು ಏನಾಸಂ ಬೇಡ ಎಂದು ಹೇಳುತ್ತಿರುವುದನ್ನು ಗಮನಿಸಬೇಕಿದೆ. ಆದರೆ ನಾವು ಅವರ ಆಗ್ರಹಕ್ಕೆ ದನಿಗೂಡಿಸಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ಅವರು ಮುಸ್ಲಿಂ ಸಮುದಾಯಗಳ ಮೇಲೆ ಸರ್ಕಾರದ ಈ ದಾಳಿಯ ವಿರುದ್ಧವಾಗಿದ್ದಾರೆಯೇ ಅಥವಾ ಲಿಂಗತ್ವ ನ್ಯಾಯದ ಬೇಡಿಕೆಗಳ ವಿರುದ್ಧವಾಗಿದ್ದಾರೆಯೇ ಎಂದು ಖಚಿತವಾಗಿ ನಮಗೆ ತಿಳಿಯುವುದಿಲ್ಲ.
ಧಾರ್ಮಿಕ ಸಂಘಟನೆಗಳು, ಸರ್ಕಾರಗಳು ಮತ್ತು ಕಾನೂನು ನ್ಯಾಯಾಲಯಗಳ ಮೂಲಕ ಸಮುದಾಯದ ಆಂತರಿಕ ಸುಧಾರಣೆಗಾಗಿ ನಮ್ಮ ಪ್ರಯತ್ನ ಯಶಸ್ವಿಯಾಗಿದ್ದರೆ ಬಹುಶಃ ಬಿಜೆಪಿಯ ಏಕರೂಪ ನಾಗರಿಕ ಸಂಹಿತೆ ವಿಫಲವಾಗುತ್ತಿತ್ತು ಎಂದು ಇಂದು ನಾವು ದೃಢವಾಗಿ ನಂಬುತ್ತೇವೆ. ನಮ್ಮ ಸಮುದಾಯವು ತಮ್ಮದೇ ಸದಸ್ಯರ ಧ್ವನಿಯ ಬಗ್ಗೆ ಗಮನಹರಿಸಿದ್ದರೆ ಬಹುಶಃ ಬಿಜೆಪಿ ಮತ್ತು ಸಂಘ ಪರಿವಾರದ ರೂಪದಲ್ಲಿ ನಮ್ಮ ತಲೆಯ ಮೇಲೆ ನೇತಾಡುತ್ತಿರುವ ಈ ತೂಗುಗತ್ತಿಯು ಅರ್ಥಹೀನವಾಗಿಬಿಡಡುತ್ತಿತ್ತು. ಧಾರ್ಮಿಕ ಸಂಸ್ಥೆಗಳು ತಮ್ಮ ಮುಂದೆ ಆಗಿಂದ್ದಾಗ್ಗೆ, ಪದೇಪದೇ ಮಂಡಿಸಲಾಗುತ್ತಿದ್ದ ಮಹಿಳೆಯರ ಸಮಸ್ಯೆಗಳಿಗೆ ಕಾಳಜಿಗಳಿಗೆ ಆದ್ಯತೆ ನೀಡಬಹುದಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ಈ ಮುಕ್ತವಾದ ಅವಕಾಶವನ್ನೇ ಹಿಂದುತ್ವ ಸರ್ಕಾರವು ಆಕ್ರಮಿಸಿಕೊಳ್ಳಲು ಪ್ರಯತ್ನಿಸುತ್ತಿದೆ.
