ಮೋದಿ ಬಂದ ಮೇಲೆ ಸಬ್ಕಾ ಸಾಥ್ ಸಬ್ಕಾ ವಿಕಾಸ್ ನಹೀ ಹೇ ಬದಲಾಗಿ ಸಬ್ಕಾ ಸರ್ವನಾಶ ಆಗಿದೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಧಾನಸಭೆಯಲ್ಲಿ ಭಾರೀ ಗದ್ದಲಕ್ಕೆ ಕಾರಣವಾಯಿತು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಸಿಎಂ ಬೊಮ್ಮಾಯಿ ನಡುವೆ ಬಿರುಸಿನ ಆರೋಪ ಪ್ರತ್ಯಾರೋಪಗಳ ವಾಕ್ಸಮರವೇ ನಡೆದವು.
ಬಜೆಟ್ ಮೇಲಿನ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಸಬ್ಕಾ ಸಾಥ್ ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ಎಂದು ಮೋದಿ ಹೇಳುತ್ತಾರೆ.ಅವರು ಅಧಿಕಾರಕ್ಕೆ ಬಂದ ಮೇಲೆ ಸಬ್ಕಾ ಸಾಥ್ ಸಬ್ಕಾ ವಿಕಾಸ್ ನಹೀ ಹೇ, ಸಬ್ಕಾ ಸರ್ವನಾಶ ಆಗಿದೆ. ರಾಷ್ಟ್ರದ ಆಸ್ತಿಗಳು ಖಾಸಗೀಕರಣ ಆಗುತ್ತಿದೆ. ಕಳೆದ ಎರಡು ವರ್ಷದಲ್ಲಿ 4.30 ಕೋಟಿ ಜನ ಬಡವರಾಗಿದ್ದಾರೆ. ದೇಶದಲ್ಲಿ ನಿರುದ್ಯೋಗ ಕಾಡುತ್ತಿದೆ. ಇದಕ್ಕೆ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಕಾರಣ ಎಂದು ಸಾಲು ಸಾಲು ಆರೋಪಗಳನ್ನು ಮಾಡಿ ಕಿಡಿಕಾರಿದ್ದರು.
ಸಿದ್ದರಾಮಯ್ಯ ಮಾತಿನಿಂದ ಪ್ರತ್ಯುತ್ತರಿಸಿದ ಸಿಎಂ ಬೊಮ್ಮಾಯಿ, ಕಾಂಗ್ರೆಸ್ ನೀತಿಯಿಂದಲೇ ಆರ್ಥಿಕ ಸಂಕಷ್ಟ ಎದುರಾಗಿದೆ. WTO ಒಪ್ಪಂದ ಯಾರು ಮಾಡಿದ್ದು?. ನವರತ್ನಗಳು ಮಾರಾಟ ಮಾಡಲು ಆರಂಭವಾಗಿದ್ದು ಯಾರ ಕಾಲದಲ್ಲಿ? ಎಂದು ಪ್ರಶ್ನಿಸಿದರು. ನಿಮ್ಮ ಸರ್ಕಾರ ಗರೀಬಿ ಹಟಾವೋ ಅಂದಿತ್ತು ಕಹಾ ಗಯಾ ಗರೀಬ್? ಗರೀಬ್ ಔರ್ ಗರೀಬ್ ಬನ್ ಗಯಾ. ಪೂರಾ ದೇಶ್ ಗರೀಬ್ ಬನ್ ಗಯಾ ಆದರೆ ನಮ್ಮ ಸರ್ಕಾರ ಜನರನ್ನು ಬಡತನ ರೇಖೆಗಿಂತ ಮೇಲೆ ತರುವ ಪ್ರಯತ್ನ ಮಾಡುತ್ತಿದೆ ಎಂದು ಸಿಎಂ ವಾಗ್ದಾಳಿ ನಡೆಸಿದರು.

ಇದಕ್ಕೆ ಮತ್ತೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ವಾಜಪೇಯಿ ದೇಶ ಪ್ರಕಾಶಿಸುತ್ತಿದೆ ಎಂದಿದ್ದರು ಎಲ್ಲಿ ಎಂದಿದ್ದಕ್ಕೆ? ಸಿಎಂ ಬೊಮ್ಮಾಯಿ, ಕಂಟ್ರಿ ಶೈನಿಂಗ್ ಆಗಿರುವುದರಿಂದಲೇ ಚತುಷ್ಪತ ರಸ್ತೆ ಆಗಿರುವುದು ದೇಶದಲ್ಲಿ. ಉದಾರೀಕರಣ, ಖಾಸಗೀಕರಣ ಮಾಡಿದ್ದು ಯಾರು? ಇಂದಿನ ಸಾಲದ ಮೂಲ ಕಾಂಗ್ರೆಸ್. ಮನಮೋಹನ್ ಸಿಂಗ್ ಆಡಳಿತದಲ್ಲಿ ಮಾರಾಟ ಶುರುವಾಗಿದೆ ಎಂದು ಸಿಎಂ ಬೊಮ್ಮಾಯಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.