ಚಾಮರಾಜನಗರ: ಚಾಮರಾಜನಗರಕ್ಕೆ ಬಂದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬುದು ಮೂಢನಂಬಿಕೆ. ನನ್ನ ಅಧಿಕಾರ ಈಗಲೂ ಮತ್ತು ಭವಿಷ್ಯದಲ್ಲಿಯೂ ಭದ್ರವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟವಾಗಿ ಹೇಳಿದ್ದಾರೆ.

ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂಢನಂಬಿಕೆ ಮತ್ತು ಕಂದಾಚಾರಗಳಲ್ಲಿ ನಂಬುವುದಿಲ್ಲವಾದ್ದರಿಂದ ಚಾಮರಾಜನಗರಕ್ಕೆ ಭೇಟಿ ನೀಡುತ್ತಿರುತ್ತೇನೆ. ರಾಜ್ಯದ ಎಲ್ಲ ಜಿಲ್ಲೆಗಳನ್ನೂ ಸಮಾನವಾಗಿ ಕಂಡು, ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡುತ್ತೇನೆ. ಚಾಮರಾಜನಗರಕ್ಕೆ ಬಂದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬುದು ಮೂಢನಂಬಿಕೆ. ಆ ಮೌಢ್ಯವನ್ನು ಹೋಗಲಾಡಿಸಲು ಇಲ್ಲಿಗೆ ಭೇಟಿ ನೀಡಿದ್ದು, ಅಧಿಕಾರ ಈಗಲೂ ಮತ್ತು ಭವಿಷ್ಯದಲ್ಲಿಯೂ ಭದ್ರವಾಗಿರುತ್ತದೆ ಎಂದರು.

ಮಾಜಿ ಸಂಸದ ಡಿ.ಕೆ ಸುರೇಶ್ ಅವರು ಡಿ.ಕೆ ಶಿವಕುಮಾರ್ ಅವರು ಸಿಎಂ ಆಗುವ ಬಗ್ಗೆ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಇಂತಹ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಐದು ವರ್ಷ ಆಡಳಿತ ನಡೆದು ಜನಾದೇಶ ಇದೆ. ನಮ್ಮ ಪ್ರಣಾಳಿಕೆಯಲ್ಲಿ ನೀಡಲಾಗಿದ್ದ ಭರವಸೆಯನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಜನರು ಆಸೆಯಂತೆ ಐದು ವರ್ಷ ಸರ್ಕಾರ ನಡೆಸಿ ನಂತರವೂ ಪುನ: ಕಾಂಗ್ರೆಸ್ ಪಕ್ಷವೇ ಆಯ್ಕೆಯಾಗಿ ಬರಲಿದೆ ಎಂದು ಹೇಳಿದರು.

ಸಂಪುಟ ಪುನರ್ರಚನೆ: ಪಕ್ಷದ ವರಿಷ್ಠರು ತೀರ್ಮಾನಿಸಬೇಕಿದೆ

ಐದು ವರ್ಷವೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಮುಂದುವರಿಕೆ ಬಗ್ಗೆ ನಡೆಯುತ್ತಿರುವ ಚರ್ಚೆ ಬಗ್ಗೆ ಉತ್ತರಿಸಿದ ಅವರು, ಇದು ಅನಾವಶ್ಯಕ ಚರ್ಚೆ. ಎರಡೂವರೆ ವರ್ಷದ ನಂತರ ಸಂಪುಟ ಪುನರ್ರಚನೆ ಮಾಡಬಹುದು ಎಂದು ತಿಳಿಸಿದ ನಂತರವಷ್ಟೇ , ಮುಖ್ಯಮಂತ್ರಿ ಬದಲಾವಣೆಯ ವಿಷಯ ಮುನ್ನಲೆಗೆ ಬಂದಿರುವುದು. ಸಂಪುಟ ಪುನರ್ರಚನೆ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ತೆಗೆದುಕೊಳ್ಳಬೇಕಿದೆ. ಒಟ್ಟು 34 ಸಚಿವರ ಸ್ಥಾನವಿದ್ದು, ಅದರಲ್ಲಿ ಎರಡು ಸ್ಥಾನಗಳು ಖಾಲಿಯಿದೆ. ಸಂಪುಟ ಪುನರ್ರಚನೆ ಸಂದರ್ಭದಲ್ಲಿ ಈ ಖಾಲಿ ಸಚಿವ ಸ್ಥಾನಗಳನ್ನು ಭರ್ತಿ ಮಾಡಲಾಗುವುದು ಎಂದರು.











