ಬೆಂಗಳೂರು: ವಿಮಾನದಲ್ಲಿ ಅಸ್ವಸ್ಥಗೊಂಡ ವಿದೇಶಿ ಯುವತಿಯನ್ನು ಖಾನಾಪುರದ ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್(Anjali Nimbalkar) ತಕ್ಷಣ ಚಿಕಿತ್ಸೆ ನೀಡಿ ಪ್ರಾಣಾಪಾಯದಿಂದ ಕಾಪಾಡಿದ್ದಾರೆ. ಡಾ. ಅಂಜಲಿ ನಿಂಬಾಳ್ಕರ್ ಅವರ ಈ ಕಾರ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah )ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗೋವಾ-ಹೊಸದಿಲ್ಲಿ ನಡುವಿನ ವಿಮಾನ ಪ್ರಯಾಣದ ವೇಳೆ ಖಾನಾಪುರದ ಮಾಜಿ ಶಾಸಕಿಯಾದ ಡಾ.ಅಂಜಲಿ ನಿಂಬಾಳ್ಕರ್ ಅವರು ಅಮೇರಿಕಾದ ಮಹಿಳೆಯೊಬ್ಬರಿಗೆ ತುರ್ತು ವೈದ್ಯಕೀಯ ನೆರವಿನ ಅಗತ್ಯತೆಯನ್ನು ಅರಿತು, ತಕ್ಷಣವೇ ಸಿಪಿಆರ್ ನೀಡಿ ಮಹಿಳೆಯ ಪ್ರಾಣ ಉಳಿಸಿದ ವಿಚಾರ ಕೇಳಿ ಹೆಮ್ಮೆಯೆನಿಸಿತು. ವೈದ್ಯ ವೃತ್ತಿ ತೊರೆದು ಸಕ್ರಿಯ ರಾಜಕೀಯದಲ್ಲಿದ್ದರೂ ಸಕಾಲದಲ್ಲಿ ರೋಗಿಯೊಬ್ಬರ ನೆರವಿಗೆ ಧಾವಿಸಿದ ಅಂಜಲಿಯವರ ಸೇವಾ ಮನೋಭಾವ ಮತ್ತು ಸಮಯಪ್ರಜ್ಞೆ ಅತ್ಯಂತ ಶ್ಲಾಘನೀಯ.

ಅಧಿಕಾರವಿರಲಿ, ಇಲ್ಲದಿರಲಿ ಜನಸೇವೆ ಎಂದು ಬಂದಾಗ ಪ್ರತಿಫಲಾಪೇಕ್ಷೆ ಇಲ್ಲದೆ ತನ್ನ ಕೈಲಾದ ಸಹಾಯಕ್ಕೆ ನಿಲ್ಲುವ ಅಂಜಲಿಯಂತವರು ಸಮಾಜಕ್ಕೆ ಮಾದರಿ. ನೂರುಕಾಲ ಅಂಜಲಿಯವರಿಗೆ ಆಯಸ್ಸು ಆರೋಗ್ಯ ನೀಡಿ, ಕಷ್ಟದಲ್ಲಿರುವ ಜೀವಗಳಿಗೆ ಅವರಿಂದ ಇನ್ನಷ್ಟು ನೆರವು ಸಿಗುವಂತಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಿಎಂ ಅಭಿನಂದಿಸಿದ್ದಾರೆ.

ಆಗಿದ್ದೇನು..?
ಗೋವಾ ರಾಜ್ಯದ ಎಐಸಿಸಿ ಕಾರ್ಯದರ್ಶಿ ಆಗಿರುವ ಡಾ. ಅಂಜಲಿ ನಿಂಬಾಳ್ಕರ್ ಅವರು ದೆಹಲಿಗೆ ಪ್ರಯಾಣ ಬೆಳೆಸಿದ್ದರು. ವಿಮಾನ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ವಿದೇಶಿ ಯುವತಿಯೊಬ್ಬರಿಗೆ ವಿಪರೀತ ನಡುಕ ಉಂಟಾಗಿ ಪ್ರಜ್ಞಾಹೀನರಾಗಿ ಕುಸಿದುಬಿದ್ದಿದ್ದರು. ಈ ವೇಳೆ ಕೂಡಲೇ ಸಹಾಯಕ್ಕೆ ನಿಂತ ಅಂಜಲಿ ನಿಂಬಾಳ್ಕರ್ ಅವರು ಕಾರ್ಡಿಯೋ–ಪಲ್ಮನರಿ ರಿಸಸ್ಸಿಟೇಷನ್ (ಸಿಪಿಆರ್) ಚಿಕಿತ್ಸೆ ನೀಡಿದರು. ಅಂಜಲಿ ನಿಂಬಾಳ್ಕರ್ ಅವರ ಸತತ ಪ್ರಯತ್ನದ ಫಲವಾಗಿ ಯುವತಿಯ ಉಸಿರಾಟ ಮರುಕಳಿಸಿತು. ಅಲ್ಲದೇ ಚಿಕಿತ್ಸೆಯ ನಂತರ ಯುವತಿ ಚೇತರಿಸಿಕೊಂಡಿದ್ದಾರೆ.












