~ಡಾ. ಜೆ ಎಸ್ ಪಾಟೀಲ.
ಮೋದಿ ಸರಕಾರ ಆಡಳಿತಕ್ಕೆ ಬಂದಾಗಿನಿಂದ ದೇಶದ ಎಲ್ಲಾ ಕ್ಷೇತ್ರಗಳ ಬೆಳವಣಿಗೆಯ ನಿಖರ ಹಾಗು ಅಸಲಿ ಅಂಕಿಅಂಶಗಳನ್ನು ಮರೆಮಾಚಲಾಗುತ್ತಿದೆ ಎನ್ನುವ ಸಂಶಯ ಹಾಗು ಆರೋಪ ಆಗಾಗ ಕೇಳಿಬರುತ್ತಿದೆ. ಅದಕ್ಕೆ ಪೂರಕ ಎನ್ನುವಂತೆ ಒಕ್ಕೂಟ ಸರಕಾರದ ಅಧಿಕಾರಿಗಳು ಸರಕಾರ ನಡೆಸುವ ಪಕ್ಷಕ್ಕೆ ಅನುಕೂಲವಾಗೂವಂತೆ ನಕಲಿ ಸ್ಥೂಲ ಆರ್ಥಿಕ ಸಂಗತಿಗಳ ಅಂಕಿಅಂಶಗಳನ್ನು ಘೋಷಿಸಿದ್ದಾರೆ, ಇದರಿಂದಾಗಿ ಜಿ-೨೦ ಶೃಂಗಸಭೆಯನ್ನು ಆಯೋಜಿಸುವ ಮುನ್ನ ಎಲ್ಲಾ ಕಡೆಗಳಿಂದ ಮೆಚ್ಚುಗೆ ಗಳಿಸಬಹುದೆಂದ ಇರಾದೆ ಇದ್ದಂತಿದೆ. ಆದರೆ ಬಹುತೇಕ ಭಾರತೀಯರು ಎದುರಿಸುತ್ತಿರುವ ಬದುಕಿನ ಹೋರಾಟಗಳನ್ನು ಮುಚ್ಚಿಹಾಕುವಲ್ಲಿ ಈ ಅಧಿಕಾರಿಗಳು ಸಿನಿಕತನದ ಮತ್ತು ಅಪಾಯಕಾರಿ ಆಟವನ್ನು ಆಡುತ್ತಿದ್ದಾರೆ. ಈ ತಿಂಗಳ ಜಿ-೨೦ ಶೃಂಗಸಭೆಯ ಸಲುವಾಗಿ ದೆಹಲಿಯ ರಸ್ತೆಗಳಲ್ಲಿನ ಜಾಹೀರಾತು ಫಲಕಗಳ ಹಿಂದೆ ತಮ್ಮ ಭವಿಷ್ಯದ ಜೀವನೋಪಾಯ ಕಾಣದೆ ಕಂಗಾಲಾಗಿರುವ ಕೊಳೆಗೇರಿ ನಿವಾಸಿಗಳ ಮನೆಗಳನ್ನು ಮರೆಮಾಚಲಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರ ನವ ಭಾರತದ ಇಮೇಜಿಗೆ ದಕ್ಕೆ ತರುತ್ತಾರೆಂದು ಬಡವರ ಬದುಕಿಗೆ ಆಸರೆಯಾಗಿದ್ದ ರಸ್ತೆಬದಿಯ ಗೂಡಂಗಡಿಗಳು ಮತ್ತು ವ್ಯಾಪಾರದ ಆಸರೆಗಳನ್ನು ಸರಕಾರ ನೆಲಸಮಗೊಳಿಸಿದೆ. ಮೋದಿ ಸರಕಾರ ಹಾಗು ವೈಯಕ್ತಿಕವಾಗಿ ಮೋದಿಯವರ “ಬ್ರಾಂಡಿಂಗ್” ಮತ್ತು “ಸುಂದರೀಕರಣ”ದ ಪ್ರಕ್ರೀಯೆಯ ಭಾಗವಾಗಿ ಭಾರತದ ಜಿಡಿಪಿ ಬೆಳವಣಿಗೆಯ ಅಂಕಿಅಂಶಗಳನ್ನು ಪ್ರದರ್ಶಿಸಲಾಗುತ್ತದೆ. ಈ ವರ್ಷದ ಎರಡನೇ ತ್ರೈಮಾಸಿಕದಲ್ಲಿ ೭.೮% ವಾರ್ಷಿಕ ಬೆಳವಣಿಗೆಯೊಂದಿಗೆ, ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ ಎನ್ನುವ ಫಲಕಗಳು ರಾರಾಜಿಸುತ್ತಿವೆ. ಆದರೆ, ವಾಸ್ತವದಲ್ಲಿ, ಜಾಹೀರಾತು ಫಲಕಗಳ ಹಿಂದೆ ಬೃಹತ್ ಪ್ರಮಾಣದ ಮಾನವ ಹೋರಾಟಗಳ ದಾರುಣ ಚಿತ್ರಗಳಿರುವುದನ್ನು ಮರೆಮಾಚಲಾಗಿದೆ. ದೇಶದ ಬೆಳವಣಿಗೆ ಸರಕಾರದ ಅಂಕಿಅಂಶಗಳು ಹೇಳುವಂತಿಲ್ಲ. ವಾಸ್ತವವಾಗಿ, ಬೆಳವಣಿಗೆ ದರ ಬಹಳಷ್ಟು ಕುಂಠಿತವಾಗಿದೆ.
