2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನೊಂದು ದಿನ ಬಾಕಿ ಇರುವಂತೆ, ಇಂದು ಸಿಎಂ ಬಸವರಾಜ ಬೊಮ್ಮಾಯಿ ಶಿಗ್ಗಾಂವಿ ಕ್ಷೇತ್ರದ ಕೋಣನಕೇರಿ, ಚಂದಾಪುರ, ಜಕ್ಕಿನಕಟ್ಟಿ, ಯತ್ತಿನಹಳ್ಳಿ, ದುಂಢಸಿ, ಮಮದಾಪುರ ತಾಂಡಾಗಳಿಗೆ ತೆರಳಿ ಮತಯಾಚಿಸಿದರು. ಬಳಿಕ ಮಾತನಾಡಿದ ಅವರು, ʻಮನೆ ಮನೆಗೆ ತೆರಳಿ ಪ್ರಚಾರ ಮಾಡಿದ್ದು, ನನಗೆ ಬಹಳ ಖುಷಿ ತಂದಿದೆ. ನಾನು ಇಂದು ತಾಂಡಾಗಳಿಗೆ ಭೇಟಿ ಮಾಡಿದ್ದೇನೆ. ಜನರೇ ಚುನಾವಣೆ ಮಾಡುತ್ತಿದ್ದಾರೆ, ನಾನು ಮಾಡುತ್ತಿಲ್ಲ. ಚುನಾವಣೆ ಅಲ್ಲಾ, ಇದೊಂದು ಹಬ್ಬ ಅಂತ ಅನಿಸುತ್ತಿದೆ. ಜನರು ಬಹಳಷ್ಟು ತಿಳುವಳಿಕೆಯಿಂದ ಇದ್ದಾರೆ ಎನ್ನುವುದು ಸ್ಪಷ್ಟವಾಗಿದೆ ಅಂತ ಹೇಳಿದ್ರು.
ಶಿಗ್ಗಾವಿಯಲ್ಲಿ ಕಾಂಗ್ರೆಸ್ ನಾಯಕರು ಪ್ರಚಾರ ಮಾಡಿಲ್ಲ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿಎಂ, ʻನಾನು ಯಾರನ್ನು ಆ ಥರ ನೋಡಿಲ್ಲ. ಅದು ಅವರ ಪಕ್ಷಕ್ಕೆ ಬಿಟ್ಟಿದ್ದು. ನಾವು ಜಾಸ್ತಿ ನಾಯಕರನ್ನು ಕರೆಯಿಸಿ ಪ್ರಚಾರ ಮಾಡಿಲ್ಲ. ನಾನು ಜನರೊಂದಿಗೆ ನೇರ ಸಂಪರ್ಕ ಹೊಂದಿದ್ದೇನೆ. ಪ್ರಧಾನಮಂತ್ರಿಗಳಿಂದ ಹಿಡಿದು ಎಲ್ಲರ ಆಶೀರ್ವಾದ ಇದೆ. ಈ ಬಾರಿಯೂ ಕಾಂಗ್ರೆಸ್ ಪಕ್ಷ ಸೋಲುವುದು ಶತಸಿದ್ದ ಅಂತ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ರು. ನಾನು ಮೊನ್ನೆ ಟಿವಿಯಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆಶಿ ಪರಸ್ಪರ ಸಂದರ್ಶನ ನೋಡಿದೆ. ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿಯಿಲ್ಲ. ಟಿವಿಗೋಸ್ಕರ ಆ ಥರ ಮಾಡಬಾರದು. ನಾಟಕೀಯವಾಗಿ ಕಾಂಗ್ರೆಸ್ ನವರು ಮಾಡುತ್ತ ನಾವು ಒಗ್ಗಟ್ಟಾಗಿ ಇದ್ದೇವೆ ಎಂದು ತೋರಿಸುತ್ತಿದ್ದಾರೆ. ನಮ್ಮ ಪಕ್ಷದಲ್ಲಿ ಯಾವ ನಾಟಕೀಯತೆ ಎನ್ನುವುದು ಇಲ್ಲಾ. ನಮ್ಮಲ್ಲಿ ಒಗ್ಗಟ್ಟು ಇದೆ. ಪ್ರಚಾರ ಉತ್ತಮವಾಗಿ ಆಗಿದೆ. ಜನರ ಆಶೀರ್ವಾದ ಇದೆ. ಈ ಭಾರಿ ಸ್ಪಷ್ಟ ಬಹುಮತದ ಬಿಜೆಪಿ ಸರ್ಕಾರ ಬರಲಿದೆ ಅಂತ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ರು.
ʻಜನರ ಸಂಪರ್ಕ ಇರುವುದು ರಾಜಕಾರಣದಲ್ಲಿ ಬಹಳ ಮುಖ್ಯ. ಅವರ ಸಮಸ್ಯೆ ಆಲಿಸುವುದು ಬಹಳ ಮುಖ್ಯ. ಇದರ ಜೊತೆಗೆ ಸಮಸ್ಯೆಗಳಿಗೆ ಸ್ಪಂದಿಸುವುದು ಕೂಡ ಮುಖ್ಯ. ಹೀಗಾಗಿ ಸಮಯ ಸಿಕ್ಕಾಗ ನಾನು ಜನರ ಬಳಿ ಹೋಗುತ್ತೇನೆ. ಅಸೆಂಬ್ಲಿಯಲ್ಲಿ ಸಮಸ್ಯೆಗಳ ಬಗ್ಗೆ ಮಾತನಾಡುತ್ತೇವೆ. ಆದರೆ ಸಮಸ್ಯೆಗಳ ಜೊತೆ ಬದುಕುವುದು ಕಷ್ಟ. ಹೀಗಾಗಿ ಜನರ ಬಳಿ ಇರುವುದೇ ನನಗೆ ಸಂತೋಷ. ನಾನು ಕುಟುಂಬದ ಸಮೇತ ನಾಳೆ ಬೆಳಗ್ಗೆ ಶಿಗ್ಗಾವಿಯಲ್ಲಿ ಮತದಾನ ಮಾಡುತ್ತೇನೆ. ಎಲ್ಲರೂ ಮತದಾನ ಮಾಡಬೇಕು. ಇದು ಪ್ರಜಾಪ್ರಭುತ್ವದ ಹಬ್ಬʼ ಅಂತ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ರು.