~ ಡಾ. ಜೆ ಎಸ್ ಪಾಟೀಲ
ಭಾರತದ ಅನುತ್ಪಾದಕ ವರ್ಗ ಇಲ್ಲಿನ ಉತ್ಪಾದಕ ವರ್ಗವನ್ನು ಮತ್ತು ಸ್ತ್ರೀಯನ್ನು ಶೋಷಿಸಿಕೊಂಡು ಬದುಕುತ್ತಿದೆ. ಆಗಾಗ ಈ ನೆಲದ ಉತ್ಪಾದಕ ವರ್ಗವು ಅನುತ್ಪಾದಕ ಸನಾತನಿಗಳ ವಿರುದ್ಧ ಹೋರಾಡುತ್ತಾ ಬಂದಿದೆ. ತಮಿಳುನಾಡು ಒಂದು ಕಡೆ ಅಸಂಖ್ಯಾತ ಬೃಹತ್ ದೇವಾಲಯಗಳ ರಾಜ್ಯವಾಗಿದ್ದು ˌ ಅದಕ್ಕೆ ತದ್ವಿರುದ್ಧ ಎನ್ನುವಂತೆ ವಿಚಾರವಾದಿ ಪೆರಿಯಾರ, ಅಣ್ಣಾದೊರೈ ಮುಂತಾದ ಸುಧಾರಣಾವಾದಿಗಳ ನಾಡು ಕೂಡ. ಅಲ್ಲಿನ ದೇಗುಲಗಳಲ್ಲಿ ಮೇಲ್ವರ್ಗದ ಪುರೋಹಿತರೆ ಅರ್ಚಕರು. ಅಲ್ಲಿ ಬೃಹದಾಕಾರವಾದ ದೇಗುಲಗಳನ್ನು ನಿರ್ಮಿಸಿದವರು ಮಾತ್ರ ಬಹುಜನರು. ಕರುಣಾನಿಧಿಯವರ ಸಾವಿನ ನಂತರ ಕಳೆದ ಮೂರು ವರ್ಷಗಳ ಹಿಂದೆ ಅವರ ಮಗ ಸ್ಟಾಲಿನ್ ನೇತೃತ್ವದಲ್ಲಿ ಡಿಎಂಕೆ ಪಕ್ಷ ಅಧಿಕಾರಕ್ಕೆ ಬಂದಿದೆ. ಕರ್ನಾಟಕದಲ್ಲಿ ಸೇವೆಯಲ್ಲಿದ್ದ ಅಣ್ಣಾಮಲೈ ಎಂಬ ಕೋಡಂಗಿ ಐಎಎಸ್ ಅಧಿಕಾರಿಯನ್ನು ನಿವೃತ್ತಿಗೊಳಿಸಿ ಬಿಜೆಪಿ ಖಾತೆ ತೆಗೆಯಲು ಹೋಗಿ ಮುಗ್ಗರಿಸಿದೆ. ಈಗ ಸ್ಟಾಲಿನ್ ಅಲ್ಲಿ ಹೊಸ ಮನ್ವಂತರಕ್ಕೆ ನಾಂದಿ ಹಾಡುತ್ತಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದೆ ತಮಿಳುನಾಡಿನ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ಸಚಿವ ಪಿ ಕೆ ಸೆಕರ್ ಬಾಬು ಅವರು ತಮ್ಮ ಅಧೀನದ ಇಲಾಖೆಯಡಿಯಲ್ಲಿ ರಾಜ್ಯದಲ್ಲಿರುವ ೩೬,೦೦೦ ಕ್ಕೂ ಹೆಚ್ಚು ದೇವಾಲಯಗಳಲ್ಲಿ ಎಲ್ಲ ಜಾತಿಯ ಹಿಂದೂ ಅರ್ಚಕರನ್ನು ನೇಮಕ ಮಾಡುವುದಾಗಿ ಘೋಷಿಸಿದರು. ಎಲ್ಲ ಜಾತಿಯ ಹಿಂದೂಗಳು ಹಾಗು ಸ್ತ್ರೀಯರನ್ನು ಸೂಕ್ತ ಆಗಮಿಕ ಶಾಸ್ತ್ರದ ತರಬೇತಿಯ ನಂತರ ವಿವಿಧ ದೇವಾಲಯಗಳಲ್ಲಿ ಅರ್ಚಕರಾಗಿ ನೇಮಿಸಲಾಗುವುದೆಂದು ಸಚಿವರು ಹೇಳಿದ್ದರು. ತಮಿಳುನಾಡಿನಲ್ಲಿ ಅಧಿಕಾರ ವಹಿಸಿಕೊಂಡು ೧೦೦ ದಿನಗಳು ಪೂರೈಸುವ ಮೊದಲು ಅರ್ಹ ಅರ್ಚಕರ ನೇಮಕಾತಿ ಕೈಗೊಳ್ಳುವ ಭರವಸೆ ಅಲ್ಲಿನ ಸರಕಾರ ನೀಡಿತ್ತು. ಸಚಿವರ ಈ ಹೇಳಿಕೆಯು ದೇಶಾದ್ಯಂತ ಸಾಕಷ್ಟು ಬಿಸಿಬಿಸಿ ಚರ್ಚೆಗೆ ಅಂದು ಕಾರಣವಾಗಿತ್ತು. ಶತಮಾನಗಳಿಂದ ಬೇರೂರಿರುವ ಜಾತಿ ಹಾಗು ಲಿಂಗ ತಾರತಮ್ಯ ಹೊಡೆದೋಡಿಸುವ ಸರಕಾರದ ಈ ಕ್ರಾಂತಿಕಾರಿ ನಿರ್ಧಾರವನ್ನು ಅನೇಕರು ಸ್ವಾಗತಿಸಿದ್ದರು.

ಪುರೋಹಿತಶಾಹಿಗಳು ಮಾಮೂಲಿನಂತೆ ಸರಕಾರವು ಪೂಜೆ ಮತ್ತು ಆಚರಣೆಗಳ ಕೈಪಿಡಿಯಂತಿರುವ ಅಗಮ ಶಾಸ್ತ್ರದಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಗೊಣಗಿದ್ದರು. ತಮಿಳುನಾಡಿನ ದೇವಾಲಯಗಳಲ್ಲಿ ಬ್ರಾಹ್ಮಣೇತರ ಪುರೋಹಿತರನ್ನು ನೇಮಿಸುವ ಉಪಕ್ರಮವು ಸಾಮಾಜಿಕ ಸುಧಾರಣಾವಾದಿ ಮತ್ತು ವಿಚಾರವಾದಿ ಪೆರಿಯಾರ್ ಅವರಿಂದ ಆರಂಭಗೊಂಡಿತ್ತು. ಅವರು ಅಂದು ದೇವಾಲಯಗಳನ್ನು ಬಹಿಷ್ಕರಿಸುವ ಚಳುವಳಿ ಆರಂಭಿಸಿದ್ದರು. ೧೯೭೧ ರಲ್ಲಿ ಅಂದಿನ ಮುಖ್ಯಮಂತ್ರಿ ಕರುಣಾನಿಧಿ ಅವರು ಮಾನವ ಸಂಪನ್ಮೂಲ ಮತ್ತು ಧಾರ್ಮಿಕ ದತ್ತಿ ಕಾನೂನಿಗೆ ತಿದ್ದುಪಡಿ ಮಾಡಿ ಪುರೋಹಿತರ ವಂಶಪಾರಂಪರ್ಯ ನೇಮಕಾತಿಯನ್ನು ರದ್ದುಪಡಿಸಿದ್ದರು. ಈ ನಿರ್ಧಾರವು ತಮಿಳುನಾಡಿನಲ್ಲಿ ಪ್ರಥಮಬಾರಿಗೆ ಬ್ರಾಹ್ಮಣೇತರರಿಗೆ ಅರ್ಚಕರಾಗಲು ದಾರಿಮಾಡಿಕೊಟ್ಟಿತು. ಅನೇಕ ಬ್ರಾಹ್ಮಣವಾದಿ ಹಾಗು ಸಾಂಪ್ರದಾಯವಾದಿ ಸಂಘಟನೆಗಳು ಈ ಕಾನೂನನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದವು.
