ಸ್ವತಃ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರೇ, ಜು.26ರ ಬಳಿಕ ಪಕ್ಷದ ಕೆಲಸ ಮಾಡಲು ಬದ್ಧ ಎಂಬ ಹೇಳಿಕೆ ನೀಡುವ ಮೂಲಕ, ಬಹುದಿನಗಳ ಬಿಜೆಪಿ ನಾಯಕತ್ವ ಬದಲಾವಣೆಯ ವಿಷಯ ಬಹುತೇಕ ಇತ್ಯರ್ಥವಾಗಿರುವ ಸಂದೇಶ ರವಾನೆಯಾಗಿದೆ.
ಹೀಗೆ ಮುಖ್ಯಮಂತ್ರಿ ರಾಜೀನಾಮೆಯ ಸುಳಿವು ಸಿಗುತ್ತಲೇ ಬಿಜೆಪಿಯ ರಾಜ್ಯ ಘಟಕದಲ್ಲಿ ಭಾರೀ ಸಂಚಲನ ಉಂಟಾಗಿದ್ದು, ಸಿಎಂ ಬೆಂಬಲಿಗರು ಮತ್ತು ಅವರ ವಿರೋಧಿ ಬಣದಲ್ಲಿ ಚಟುವಟಿಕೆಗಳು ಗರಿಗೆದರಿವೆ. ಜೊತೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಉರುಳಿಸಿ ಬಿಜೆಪಿಗೆ ಆಪರೇಷನ್ ಆಗಿ ಬಂದ ವಲಸಿಗ ಸಚಿವರ ಪಾಳೆಯದಲ್ಲಿ ಈ ಬೆಳವಣಿಗೆ ಭಾರೀ ಆತಂಕಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನೇ ನೆಚ್ಚಿ, ಅವರದೇ ಕಾರ್ಯಾಚರಣೆಯ ಮೂಲಕ ಹಿಂದಿನ ಪಕ್ಷ ಮತ್ತು ಆ ಪಕ್ಷ ನೀಡಿದ ಸ್ಥಾನಮಾನಗಳನ್ನು ಬಿಟ್ಟು ಅಧಿಕಾರ ಮತ್ತು ಹಣದ ಆಮಿಷದ ಮೇಲೆ ಪಕ್ಷಾಂತರ ಮಾಡಿದವರು, ಇದೀಗ ಸ್ವತಃ ಯಡಿಯೂರಪ್ಪ ಅವರೇ ಬದಿಗೆ ಸರಿದರೆ, ನಾಳೆ ತಮ್ಮ ಕಥೆ ಏನು ಎಂಬ ಆತಂಕ ಅವರಲ್ಲಿದೆ.
ಅಂತಹ ಆತಂಕದ ಹಿನ್ನೆಲೆಯಲ್ಲೇ; ತಮ್ಮ ಹತಾಶೆಯ ಯತ್ನವಾಗಿ ವಲಸಿಗರು ಸಾಮೂಹಿಕ ರಾಜೀನಾಮೆಗೆ ಮುಂದಾಗಿದ್ದರು. ಆ ನಡೆಯ ಹಿಂದೆ ಸಿಎಂ ಆಗಿ ಯಡಿಯೂರಪ್ಪ ಅವರೇ ಮುಂದುವರಿಯಬೇಕು, ಆ ಮೂಲಕ ಸದ್ಯ ಅವರಿಂದಾಗಿ ತಮಗೆ ಸಿಕ್ಕಿರುವ ಅವಕಾಶ ಮತ್ತು ಸ್ಥಾನಮಾನಗಳನ್ನು ಉಳಿಸಿಕೊಳ್ಳಬೇಕು ಎಂಬ ಲೆಕ್ಕಾಚಾರ ಒಂದು ಕಡೆಯಾದರೆ; ಪರಿಸ್ಥಿತಿ ಕೈಮೀರಿ ಸಿಎಂ ಬದಲಾದಲ್ಲಿ ಮುಂದಿನ ಸರ್ಕಾರದಲ್ಲಿ ತಾವು ಮೂಲೆಗುಂಪಾಗುವ ಅಪಾಯದಿಂದ ಪಾರಾಗುವ ತಂತ್ರವಾಗಿಯೂ ರಾಜೀನಾಮೆ ತಂತ್ರ ಹೆಣೆದಿದ್ದಾರೆ. ಹೀಗೆ ರಾಜೀನಾಮೆ ಪತ್ರ ಹಿಡಿದು ಮುಗುಮ್ಮಾಗಿ ಮಾಧ್ಯಮಗಳ ಮುಂದೆ ಕಾಣಿಸಿಕೊಳ್ಳುವ ಮೂಲಕ ಬಿಜೆಪಿ ಸ್ಥಳೀಯ ಮತ್ತು ದೆಹಲಿ ನಾಯಕರಿಗೆ, ತಮ್ಮ ಸಚಿವ ಸ್ಥಾನ ಮತ್ತು ಅವಕಾಶಗಳು ಕೈತಪ್ಪಿದರೆ ಯಾವುದೇ ಕ್ಷಣದಲ್ಲಿ ರಾಜೀನಾಮೆ ನೀಡಲು ತಾವು ಸಿದ್ಧ ಎಂಬ ಸಂದೇಶ ರವಾನಿಸುವ ಒಂದು ರೀತಿಯ ಬ್ಲ್ಯಾಕ್ ಮೇಲ್ ರಾಜಕಾರಣಕ್ಕೆ ವಲಸಿಗರು ಈಗಾಗಲೇ ಚಾಲನೆ ನೀಡಿದ್ದಾರೆ ಎನ್ನಲಾಗುತ್ತಿದೆ.
