ಭಾರತದಾದ್ಯಂತ ಹಲವಾರು ಥರ್ಮಲ್ ಶಕ್ತಿ ಕೇಂದ್ರಗಳನ್ನು (ಉಷ್ಣ ವಿದ್ಯುತ್ ಸ್ಥಾವರ) ಮುಚ್ಚಲಾಗಿದೆ. ಹಾಗೂ ಕಲ್ಲಿದ್ದಲು ಕೊರತೆಯಿಂದಾಗಿ ರಾಜ್ಯಗಳಲ್ಲಿ ಉಂಟಾಗಬಹುದಾದ ವಿದ್ಯುತ್ ಕಡಿತಗಳ ಕುರಿತು ರಾಜ್ಯ ಸರಕಾರಗಳು ನಾಗರಿಕರಿಗೆ ಎಚ್ಚರಿಕೆ ನೀಡುತ್ತಿದ್ದರೂ ಆತಂಕ ಪಡುವ ಅಗತ್ಯವಿಲ್ಲವೆಂದು ಕೇಂದ್ರ ಸರಕಾರ ಭರವಸೆ ನೀಡಿದೆ. ಆದರೆ ದೇಶದಲ್ಲಿ ಕಲ್ಲಿದ್ದಲು ಅಭಾವ ಎದುರಾಗಿದ್ದು, ಮುಂದಿನ ದಿನಗಳಲ್ಲಿ ವಿದ್ಯುಚ್ಚಕ್ತಿ ಕೊರತೆ ಎದುರಾಗುವ ಸಂಭವವಿದ ಎನ್ನಲಾಗಿದೆ. ಕಲ್ಲಿದ್ದಲು ಕೊರತೆಯಿಂದಾಗಿ ಪಂಜಾಬ್ನಲ್ಲಿರುವ ಮೂರು ಥರ್ಮಲ್ ಕೇಂದ್ರಗಳನ್ನು ಮುಚ್ಚಲಾಗಿದೆ. ಅದೇ ರೀತಿ ಕೇರಳದಲ್ಲಿ ನಾಲ್ಕು ಥರ್ಮಲ್ ಕೇಂದ್ರಗಳಿಗೆ ಬೀಗ ಜಡಿಯಲಾಗಿದೆ. ಮುಂದೆ ಉಂಟಾಗಬಹುದಾದ ವಿದ್ಯುತ್ ಬಿಕ್ಕಟ್ಟಿನ ಭಯದಿಂದಾಗಿ ಕರ್ನಾಟಕ ಹಾಗೂ ಪಂಜಾಬ್ ಮುಖ್ಯಮಂತ್ರಿಗಳು ರಾಜ್ಯಗಳಿಗೆ ಕಲ್ಲಿದ್ದಲು ಪೂರೈಕೆಯನ್ನು ಹೆಚ್ಚಿಸುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದಾರೆ.
ಮಹಾರಾಷ್ಟ್ರ ಇಂಧನ ಇಲಾಖೆಯು ವಿದ್ಯುತ್ ಉಳಿತಾಯ ಮಾಡುವಂತೆ ನಾಗರಿಕರನ್ನು ವಿನಂತಿಸಿದೆ. ಕೇರಳ ಸರಕಾರವು ಲೋಡ್ ಶೆಡ್ಡಿಂಗ್ನ ಮೊರೆ ಹೋಗುವ ನಿರ್ಧಾರ ಕೈಗೊಂಡಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಖುದ್ದು ಪ್ರಧಾನಿಯವರೇ ಈ ಸಮಸ್ಯೆಗಳಿಗೆ ಸಮಂಜಸ ಪರಿಹಾರ ಒದಗಿಸಬೇಕು ಹಾಗೂ ಮಧ್ಯಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದು ಇದರಿಂದ ವಿದ್ಯುತ್ ಸರಬರಾಜು ಮಾಡುವ ಸ್ಥಾವರಗಳಿಗೆ ಕಲ್ಲಿದ್ದಲು ಹಾಗೂ ಅನಿಲವನ್ನು ವರ್ಗಾಯಿಸಬಹುದು ಎಂಬ ನಿಟ್ಟಿನಲ್ಲಿ ಪ್ರಧಾನಿಯವರ ಮಧ್ಯಸ್ಥಿಕೆಯನ್ನು ಸೂಚಿಸಿದ್ದಾರೆ. ಇದರ ನಡುವೆ ಕೇಂದ್ರ ವಿದ್ಯುತ್ ಸಚಿವರಾದ ಸಚಿವ ಆರ್ ಕೆ ಸಿಂಗ್ ಯಾವುದೇ ವಿದ್ಯುತ್ ಕೊರತೆ ಇಲ್ಲ ಮತ್ತು ಕಲ್ಲಿದ್ದಲು ಪೂರೈಕೆ ಮುಂದುವರಿಸಲಾಗುವುದು ಎಂದು ಭರವಸೆ ನೀಡಿದ್ದು, ದೇಶವು ದಿನಕ್ಕೆ ಸರಾಸರಿ ಕಲ್ಲಿದ್ದಲಿನ ಅಗತ್ಯಕ್ಕಿಂತ ನಾಲ್ಕು ದಿನಗಳು ಮುಂದಿದ್ದು ಕಲ್ಲಿದ್ದಲಿನ ಕೊರತೆಯಲ್ಲಿ ಅನಗತ್ಯ ಭಯ ಸೃಷ್ಟಿಯಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ.
