ಕೈಮಗ್ಗ ನೇಕಾರರಿಗೆ ತಲಾ 5,000 ರೂ. ನೀಡುವ ನೇಕಾರ ಸಮ್ಮಾನ್ ಯೋಜನೆಗೆ ಶುಕ್ರವಾರ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಗೃಹಕಚೇರಿ ಕೃಷ್ಣಾದಲ್ಲಿ (ನೇರ ನಗದು ವರ್ಗಾವಣೆ ಮಾಡುವ ಮುಖಾಂತರ) ಚಾಲನೆ ನೀಡಿದ್ದಾರೆ.
ನೇಕಾರ ಸಮ್ಮಾನ್ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದ ಸಿಎಂ ನೇಕಾರಿಕೆಯನ್ನು ಉನ್ನತೀಕರಣಗೊಳಿಸಬೇಕು, ಉಳಿಸಬೇಕು ಎಂಬುದು ಬಹಳ ಮುಖ್ಯ ಸಂಗತಿಯಾಗಿದೆ. ನೇಕಾರರ ಕಾಳಜಿ ವಹಿಸುವುದು ನಮ್ಮ ಕರ್ತವ್ಯ. ಆದ್ದರಿಂದ ಸರ್ಕಾರವು ನೇಕಾರ ಸಮ್ಮಾನ್ ಯೋಜನೆಯಡಿ ಆರ್ಥಿಕ ನೆರವನ್ನು ರೂ.2,000/- ಗಳಿಂದ ರೂ.5,000/- ಗೆ ಹೆಚ್ಚಿಸಿದೆ ಎಂದು ತಿಳಿಸಿದ್ದಾರೆ.
ನೇಕಾರರಿಗೆ ತಲಾ 50,000 ರೂ.ವರೆಗೂ ಧನಸಹಾಯ ನೀಡುವ ‘ಕಾಯಕ’ ಎಂಬ ಕಾರ್ಯಕ್ರಮ ರೂಪಿಸಲಾಗಿದೆ. ಇದರ ಲಾಭವನ್ನು ನೇಕಾರರು ಪಡೆದುಕೊಳ್ಳಬೇಕು. ಅಲ್ಲದೆ, ನೇಕಾರರ ಮಕ್ಕಳಿಗೆ ‘ವಿದ್ಯಾನಿಧಿ’ ಯೋಜನೆ ಇದೆ. ಈಗಾಗಲೇ ಗುರುತಿಸಲಾಗಿರುವ 46,000 ಕುಟುಂಬಗಳ ಮಕ್ಕಳ ಬಗ್ಗೆ ದಾಖಲೆಗಳನ್ನು ಪಡೆದುಕೊಂಡು ಕೂಡಲೇ ಮೊತ್ತವನ್ನು ಬಿಡುಗಡೆ ಮಾಡುವ ಕಾರ್ಯ ಮಾಡಲಾಗುವುದು ಎಂದು ಹೇಳಿದ್ದಾರೆ.
ಜವಳಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಮಾತನಾಡಿ ಕೈಮಗ್ಗ ನೇಕಾರರಿಗೆ ನೆರವು ನೀಡಿದಂತೆಯೇ ವಿದ್ಯುತ್ ಮಗ್ಗದವರಿಗೂ ನೆರವು ನೀಡಲು ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು. ಈ ಸಂಬಂಧವಾಗಿ ಹಾಗೂ ನೇಕಾರರ ಅಭಿವೃದ್ಧಿ, ಸಮಸ್ಯೆ ಕುರಿತಂತೆ ಚರ್ಚಿಸಿ, ಅವರಿಗೆ ಮತ್ತಷ್ಟು ಬಲ ತುಂಬುವ ನಿಟ್ಟಿನಲ್ಲಿ ನಾಳೆ ಮಾನ್ಯ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಮಹತ್ತರ ಸಭೆ ನಡೆಯಲಿದೆ. ನೇಕಾರರ ಪ್ರತಿನಿಧಿಗಳು, ಶಾಸಕರು ಹಾಗೂ ಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ನೇಕಾರ ಸಮ್ಮಾನ ಮೊತ್ತವನ್ನು ಹೆಚ್ಚಿಸಬೇಕು ಎಂಬುದು ನೇಕಾರರ ಹಲವು ವರ್ಷಗಳ ಬೇಡಿಕೆಯಾಗಿತ್ತು. ಈ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳು ಒಳ್ಳೆಯ ನಿರ್ಣಯ ಕೈಗೊಂಡಿದ್ದಾರೆ. ನೇಕಾರರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ನೀಡುವ ಬಹು ದೊಡ್ಡ ನಿರ್ಣಯವನ್ನೂ ಮಾನ್ಯ ಮುಖ್ಯಮಂತ್ರಿಗಳು ಕೈಗೊಂಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಕೈಮಗ್ಗ ನೇಕಾರರ ಚಟುವಟಿಕೆಗಳ ಪಾರಂಪರಿಕ ಕಲೆ ಮತ್ತು ಅವರ ಶ್ರಮವನ್ನು ಪರಿಗಣಿಸಿ ಹಾಗೂ ಕೋವಿಡ್-19 ಮಹಾಮಾರಿ ಮತ್ತು ಆರ್ಥಿಕ ಹಿನ್ನೆಡೆಯಿಂದ ಸಂಕಷ್ಟದಲ್ಲಿರುವ ಕೈಮಗ್ಗ ನೇಕಾರರಿಗೆ 2020-21 ನೇ ಸಾಲಿನಿಂದ ಅನ್ವಯವಾಗುವಂತೆ, ‘ನೇಕಾರ ಸಮ್ಮಾನ್’ ಎಂಬ ಹೊಸ ಯೋಜನೆಯನ್ನು ಘೋಷಣೆ ಮಾಡಲಾಗಿದೆ.
021-22 ನೇ ಸಾಲಿನಲ್ಲಿ ನೇಕಾರ ಸಮ್ಮಾನ್ ಯೋಜನೆಯಡಿಯಲ್ಲಿ 49,544 ನೇಕಾರರಿಗೆ 990.88 ಲಕ್ಷ ರೂ.ಗಳನ್ನು ಡಿ.ಬಿ.ಟಿ. ಮೂಲಕ ಬಿಡುಗಡೆ ಮಾಡಲಾಗಿದೆ. 2022-23 ನೇ ಸಾಲಿನ ಆಯವ್ಯಯದನ್ವಯ ನೋಂದಾಯಿತ ಕೈಮಗ್ಗ ನೇಕಾರರಿಗೆ ನೇಕಾರ ಸಮ್ಮಾನ್ ಯೋಜನೆಯಡಿ ಆರ್ಥಿಕ ನೆರವನ್ನು ರೂ.2,000/- ಗಳಿಂದ ರೂ.5,000/- ಗಳಿಗೆ ಹೆಚ್ಚಿಸಿದೆ. ಇಲ್ಲಿಯವರೆಗೆ 46,864 ಅರ್ಜಿಗಳನ್ನು ಪರಿಶೀಲಿಸಿ ಅನುಮೋದನೆ ನೀಡಲಾಗಿದೆ.
