ಸಿಎಂ ಬಿ.ಎಸ್ ಯಡಿಯೂರಪ್ಪ ಬದಲಾವಣೆ ವಿಚಾರವೀಗ ರೋಚಕ ತಿರುವು ಪಡೆದುಕೊಂಡಿದೆ. ಲಿಂಗಾಯತ ಸಮುದಾಯದ ಪ್ರಬಲ ನಾಯಕರು ಮತ್ತು ಕಾಂಗ್ರೆಸ್‌ನ ಹಿರಿಯ ರಾಜಕಾರಣಿಗಳಾದ ಶಾಮನೂರು ಶಿವಶಂಕರಪ್ಪ, ಎಂ.ಬಿ ಪಾಟೀಲ್ ಯಡಿಯೂರಪ್ಪ ಬೆನ್ನಿಗೆ ನಿಂತ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ಬಿಕ್ಕಟ್ಟು ಶುರುವಾಗಿದೆ.
ವೀರಶೈವ ಲಿಂಗಾಯತ ಸಮುದಾಯ ಬಿ.ಎಸ್ ಯಡಿಯೂರಪ್ಪರನ್ನು ಯಾವುದೇ ಕಾರಣಕ್ಕೂ ಸಿಎಂ ಸ್ಥಾನದಿಂದ ಕೆಳಗಿಳಿಸಬಾರದು. ಅದು ನಮಗೆ ಮಾಡುವ ಅವಮಾನ ಎಂಬ ಸಂದೇಶವನ್ನು ಬಿಜೆಪಿ ಹೈಕಮಾಂಡ್ ಮತ್ತು RSS ನಾಯಕರಿಗೆ ಸಾರಲು ಹೊರಟಿದೆ ಎನ್ನಲಾಗಿದೆ.

ಇತ್ತೀಚೆಗೆ ಪುತ್ರ ವಿಜಯೇಂದ್ರ ಜೊತೆಗೆ ದೆಹಲಿಗೆ ಭೇಟಿ ನೀಡಿದ್ದ ಬಿ.ಎಸ್ ಯಡಿಯೂರಪ್ಪ ಪ್ರಧಾನಿ ನರೇಂದ್ರ ಮೋದಿಯವರ ಮಾತಿಗೆ ಏನು ಎದುರಾಡದೆ ವಾಪಸ್ಸಾಗಿದ್ದರು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ನೇತೃತ್ವದ ಆರ್‌ಎಸ್ಎಸ್ ಬೆಂಬಲಿತ ಶಾಸಕರ ತಂಡ ತನ್ನನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಬೇಕಾದ ಎಲ್ಲಾ ತಂತ್ರಗಳು ರೂಪಿಸಿರುವುದು ಖಾತ್ರಿಯಾಗಿತ್ತು. ಹೀಗಾಗಿ ದೆಹಲಿಯಿಂದ ಸೈಲೆಂಟ್ ಆಗಿ ವಾಪಸ್ಸಾದ ಯಡಿಯೂರಪ್ಪ ತನ್ನ ಆಟ ಶುರು ಮಾಡಿದ್ದಾರೆ. ಇಡೀ ಲಿಂಗಾಯತ ಸಮುದಾಯವನ್ನು ಬಿಜೆಪಿ ವಿರುದ್ಧ ಎತ್ತಿ ಕಟ್ಟುತ್ತಿದ್ದಾರೆ.
Also Read:ಯಡಿಯೂರಪ್ಪರನ್ನು ಪದಚ್ಯುತಗೊಳಿಸಿದರೆ ಲಿಂಗಾಯತರ ಅಸಮಾಧಾನಕ್ಕೆ ಕಾರಣವಾಗುತ್ತದೆ- ಎಂಬಿ ಪಾಟೀಲ್
ತನ್ನನ್ನ ಸಿಎಂ ಸ್ಥಾನದಿಂದ ಕೆಳಗಿಳಿಸಿದರೆ ಲಿಂಗಾಯತ ಸಮುದಾಯದ ಯಾರಾದರೂ ಒಬ್ಬ ಪ್ರಬಲ ನಾಯಕರನ್ನು ಮುಖ್ಯಮಂತ್ರಿ ಮಾಡಲೇಬೇಕು ಎಂದು ಯಡಿಯೂರಪ್ಪ ಬೇಡಿಕೆ ಇಟ್ಟಿದ್ದಾರೆ. ಯಡಿಯೂರಪ್ಪರ ಈ ಬೇಡಿಕೆ ಹಿಂದೆ ಸಮುದಾಯದ ಮಠಾಧೀಶರು, ವಿವಿಧ ಪಕ್ಷಗಳಲ್ಲಿ ಇರುವ ಪ್ರಮುಖ ಲಿಂಗಾಯತ ನಾಯಕರು, ಉದ್ಯಮಿಗಳು ಇದ್ದಾರೆ ಎನ್ನಲಾಗಿದೆ.
