ಮಂಡ್ಯ: ಸಕ್ಕರೆ ಜಿಲ್ಲೆ ಮಂಡ್ಯದಲ್ಲಿ ಬಿಜೆಪಿಯ ಎರಡನೇ ಹಂತದ ಜನಸಂಕಲ್ಪ ಯಾತ್ರೆ ಮತ್ತು ಬಿಜೆಪಿ ಕಾರ‍್ಯಕರ್ತರ ಬೃಹತ್ ಸಮಾವೇಶಕ್ಕೆ ಕ್ಷಣಗಣನೆ ಆರಂಭವಾಗಿದೆ. ರಾಜ್ಯ ಪ್ರವಾಸಕ್ಕಾಗಿ ಗುರುವಾರ ರಾತ್ರಿ ಬೆಂಗಳೂರಿಗೆ ಆಗಮಿಸಿದ ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆತ್ಮೀಯವಾಗಿ ಬರಮಾಡಿಕೊಂಡರು
ಮಂಡ್ಯ ವಿಶ್ವವಿದ್ಯಾಲಯ ಆವರಣದಲ್ಲಿ ಡಿ.30ರಂದು ನಡೆಯಲಿರುವ ಯಾತ್ರೆಯಲ್ಲಿ ಬಿಜೆಪಿಯ ರಾಜಕೀಯ ಚಾಣಾಕ್ಷ ಎಂದೇ ಹೆಸರಾದ ಕೇಂದ್ರದ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಪಾಲ್ಗೊಳ್ಳುತ್ತಿರುವುದು ವಿಶೇಷ. ಮದ್ದೂರು ತಾಲೂಕು ಗೆಜ್ಜಲಗೆರೆಯ ಮನ್‌ಮುಲ್ ಆವರಣದಲ್ಲಿ ನಿರ್ಮಿಸಿರುವ ಮೆಗಾಡೇರಿ ಉದ್ಘಾಟನೆಗೆ ಮೂರು ತಿಂಗಳ ಹಿಂದೆಯೇ ಅಮಿತ್ ಶಾ ಅವರು ಬರಬೇಕಿತ್ತು. ಇದೀಗ ಜನಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸುವ ಜತೆಗೆ ಮೆಗಾ ಡೇರಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಬೆಳಗ್ಗೆ 10.30ಕ್ಕೆ ನಡೆಯುವ ಸಮಾರಂಭದಲ್ಲಿ ಮೆಗಾಡೇರಿಯನ್ನು ಉದ್ಘಾಟಿಸಿದ ಬಳಿಕ ಮಧ್ಯಾಹ್ನ 1.30ಕ್ಕೆ ಜನಸಂಕಲ್ಪ ಯಾತ್ರೆಗಾಗಿ ಮಂಡ್ಯಕ್ಕೆ ಬರಲಿದ್ದಾರೆ.
ಜನಸಂಕಲ್ಪ ಯಾತ್ರೆ ಮತ್ತು ಬಿಜೆಪಿ ಕಾರ‍್ಯಕರ್ತರ ಬೃಹತ್ ಸಮಾವೇಶಕ್ಕಾಗಿ ನಗರದ ಮಂಡ್ಯ ವಿವಿ ಆವರಣದಲ್ಲಿ ಬೃಹತ್ ವೇದಿಕೆ ಹಾಕಲಾಗಿದೆ. ಹಾಗೆಯೇ ಪಕ್ಷದ ಕಾರ‍್ಯಕರ್ತರು, ಮುಖಂಡರು ಮತ್ತು ಸಾರ್ವಜನಿಕರು ಕುಳಿತುಕೊಳ್ಳಲು ಅನುಕೂಲವಾಗುವಂತೆ ವೇದಿಕೆ ಎದುರು ಬೃಹತ್ ಪೆಂಡಾಲ್ ಮತ್ತು ಎದುರಿನ ಮತ್ತೊಂದು ಮೈದಾನದಲ್ಲಿ ಪೆಂಡಾಲ್ ಹಾಕಲಾಗಿದೆ. ಮೊದಲ ಹಂತದಲ್ಲಿ ಡಿ.6ರಂದು ಮದ್ದೂರು, ಪಾಂಡವಪುರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಜನಸಂಕಲ್ಪ ಯಾತ್ರೆ ನಡೆದಿತ್ತು. ಇದೀಗ 2ನೇ ಹಂತದ ಯಾತ್ರೆಗೆ ಅಮಿತ್ ಶಾ ಅವರು ಆಗಮಿಸುತ್ತಿರುವುದು ಮಂಡ್ಯ ಮಾತ್ರವಲ್ಲದೆ ಹಳೆ ಮೈಸೂರು ಭಾಗದಲ್ಲಿ ದೊಡ್ಡ ಸದ್ದು ಮಾಡಿದೆ