ಅಂಕಿಅಂಶಗಳು ಏನು ಹೇಳುತ್ತವೆ.!?
ಕೇಂದ್ರೀಯ ವಿದ್ಯುತ್ ಪ್ರಾಧಿಕಾರದ ಮಾಹಿತಿಯ ಪ್ರಕಾರ, ವಿದ್ಯುತ್ ಬಿಕ್ಕಟ್ಟಿಗೆ ಕಾರಣವಾಗಬಹುದಾದ, ಹಿಂದೆಂದೂ ಕಂಡಿರದ ಕಲ್ಲಿದ್ದಲು ಸಂಗ್ರಹದ ಕೊರತೆಯನ್ನು ಉಷ್ಣ ಸ್ಥಾವರಗಳು ಎದುರಿಸುತ್ತಿವೆ. ಅಕ್ಟೋಬರ್ 5ರಂದು, ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲನ್ನು ಬಳಸುವ 135 ಥರ್ಮಲ್ ಪ್ಲಾಂಟ್ಗಳಲ್ಲ 106 ಅಥವಾ 80% ಥರ್ಮಲ್ ಪ್ಲಾಂಟ್ಗಳು ನಿರ್ಣಾಯಕ ಅಥವಾ ತೀವ್ರ ಸಂಕಷ್ಟ ಹಂತದಲ್ಲಿವೆ. ಅಂದರೆ ಈ ಸ್ಟೇಶನ್ಗಳು ಮುಂದಿನ 6 – 7 ದಿನಗಳವರೆಗೆ ಮಾತ್ರ ಕಲ್ಲಿದ್ದಲು ಸ್ಟಾಕ್ಗಳನ್ನು ಹೊಂದಿವೆ ಎನ್ನಲಾಗಿದೆ.
ಕೇಂದ್ರ ಸರಕಾರದ ಅಭಿಪ್ರಾಯವೇನು.!?
ಕೇಂದ್ರ ವಿದ್ಯುತ್ ಸಚಿವ ಆರ್ ಕೆ ಸಿಂಗ್ ಕಲ್ಲಿದ್ದಲು ಪೂರೈಕೆಯನ್ನು ಮುಂದುವರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ದೇಶದಲ್ಲಿರುವ ವಿದ್ಯುತ್ ಕೇಂದ್ರಗಳಿಗೆ ಅಗತ್ಯ ಪ್ರಮಾಣದ ಅನಿಲ ಪೂರೈಕೆ ಮುಂದುವರಿಸಲು ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ ಅನ್ನು ವಿನಂತಿಸಿದ್ದು, ಅನಿಲ ಸರಬರಾಜು ಮುಂದುವರಿಯುತ್ತದೆ ಎಂದು ಸಂಸ್ಥೆಯು ಭರವಸೆ ನೀಡಿದೆ ಎಂದು ಸಚಿವರು ತಿಳಿಸಿದ್ದಾರೆ. ಈ ಹಿಂದೆ ದೇಶ ಯಾವುದೇ ಅನಿಲ ಕೊರತೆಯನ್ನು ಕಂಡಿರಲಿಲ್ಲ. ಇನ್ನು ಮುಂದೆ ಭವಿಷ್ಯದಲ್ಲಿ ಕೂಡ ಈ ಕೊರತೆ ಸಂಭವಿಸುವುದಿಲ್ಲ ಎಂದು ಆಶ್ವಾಸನೆ ನೀಡಿದ್ದಾರೆ. ದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಲ್ಲಿದ್ದಲು ದಾಸ್ತಾನು ಇದ್ದು ಕಲ್ಲಿದ್ದಲಿನ ಕಡಿಮೆ ದಾಸ್ತಾನು ಇದ್ದ ಕೂಡಲೇ ದಾಸ್ತಾನು ಮರು ಪೂರೈಕೆ ಮಾಡಲಾಗುತ್ತೆ. ಹೀಗಾಗಿ ವಿದ್ಯುತ್ ಉತ್ಪಾದನೆ ನಿಲ್ಲುತ್ತದೆ ಎಂಬುದಾಗಿ ಭಾವಿಸಬಾರದು ಎಂದು ಕಲ್ಲಿದ್ದಲು ಸಚಿವಾಲಯವು ಭರವಸೆ ನೀಡಿದೆ.