76ನೇ ವಯಸ್ಸಿನಲ್ಲೂ ಯಡಿಯೂರಪ್ಪ 2019 ರಲ್ಲಿ ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದವರು. ತನ್ನ ಇಡೀ ಜೀವನವನ್ನು ಬಿಜೆಪಿಗಾಗಿ ಸವೆಸಿದರು. ಹೀಗಾಗಿ ಇವರನ್ನು ಈ ಅವಧಿ ಮುಗಿಯುವತ ನಕ ಸಿಎಂ ಸ್ಥಾನದಲ್ಲೇ ಇರಲು ಅವಕಾಶ ಮಾಡಿಕೊಡಬೇಕು. ಇಲ್ಲದೇ ಹೋದರೆ ಯಡಿಯೂರಪ್ಪನ ಸ್ಥಾನಮಾನಕ್ಕೆ ಸರಿಹೊಂದುವ ಯಾವುದಾದರೂ ಲಿಂಗಾಯತ ಸಮುದಾಯದ ನಾಯಕರನ್ನೇ ತಂದು ಕೂರಿಸಬೇಕು ಎಂಬ ಬೇಡಿಕೆ ಈಗ ಬಿಜೆಪಿ ಹೈಕಮಾಂಡಿಗೆ ತಲೆನೋವಾಗಿ ಪರಿಣಮಿಸಿದೆ.

ತನಗಲ್ಲದೇ ಹೋದರೆ ಸಮುದಾಯದ ನಾಯಕರಾದ ಮುರುಗೇಶ್ ನಿರಾಣಿ, ಬಿ.ವೈ ವಿಜಯೇಂದ್ರ, ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್, ಬಸವನಗೌಡ ಯತ್ನಾಳ್, ವಿ. ಸೋಮಣ್ಣ, ಎಂ.ಪಿ ರೇಣುಕಾಚಾರ್ಯ ಇವರಲ್ಲಿ ಯಾರಿಗಾದ್ರೂ ಸಿಎಂ ಸ್ಥಾನ ನೀಡಿ ಎಂದು ಯಡಿಯೂರಪ್ಪ ಹೈಕಮಾಂಡಿಗೆ ಸಂದೇಶ ರವಾನಿಸಿದ್ದಾರೆ. ಹೀಗಾಗಿ ಸಿಎಂ ಬಿ.ಎಸ್.ಯಡಿಯೂರಪ್ಪಗೆ ವೀರಶೈವ- ಲಿಂಗಾಯತ ಸಮುದಾಯದಿಂದ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.
ಸಮಾಜದ ಮಠಾಧಿಪತಿಗಳು, ಮುಖಂಡರು ಬಿಎಸ್‌ವೈ ನಾಯಕತ್ವ ಬೆಂಬಲಿಸಿ ಹೇಳಿಕೆ ನೀಡುತ್ತಿದ್ದಾರೆ. ಜತೆಗೆ ಅಖಿಲ ಭಾರತ ವೀರಶೈವ ಮಹಾಸಭಾ ಕೂಡ ಬೆಂಬಲ ಘೋಷಿಸಿದೆ. ಮಾಜಿ ಸಚಿವ ಎಂ.ಬಿ ಪಾಟೀಲ್, ಬಿಎಸ್‌ವೈ ಪರ ವಹಿಸಿ ಟ್ವೀಟ್ ಮಾಡಿದ್ದರು. ಇದರ ಮಧ್ಯೆ ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿದ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಮಾತುಕತೆ ನಡೆಸಿದರು.