ಕರುಣಾನಿಧಿಯವರ ಈ ನಿರ್ಧಾರವು ಆಗ ಸರ್ವೋಚ್ಛ ನ್ಯಾಯಾಲಯ ತಿರಸ್ಕರಿಸಿತ್ತು. ೨೦೦೬ ರಲ್ಲಿ, ಡಿಎಂಕೆ ಸರ್ಕಾರ ಇದೇ ಆದೇಶವನ್ನು ಪುನಃ ಹೊರಡಿಸಿತ್ತು. ಆಗ ಆಗಮ ಶಾಸ್ತ್ರದಲ್ಲಿ ಸೂಕ್ತ ಪರಿಣತಿ ಹೊಂದಿದ ಎಲ್ಲ ಜಾತಿಯ ಹಿಂದೂಗಳು ಅರ್ಚಕರಾಗಲು ಅರ್ಹರು ಎಂದು ಹೊಸ ನಿಯಮವನ್ನು ಸೇರಿಸಲಾಗಿತ್ತು. ಸರಕಾರವು ಎಲ್ಲ ಜಾತಿಯ ಹಿಂದೂಗಳಿಗೆ ಆಗಮ ಶಾಸ್ತ್ರದ ತರಬೇತಿ ನೀಡುವ ತರಬೇತಿ ಶಾಲೆಗಳನ್ನು ಕೂಡ ಆರಂಭಿಸಿತ್ತು. ಈ ಆದೇಶವನ್ನು ಶಿವಚಾರ್ಯಾರ ಸಂಘ ಮತ್ತು ಇತರ ಸಾಂಪ್ರದಾಯವಾದಿಗಳ ಸಂಘಟನೆಗಳು ಪುನಃ ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದವು. ಹಲವಾರು ವರ್ಷಗಳ ವಿಚಾರಣೆಯ ನಂತರ ೨೦೧೫ ರಲ್ಲಿ ಸಕಕಾರದ ಈ ಸುಧಾರಣಾವಾದಿ ನಿರ್ಧಾರವನ್ನು ಸುಪ್ರೀಮ್ ಕೋರ್ಟ್ ಎತ್ತಿ ಹಿಡಿದಿತ್ತು. ೨೦೦೬ ರ ಸರಕಾರಿ ಆದೇಶದನ್ವಯ ಪರಿಶಿಷ್ಟ ಜಾತಿ ಹಾಗು ಪರಿಶಿಷ್ಟ ಪಂಗಡಗಳ ಒಟ್ಟು ೨೦೭ ಪುರುಷರಿಗೆ ರಾಜ್ಯದ ಪ್ರಮುಖ ದೇಗುಲಗಳಲ್ಲಿ ಪೌರೋಹಿತ್ಯಕ್ಕಾಗಿ ಆಗಮ ಶಾಸ್ತ್ರದ ತರಬೇತಿಯನ್ನು ನೀಡಲಾಗಿತ್ತು.
