ಉಗ್ರ ಸಂಘಟನೆ ಆಲ್ಖೈದಾ ಮುಖ್ಯಸ್ಥ ಅಲ್ ಜವಾಹಿರಿ ಭಾಷಣದ ವಿಡಿಯೋ ತುಣುಕಿನ ನಿಖರತೆ ಬಗ್ಗೆ ಪರಿಶೀಲಿಸಲು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಮೈಸೂರು ವಿಮಾನ ನಿಲ್ದಾಣದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಲ್ ಖೈದಾ ಮುಖ್ಯಸ್ಥ ಜವಾಹಿರಿ ಹಿಜಾಬ್ ವಿವಾದದ ಕುರಿತು ಮಾತನಾಡಿದ್ದಾರೆ ಎನ್ನಲಾದ ವೀಡಿಯೊ ಬಗ್ಗೆ ವಿಪಕ್ಷ ನಾಯಕರ ಅನುಮಾನ ಕುರಿತು ಪ್ರತಿಕ್ರಿಯಿಸಿದರು.
ದೇಶ, ರಾಜ್ಯದ ಕಾನೂನಿನ ವಿರುದ್ಧ ಅನಾವಶ್ಯಕವಾಗಿ ಹಲವಾರು ವಿಷಯಗಳನ್ನು ಪ್ರಾರಂಭ ಮಾಡಿ ಜನರಲ್ಲಿ ಆಶಾಂತಿ ಗೊಂದಲವನ್ನು ಮೂಡಿಸುವ ಶಕ್ತಿಯ ಹಿಂದಿನಿಂದಲೂ ಕೆಲಸ ಮಾಡುತ್ತಾ ಬಂದಿದೆ. ಅದರ ಭಾಗವಾಗಿ ಅಲ್ ಖೈದಾ ದಿಂದ ಎಂದು ಹೇಳಿಕೊಂಡಿರುವ ವಿಡಿಯೋ ತುಣುಕಿನಲ್ಲಿ ಅವರ ಅಭಿಪ್ರಾಯವನ್ನು ಸ್ಪಷ್ಟವಾಗಿ ವ್ಯಕ್ತಿಪಡಿಸಿದ್ದಾರೆ ಎಂದರು.
ಅಲ್ ಖೈದಾ ಹೇಳಿಕೆ ಹಿಂದೆ ಆರ್ ಎಸ್ ಎಸ್ ನ ಕೈವಾಡವಿದೆ ಎಂದು ವಿರೋಧಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಯಲ್ಲಿ ಯಾವುದೇ ತರ್ಕ ಹಾಗೂ ಆಧಾರ ಇಲ್ಲ. ಅಲ್ ಖೈದಾ ಹೇಳಿಕೆ ಬಹಿರಂಗವಾದರೆ ಸಿದ್ಧರಾಮಯ್ಯ ಅವರು ಗಲಿಬಿಲಿ ಆಗುತ್ತಿರುವುದೇಕೆ ಎನ್ನುವ ಮೂಲಭೂತ ಪ್ರಶ್ನೆ ಉದ್ಭವಿಸುತ್ತಿದೆ ಎಂದು ಅವರು ಹೇಳಿದರು.