ದೇಶದಲ್ಲಿ ಹೇಗಿದೆ ಕಲ್ಲಿದ್ದಲ ಶೇಖರಣೆ.!?
ಮಹಾರಾಷ್ಟ್ರ:
ಕಲ್ಲಿದ್ದಲು ಕೊರತೆಯಿಂದಾಗಿ ಮಹಾರಾಷ್ಟ್ರದಲ್ಲಿ 13 ಥರ್ಮಲ್ ವಿದ್ಯುತ್ ಸ್ಥಾವರಗಳನ್ನು ಮುಚ್ಚಲಾಗಿದೆ. ಮಹಾರಾಷ್ಟ್ರ ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗವು (MSEDCL) ಗರಿಷ್ಠ ಸಮಯದಲ್ಲಿ ವಿದ್ಯುತ್ ಮಿತವಾಗಿ ಬಳಸುವಂತೆ ನಾಗರಿಕರಿಗೆ ಮನವಿ ಮಾಡಿದೆ. ಈ ಕುರಿತು ರಾಜ್ಯ ಸರಕಾವು ಸುತ್ತೋಲೆ ಹೊರಡಿಸಿದ್ದು ಇಂಧನ ಇಲಾಖೆಯು, “ಕಲ್ಲಿದ್ದಲು ಕೊರತೆಯಿಂದಾಗಿ, MSEDCLಗೆ ವಿದ್ಯುತ್ ಸರಬರಾಜು ಮಾಡುವ 13 ಸೆಟ್ಗಳ ಬೇರೆ ಬೇರೆ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳನ್ನು ಪ್ರಸ್ತುತ ಸ್ಥಗಿತಗೊಳಿಸಲಾಗಿದೆ. ಇದರ ಪರಿಣಾಮವಾಗಿ 3330 MW ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ವಿದ್ಯುತ್ ಕೊರತೆ ನೀಗಿಸಲು ಜಲವಿದ್ಯುತ್ ಮತ್ತು ತುರ್ತು ಖರೀದಿ ಒಳಗೊಂಡಂತೆ ಇತರ ಮೂಲಗಳಿಂದ ವಿದ್ಯುತ್ ಪೂರೈಕೆಯನ್ನು ಒದಗಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಇಲಾಖೆ ತಿಳಿಸಿದೆ.
ಕೇರಳ:
ಥರ್ಮಲ್ ಪವರ್ ಸ್ಥಾವರಗಳಿಗೆ ಕಲ್ಲಿದ್ದಲು ಲಭ್ಯವಿಲ್ಲದಿರುವುದರಿಂದ ಕೇಂದ್ರದಿಂದ ಕಲ್ಲಿದ್ದಲು ಪೂರೈಕೆಯ ಅಭಾವವು ದೀರ್ಘ ಕಾಲದವರೆಗೆ ಮುಂದುವರಿದಲ್ಲಿ ರಾಜ್ಯ ಸರಕಾರವು ಲೋಡ್ ಶೆಡ್ಡಿಂಗ್ ತೀರ್ಮಾನಕ್ಕೆ ಬದ್ಧವಾಗಿರುತ್ತದೆ ಎಂದು ಕೇರಳ ವಿದ್ಯುತ್ ಸಚಿವರಾದ ಕೆ.ಕೃಷ್ಣಮೂರ್ತಿ ತಿಳಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಕಲ್ಲಿದ್ದಲು ಅಭಾವದಿಂದಾಗಿ ಥರ್ಮಲ್ ಕೇಂದ್ರಗಳನ್ನು ಮುಚ್ಚಿದ್ದರಿಂದ ರಾಜ್ಯವು ಕೇಂದ್ರ ಪೂರೈಕೆಯಿಂದ 15%ದಷ್ಟು ವಿದ್ಯುತ್ ಕೊರತೆಯನ್ನು ಎದುರಿಸುತ್ತಿದೆ. ಆದರೆ ಇದುವರೆಗೆ ಲೋಡ್ ಶೆಡ್ಡಿಂಗ್ ಕ್ರಮ ಕೈಗೊಳ್ಳಲಾಗಿಲ್ಲ.