ಹಾಗಾಗಿಯೇ ಕಳೆದ ನಾಲ್ಕು ದಶಕಗಳಲ್ಲಿ ನಮ್ಮ ಪ್ರಸ್ತುತ ಕಾನೂನುಗಳಲ್ಲಿ ಪ್ರತಿಪಾದಿಸಲಾದ ಪಿತೃಪ್ರಧಾನ ಕುಟುಂಬ ರಚನೆಗಳ ಪರಿಣಾಮವಾಗಿ ಅಂಚಿಗೆ ತಳ್ಳಲ್ಪಟ್ಟಿರುವ ಮಹಿಳೆಯರಿಗೆ ಮತ್ತು ಇತರರಿಗೆ ಎಂದಿಗೂ ಸೂಕ್ತವಾದ ಪ್ರಾಶಸ್ತ್ಯ ದೊರೆತಿಲ್ಲ ಎನ್ನುವುದನ್ನು ನಾವು ಅರಿತಿದ್ದೇವೆ. ಎಂದಿಗೂ ಯಾವುದೇ ಸರ್ಕಾರಕ್ಕೂ ಸಹ ನಾವು ಮೊದಲ ಆದ್ಯತೆಯಾಗಿರಲಿಲ್ಲ ಎಂದು ಅರ್ಥಮಾಡಿಕೊಳ್ಳುವಷ್ಟು ಬುದ್ಧಿವಂತಿಕೆ ನಮಗಿದೆ. ಹಾಗೆಯೇ ನಮಗೆ ಸಹಾಯ ಮಾಡುವುದಾಗಿ ಹೇಳಿಕೊಳ್ಳುವ ಧಾರ್ಮಿಕ ಮೂಲಭೂತವಾದಿಗಳು ಮತ್ತು ಸಂಪ್ರದಾಯವಾದಿಗಳು ನಮಗಾಗಿ ಎಂದಿಗೂ ಸಹ ಸಮಯವನ್ನು ಹೊಂದಿಸಿಕೊಂಡಿಲ್ಲ ಎನ್ನುವ ಪರಿವೆಯೂ ನಮಗಿದೆ.
ಹಾಗಾಗಿಯೇ ನಾವು ನಮ್ಮ ಬೇಡಿಕೆಗಳನ್ನು ವಿಶಾಲ ನೆಲೆಯಲ್ಲಿ ಮಂಡಿಸಲು ಹಾಗೂ ನಮ್ಮಂತೆ ಯೋಚಿಸುವ ಇತರರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಶ್ರಮಿಸಿದ್ದೇವೆ. ಎಲ್ಲಾ ಸಮುದಾಯಗಳು ಮತ್ತು ಎಲ್ಲಾ ಜನರಿಗೆ ಲಿಂಗತ್ವ-ನ್ಯಾಯಯುತ ಕಾನೂನುಗಳನ್ನು ಜಾರಿಗೊಳಿಸುವಂತೆ ನಾವು ಒತ್ತಾಯಿಸುತ್ತೇವೆ. ಮುಸ್ಲಿಂ ಮಹಿಳೆಯರ ಸಲುವಾಗಿ ನಾವು ಅದೇ ಹಕ್ಕುಗಳನ್ನು ಕೇಳುವ ಇತರ ಮಹಿಳೆಯರೊಂದಿಗೆ ನಾವು ದನಿಗೂಡಿಸುತ್ತೇವೆ. ನಾವು ನಮ್ಮ ನಡುವೆ ಅನೇಕ ಚರ್ಚೆಗಳನ್ನು ನಡೆಸುತ್ತಿದ್ದೇವೆ. ಇಂತಹ ಇನ್ನೂ ಅನೇಕ ಸಂವಾದಗಳು ಬೇಕಾಗುತ್ತವೆ ಏಕೆಂದರೆ ವ್ಯವಸ್ಥೆಯನ್ನು ಬದಲಾಯಿಸಲು ಕೇವಲ ಕಾನೂನುಗಳ ಬದಲಾವಣೆಗಳು ಮಾತ್ರವೇ ಎಂದಿಗೂ ಸಾಕಾಗುವುದಿಲ್ಲ. ಆದರೆ ನಮಗೆ ಈಗ ತುರ್ತಾಗಿ ಚರ್ಚೆ-ಸಂವಾದಗಳ ಅಗತ್ಯವಿದೆ.
ಈ ಸರ್ಕಾರ ಮತ್ತು ಸಂಘ ಪರಿವಾರದ ಅಪಾಯಕಾರಿ ವಾಕ್ಚಾತುರ್ಯವನ್ನು ಗಮನಿಸುತ್ತಲೇ ಇರುವ ನಮಗೆಲ್ಲರಿಗೂ, ವಿವಿಧ ಸಮುದಾಯಗಳನ್ನು ಪ್ರತಿನಿಧಿಸುತ್ತವೆ ಎಂದು ಹೇಳಿಕೊಳ್ಳುತ್ತಾ ಈ ಚರ್ಚೆ-ಸಂವಾದಗಳನ್ನು ನಡೆಸಲು ಸ್ರಪ್ರೇರಣೆಯಿಂದ ಮುಂದೆ ಬರುವ ಪುರುಷರು ಮತ್ತು ಸಂಘಟನೆಗಳು ಹೇಗೆ ತಪ್ಪು ನಿರೂಪಣೆಗಳನ್ನು ಸೃಷ್ಟಿಸುತ್ತಿದ್ದಾರೆ ಎನ್ನುವುದೂ ತಿಳಿದಿದೆ. ನಮ್ಮ ಆಚರಣೆಗಳನ್ನು ಮರು ವ್ಯಾಖ್ಯಾನಿಸುವ ಸಂದರ್ಭದಲ್ಲಿ ಇತರರು ಅನುಸರಿಸುವ ಹಲವು ಆಚರಣೆಗಳತ್ತ ಗಮನ ನೀಡುತ್ತಲೇ ಅವುಗಳನ್ನು ನ್ಯಾಯಯುತವಾಗಿಸಲು ಮತ್ತು ನ್ಯಾಯಸಮ್ಮತವಾಗಿಸಲು ನಮ್ಮದೇ ಆದ ಆಚರಣೆಗಳಿಗೆ ನಾವು ಬದ್ಧರಾಗಬೇಕಿದೆ.