ಎಲ್ಲಾ ಕ್ಷೇತ್ರಗಳಲ್ಲಿ ಅಸಮಾನತೆ ಹೆಚ್ಚುತ್ತಿದೆ ಮತ್ತು ನಿರುದ್ಯೋಗದ ಸಮಸ್ಯೆ ತೀವ್ರಗತಿಯಲ್ಲಿ ಏರುತ್ತಿದೆ. ಜಿ-೨೦ ರ ಆಯೋಜನೆಯಿಂದ ಪ್ರೇರೇಪಿತ ಭಾರತದ ಇತ್ತೀಚಿನ ಜಿಡಿಪಿ ಅಂಕಿಅಂಶವನ್ನು ಪ್ರಚಾರ ಮಾಡುವ ಜಾಹೀರಾತು ಫಲಕಗಳಲ್ಲಿ ಅನೇಕ ಅಸಂಗತ ಸಂಗತಿಗಳು ಅಡಗಿವೆ. ಸಾಮಾನ್ಯವಾಗಿ ರಾಷ್ಟ್ರೀಯ ಖಾತೆಗಳಲ್ಲಿ ಕಾಣಿಸಲಾಗುವ ವ್ಯತ್ಯಾಸವು ಸರಕು ಮತ್ತು ಸೇವೆಗಳ ಮೂಲಕ ಗಳಿಸಿದ ದೇಶೀಯ ಆದಾಯ (domestic income) ಮತ್ತು ದೇಶಿಯರು ಹಾಗು ವಿದೇಶಿಯರು ಆ ಸರಕು ಹಾಗು ಸೇವೆಗಳನ್ನು ಖರೀದಿಸುವಾಗ/ಬಳಸುವಾಗ ಪಾವತಿಸುವ ಖರ್ಚುಗಳ ನಡುವಿನ ವ್ಯತ್ಯಾಸವಾಗಿರುತ್ತದೆ. ತಾತ್ವಿಕವಾಗಿ, ಗಳಿಸಿದ ಆದಾಯ ಮತ್ತು ಖರ್ಚುಗಳು ಸಮನಾಗಿರಬೇಕು, ಏಕೆಂದರೆ ಉತ್ಪಾದಕರು ತಮ್ಮ ಉತ್ಪನ್ನಗಳನ್ನು ಇತರರು ಖರೀದಿಸಿದಾಗ ಮಾತ್ರ ಆದಾಯವನ್ನು ಗಳಿಸುತ್ತಾರೆ. ಪ್ರಾಯೋಗಿಕವಾಗಿ, ಆದಾಗ್ಯೂ, ಆದಾಯ ಮತ್ತು ವೆಚ್ಚಗಳ ಅಂದಾಜುಗಳು ಎಲ್ಲೆಡೆ ರಾಷ್ಟ್ರೀಯ ಖಾತೆಗಳಲ್ಲಿ ಭಿನ್ನವಾಗಿರುತ್ತವೆ.
ಏಕೆಂದರೆ ಅವು ಅಪೂರ್ಣ ಅಥವಾ ಸಮಗ್ರವಲ್ಲದ ಡೇಟಾವನ್ನು ಆಧರಿಸಿರುತ್ತವೆ. ಹಾಗಾಗಿ ಇಲ್ಲಿ ಸರಕಾರದ ಜಾಹಿರಾತುಗಳಲ್ಲಿ ಈ ವ್ಯತ್ಯಾಸಗಳು ರಾರಾಜಿಸುತ್ತಿವೆ. ವಿಶಿಷ್ಟವಾಗಿ ಹೇಳುವುದಾದರೆ, ಬೆಳವಣಿಗೆಯ ದರಗಳನ್ನು ಲೆಕ್ಕಾಚಾರ ಮಾಡಲು ಈ ವ್ಯತ್ಯಾಸವು ಅಪ್ರಸ್ತುತವಾಗುತ್ತದೆ, ಏಕೆಂದರೆ ಆದಾಯ ಮತ್ತು ವೆಚ್ಚಗಳು ಸ್ವಲ್ಪ ಭಿನ್ನವಾಗಿದ್ದರೂ ಸಹ ಒಂದೇ ರೀತಿಯ ಪ್ರವೃತ್ತಿಯನ್ನು ಹೊಂದಿರುತ್ತವೆ. ಆದರೆ ಯಾವಾಗಲೂ, ಎರಡು ಸರಣಿಗಳು ಆರ್ಥಿಕ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡಲು ಭಾರಿ ಪರಿಣಾಮ ಬೀರುವ ವಿಭಿನ್ನ ಮಾರ್ಗಗಳನ್ನು ಅನುಸರಿಸುತ್ತವೆ. ಇತ್ತೀಚಿಗೆ ರಾಷ್ಟ್ರೀಯ ಅಂಕಿಅಂಶಗಳ ಕಚೇರಿಯು ನೀಡಿದ ಅಂಕಿಅಂಶಗಳ ಒಂದು ಉದಾಹರಣೆಯನ್ನು ನಾವು ಇಲ್ಲಿ ಗಮನಿಸಬಹುದಾಗಿದೆ. ಏಪ್ರಿಲ್-ಜೂನ್ ಅವಧಿಯಲ್ಲಿ ದೇಶದ ಉತ್ಪಾದನೆಯಿಂದ ಗಳಿಸಿದ ಒಟ್ಟು ಆದಾಯವು ವಾರ್ಷಿಕ ೭.೮% ದರದಲ್ಲಿ ಹೆಚ್ಚಿದ್ದರೆ, ವೆಚ್ಚವು ಕೇವಲ ೧.೪% ರಷ್ಟು ಏರಿಕೆಯಾಗಿದೆ ಎಂದು ತೋರಿಸಲಾಗಿದೆ.