ಏಕೆಂದರೆ; ಬಿಜೆಪಿಯ ಅಧಿಕಾರ ಈಗಲೂ ಈ 17 ಮಂದಿ ವಲಸಿಗರು ಮತ್ತು ಇಬ್ಬರು ಪಕ್ಷೇತರರ ಬೆಂಬಲದ ಮೇಲೆಯೇ ನಿಂತಿದೆ. ಒಂದು ವೇಳೆ ಈ ವಲಸಿಗರು ಮತ್ತು ಪಕ್ಷೇತರರು ಒಂದಾಗಿ ಈ ಹಿಂದೆ ಜೆಡಿಎಸ್-ಕಾಂಗ್ರೆಸ್ ಸರ್ಕಾರವನ್ನು ಉರುಳಿಸಿದ ರೀತಿಯಲ್ಲಿ ಬಂಡಾಯದ ಬಾವುಟ ಹಾರಿಸಿ, ರಾಜೀನಾಮೆ ನೀಡಿ ಹೊರನಡೆದರೆ, ಮರುಕ್ಷಣವೇ ಸರ್ಕಾರ ಅಲ್ಪಮತಕ್ಕೆ ಕುಸಿದು ಉರುಳಲಿದೆ. ಹಾಗಾಗಿಯೇ ವಲಸಿಗರು ಈಗಲೂ ಬಹುತೇಕ ಒಗ್ಗಟ್ಟು ಪ್ರದರ್ಶಿಸುತ್ತಿರುವುದು ಮತ್ತು ಆ ಮೂಲಕ ಬಿಜೆಪಿ ಸರ್ಕಾರದ ನೆತ್ತಿಯ ಮೇಲಿನ ಕತ್ತಿಯಂತೆ ತೂಗಾಡುತ್ತಿದ್ದೇವೆ ತಾವು ಎಂಬ ಸಂದೇಶವನ್ನು ಆಗಾಗ ರವಾನಿಸುತ್ತಿರುವುದು. ಆ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಬದಲಾವಣೆ ಮತ್ತು ಹೊಸ ನಾಯಕರ ಆಯ್ಕೆಯ ವಿಷಯದಲ್ಲಿ ಬಿಜೆಪಿ ವರಿಷ್ಠರ ಮುಂದೆ ಕೇವಲ ಹಿರಿಯ ನಾಯಕರ ನಿರ್ಗಮನ ಮತ್ತು ಪರ್ಯಾಯ ನಾಯಕರ ಆಯ್ಕೆಯ ವಿಷಯ ಮಾತ್ರವಲ್ಲದೆ, ಈ ಬೇಲಿ ಮೇಲಿನ ‘ಮೆಕೆನಸ್ ಗೋಲ್ಡ್’ ತಂಡವನ್ನು ನಿಭಾಯಿಸುವ ಸವಾಲು ಕೂಡ ಇದೆ.
