ಅಯೋಧ್ಯೆಯ ರಾಮಮಂದಿರದಲ್ಲಿ (Ayodhya Ram Mandir) ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಿಎಂ ಸಿದ್ದರಾಮಯ್ಯ (Siddaramaiah) ಸವಾಲು ಹಾಕಿದ್ದಾರೆ.

ತಮ್ಮ ಎಕ್ಸ್ (Twitter) ಖಾತೆಯಲ್ಲಿ ಬರೆದುಕೊಂಡಿರುವ ಅವರು, ಪ್ರಧಾನಿ ನರೇಂದ್ರ ಮೋದಿಯವರೇ (narendra Modi) ನೀವು ನಿಜವಾದ ರಾಮಭಕ್ತರೇ ಅಗಿದ್ದರೆ ಚುನಾವಣೆಯ ವೇಳೆ ನಿಮ್ಮ ಪ್ರಣಾಳಿಕೆಯ ಮೂಲಕ ಈ ದೇಶದ ಜನತೆಗೆ ನೀಡಿದ್ದ ವಾಗ್ದಾನದಲ್ಲಿ ಎಷ್ಟು ವಾಗ್ದಾನಗಳನ್ನು ಈಡೇರಿಸಿದ್ದೀರಿ? ಎಷ್ಟನ್ನು ಈಡೇರಿಸಬೇಕಿದೆ ಎನ್ನುವುದನ್ನು ಅಯೋಧ್ಯೆಯಲ್ಲಿ ತಾವು ಇಂದು ಉದ್ಘಾಟಿಸುತ್ತಿರುವ ರಾಮಮಂದಿರದಲ್ಲಿ ನಿಂತು ಪ್ರಮಾಣ ಮಾಡಿ ಹೇಳಿ ಎಂದು ಮೋದಿಗೆ ಸವಾಲ್ ಹಾಕಿದ್ದಾರೆ.

ನನಗೆ ತಿಳಿದಿರುವ ರಾಮ, ನಾನು ಪೂಜಿಸುವ ರಾಮ ವಚನ ಪರಿಪಾಲನೆಯನ್ನೇ ತನ್ನ ಉಸಿರಾಗಿಸಿಕೊಂಡವನು. ನನಗೆ ತಿಳಿದಿರುವ ಹನುಮ, ನಾನು ಪೂಜಿಸುವ ಹನುಮ ರಾಮನಾಮಕ್ಕಿಂತ ಮಿಗಿಲಿಲ್ಲ, ರಾಮನೇ ಜಗವೆಲ್ಲಾ ಎಂದು ತಿಳಿದು ರಾಮಭಕ್ತಿಯನ್ನೇ ಎದೆಯೊಳಗೆ ಇಳಿಸಿಕೊಂಡವನು. ಹನುಮನ ನಾಡಿನವರಾದ ನಮಗೆ ರಾಮನ ಬಗ್ಗೆ, ರಾಮಭಕ್ತಿಯ ಬಗ್ಗೆ ಹೇಳಿಕೊಡುವ ಅಗತ್ಯವಿಲ್ಲ. ಅದೊಂದು ತೋರ್ಪಡಿಕೆಯ ವಿದ್ಯಮಾನವೂ ಅಲ್ಲ. ರಾಮಭಕ್ತಿ ನಿರಂತರ. ವೈಯಕ್ತಿಕವಾಗಿ ನಾನು, ರಾಮನಿಂದ ವಚನ ಪರಿಪಾಲನೆಯನ್ನು, ಭೀಮನಿಂದ (ಡಾ. ಅಂಬೇಡ್ಕರ್) ಸಮತೆ ಅನುಷ್ಠಾನವನ್ನು, ಬಸವನಿಂದ ನುಡಿ, ನಡೆಯ ನಡುವೆ ಅಂತರವಿಲ್ಲದೆ ಬದುಕುವುದನ್ನು ನನ್ನಲ್ಲಿ ಅಳವಡಿಸಿಕೊಳ್ಳುತ್ತಲೇ ಮುಂದುವರಿದಿದ್ದೇನೆ ಎಂದು ಮೋದಿಗೆ ಟಾಂಗ್ ಕೊಟ್ಟಿದ್ದಾರೆ.
ಹನುಮನ ನಾಡಿನವರಾದ ನಾವು ಹನುಮನ ಎದೆಗಿಂತ ಮಿಗಿಲಾದ ಗುಡಿ ರಾಮನಿಗೆ ಬೇರಾವುದೂ ಇಲ್ಲ ಎಂದು ತಿಳಿದೇ ಆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ. ಬದಲಿಗೆ ಊರೂರಿನಲ್ಲಿಯೂ ಹನುಮನಿಗೆ ಗುಡಿ ಕಟ್ಟಿದೆವು. ರಾಮನಿಗೆ ಹನುಮನ ಎದೆಗಿಂತ ಬೇರಾವುದಾದರೂ ಶ್ರೇಷ್ಠ ಗುಡಿಯನ್ನು ಈ ಜಗತ್ತಿನಲ್ಲಿ ಯಾರಾದರೂ ಕಟ್ಟಲು ಸಾಧ್ಯವೇ? ನಿಜ ರಾಮಭಕ್ತರು ಉತ್ತರ ಹೇಳಬೇಕು. ರಾಮ ತನ್ನ ಭಕ್ತರಲ್ಲಿ ನೋಡುವುದು ಅವರ ಸತ್ಯಸಂಧತೆ, ವಚನ ಪರಿಪಾಲನೆಯನ್ನೇ ಹೊರತು ಡಾಂಭಿಕತೆಯನ್ನಲ್ಲ. ರಾಜಕಾರಣಿಗಳಿಂದ ರಾಮ ನಿರೀಕ್ಷಿಸುವುದು ಶಾಂತಿ, ನೆಮ್ಮದಿ, ಸಹಬಾಳ್ವೆಯಿಂದ ಕೂಡಿದ ರಾಮರಾಜ್ಯದ ನಿರ್ಮಾಣವನ್ನು ಮಾತ್ರ ಎಂದು ಸಿದ್ದರಾಮಯ್ಯ ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.












