ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇಂದು ಬೆಳ್ಳಂಬೆಳಗ್ಗೆಯೇ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಸಿ ಅಧಿಕಾರ ಹಂಚಿಕೆ ಸೇರಿದಂತೆ ಹಲವು ವಿಚಾರಗಳನ್ನು ಚರ್ಚಿಸಿದ್ದಾರೆ. ಈ ಬಗ್ಗೆ ಇಬ್ಬರೂ ಸಿಎಂ ನಿವಾಸದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕಳೆದ ಒಂದು ತಿಂಗಳಿನಿಂದ ಅನಗತ್ಯವಾಗಿ ಕೆಲವು ಗೊಂದಲಗಳು ಸೃಷ್ಟಿಯಾಗಿವೆ. ಆದರೆ ನಮ್ಮ ನಡುವೆ ಯಾವುದೇ ಗೊಂದಲ ಇಲ್ಲ. ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನಮ್ಮ ಹೈಕಮಾಂಡ್ ಹೇಳಿದಂತೆ ನಾವು ಕೇಳುತೇವೆ. ಹೈಕಮಾಂಡ್ ಏನು ನಿರ್ಧಾರ ಮಾಡುತ್ತದೆಯೋ ಅದರಂತೆ ನಡೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಇಂದಿನ ಸಭೆ ಬಗ್ಗೆ ಮಾತನಾಡಿದ ಅವರು, 2028 ರ ಚುನಾವಣೆ, ತಾಲೂಕು, ಜಿಲ್ಲಾ ಪಂಚಾಯತ್ ಚುನಾವಣೆಯ ಬಗ್ಗೆ ಚರ್ಚೆ ನಡೆಸಿದ್ದೇವೆ. 2028ರಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ತರುವ ಬಗ್ಗೆ ಚರ್ಚೆ ನಡೆಸಿದ್ದೇವೆ. ಚಳಿಗಾಲದ ಅಧಿವೇಶನದಲ್ಲಿಯೂ ವಿರೋಧ ಪಕ್ಷದವರನ್ನು ಸಮರ್ಥವಾಗಿ ಎದುರಿಸುತ್ತೇವೆ. ವಿಧಾನಸಭೆಯಲ್ಲಿ ಸುಳ್ಳು ಆರೋಪಿಗಳಿಗೆ ತಕ್ಕ ಉತ್ತರ ನೀಡುತ್ತೇವೆ. ಅವಿಶ್ವಾಸ ಗೊತ್ತುವಳಿ ಮಂಡಿಸಲು ಸಾಧ್ಯವೇ ಇಲ್ಲ, ನಾವು ಹೆಚ್ಚು ಇದ್ದೇವೆ ಅವರು 64 ಇದ್ದಾರೆ, ಜೆಡಿಎಸ್ ಜೊತೆ ಬಿಜೆಪಿಯವರು ಸೇರಿದರೂ ಅದು ಸಾಧ್ಯವೇ ಇಲ್ಲ. ಅದೊಂದು ವಿಫಲ ಪ್ರಯತ್ನ ಎಂದರು.
ಇನ್ನು ಡಿಸಿಎಂ ಡಿ.ಕೆ ಶಿವಕುಮಾರ್ ಮಾತನಾಡಿ, ಪಕ್ಷದ ನಾಯಕರು ಕರೆದರೆ ನಾವು ದೆಹಲಿಗೆ ಹೋಗುತ್ತೇವೆ.ನಾವು ಒಗ್ಗಟ್ಟಾಗಿದ್ದೇವೆ. ಕಬ್ಬು ಬೆಳೆಗಾರರ ಸಮಸ್ಯೆ, ಮೆಕ್ಕೆಜೋಳದ ವಿಚಾರದಲ್ಲಿ ನಾವು ಒಗ್ಗಟ್ಟಾಗಿದ್ದೇವೆ. ಕೇಂದ್ರ ಸರ್ಕಾರ ರಾಜ್ಯದ ನೀರಾವರಿ, ರೈತರ ಸಮಸ್ಯೆಗಳಿಗೆ ಪರಿಹಾರ ನೀಡಬೇಕು. ಬಿಜೆಪಿಯವರು ಅವಿಶ್ವಾಸ ಗೊತ್ತುವಳಿ ಮಂಡಿಸುವುದಾದರೆ ಮಂಡಿಸಲಿ. ನಾವು ಆಡಳಿತದಲ್ಲಿದ್ದೇವೆ, ಅವರು ಏನೇ ಮಾಡಿದರೂ ನಾವು ಸರ್ಕಾರ ನಡೆಸುತ್ತೇವೆ ಎಂದು ಹೇಳಿದ್ದಾರೆ.













