ಕಲಬುರಗಿ: ಆಗಸ್ಟ್ 22 ರಂದು ಮಾನ್ವಿ ತಾಲ್ಲೂಕಿನ ಕುರ್ಡಿ ಗ್ರಾಮದಲ್ಲಿ ನಡೆದಿದ್ದ ಸಂಜಯ್ ಕುರ್ಡೀಕರ್ (Sanjay Kurdekar) ಕೊಲೆ (murder Case)ಪ್ರಕರಣದ ತನಿಖೆಯನ್ನು ಖುದ್ದು ಪರಿಶೀಲನೆ ನಡೆಸುವಂತೆ ರಾಯಚೂರು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Chief Minister Siddaramaiah)ಸೂಚನೆ ನೀಡಿದ್ದಾರೆ.
ಕಲಬುರಗಿಯಲ್ಲಿ ವಿಶೇಷ ಸಚಿವ ಸಂಪುಟ ಸಭೆಗೆ ಮುಖ್ಯಮಂತ್ರಿಗಳು ಮತ್ತು ಸಂಪುಟ ಸದಸ್ಯರು ಬಸ್ ನಲ್ಲಿ ತೆರಳುವ ವೇಳೆ ಸಾರ್ವಜನಿಕ ಅಹವಾಲು ಸ್ವೀಕರಿಸಿದರು.ಈ ವೇಳೆ ಕೊಲೆಯಾದ ಸಂಜಯ್ ಪತ್ನಿ ಶಾಂತಮ್ಮ ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.
ಶಾಂತಮ್ಮ ಅವರ ಗೋಳಾಟ ನೋಡಿ ಮರುಗಿದ ಸಿಎಂ, ಸ್ಥಳದಲ್ಲೇ ದೂರವಾಣಿ ಮೂಲಕ ರಾಯಚೂರು Raichur SP ಅವರನ್ನು ಸಂಪರ್ಕಿಸಿ ಕೊಲೆ ಪ್ರಕರಣದ ವಿವರಣೆ ಕೇಳಿದರು.
ಬಳಿಕ ಕೊಲೆ ಪ್ರಕರಣದ ತನಿಖೆಯನ್ನು ಖುದ್ದಾಗಿ ಪರಿಶೀಲನೆ ನಡೆಸಬೇಕು.ಈ ವರೆಗೂ ನಡೆದಿರುವ ತನಿಖೆ ಸಮರ್ಪಕವಾಗಿದೆಯೇ? ಕೊಲೆಯಲ್ಲಿ ಬೇರೆ ಯಾರಾದರೂ ಭಾಗಿಯಾಗಿದ್ದು ಅವರು ತಪ್ಪಿಸಿಕೊಂಡಿದ್ದಾರಾ? ನಿಜವಾದ ಆರೋಪಿಗಳು ಹೊರಗೆ ಇದ್ದರೆ ಸಂತ್ರಸ್ಥ ಕುಟುಂಬಕ್ಕೆ ನ್ಯಾಯ ದೊರಕಲು ಸಾಧ್ಯವಿಲ್ಲ. ಆದ್ದರಿಂದ ಖುದ್ದಾಗಿ ಕೊಲೆ ಪ್ರಕರಣದ ತನಿಖೆಯ ಮೇಲೆ ನಿಗಾ ವಹಿಸಬೇಕು, ಬಳಿಕ ಈ ಬಗ್ಗೆ ನನಗೆ ವರದಿ ಮಾಡಬೇಕು ಎನ್ನುವ ಸ್ಪಷ್ಟ ಸೂಚನೆ ನೀಡಿದರು.