ಬೆಳಗಾವಿ : ರಾಜಕಾರಣದಲ್ಲಿ ನಾಯಕರು ಪರಸ್ಪರ ಟೀಕೆ, ಟಿಪ್ಪಣಿ, ಆರೋಪ – ಪ್ರತ್ಯಾರೋಪಗಳನ್ನು ಮಾಡುತ್ತಿರುತ್ತಾರೆ. ಎಷ್ಟೇ ಮಾತಿನ ಚಕಮಕಿ ನಡೆದು, ವೈಮನಸ್ಸು ಬಂದರೂ ಆ ಎಲ್ಲವುಗಳ ಹೊರತಾಗಿಯೂ ಅವರಲ್ಲಿಯೂ ಸ್ನೇಹ ಇರುತ್ತದೆ ಎನ್ನುವುದು ಕೆಲವು ನಾಯಕರಿಂದ ಆರ್ಥವಾಗುತ್ತದೆ.

ರಾಜಕಾರಣಕ್ಕಿಂತ ನಮ್ಮ ಜೀವನದಲ್ಲಿ ಮಾನವೀಯತೆ ಮುಖ್ಯ, ರಾಜಕಾರಣವನ್ನೂ ಮೀರಿದ್ದು ಮಾನವೀಯತೆ ಅಂತ ಆಗಾಗ ಸಿದ್ದರಾಮಯ್ಯ ಪ್ರತಿಪಾದಿಸುತ್ತಲೇ ಬಂದಿದ್ದಾರೆ. ಹೀಗೆ ಸಿದ್ದರಾಮಯ್ಯ, ಒಂದಿಲ್ಲೊಂದು ರೀತಿಯಲ್ಲಿ ಸ್ವಪಕ್ಷದವರ ಜೊತೆಗೆಯೇ ವಿಪಕ್ಷದವರ ಮನಸ್ಸನ್ನೂ ಗೆಲ್ಲುವ ಕೆಲಸ ಮಾಡುತ್ತಿರುತ್ತಾರೆ. ಅಂಥದ್ದೇ ಮತ್ತೊಂದು ಪ್ರಸಂಗ ಸಿದ್ದರಾಮಯ್ಯ(Siddaramaiah )ಸ್ನೇಹದ ಅಕೌಂಟಿಗೆ ಜಮೆಯಾಗಿದೆ.

ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನಕ್ಕೆ ಆಗಮಿಸಿರುವ ಸಿಎಂ ಸುವರ್ಣಸೌಧದ ಮೊಗಸಾಲೆಯಲ್ಲಿ ವಿಪಕ್ಷ ನಾಯಕ ಆರ್. ಅಶೋಕ್ ಅವರೊಂದಿಗೆ ಮುಖಾಮುಖಿಯಾಗಿ ಉಭಯ ಕುಶಲೋಪರಿ ವಿಚಾರಿಸಿದ್ದಾರೆ. ಈ ವೇಳೆ ಸ್ನೇಹದಿಂದ ಅಶೋಕ್(R Ashok) ಹೆಗಲಮೇಲೆ ಕೈ ಹಾಕಿ “ಯಾಕಯ್ಯಾ ಸಣ್ಣಗಾಗಿದ್ದೀಯಾ” ಎಂದು ಕೇಳಿದ್ದಾರೆ.

ಸಿದ್ದರಾಮಯ್ಯ ಮಾತಿಗೆ ಮನಸೋತು, ಅಷ್ಟೇ ಪ್ರೀತಿಯಿಂದ ನಗು ನಗುತ್ತಾ “ಇಲ್ಲಾ ಸಾರ್, ನಾನು ನಿಮ್ಮ ರೀತಿ ನಾಟಿಕೋಳಿ ತಿನ್ನೋದಿಲ್ಲ. ಈಗ ಅದನ್ನ ಬಿಟ್ಟಿದ್ದೇನೆ” ಎಂದು ಉತ್ತರಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ”ನಾಟಿಕೋಳಿ ತಿನ್ನಬೇಕಯ್ಯಾ, ಏನು ಆಗೋದಿಲ್ಲಾ” ಎಂದು ಅಶೋಕ್ ಗೆ ಸಲಹೆ ನೀಡಿದ್ದಾರೆ.

ಸಿಎಂ ಹಾಗೂ ವಿರೋಧ ಪಕ್ಷದ ನಾಯಕರ ನಡುವಿನ ಸ್ವಾರಸ್ಯಕರ ಮಾತುಕತೆಯ ಪ್ರಸಂಗವು ರಾಜಕೀಯದಲ್ಲಿ ನಾಯಕರು ಹೀಗೂ ಇರುತ್ತಾರಾ ಎಂಬ ರೀತಿಯಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಅಧಿವೇಶನದಲ್ಲಿ ಒಬ್ಬರ ವಿರುದ್ಧ ಇನ್ನೊಬ್ಬರು ಹೇಳಿಕೆ ನೀಡೋದನ್ನು ನೋಡಿದ ಸಾರ್ವಜನಿಕರು ರಾಜಕಾರಣದಲ್ಲಿ ಏನೇನಾಗುತ್ತದೆ ಅನ್ನೋದನ್ನು ಹೇಳೋಕೆ ಆಗೋದಿಲ್ಲ ಅಂತ ಬಾಯಿಮೇಲೆ ಬೆರಳಿಟ್ಟುಕೊಳ್ತಿದ್ದಾರೆ.