ಪಂಜಾಬ್:
ಮೂರು ಉಷ್ಣ ಸ್ಥಾವರಗಳನ್ನು ಬೇರೆ ವಿಧಿ ಇಲ್ಲದೆ ಪಂಜಾಬ್ನಲ್ಲಿ ಮುಚ್ಚಲಾಗಿದೆ ಹಾಗೂ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ರಾಜ್ಯಕ್ಕೆ ಕಲ್ಲಿದ್ದಲು ಪೂರೈಕೆ ಹೆಚ್ಚಿಸುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದಾರೆ. ಸ್ಥಾಪಿಸಲಾದ ಉಷ್ಣ ವಿದ್ಯುತ್ ಸ್ಥಾವರಗಳ ಸಾಮರ್ಥ್ಯವು 5,620 ಮೆಗಾವ್ಯಾಟ್ಗಳಾಗಿದ್ದು ಪ್ರಸ್ತುತ ರಾಜ್ಯವು 2,800 ಮೆಗಾವ್ಯಾಟ್ಗಳಷ್ಟು ವಿದ್ಯುತ್ ಉತ್ಪಾದಿಸುತ್ತಿದೆ. ಕಲ್ಲಿದ್ದಲು ಅಭಾವದಿಂದಾಗಿ, ಲೆಹರಾ ಮೊಹಬ್ಬತ್, ರೊಪಾರ್, ರಾಜ್ಪುರ, ತಾಲ್ವಂಡಿ ಸಬೊ ಹಾಗೂ ಗೋಯಿಂದ್ವಾಲ್ ಸಾಹಿಬ್ ಒಳಗೊಂಡಂತೆ ಈ ಪ್ರದೇಶಗಳಲ್ಲಿರುವ ಉಷ್ಣ ಸ್ಥಾವರಗಳು ಒಂದು ದಿನದಿಂದ ನಾಲ್ಕು ದಿನಗಳವರೆಗೆ ಮಾತ್ರ ವಿದ್ಯುತ್ ಉತ್ಪಾದಿಸುತ್ತಿವೆ.
ಕರ್ನಾಟಕ:
ಕರ್ನಾಟಕದಲ್ಲಿ ಕೂಡ ಕಲ್ಲಿದ್ದಲು ಕೊರತೆಯಿಂದ ಮುಂದೆ ಸಂಭವಿಸಬಹುದಾದ ವಿದ್ಯುತ್ ಅಭಾವ ನೀಗಿಸಲು, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ರಾಜ್ಯಕ್ಕೆ ಕಲ್ಲಿದ್ದಲು ಪೂರೈಕೆಯನ್ನು ಹೆಚ್ಚಿಸುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದಾರೆ. ಮಹಾರಾಷ್ಟ್ರದ ಚಂದ್ರಾಪುರ ಮತ್ತು ಒಡಿಶಾದ ಮಹಾನದಿ ಕೋಲ್ಫೀಲ್ಡ್ಸ್ ಲಿಮಿಟೆಡ್ನ ಗಣಿಗಳಿಂದ ಕರ್ನಾಟಕವು ಕಲ್ಲಿದ್ದಲು ಹಂಚಿಕೆ ಪಡೆದುಕೊಂಡಿದೆ. ಮತ್ತು ಎರಡೂ ಯೋಜನೆಗಳಿಗೆ ಅನುಮತಿ ಬೇಕು ಎಂದು ತಿಳಿಸಿದ್ದಾರೆ. ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿರುವುದಾಗಿ ಹೇಳಿದ್ದಾರೆ.
