
ಹಾವೇರಿ: ಶಿಗ್ಗಾಂವ್ ಉಪ ಚುನಾವಣೆ ಫಲಿತಾಂಶದಿಂದ ಸಂತಸಗೊಂಡಿರುವ ಸಿಎಂ ಸಿದ್ದರಾಮಯ್ಯ, ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿಗೆ ಅದೃಷ್ಟ ಖುಲಾಯಿಸಿದೆ. ಅಜ್ಜಂಪೀರ್ ಖಾದ್ರಿ ಅವರನ್ನು ಹೆಸ್ಕಾಂ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಅಜ್ಜಂಪೀರ್ ಖಾದ್ರಿ ಕೂಡ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಮುಂದಾಗಿದ್ದರು. ನಾಮಪತ್ರವನ್ನೂ ಸಲ್ಲಿಸಿದ್ದರು. ಆದರೆ ಆ ಬಳಿಕ ನಡೆದ ಬೆಳವಣಿಗೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಮಾತಿಗೆ ಕಟ್ಟು ಬಿದ್ದ ಅಜ್ಜಂಪೀರ್ ಖಾದ್ರಿ, ನಾಮಪತ್ರ ವಾಪಸ್ ಪಡೆದಿದ್ದರು. ಅಜ್ಜಂಪೀರ್ ಖಾದ್ರಿ ನಾಮಪತ್ರ ವಾಪಸ್ ಪಡೆದಿದ್ದು ಮಾತ್ರವಲ್ಲದೆ ಶಕ್ತಿಮೀರಿ ಕೆಲಸ ಮಾಡಿದ್ದರು.

ಇದೀಗ ರಾಜ್ಯ ಸರ್ಕಾರದ ಇಂಧನ ಇಲಾಖೆಯ ಅಧೀನ ಕಾರ್ಯದರ್ಶಿ ವಿನೋದ್ ಕುಮಾರ್ ಆದೇಶ ಹೊರಡಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಪಠಾಣ್ ಗೆಲುವಿಗೆ ಶ್ರಮಿಸಿದ ಅಜ್ಜಂಪೀರ್ ಖಾದ್ರಿ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಸತತ ಆರು ಚುನಾವಣೆಗಳ ನಂತರ ಶಿಗ್ಗಾಂವ್‌ನಲ್ಲಿ ಕಾಂಗ್ರೆಸ್ ಗೆದ್ದು ಬೀಗಿದೆ. ಫಲಿತಾಂಶದ ಬೆನ್ನ ಹಿಂದೆಯೇ ಖಾದ್ರಿಗೆ ಫೋನ್ ಮಾಡಿ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ, ಸ್ಥಾನಮಾನದ ಬಗ್ಗೆ ವಿಶ್ವಾಸ ಮೂಡಿಸಿದ್ದರು. ಇದೀಗ ಸಿಎಂ ಸಿದ್ದರಾಮಯ್ಯ, ಮಾತಿನಂತೆ ನಡೆದುಕೊಂಡಿದ್ದ ಖಾದ್ರಿಯನ್ನು ಕೈ ಬಿಡಲಿಲ್ಲ ಎನ್ನುವುದು ವಿಶೇಷ.