ಮೊದಲ ಸರದಿಯಲ್ಲಿ ಆರು ತರಬೇತಿ ಶಾಲೆಗಳಿಂದ ಆಸಕ್ತರಿಗೆ ಸೂಕ್ತ ಆಗಮ ಶಾಸ್ತ್ರದ ತರಬೇತಿ ನೀಡಿದ ನಂತರ ಈ ಕಾರ್ಯಕ್ರಮವನ್ನು ಸ್ಥಗಿತಗೊಳಿಸಲಾಗಿತ್ತು. ಎರಡು ವರ್ಷಗಳ ಹಿಂದಿನ ವರೆಗೆ, ತಮಿಳುನಾಡಿನ ದೇವಾಲಯಗಳಲ್ಲಿ ಸರಕಾರಿ ಪ್ರಾಯೋಜಿತ ಆಗಮ ಶಾಸ್ತ್ರದ ತರಬೇತಿ ಪಡೆದ ಬ್ರಾಹ್ಮಣೇತರ ಪುರೋಹಿತರಲ್ಲಿ ಇಬ್ಬರು ಮಾತ್ರ ಅರ್ಚಕರಾಗಿ ನೇಮಕಗೊಂಡಿದ್ದಾರಂತೆ. ತಿರುಚ್ಚಿ ಜಿಲ್ಲೆಯ ತುರೈಯೂರ್ ಮೂಲದ ೩೭ ವರ್ಷದ ಷಣ್ಮುಗನಾಥನ್ ಅವರು ೨೦೦೭-೦೮ ರಲ್ಲಿ ಆಗಮ ಶಾಸ್ತ್ರದ ತರಬೇತಿ ಪಡೆದ ಪುರೋಹಿತರಲ್ಲಿ ಒಬ್ಬರು. ಈ ತರಬೇತಿ ಪಡೆದವರಲ್ಲಿ ೧೫-೨೦ ಜನರು ಇತರ ದೇಶಗಳಿಗೆ ಕೆಲಸ ಹುಡುಕಿ ವಲಸೆ ಹೋದರೆ ಉಳಿದವರು ಇಲ್ಲಿಯೇ ಸರಕಾರಿ ಮತ್ತು ಖಾಸಗಿ ಉದ್ಯೋಗ ಮಾಡುತ್ತಿದ್ದಾರೆ ಎನ್ನುತ್ತಾರೆ ಷಣ್ಮುಗನಾಥನ್. “ತರಬೇತಿ ನೀಡಿದ ನಂತರ ಸುದೀರ್ಘ ಅವಧಿ ಸರಕಾರ ನಮ್ಮನ್ನು ಕಾಯಿಸಿದೆ. ಇನ್ನು ಮುಂದಾದರೂ ಸರ್ಕಾರ ಅರ್ಚಕರಿಗೆ ತರಬೇತಿ ನೀಡಿದ ನಂತರ ಶೀಘ್ರದಲ್ಲಿ ನೇಮಕಾತಿ ಪ್ರಕ್ರೀಯೆ ಮಾಡಬೇಕು ಎನ್ನುವದು ತರಬೇತಿ ಪಡೆದವರ ಅಂಬೋಣ.”

“ಮತ್ತೊಮ್ಮೆ ಸಂದರ್ಶನ ಪ್ರಕ್ರೀಯೆ ಮಾಡದೆ ಈಗಾಗಲೇ ಸಂದರ್ಶನ ಮಾಡಿದ ಅಭ್ಯರ್ಥಿಗಳಿಗೆ ನೇರವಾಗಿ ನೇಮಕ ಮಾಡಿಕೊಳ್ಳಬೇಕು” ಎಂದಿದ್ದರು ಈ ಹಿಂದೆ ಸರಕಾರಿ ಪ್ರಾಯೋಜಿತ ಆಗಮ ಶಾಸ್ತ್ರ ತರಬೇತಿ ಪಡೆದು ಸಂದರ್ಶನ ಪ್ರಕ್ರೀಯೆಯನ್ನು ಕೂಡ ಪೂರೈಸಿದ ಅರ್ಚಕ ಅಭ್ಯರ್ಥಿಯೊಬ್ಬರು. ಶ್ರೀರಂಗಂನ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದ ಮುರಳಿ ಬತ್ತಾರ್ ಅವರು, ಡಿಎಂಕೆ ಆಡಳಿತದಲ್ಲಿ ಈಗಾಗಲೇ ಬ್ರಾಹ್ಮಣೇತರರನ್ನು ಪುರೋಹಿತರನ್ನಾಗಿ ನೇಮಿಸುವ ಪದ್ದತಿ ಆಚರಣೆಯಲ್ಲಿದೆ. ಅಗಮ ಶಾಸ್ತ್ರದ ತರಬೇತಿ ಪಡೆದವರಿಗೆ ಮಾತ್ರ ನೇಮಕ ಮಾಡಿಕೊಳ್ಳಲಿದೆಯಾ ಎನ್ನುವ ಕುರಿತು ಸರಕಾರ ಈಗ ಪುನಃ ಸ್ಪಷ್ಟಪಡಿಸಬೇಕಾಗಿದೆ. ಹಾಗೊಂದು ವೇಳೆ ಆಗದಿದ್ದರೆ ನಾವು ಮತ್ತೆ ನ್ಯಾಯಾಲಯದ ಕಟ್ಟೆ ಹತ್ತುತ್ತೇವೆ ಎಂದು ಮುರುಳಿ ಬತ್ತಾರ್ ಬೆದರಿಕೆ ಹಾಕಿದ್ದರು. ಮೂವತ್ತು ವರ್ಷಗಳಿಂದ ಅರ್ಚಕ ಕೆಲಸ ಮಾಡುತ್ತಿರುವ ಚಿದಂಬರಂನ ಪುರೋಹಿತರೊಬ್ಬರು ಸಂಪ್ರದಾಯವೇ ಬೇರೆ, ಕಾನೂನುಗಳೇ ಬೇರೆ ಎನ್ನುವ ಮೂಲಕ ತಮ್ಮನ್ನು ತಾವು ಕಾನೂನಿಗೆ ಅತೀತರಾದವರು ಎಂದು ಬಿಂಬಿಸಿಕೊಂಡಿದ್ದರು.
ಈಗಾಗಲೇ ಪುರುಷ ಪುರೋಹಿತರ ಗೈರುಹಾಜರಿಯಲ್ಲಿ ಅವರ ಕುಟುಂಬದ ಮಹಿಳೆಯರು ಪೂಜಾ ಕೈಂಕರ್ಯ ನೇರವೇರಿಸುವ ಪದ್ದತಿ ಜಾರಿಯಲ್ಲಿದೆ. ಆದರೆ ಪೂರ್ಣಾವಧಿ ಸ್ತ್ರೀ ಅರ್ಚಕರನ್ನು ನೇಮಿಸುವಲ್ಲಿ ಹಲವು ಪ್ರಾಯೋಗಿಕ ತೊಂದರೆಗಳಿವೆ. ಅವುಗಳಲ್ಲಿ ಭದ್ರತಾ ಕಾರಣವು ಮುಖ್ಯವಾಗಿದೆ. ದೇವಾಲಯಕ್ಕೆ ನಸುಕಿನ ಜಾವ ಪೂಜೆಗೆಂದು ಅರ್ಚಕರು ಮುಂಜಾನೆ ೩ ರಿಂದ ೩:೩೦ ರೊಳಗೆ ತಲುಪಬೇಕು. ಇಲ್ಲಿ ಮಹಿಳೆಯ ಸುರಕ್ಷತೆ ಇಲ್ಲವಾಗುತ್ತದೆ ಎನ್ನುವುದು ಈ ಸಾಂಪ್ರದಾಯವಾದಿಗಳ ವಾದವಾಗಿತ್ತು. ಹಿಂದೂ ಮಕ್ಕಳ್ ಕಚ್ಚಿಯ ಮುಖಂಡ ಅರ್ಜುನ್ ಸಂಪತ್ ಕೂಡ ಮಹಿಳಾ ಅರ್ಚಕರನ್ನು ನೇಮಿಸುವುದು ಸಂಪ್ರದಾಯಕ್ಕೆ ವಿರುದ್ಧವಾಗಿದೆ ಎಂದು ಹೇಳಿರುವ ವರದಿಯಾಗಿತ್ತು. “ದೇವಾಲಯಗಳ ಆಂತರಿಕ ವಿಷಯಗಳಲ್ಲಿ ಸರಕಾರಕ್ಕೆ ಹಸ್ತಕ್ಷೇಪ ಮಾಡುವ ಅಧಿಕಾರವಿಲ್ಲ. ಯಾವಾಗಲೂ ಸೂರ್ಯ ಪೂರ್ವ ದಿಕ್ಕಿನಲ್ಲಿ ಮಾತ್ರ ಉದಯಿಸುತ್ತಾನೆ, ಸರಕಾರ ಅದನ್ನು ಬದಲಾಯಿಸಲು ಸಾಧ್ಯವಿಲ್ಲ ಎನ್ನುವುದು ಪುರೋಹಿತರ ವಾದ.
