ಬೆಂಗಳೂರು: ಕಾವೇರಿ ನೀರಿನ ವಿಚಾರವಾಗಿ ಬರುವ ಭಾನುವಾರ (ಆಗಸ್ಟ್ 2) ಗೃಹ ಕಚೇರಿ ಕೃಷ್ಣಾದಲ್ಲಿ ಸರ್ವಪಕ್ಷ ಸಭೆ ಕರೆಯಲಾಗಿದೆ. ರಾಜ್ಯದ ಮಾಜಿ ಮುಖ್ಯಮಂತ್ರಿಗಳು, ಕಾವೇರಿ ಜಲಾನಯನ ಪ್ರದೇಶದ ಸಂಸದರು, ಶಾಸಕರಿಗೆ ಆಹ್ವಾನ ನೀಡಲಾಗಿದೆ ಎಂದು ಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ʼಇಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಮುಂದೆ ಮೇಲ್ಮನವಿ ಸಲ್ಲಿಸಿದ್ದು, ಮುಂದೆ ಈ ವಿಚಾರವನ್ನು ಹೇಗೆ ತೆಗೆದುಕೊಂಡು ಹೋಗಬೇಕು ಎಂದು ಸರ್ವಪಕ್ಷ ಸಭೆಯಲ್ಲಿ ಚರ್ಚೆ ಮಾಡಲಾಗುವುದು. ಈ ವಿಚಾರವಾಗಿ ಸಂಸದರು, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ಸೋಮಣ್ಣ, ಜಗದೀಶ್ ಶೆಟ್ಟರ್, ಬೊಮ್ಮಾಯಿ ಅವರ ಜೊತೆ ಚರ್ಚೆ ಮಾಡಿದ್ದು, ಅವರು ರಾಜ್ಯದ ಹಿತಕ್ಕಾಗಿ ಶಕ್ತಿ ಮೀರಿ ಪ್ರಯತ್ನ ಮಾಡುತ್ತಿದ್ದಾರೆʼ ಎಂದು ತಿಳಿಸಿದರು.

ಕರ್ನಾಟಕ ಕಾಂಗ್ರೆಸ್ ನಾಯಕರ ಬದಲು ದೆಹಲಿ ಸರ್ಕಾರವನ್ನು ಭೇಟಿ ಮಾಡಿ ಎಂದು ತಮಿಳುನಾಡು ಸಿಎಂ ವಿಜಯ್ ಅವರಿಗೆ ಡಿಎಂಕೆ ನಾಯಕ ಅನ್ಬುಮಣಿ ಸಲಹೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ʼಆ ವಿಚಾರವಾಗಿ ಪ್ರತಿಕ್ರಿಯೆ ನೀಡುವುದಿಲ್ಲ. ನಮಗೆ ಪರಸ್ಪರ ಕಿತ್ತಾಟ ಮಾಡಲು ಇಷ್ಟವಿಲ್ಲ. ನೆಲದ ಕಾನೂನು ಇದೆ. ನಾವು ಪರಸ್ಪರ ಗೌರವಿಸಬೇಕು. ಇಡೀ ದೇಶ ಒಂದಾಗಿ ಕೆಲಸ ಮಾಡಬೇಕುʼ ಎಂದರು.

ಸಚಿವ ಸಂಪುಟ ವಿಸ್ತರಣೆ ಕುರಿತು ಬಿಜೆಪಿ ನಾಯಕರ ಟೀಕೆ ಬಗ್ಗೆ ಮಾತನಾಡಿದ ಅವರು, ʼಯಡಿಯೂರಪ್ಪನವರು ಕೂಡ ಸಚಿವ ಸಂಪುಟ ರಚನೆ ಮಾಡದೇ ಅಧಿಕಾರ ಮಾಡಿರಲಿಲ್ಲವೇ? ಆಗ ಅಪ್ಪ-ಮಗ ಅಧಿಕಾರವನ್ನು ಅನುಭವಿಸಲಿಲ್ಲವೇ?ʼ ಎಂದು ಮರುಪ್ರಶ್ನಿಸಿದರು.