Also Read: ಮುಖ್ಯಮಂತ್ರಿ ಬದಲಾವಣೆಗೆ ಕೈ ಹಾಕಿದರೆ ಬಿಜೆಪಿ ಇತಿಹಾಸ ಮುಗಿಯತ್ತೆ: ಶಾಮನೂರು ಶಿವಶಂಕರಪ್ಪ ಎಚ್ಚರಿಕೆ
ಸಿಎಂ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಮನೂರು ಶಿವಶಂಕರಪ್ಪ, ಯಡಿಯೂರಪ್ಪಗೆ ಮಹಾಸಭಾ ಬೆಂಬಲವಿದೆ. ಅವರನ್ನು ಬದಲಿಸಿದರೆ ಬಿಜೆಪಿ ನಿರ್ನಾಮವಾಗಲಿದೆ ಎಂಬ ಎಚ್ಚರಿಕೆಯನ್ನೂ ನೀಡಿದರು. ನಿಜಲಿಂಗಪ್ಪ, ವೀರೇಂದ್ರ ಪಾಟೀಲ್, ಜೆ.ಎಚ್ ಪಟೇಲ್, ಬೊಮ್ಮಾಯಿ ಅವರನ್ನು ಅಧಿಕಾರದಿಂದ ಇಳಿಸಿದಾಗ ಆದ ಘಟನೆ ನೆನಪಿಸಿ ಕೊಳ್ಳಬೇಕು. ಹಾಗಾಗಿ ಅಂಥದಕ್ಕೆ ಕೈಹಾಕಿದರೆ ನಿರ್ನಾಮವಾಗುತ್ತಾರೆ. ಯಡಿಯೂರಪ್ಪನವರೇ ಮುಂದುವರಿಯಬೇಕು ಎಂಬುದು ನಮ್ಮ ಅಪೇಕ್ಷೆ ಎಂದು ಎಚ್ಚರಿಕೆ ನೀಡಿದ್ದರು.

ಇನ್ನೊಂದೆಡೆ ಬಿಎಸ್‌ವೈ ನಾಯಕತ್ವ ಬದಲಾವಣೆ ಮಾಡಬೇಡಿ, ಬದಲಾವಣೆ ಮಾಡಿದರೆ ಬಿಜೆಪಿಗೆ ಕೆಟ್ಟ ದಿನ ಕಾದಿದೆ. ಬಿಎಸ್‌ವೈ ಸಮರ್ಥ ನಾಯಕ. ಯಡಿಯೂರಪ್ಪ ಬದಲಾವಣೆ ಹಿಂದೆ ದುರುದ್ದೇಶ ಇದೆ. ಹೀಗಾಗಿ ಬಿಜೆಪಿ ಹೈಕಮಾಂಡ್ ಇದೊಂದು ಎಚ್ಚರಿಕೆ, ಯಾವುದೇ ಕಾರಣಕ್ಕೂ ಬಿಎಸ್‌ವೈ ಬದಲಾವಣೆ ಬೇಡ ಎಂದಿದ್ದಾರೆ ಸಮುದಾಯದ ಮಠಾಧೀಶರು.
ಹೀಗಿರುವಾಗ ಬಿ.ಎಲ್ ಸಂತೋಷ್ ಮತ್ತು ತಂಡ ಬ್ರಾಹ್ಮಣರಿಗೆ ಸಿಎಂ ಪಟ್ಟ ನೀಡಬೇಕು ಎಂದು ಪಟ್ಟು ಹಿಡಿದಿದೆ. ಹೀಗಾಗಿ ಶಾಸಕ ಸುರೇಶ್ ಕುಮಾರ್, ವಿಶ್ವೇಶ್ವರ ಹೆಗಡೆ ಕಾಗೇರಿ, ಪ್ರಹ್ಲಾದ್ ಜೋಶಿಯವರು ಸಿಎಂ ರೇಸಿನಲ್ಲಿದ್ದಾರೆ. ಇದೇ ವೇಳೆ ಒಕ್ಕಲಿಗ ಸಮುದಾಯದ ಡಿಸಿಎಂ ಅಶ್ವಥ್ ನಾರಾಯಣ್, ಆರ್. ಅಶೋಕ್, ಡಿ.ವಿ ಸದಾನಂದ ಗೌಡ ತಮ್ಮ ಜಾತಿಯಡಿ ಸಿಎಂ ಗಾದಿ ಕೇಳುತ್ತಿದ್ದಾರೆ. ಇದು ಬಿಜೆಪಿಯೊಳಗಡೆ ಒಂದು ಸಂಚಲನವನ್ನೇ ಸೃಷ್ಟಿ ಮಾಡಿದೆ.