ಅಂತೆಯೇ, ಸಾವಿರಾರು ವರ್ಷಗಳಿಂದ ಜಾರಿಯಲ್ಲಿರುವ ಸಾಂಪ್ರದಾಯದ ನಿಯಮಗಳನ್ನು ಸರಕಾರ ಬದಲಾಯಿಸಲು ಸಾಧ್ಯವಿಲ್ಲ. ಧಾರ್ಮಿಕ ದತ್ತಿ ಇಲಾಖೆಯು ಕೇವಲ ದೇವಾಲಯಗಳ ನಿರ್ವಹಣೆಯ ಕಡೆಗೆ ಮಾತ್ರ ಗಮನ ಹರಿಸಬೇಕು. ದೇವಾಲಯಗಳ ಹೊರಗಿನ ವ್ಯವಹಾರಗಳನ್ನು ಮಾತ್ರ ನಿಯಂತ್ರಿಸಬೇಕು. ದೇಗುಲದ ಒಳಗಿನ ವ್ಯವಹಾರ ಬ್ರಾಹ್ಮಣರಿಗಿರಲಿ. ಬ್ರಾಹ್ಮಣೇತರ ಪುರೋಹಿತರು ಈಗಾಗಲೇ ಅನೇಕ ದೇವಾಲಯಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಸರಕಾರವು ಹಿಂದೂಗಳು ಮತ್ತು ತಮಿಳರನ್ನು ವಿಘಟಿಸುತ್ತಿದೆ. ದೇಗುಲಗಳು ಆಚರಿಸುತ್ತಿರುವ ಸಂಪ್ರದಾಯಗಳು ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿವೆ. ನೈಜ ದೈವಭಕ್ತಿಯುಳ್ಳ ಸ್ತ್ರೀಯರಾರೂ ಸ್ವತಃ ಅರ್ಚಕರಾಗಿ ಗರ್ಭಗುಡಿ ಪ್ರವೇಶಿಸಲಾರರು. ಮಹಿಳೆಯರಿಗೆ ಶಬರಿಮಲೈ ದೇವಸ್ಥಾನಕ್ಕೆ ಪ್ರವೇಶಿಸಲು ಅವಕಾಶವಿಲ್ಲ. ಈ ನಿಯಮವೇ ಎಲ್ಲ ದೇವಸ್ಥಾನಗಳಿಗೂ ಅನ್ವಯವಾಗಬೇಕು ಎನ್ನುವುದು ಅರ್ಜುನ್ ಸಂಪತ್ ಅವರ ಅಭಿಪ್ರಾಯವಾಗಿತ್ತು.