ದೆಹಲಿ:
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕಲ್ಲಿದ್ದಲು ಕೊರತೆಯಿಂದಾಗಿ ರಾಷ್ಟ್ರ ರಾಜಧಾನಿಯು ತೀವ್ರ ವಿದ್ಯುತ್ ಕೊರತೆಯನ್ನು ಅನುಭವಿಸಬಹುದು ಎಂದು ಕೇಂದ್ರಕ್ಕೆ ತಿಳಿಸಿದ್ದಾರೆ. ಈ ದಿಸೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶಿಸಿದ ಕಲ್ಲಿದ್ದಲು ಸಮಸ್ಯೆಗೆ ಪರಿಹಾರ ನೀಡಬೇಕೆಂದು ವಿನಂತಿಸಿದ್ದಾರೆ. ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಕೇಂದ್ರವು ದೇಶದಲ್ಲಿ ಕಲ್ಲಿದ್ದಲು ಬಿಕ್ಕಟ್ಟು ಇದೆ ಎಂದು ಒಪ್ಪಿಕೊಳ್ಳಲು ಸಿದ್ಧವಿಲ್ಲ ಎಂದು ಆರೋಪಿಸಿದ್ದು ಪರಿಸ್ಥಿತಿಯನ್ನು ಕೋವಿಡ್ -19 ಸಾಂಕ್ರಾಮಿಕದ ಎರಡನೇ ತರಂಗದ ಸಮಯದಲ್ಲಿ ಉಂಟಾಗಿದ್ದ ಆಮ್ಲಜನಕದ ಬಿಕ್ಕಟ್ಟಿಗೆ ಹೋಲಿಸಿದ್ದಾರೆ.
ಮಧ್ಯಪ್ರದೇಶ:
ಇದೇ ಸಮಯದಲ್ಲಿ ಮಧ್ಯಪ್ರದೇಶದ ಇಂಧನ ಸಚಿವರಾದ ಪ್ರಧುಮಾನ್ ಸಿಂಗ್ ತೋಮರ್ ಕಲ್ಲಿದ್ದಲು ಅಭಾವವನ್ನು ರಾಜ್ಯವು ಎದುರಿಸುತ್ತಿಲ್ಲ ಹಾಗೂ ತಮ್ಮ ರಾಜ್ಯ ಉತ್ತಮ ಸ್ಥಿತಿಯಲ್ಲಿದೆ ಎಂದು ಹೇಳಿದ್ದಾರೆ. ರಾಜ್ಯ ಸರ್ಕಾರವು ವಿದ್ಯುತ್ ಕೇಂದ್ರಗಳಿಗಾಗಿ ಎಂಟು ಮೆಟ್ರಿಕ್ ಟನ್ ಕಲ್ಲಿದ್ದಲನ್ನು ಖರೀದಿಸಲು ಟೆಂಡರ್ಗಳನ್ನು ಮಾಡಿದೆ ಎಂದು ಸಚಿವರು ಹೇಳಿದರು. ಕಲ್ಲಿದ್ದಲು ಬಿಕ್ಕಟ್ಟು ರಾಷ್ಟ್ರಮಟ್ಟದ ಸಮಸ್ಯೆಯಾಗಿದ್ದು, ಮಧ್ಯಪ್ರದೇಶವು ಈ ಪರಿಸ್ಥಿತಿಯಲ್ಲಿ ಉತ್ತಮ ಸ್ಥಿತಿಯಲ್ಲಿದೆ ಎಂದು ತಿಳಿಸಿದ್ದಾರೆ. ದೈನಂದಿನ ವಿದ್ಯುತ್ ಬೇಡಿಕೆ ಈಡೇರಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.
ಭಾರತದಲ್ಲಿ ಕಲ್ಲಿದ್ದಲು ಕೊರತೆಗೆ ಸಂಭವನೀಯ ಕಾರಣಗಳು:
ಅಧಿಕ ಮಳೆಯು ಕಲ್ಲಿದ್ದಲು ಸಾಗಾಟಕ್ಕೆ ತಡೆಯೊಡ್ಡಿದ್ದು ಹಾಗೂ ಹೆಚ್ಚಿನ ಬೆಲೆಗಳಿಂದಾಗಿ ಆಮದು ಮಾಡಿದ ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳು ತಮ್ಮ ಸಾಮರ್ಥ್ಯಕ್ಕಿಂತ ಕಡಿಮೆ ವಿದ್ಯುತ್ ಉತ್ಪಾದನೆ ಮಾಡುತ್ತಿವೆ.