ಸಿಎಂ ವಿಚಾರ ಹೀಗೆ ಚರ್ಚೆಯಾಗುತ್ತಿದ್ದರೆ ಸಿಪಿ ಯೋಗೇಶ್ವರ್ ಹೊರತುಪಡಿಸಿ ಉಳಿದ ಎಲ್ಲಾ ವಲಸಿಗ ಸಚಿವರು ಯಡಿಯೂರಪ್ಪ ಪರ ನಿಂತಿದ್ದಾರೆ. ಯಾವುದೇ ಸಂದರ್ಭ ಬಂದರೂ ನಾವೇ ಬಿಎಸ್‌ವೈ ಪರ ಎಂದು ಘೋಷಿಸಿದ್ದಾರೆ. ಒಂದು ವೇಳೆ ಯಡಿಯೂರಪ್ಪ ಬದಲಾದರೆ ನಮ್ಮ ರಾಜಕೀಯ ಭವಿಷ್ಯ ಅತಂತ್ರ ಸ್ಥಿತಿಗೆ ಬರುತ್ತದೆ ಎಂಬ ಅರಿವು ಈಗಾಗಲೇ ಇವರಿಗೆ ಬಂದಾಗಿದೆ.

ಹೈಕಮಾಂಡ್ ಅಂದುಕೊಂಡಂತೆ ನಡೆದರೆ ಸಿಎಂ ಯಡಿಯೂರಪ್ಪ ಆಂಧ್ರದ ರಾಜ್ಯಪಾಲರಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದರೂ, ಯಡಿಯೂರಪ್ಪನವರೇ ಸಿಎಂ ಆಗಿ ಇನ್ನಷ್ಟು ಮುಂದುವರಿಯುವ ಸಾಧ್ಯತೆಯನ್ನು ಸಂಪೂರ್ಣವಾಗಿ ಅಲ್ಲಗೆಳೆಯಲಾಗುತ್ತಿಲ್ಲ. ಯಾಕೆಂದರೆ, ಯಡಿಯೂರಪ್ಪ ಅವರ ಬದಲಾವಣೆ ಚರ್ಚೆಗೆ ದೀರ್ಘ ಹಿನ್ನೆಲೆ ಇರುವುದರಿಂದ ಹಾಗೂ, ಇನ್ನೇನು ಬದಲಾವಣೆ ಆಗಿಯೇ ಬಿಡುತ್ತಾರೆಂಬಂತಹ ಸನ್ನಿವೇಶ ಎದುರಾದಗಲೂ ಯಡಿಯೂರಪ್ಪ ಯಾವುದೋ ಒಂದು ರೀತಿ ತಮ್ಮ ಖುರ್ಚಿ ಉಳಿಸಿಕೊಂಡು ಬಂದಿದ್ದಾರೆ.
ಅದಾಗ್ಯೂ, ಒಂದು ವೇಳೆ ಯಡಿಯೂರಪ್ಪ ಅವರು ಸಿಎಂ ಸ್ಥಾನದಿಂದ ಕೆಳಗಿಳಿದರೆ ಬ್ರಾಹ್ಮಣ ಸಮುದಾಯದ ಪ್ರಹ್ಲಾದ್ ಜೋಶಿ ಅಥವಾ ವಿಶ್ವೇಶ್ವರ ಹೆಗಡೆ ಕಾಗೇರಿ ಮುಖ್ಯಮಂತ್ರಿಯಾಗೋದು ಬಹುತೇಕ ಪಕ್ಕಾ. ಇದರಿಂದ ಬಿಜೆಪಿ ಒಡೆದು ಹೋಗಿ ಮಧ್ಯಂತರ ಚುನಾವಣೆಯೂ ನಡೆಯಬಹುದು. ಇದು ರಾಜ್ಯಪಾಲ ಆಳ್ವಿಕೆಯ ಸಾಧ್ಯತೆಗೂ ಕಾರಣವಾಗಬುದು.