ಈ ನಡುವೆ, ರಾಜ್ಯ ನಾಯಕತ್ವ ಬದಲಾವಣೆಯ ವಿಷಯದಲ್ಲಿ ಎಲ್ಲವೂ ಅಂತಿಮವಾಗಿದೆ. ಜುಲೈ 26ರಂದು ಬೆಳಗ್ಗೆ 11ಕ್ಕೆ ಯಡಿಯೂರಪ್ಪ ರಾಜೀನಾಮೆ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸಲಿದ್ದು, ಆ ಸಂಬಂಧ ಈಗಾಗಲೇ ರಾಜ್ಯಪಾಲರ ಕಾಲಾವಕಾಶವನ್ನು ಕೂಡ ಕೇಳಲಾಗಿದೆ. ಆ ಹಿನ್ನೆಲೆಯಲ್ಲಿ ಅವರು ಬಿಜೆಪಿಯ 75 ವಯಸ್ಸಿನ ಮೇಲ್ಪಟ್ಟವರಿಗೆ ಅಧಿಕಾರ ನೀಡದಿರುವ ನಿಯಮವನ್ನು ತಮ್ಮ ವಿಷಯದಲ್ಲಿ ಸಡಿಸಿಲಿ 78-79 ವಯಸ್ಸಿನಲ್ಲೂ ಅಧಿಕಾರ ಕೊಟ್ಟಿದ್ದಾರೆ. ಅಂತಹ ನಿಯಮ ಮೀರಿ ಎರಡು ವರ್ಷ ಸಿಎಂ ಆಗಿ ಅವಕಾಶ ಕೊಟ್ಟಿದ್ದಾರೆ. ಹಾಗಾಗಿ ಇದೀಗ ಪಕ್ಷದ ಹಿತದೃಷ್ಟಿಯಿಂದ ವರಿಷ್ಠರು ಹೇಳುವ ಕೆಲಸ ಮಾಡಲು ಸಿದ್ಧ. ಜು,25ರಂದು ವರಿಷ್ಠರಿಂದ ಸೂಚನೆ ಬರಬಹುದು ಎಂದು ಕಾಯುತ್ತಿದ್ದೇನೆ. ಅವರ ಸೂಚನೆಯಂತೆ 26ರಂದು ಅವರ ಹೇಳಿದ ಕೆಲಸ ಮಾಡುತ್ತೇನೆ ಎಂದಿದ್ದಾರೆ.
Also read: ಆಧ್ಯಾತ್ಮ ಮಠೋದ್ಯಮ ಮತ್ತು ಅಧಿಕಾರ ರಾಜಕಾರಣ
ಆದರೆ, ಯಡಿಯೂರಪ್ಪ ಮೇಲ್ನೋಟಕ್ಕೆ ಹೇಳಿದಷ್ಟು ಸರಳವಾಗಿ ಈ ನಾಯಕತ್ವ ಬದಲಾವಣೆ ನಡೆಯಲಾರದು. ಏಕೆಂದರೆ ಸ್ವತಃ ಯಡಿಯೂರಪ್ಪ ಹೇಳಿರುವಂತೆ ಜು.25ರಂದು ಬರಲಿರುವ ಸಂದೇಶ ಮುಂದಿನ ಎಲ್ಲವನ್ನೂ ನಿರ್ಧರಿಸಲಿದೆ. ಆ ಕಾರಣಕ್ಕಾಗಿಯೇ ಮುಖ್ಯಮಂತ್ರಿಯಾಗಿ ತಾವು ಮುಂದುವರಿಯುವುದಿಲ್ಲ ಎಂಬುದು ಖಾತರಿಯಾಗಿದ್ದರೂ 25ರ ಸಂದೇಶಕ್ಕೆ ಕಾಯುತ್ತಿರುವುದಾಗಿ ಹೇಳುವ ಮೂಲಕ ಬಿಜೆಪಿ ವರಿಷ್ಠರು ಮತ್ತು ತಮ್ಮ ನಡುವೆ ಸದ್ಯ ಚಾಲ್ತಿಯಲ್ಲಿರುವ ಚೌಕಾಸಿಯ ಸುಳಿವು ನೀಡಿದ್ದಾರೆ. ಅಧಿಕಾರ ಬಿಟ್ಟುಕೊಡುವುದಕ್ಕೆ ಪ್ರತಿಯಾಗಿ ವರಿಷ್ಠರು ಪ್ರಸ್ತಾಪಿಸಿದ್ದ ರಾಜ್ಯಪಾಲರ ಹುದ್ದೆಯನ್ನು ಈಗಾಗಲೇ ತಿರಸ್ಕರಿಸಿರುವ ಯಡಿಯೂರಪ್ಪ, ಯಾವುದರ ಬಗ್ಗೆ ಹಗ್ಗಜಗ್ಗಾಟ ನಡೆಸುತ್ತಿದ್ದಾರೆ ಎಂಬುದು ಸದ್ಯದ ಕುತೂಹಲ.
