ಬೆಂಗಳೂರು: ಬಡವರ ಕೆಲಸದ ಸಾಂವಿಧಾನಿಕ ಹಕ್ಕನ್ನು ಕಸಿದುಕೊಳ್ಳುವ ವಿಬಿ ಜಿ ರಾಮ್ ಜಿ ಕಾಯ್ದೆಯು ಗ್ರಾಮೀಣ ಪ್ರದೇಶದ ಬಡ ಕಾರ್ಮಿಕರಿಗೆ ಮಾರಕವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah) ಕೇಂದ್ರ ಸರ್ಕಾರ(Central Government )ಹಾಗೂ ಬಿಜೆಪಿ(BJP) ವಿರುದ್ಧ ಗುಡುಗಿದ್ದಾರೆ.

ಬೆಂಗಳೂರಿನಲ್ಲಿ ಲೋಕಭವನದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರವು ಮನರೇಗಾ ಕಾಯ್ದೆ ರದ್ದುಗೊಳಿಸಿ ವಿಬಿ ಜಿ ರಾಮ್ ಜಿಯನ್ನು ಜಾರಿಗೊಳಿಸಿದ್ದಾರೆ.. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಜನಪರ ಚಿಂತನೆಯಿಂದ ಜಾರಿಗೊಂಡ ಮನರೇಗಾ ಯೋಜನೆಯಡಿ ಬಡವರು, ಸಣ್ಣರೈತರು, ಮಹಿಳೆಯರು 100 ದಿನಗಳ ಕಾಲ ಕೆಲಸವನ್ನು ಖಾತ್ರಿಪಡಿಸುತ್ತಿತ್ತು. ಬಡವರಿಗೆ ಕೆಲಸದ ಹಕ್ಕು ಸಂವಿಧಾನಬದ್ಧವಾದದ್ದು. ಆದರೆ ವಿಬಿ ಜಿ ರಾಮ್ ಜಿ ಕಾಯ್ದೆಯಿಂದ ಸಂವಿಧಾನಬದ್ಧವಾದ ಹಕ್ಕನ್ನು ಕಸಿದುಕೊಂಡಂತಾಗಿದೆ ಎಂದರು.

ಕರ್ನಾಟಕವೊಂದರಲ್ಲೇ ಸುಮಾರು 71 ಲಕ್ಷ ಜನ ಕಾರ್ಮಿಕರಿದ್ದು, ಇವರಲ್ಲಿ ಶೇ.53 ರಷ್ಟು ಮಹಿಳೆಯರು, ಶೇ. 28 ರಷ್ಟು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಠ ವರ್ಗದವರು, 5 ಲಕ್ಷ ಜನ ಅಂಗವಿಕಲ ಕಾರ್ಮಿಕರಿದ್ದಾರೆ. ಹೊಸ ಕಾಯ್ದೆಯಡಿ ಬಡ ಕೂಲಿಕಾರ್ಮಿಕರ ಕೆಲಸದ ಸ್ಥಳ ಮತ್ತು ದಿನಗಳನ್ನು ಕೇಂದ್ರ ಸರ್ಕಾರ ನಿರ್ಧಾರ ಮಾಡಲಿದೆ. ವ್ಯವಸಾಯದ 60 ದಿನಗಳು ಕೂಲಿ ಕಾರ್ಮಿಕರು ಕೆಲಸ ಮಾಡುವಂತಿಲ್ಲ. ಈ ಕಾಯ್ದೆಯಡಿ ಕೇಂದ್ರ ಸರ್ಕಾರ ಪೂರ್ಣ ಅನುದಾನ ನೀಡದೇ, ಕೇವಲ ಶೇ.60 ರಷ್ಟನ್ನು ಮಾತ್ರ ನೀಡುತ್ತಿದ್ದು, ಉಳಿದ ಶೇ. 40 ರಷ್ಟನ್ನು ರಾಜ್ಯ ಸರ್ಕಾರ ನೀಡಬೇಕಿದೆ. ಜನರಿಗೆ ಮಾರಕವಾದ ಕಾಯ್ದೆಯಾಗಿದೆ. ಗ್ರಾಮೀಣ ಪ್ರದೇಶದ ಕಾರ್ಮಿಕರಿಗೆ ಕೆಲಸವನ್ನು ಕಸಿದುಕೊಂಡಂತಾಗಿದೆ ಎಂದರು.

ಇಂತಹ ಜನವಿರೋಧಿ ಕಾಯ್ದೆ ತರಲು ಕೇಂದ್ರಕ್ಕೆ ಆರ್‌ಎಸ್‌ಎಸ್ ಪ್ರೇರಣೆ ನೀಡಿದ್ದು, ಬಡಜನರು ಆರ್ಥಿಕವಾಗಿ ಸ್ವಾವಲಂಬಿಗಳಾಗಬಾರದು ಎಂಬುದು ಬಿಜೆಪಿ ಆರ್‌ಎಸ್‌ಎಸ್‌ನ ದುರುದ್ದೇಶ. ಆದ್ದರಿಂದ ಕೇಂದ್ರದ ಈ ಕಾಯ್ದೆಯನ್ನು ರದ್ದುಗೊಳಿಸಿ, ಮನರೇಗಾ ಹೋರಾಟವನ್ನುಪುನರ್ಸ್ಥಾಪಿಸಬೇಕೆಂದು ಹೋರಾಟ ನಡೆಸಲಾಗುತ್ತಿದೆ. ಈ ಸಂಬಂಧ ಗ್ರಾಮ, ತಾಲೂಕು, ಜಿಲ್ಲಾ ಹಂತಗಳಲ್ಲಿಯೂ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.