ತಮಿಳುನಾಡಿನಲ್ಲಿ ಶೈವ ಮತ್ತು ವೈಷ್ಣವ ಸಂಪ್ರದಾಯಗಳನ್ನು ಅನುಸರಿಸುವ ಹಲವು ದೇವಾಲಯಗಳಿದ್ದು ಅವು ಖಾಸಗಿ ಸಂಸ್ಥೆಗಳಡಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಪ್ರತಿ ದೇವಾಲಯ ತಮ್ಮದೇ ಆದ ರೀತಿ, ರಿವಾಜು, ನೀತಿ, ನಿಯಮಗಳು ಹೊಂದಿದೆ. ಹಾಗಾಗಿ ಸರಕಾರವು ದೇಗುಲಗಳ ಪ್ರತಿನಿಧಿಗಳನ್ನು ಕರೆದು ಸೌಹಾರ್ದಯುತವಾಗಿ ಈ ಸಮಸ್ಯೆಯನ್ನು ಪರಿಹರಿಸಬೇಕು ಎನ್ನುತ್ತಾರೆ ಯಥಾಸ್ಥಿತಿವಾದಿಗಳು. ಸರಕಾರದ ಈ ಸುಧಾರಣಾವಾದಿ ನಿರ್ಧಾರವನ್ನು ಕೆಲವು ಹಿಂದೂಪರ ಸಂಘಟನೆಗಳು ವಿರೋಧಿಸಿದ್ದವು. ಆದರೆ, ಆಶ್ಚರ್ಯವೆನ್ನುವಂತೆ ತಾನೊಂದೇ ಹಿಂದೂಗಳ ಪಕ್ಷವೆಂದು ಬಿಂಬಿಸಿಕೊಳ್ಳುವ ಬಿಜೆಪಿಯ ರಾಜ್ಯ ಘಟಕದ ಅಂದಿನ ಅಧ್ಯಕ್ಷ ಎಲ್ ಮುರುಗನ್ ಅವರು ಸರಕಾರದ ಈ ನಿರ್ಧಾರವನ್ನು ಸ್ವಾಗತಿಸುತ್ತ ಪ್ರಾಚೀನ ಕಾಲದಿಂದಲೂ ಸ್ತ್ರೀಯರು ದೇವಾಲಯಗಳಲ್ಲಿ ಅರ್ಚಕರಾಗಿದ್ದಾರೆ ಎಂದಿದ್ದು. ಇದಕ್ಕೆ ಪೂರಕವೆನ್ನುವಂತೆ ಜಗ್ಗಿ ವಾಸುದೇವನ್ ಕೂಡ ದೇವಾಲಯಗಳು ಸರಕಾರದ ನಿಯಂತ್ರಣದಲ್ಲಿರಬಾರದು ಎಂದು ತಗಾದೆ ತೆಗೆದಿದ್ದ.
ಹಿಂದಿನಿಂದಲೂ ಪ್ರಗತಿ ಹಾಗು ಸುಧಾರಣಾ ವಿರೋಧಿಗಳಾಗಿರುವ ಈ ದೇಶದ ಅನುತ್ಪಾದಕ ವರ್ಗವು ಪರರ ಶ್ರಮನ ಅನ್ನವನ್ನು ನಿರಾಯಾಸವಾಗಿ ತಿನ್ನಲು ಹೊಂಚು ಹಾಕುತ್ತ ಬಂದಿದೆ. ಈಗ ದೇವಸ್ಥಾನಗಳಲ್ಲಿ ಬ್ರಾಹ್ಮಣೇತರರು ಅರ್ಚಕರಾಗುವುದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಸರಕಾರವು ಬ್ರಾಹ್ಮಣೇತರರಿಗೆ ಸೂಕ್ತ ಆಗಮ ಶಾಸ್ತ್ರಗಳ ತರಬೇತಿ ನೀಡಿ ಅರ್ಚಕರನ್ನಾಗಿಸುತ್ತಿರುವುದು ಪುರೋಹಿತಶಾಹಿಗೆ ನುಂಗಲಾಗದ ತುತ್ತಾಗಿದೆ. ಒಟ್ಟಾರೆ, ಪೆರಿಯಾರ್ˌ ಅಣ್ಣಾದೊರೈ ಮುಂತಾದ ಸುಧಾರಣಾವಾದಿಗಳ ನಾಡಾಗಿರುವ ತಮಿಳುನಾಡಿನಲ್ಲಿ ಸಾಂಪ್ರದಾಯವಾದಿಗಳಿಗೆ ಬಹುದೊಡ್ಡ ಹೊಡೆತ ನೀಡುವ ಸುಧಾರಣಾವಾದಿ ನಿರ್ಧಾರವನ್ನು ಅಲ್ಲಿನ ಡಿಎಂಕೆ ಸರಕಾರ ತೆಗೆದುಕೊಂಡಿರುವುದು ಸ್ವಾಗತಾರ್ಹವಾಗಿದೆ.
~ ಡಾ. ಜೆ ಎಸ್ ಪಾಟೀಲ