ಮೂಲಗಳ ಪ್ರಕಾರ, ವರಿಷ್ಠರ ಸೂಚನೆಯಂತೆ ಸಿಎಂ ಸ್ಥಾನ ಬಿಟ್ಟುಕೊಡಲು ಒಪ್ಪಿರುವ ಯಡಿಯೂರಪ್ಪ, ಮಂದಿನ ಮುಖ್ಯಮಂತ್ರಿಯಾಗಿ ಯಾರನ್ನು ಆಯ್ಕೆ ಮಾಡುತ್ತೀರಿ ಎಂಬುದರ ಮೇಲೆ ಆ ಬಳಿಕದ ತಮ್ಮ ನಡೆ ನಿಂತಿದೆ. ತಮ್ಮ ಬಣದವರು, ಆಪ್ತರು ಮತ್ತು ತಮ್ಮ ಪರ ಗೌರವ ಭಾವನೆ ಹೊಂದಿರುವ ಪಕ್ಷದ ಹಿರಿಯ ಸಚಿವರುಗಳಲ್ಲಿ ಯಾರಾದರೂ ತಾವು ಪಕ್ಷಕ್ಕಾಗಿ ಮುಂದಿನ ದಿನಗಳಲ್ಲಿ ಕೆಲಸ ಮಾಡುವುದಾಗಿಯೂ, ಮತ್ತೆ ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸುವುದಾಗಿಯೂ ಹೇಳಿದ್ದಾರೆ. ಹಾಗೊಂದು ವೇಳೆ ತಮ್ಮ ಆ ಬೇಡಿಕೆ ಒಪ್ಪಿಕೊಳ್ಳದೆ ತಮ್ಮ ವಿರೋಧಿ ಪಾಳೆಯದಲ್ಲಿ ಗುರುತಿಸಿಕೊಂಡಿರುವ ಮತ್ತು ಕಳೆದ ಕೆಲವು ವರ್ಷಗಳಿಂದ ತಮ್ಮ ವಿರುದ್ಧ ಕತ್ತಿ ಮಸೆಯುತ್ತಿರುವ ನಾಯಕರಿಗೆ ಸಿಎಂ ಪಟ್ಟ ಕಟ್ಟಿದರೆ, ತಮ್ಮ ಮತ್ತು ತಮ್ಮ ಬೆಂಬಲಿಗರ ನಿರ್ಧಾರ ಬೇರೆಯೇ ಆಗಿರುತ್ತದೆ ಎಂಬುದನ್ನು ಕಳೆದ ವಾರದ ದೆಹಲಿ ಭೇಟಿಯ ವೇಳೆ ವರಿಷ್ಠರಿಗೆ ಹೇಳಿಯೇ ಬಂದಿದ್ದಾರೆ.
ಆ ಹಿನ್ನೆಲೆಯಲ್ಲಿಯೇ ನಾಯಕತ್ವ ಬದಲಾವಣೆಯ ವಿಷಯದಲ್ಲಿ ಈಗಾಗಲೇ ತೀರ್ಮಾನವಾಗಿದ್ದರೂ, ಮುಂದಿನ ನಾಯಕರು ಯಾರು ಎಂಬ ವಿಷಯದಲ್ಲಿ ಬಿಜೆಪಿ ವರಿಷ್ಠರು ಗೊಂದಲಕ್ಕೆ ಬಿದ್ದಿದ್ದಾರೆ. ಯಡಿಯೂರಪ್ಪ ಷರತ್ತಿನಂತೆ ಹೋದರೆ, ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಬಸವರಾಜ ಬೊಮ್ಮಾಯಿ, ಆರ್ ಅಶೋಕ್ ಅವರಲ್ಲಿ ಒಬ್ಬರನ್ನು ಸಿಎಂ ಮಾಡಬೇಕಾಗುತ್ತದೆ. ಆದರೆ, ಸಂಘಪರಿವಾರ ಮತ್ತು ಯಡಿಯೂರಪ್ಪ ವಿರೋಧಿ ಬಣದ ಆಯ್ಕೆಗಳು ಪ್ರಹ್ಲಾದ್ ಜೋಷಿ, ಸಿ ಟಿ ರವಿ ಮತ್ತು ಮುರುಗೇಶ್ ನಿರಾಣಿಯಾಗಿದ್ದಾರೆ. ಈ ಮೂವರೂ ಯಡಿಯೂರಪ್ಪ ವಿರೋಧಿ ಪಾಳೆಯದ ಪ್ರಮುಖರು. ಅದರಲ್ಲೂ ಸಿ ಟಿ ರವಿ ಅವರಂತೂ ಯಡಿಯೂರಪ್ಪ ವಿರುದ್ಧ ಕಳೆದ ಹತ್ತು ವರ್ಷಗಳಿಂದ ನಿರಂತರ ಪ್ರತಿವಾದಿ ಸ್ಥಾನದಲ್ಲೇ ಇದ್ದವರು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರ ಆಪ್ತರಾಗಿರುವ ಸಿಟಿ ರವಿ ಸೇರಿದಂತೆ ಯಾರೇ ವರಿಷ್ಠರ ಆಯ್ಕೆಯಾದರೂ ಆಗ ಯಡಿಯೂರಪ್ಪ ಮತ್ತು ಅವರ ಬೆಂಬಲಿಗರ ನಿರ್ಧಾರ ಖಂಡಿತವಾಗಿಯೂ ಬಿಜೆಪಿಗೆ ಮರ್ಮಾಘಾತ ನೀಡಲಿದೆ ಎನ್ನಲಾಗುತ್ತಿದೆ.
ಆ ಹಿನ್ನೆಲೆಯಲ್ಲಿ ಈಗ ನಿಜಕ್ಕೂ ಇಕ್ಕಟ್ಟಿಗೆ ಸಿಲುಕಿರುವುದು ಬಿಜೆಪಿ ವರಿಷ್ಠರು. ನಿತ್ಯ ಮಾಧ್ಯಮಗಳಲ್ಲಿ ಮುಂದಿನ ಸಿಎಂ ಸ್ಥಾನಕ್ಕೆ ಹತ್ತಾರು ಹೆಸರುಗಳು ಓಡಾಡುತ್ತಿದ್ದರೂ, ಅಸಲಿಗೆ ಏಕಕಾಲಕ್ಕೆ ಯಡಿಯೂರಪ್ಪ ಅವರನ್ನೂ ಸಂತೃಪ್ತಿಗೊಳಿಸುವುದು ಮತ್ತು ಅದೇ ಹೊತ್ತಿಗೆ ಪಕ್ಷ ಮತ್ತು ಸರ್ಕಾರದ ಹಿತದೃಷ್ಟಿಯಿಂದ ಸಮರ್ಥರನ್ನು ಅಧಿಕಾರದ ಕುರ್ಚಿಗೆ ಕೂರಿಸುವುದು ವರಿಷ್ಠರ ಮುಂದಿನ ಬಗೆಹರಿಯದ ಬಿಕ್ಕಟ್ಟಾಗಿದೆ.
ಆ ಹಿನ್ನೆಲೆಯಲ್ಲಿಯೇ ಜು.26ಕ್ಕೆ ರಾಜೀನಾಮೆ ನೀಡಲು ಸ್ವತಃ ಯಡಿಯೂರಪ್ಪ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದರೂ, ಸ್ವತಃ ವರಿಷ್ಠರು ಅಷ್ಟರಲ್ಲಿ ಸರ್ವಸಮ್ಮತ ಆಯ್ಕೆ ಪ್ರಕಟಿಸುವುದು ಅನುಮಾನಾಸ್ಪದವಾಗಿದೆ. ಹಾಗಾಗಿ ಕೆಲವು ದಿನಗಳ ಮಟ್ಟಿಗೆ ಯಡಿಯೂರಪ್ಪ ಅವರೇ ಬಿಜೆಪಿ ವರಿಷ್ಠರ ಪಾಲಿಗೆ ಅನಿವಾರ್ಯ ಆಯ್ಕೆಯಾದರೂ ಅಚ್ಚರಿ ಇಲ್ಲ. ಸದ್ಯ ಯಡಿಯೂರಪ್ಪ ವರಿಷ್ಠರ ಮುಂದಿಟ್ಟಿರುವ ಸವಾಲು ಹಾಗಿದೆ ಎನ್ನುತ್ತಿದೆ ಸಿಎಂ ಆಪ್ತ ವಲಯದ ಮಾಹಿತಿ!