ಅಂಕಿಅಂಶಗಳಲ್ಲಿ ತೋರಿಸಲಾಗಿರುವ ಆದಾಯ ಮತ್ತು ಖರ್ಚು ಇವೆರಡರ ಬೆಳವಣಿಗೆ ದರದ ಕ್ರಮಗಳಲ್ಲಿ ಸ್ಪಷ್ಟವಾಗಿ ಅನೇಕ ದೋಷಗಳು ಕಾಣಸಿಗುತ್ತವೆ. ಅಂದರೆ ಖರ್ಚನ್ನು ಕಡಿಮೆ ತೋರಿಸಿ ಆದಾಯವನ್ನು ಅಧಿಕವಾಗಿ ಬಿಂಬಿಸಲಾಗಿದೆ. ಅದೇನೇ ಇದ್ದರೂ, ರಾಷ್ಟ್ರೀಯ ಅಂಕಿಅಂಶಗಳ ಕಚೇರಿ ಆದಾಯವನ್ನು ಸರಿಯಾಗಿ ಪರಿಗಣಿಸುತ್ತದೆ ಮತ್ತು ಖರ್ಚು ಯಾವಾಗಲೂ ಗಳಿಸಿದ ಆದಾಯಕ್ಕೆ ಸರಿಹೊಂದುವಂತೆ ಅಥವಾ ಸಮಾನವಾಗಿರಬೇಕು ಎಂದು ಊಹಿಸುತ್ತದೆ. ಇದು ಅಂಕಿಅಂಶಗಳ ಲೆಕ್ಕದ ಅಂತರರಾಷ್ಟ್ರೀಯ ಬೆಸ್ಟ್ ಪ್ರ್ಯಾಸ್ಟೀಸ್ ನ ಸ್ಪಷ್ಟ ಉಲ್ಲಂಘನೆಯಾಗಿದೆ. ಆದಾಯ ಮತ್ತು ಖರ್ಚುಗಳ ನಡುವಿನ ವ್ಯತ್ಯಾಸದ ರೇಖೆಯ ಸಂಪೂರ್ಣ ಅಂಶವೆಂದರೆ ಅಂಕಿಅಂಶಗಳ ಅಪೂರ್ಣತೆಗಳನ್ನು ಒಪ್ಪಿಕೊಳ್ಳುವುದೆ ಹೊರತು, ಅವುಗಳನ್ನು ಮರೆಮಾಚುವುದಲ್ಲ.
ಬಹುತೇಕ ಭಾರತೀಯರು ಬೆಲೆ ಏರಿಕೆ ಮುಂತಾದ ಹೊಡೆತಗಳಿಂದ ತತ್ತರಿಸಿ ಬದುಕುತ್ತಿರುವ ಈ ಸಂದಿಗ್ಧ ಸಮಯದಲ್ಲಿ ಮತ್ತು ವಿದೇಶಗಳಲ್ಲಿ ಭಾರತೀಯ ಸರಕುಗಳಿಗೆ ಸಿಗುತ್ತಿರುವ ಸಿಮೀತ ಹಸಿವನ್ನು ನೋಡಿದಾಗ ರಾಷ್ಟ್ರೀಯ ಅಂಕಿಅಂಶಗಳ ಕಚೇರಿಯು ದೇಶದ ರೋಗಗ್ರಸ್ಥ ವೆಚ್ಚಗಳ ನೈಜತೆಯನ್ನು ಮುಚ್ಚಿಡುತ್ತಿದೆ. ಇದು ಮೋದಿ ಆಡಳಿತ ದೇಶದ ಎಲ್ಲಾ ಕ್ಷೇತ್ರಗಳ ನೈಜ ಅಂಕಿಅಂಶಗಳ ಜೊತೆಗೆ ಆಡುತ್ತಿರುವ ಅಪಾಯಕಾರಿ ಆಟವಾಗಿದೆ.
~ಡಾ. ಜೆ ಎಸ್ ಪಾಟೀಲ.