ರಾಜ್ಯ ಸರ್ಕಾರದಲ್ಲಿ ಸಚಿವ ಸ್ಥಾನದ ಅದಲು-ಬದಲು ಪ್ರಹಸನ ಮುಂದುವರಿದಿದ್ದು, ಇದೀಗ ಮತ್ತೊಮ್ಮೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ಸಂಪುಟದ ಇಬ್ಬರು ಸಚಿವರ ಖಾತೆ ಬದಲಾವಣೆ ಮಾಡಿದ್ದಾರೆ.
ಈ ಮೊದಲು ಖಾತೆ ಬದಲಾವಣೆಯಿಂದ ಅಸಮಾಧಾನಗೊಂಡಿದ್ದ ಸಚಿವ ಜೆ.ಸಿ. ಮಾಧುಸ್ವಾಮಿ ರಾಜೀನಾಮೆ ಎಚ್ಚರಿಕೆ ನೀಡಿದ ಬೆನ್ನಲ್ಲೇ, ಸಿಎಂ ಬಿಎಸ್‌ವೈ ಮಾಧುಸ್ವಾಮಿ ಹಾಗೂ ಸಿ.ಪಿ ಯೋಗೇಶ್ವರ್ ಅವರ ಖಾತೆ ಬದಲಾವಣೆ ಮಾಡಿದ್ದಾರೆ. ಈ ಬಾರಿ ಸಣ್ಣ ನೀರಾವರಿ ಇಲಾಖೆ ಪಡೆದುಕೊಂಡಿದ್ದಾರೆ.
ಸೋಮವಾರ ಮಧ್ಯಾಹ್ನ ವೈದ್ಯಕೀಯ ಖಾತೆ ಹಿಂಪಡೆದಿದ್ದ ಸಿಎಂ ಬಿಎಸ್‌ವೈ, ಮಾಧುಸ್ವಾಮಿಗೆ ಪ್ರವಾಸೋದ್ಯಮ ಖಾತೆ ನೀಡಿದ್ದರು. ಈಗ ಪ್ರವಾಸೋದ್ಯಮ ಮತ್ತು ಪರಿಸರ ಖಾತೆ ಸಿಪಿ ಯೋಗೇಶ್ವರ್‌ಗೆ ನೀಡಿ, ಮಾಧುಸ್ವಾಮಿಗೆ ಸಣ್ಣ ನೀರಾವರಿ ಖಾತೆ ನೀಡಿದ್ದಾರೆ. ಸಣ್ಣ ನೀರಾವರಿ ಖಾತೆಗೆ ಪಟ್ಟು ಹಿಡಿದಿದ್ದ ಮಾಧುಸ್ವಾಮಿ ಸದ್ಯ ಸಮಾಧಾನಗೊಂಡಿದ್ದಾರೆ.
ತನ್ನ ಕೈಯಿಂದ ಜೆ.ಸಿ. ಮಾಧುಸ್ವಾಮಿಗೆ ಹೋಗಿದ್ದ ವೈದ್ಯಕೀಯ ಶಿಕ್ಷಣ ಖಾತೆಯನ್ನು ವಾಪಸ್ ಪಡೆಯುವಲ್ಲಿ ಡಾ.ಕೆ.ಸುಧಾಕರ್ ಸೋಮವಾರ ಬೆಳಗ್ಗೆ ಯಶಸ್ವಿಯಾಗಿದ್ದರು. ಆ ಮೂಲಕ ಸುಧಾಕರ್‌ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜತೆಗೆ ವೈದ್ಯಕೀಯ ಶಿಕ್ಷಣ ಖಾತೆಯೂ ಸಿಕ್ಕಂತಾಗಿದೆ. ಇನ್ನು ಖಾತೆ ಅದಲು ಬದಲು ಆಗುವ ಬಗ್ಗೆ ಸೋಮವಾರ ಬೆಳಗ್ಗೆಯೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಗರಂ ಆಗಿದ್ದ ಸಚಿವ ಮಾಧುಸ್ವಾಮಿ, ರಾಜೀನಾಮೆ ನೀಡುವುದಾಗಿ ಬೆದರಿಕೆ ಒಡ್ಡಿದ್ದರು. ಮಾಧುಸ್ವಾಮಿಯ ಆಕ್ರೋಶ ಶಮನಕ್ಕೆ ಯತ್ನಿಸಿದ್ದ ಸಿಎಂ, ಪ್ರವಾಸೋದ್ಯಮದ ಜತೆಗೆ ಪರಿಸರ ವಿಜ್ಞಾನ ಖಾತೆಯನ್ನೂ ಕೊಟ್ಟಿದ್ದರು.