
ಬೆಂಗಳೂರು: ರಾಜ್ಯ ಸರಕಾರದ ಅತ್ಯಂತ ಮಹತ್ವಾಕಾಂಕ್ಷಿಯಾದ ಜ್ಞಾನ, ಆರೋಗ್ಯ ಮತ್ತು ಸಂಶೋಧನಾ ನಗರದ (ಕೆಎಚ್ಐಆರ್ ಸಿಟಿ) ಮೊದಲ ಹಂತದ ಕಾಮಗಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ (ಸೆ.26)ಚಾಲನೆ ನೀಡಲಿದ್ದಾರೆ.

ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಬೆಳಿಗ್ಗೆ 11ಕ್ಕೆ ನಡೆಯಲಿರುವ ಸಮಾರಂಭದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಸಚಿವ ಸಂಪುಟದ ಮಂತ್ರಿಗಳೆಲ್ಲರೂ ಭಾಗವಹಿಸಲಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅವರು, `ಈ ಹೈಟೆಕ್ ನಗರದ ಪರಿಕಲ್ಪನೆಯು ಬೆಂಗಳೂರನ್ನು ಜಾಗತಿಕ ಮಟ್ಟದಲ್ಲಿ ಇನ್ನೊಂದು ಎತ್ತರಕ್ಕೆ ಕೊಂಡೊಯ್ಯಲಿದೆ. ಡಾಬಸಪೇಟೆ- ದೊಡ್ಡಬಳ್ಳಾಪುರ ನಡುವೆ ಸ್ಯಾಟಲೈಟ್ ಟೌನ್ ರಿಂಗ್ ರಸ್ತೆಗೆ ಹೊಂದಿಕೊಂಡೇ ಇರುವ, ಮೊದಲ ಹಂತದಲ್ಲಿ 500 ಎಕರೆಯಲ್ಲಿ ಈ ವಿನೂತನ ನಗರ ಅಸ್ತಿತ್ವಕ್ಕೆ ಬರಲಿದೆ. ಇದನ್ನು ಕ್ರಮೇಣವಾಗಿ 5 ಸಾವಿರ ಎಕರೆಯವರೆಗೂ ವಿಸ್ತರಿಸಲು ಅವಕಾಶಗಳಿವೆ’ ಎಂದಿದ್ದಾರೆ.




ಇಲ್ಲಿ ಜ್ಞಾನ, ಆರೋಗ್ಯ ಮತ್ತು ನಾವೀನ್ಯತೆಗಳಿಗೆ ಒತ್ತು ಕೊಡಲಾಗುವುದು. ಈ ಮೂಲಕ ಜಾಗತಿಕವಾಗಿ ಹೆಸರು ಮಾಡಿರುವ ಉತ್ಕೃಷ್ಟ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್, ಅವುಗಳೊಂದಿಗೆ ಸಹಭಾಗಿತ್ವ, ವೈದ್ಯಕೀಯ ಸಂಸ್ಥೆಗಳು ಮತ್ತು ಆರೋಗ್ಯ ಸೇವೆಗಳು, ಸಂಶೋಧನೆ ಮತ್ತು ನಾವೀನ್ಯತೆ ಇವೆಲ್ಲವೂ ಇಲ್ಲಿ ನೆಲೆಯೂರಲಿವೆ. ಇದಕ್ಕಾಗಿ ಒಟ್ಟು 40 ಸಾವಿರ ಕೋಟಿ ರೂ. ಹೂಡಿಕೆಯಾಗಲಿದ್ದು, ರಾಜ್ಯದ ಆರ್ಥಿಕತೆಗೆ ಇದು ದೊಡ್ಡ ಕೊಡುಗೆ ಕೊಡಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಮುಂಬರುವ ದಿನಗಳಲ್ಲಿ ನಿರ್ಣಾಯಕ ಪಾತ್ರ ವಹಿಸಲಿರುವ ನವೋದ್ಯಮಗಳು, ಜೀವವಿಜ್ಞಾನಗಳು, ಸೆಮಿಕಂಡಕ್ಟರ್ ತರಹದ ವಲಯಗಳಿಗೆ ಇಲ್ಲಿ ಆದ್ಯತೆ ಕೊಡಲಾಗುವುದು. ಈ ಮೂಲಕ ಒಂದು ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ. ಈ ಮೂಲಕ ಬೆಂಗಳೂರು ನಗರವು ಜಾಗತಿಕ ನಾಯಕತ್ವ ವಹಿಸಿಕೊಳ್ಳುವಂತೆ ಮಾಡಲಾಗುವುದು ಎಂದು ಅವರು ನುಡಿದಿದ್ದಾರೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಈ ನಗರಕ್ಕೆ ಹೊಸ ಹೆಸರು ಕೂಡ ನಾಮಕರಣ ಮಾಡಲಾಗುವುದು. ಇದರಲ್ಲಿ ರಾಜ್ಯ ಮತ್ತು ದೇಶದ ಪ್ರಮುಖ ಉದ್ಯಮಿಗಳು, ಸಂಶೋಧಕರು, ವೈದ್ಯಕೀಯ ಪರಿಣತರು, ಶಿಕ್ಷಣ ತಜ್ಞರು ಕೂಡ ಪಾಲ್ಗೊಳ್ಳಲಿದ್ದಾರೆ ಎಂದು ಪಾಟೀಲ ಹೇಳಿದ್ದಾರೆ.