22ನೇ ಕಾನೂನು ಆಯೋಗವು ತಾನು ಪಡೆಯುತ್ತಿರುವ ಅನೇಕ ಪರಿಗಣನೆಯ ಸಲ್ಲಿಕೆಗಳ ಬಗ್ಗೆ ಪ್ರಾಮಾಣಿಕವಾಗಿ ಗಮನವನ್ನು ಹರಿಸುತ್ತಿದೆ ಮತ್ತು ನಮ್ಮನ್ನು ವಿಭಜಿಸಲು ಹೂಡಿಕೆ ಮಾಡಿದವರು ಉತ್ತೇಜಿಸಿದ ಅನಗತ್ಯ, ಅರ್ಥಹೀನ ಮತ್ತು ಮೋಸದ ಜನಾಭಿಪ್ರಾಯ ಸಂಗ್ರಹದಿಂದ ಪ್ರಭಾವಿತವಾಗುವುದಿಲ್ಲ ಎಂದು ಭಾವಿಸಲಾಗುತ್ತದೆ. ಹಾಗೆಯೇ ಸಂಪೂರ್ಣ ಅಜ್ಞಾನದಿಂದ ಮಂಡಿಸಲಾದ ಅಭಿಪ್ರಾಯಗಳನ್ನು ಸಹ ಸ್ವೀಕರಿಸುತ್ತದೆ ಎಂದೇ ಭಾವಿಸಬೇಕಾಗುತ್ತದೆ.
ವೈಯುಕ್ತಿಕ ಕಾನೂನುಗಳಲ್ಲಿ ಸುಧಾರಣೆಗಳು ಅಗತ್ಯವಿದೆ ಆದರೆ ಏಕರೂಪ ನಾಗರಿಕ ಸಂಹಿತೆ ಅಲ್ಲ ಎಂದು ಹೇಳುವ 21 ನೇ ಕಾನೂನು ಆಯೋಗದ 2018ರ ವರದಿಯನ್ನು ಆಧರಿಸಿ ಮರುಚಿಂತನೆ ನಡೆಸಲು ಕಾನೂನು ಆಯೋಗವು ಎಲ್ಲ ಭಾಗಿದಾರರೊಡನೆ ಸಾರ್ವಜನಿಕ ಸಂವಾದವನ್ನು ಪ್ರಾರಂಭಿಸಬೇಕಾಗಿದೆ. ವೈಯುಕ್ತಿಕ ಕಾನೂನುಗಳ ಅನ್ಯಾಯದಿಂದ ನಿಜವಾಗಿಯೂ ಬಾಧಿತರಾದ ಜನರು ಆ ಚರ್ಚೆಯಲ್ಲಿ, ಸಂವಾದದಲ್ಲಿ ಸೂಕ್ತ ಸ್ಥಾನ ಪಡೆಯುತ್ತಾರೆ ಎಂದು ನಾವು ಭಾವಿಸುತ್ತೇವೆ.
(ಲೇಖಕಿ ಹಸೀನಾ ಖಾನ್ ಮುಸ್ಲಿಂ ಮಹಿಳೆಯರ ವಿಮೋಚನೆಗಾಗಿ ಹೋರಾಡುತ್ತಿರುವ ಭಾರತದ ಮುಸ್ಲಿಂ ಮಹಿಳಾ ಸಂಘಟನೆಗಳ ವಿಶಾಲ ಒಕ್ಕೂಟ-
ಬೀಬಾಕ್ ಕಲೆಕ್ಟೀವ್ ಸಂಸ್ಥೆಯ ಸಂಸ್ಥಾಪಕಿ- )