ಹುಬ್ಬಳ್ಳಿ : ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಪುತ್ರ ಪ್ರಶಾಂತ್ ಮಾಡಾಳ್ ಬ್ರಹ್ಮಾಂಡ ಭ್ರಷ್ಟಾಚಾರ ಪ್ರಕರಣವನ್ನು ವಿರೋಧಿಸಿ ರಾಜ್ಯ ಕಾಂಗ್ರೆಸ್ ಮಾರ್ಚ್ 9ರಂದು ಕರೆ ನೀಡಿರುವ ಬಂದ್ಗೆ ಸಿಎಂ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದ್ದಾರೆ. ಹುಬ್ಬಳ್ಳಿಯಲ್ಲಿರುವ ಆದರ್ಶನಗರ ನಿವಾಸದ ಬಳಿ ಈ ವಿಚಾರವಾಗಿ ಮಾತನಾಡಿದ ಸಿಎಂ ಬೊಮ್ಮಾಯಿ ಇವರ ಕೈ ಸಂಪೂರ್ಣ ಭ್ರಷ್ಟಾಚಾರದಿಂದ ಕೂಡಿದೆ. ಜನರು ಇವರ ಆಟವನ್ನು ನೋಡಿದ್ದಾರೆ. ಯಾರು ಸತ್ಯ ಹರಿಶ್ಚಂದ್ರರು ಅನ್ನೋದು ಜನರಿಗೆ ಗೊತ್ತಿದೆ ಎಂದು ಲೇವಡಿ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದ ಕೂಪವಾಗಿದೆ. ಕಾಂಗ್ರೆಸ್ನ ಕೈ ಭ್ರಷ್ಟಾಚಾರದಿಂದ ಕೂಡಿದೆ. ಹೀಗಾಗಿ ಇವರು ಕರೆ ನೀಡಿರುವ ಬಂದ್ಗೆ ಯಾರೂ ಬೆಂಬಲ ನೀಡೋದಿಲ್ಲ. ಒಬ್ಬರ ಮೇಲೆ ಆಪಾದನೆ ಮಾಡುವ ಮುನ್ನ ಇವರ ಕೈ ಶುದ್ಧವಾಗಿರಬೇಕು. ಆವಾಗ ಆಪಾದನೆಗಳಿಗೂ ಒಂದು ಬೆಲೆ ಬರುತ್ತದೆ. ಆದರೆ ಕಾಂಗ್ರೆಸ್ ನವರು ಹಾಸಿಗೆ, ದಿಂಬು, ಬಿಸ್ಕಟ್, ಕಾಫಿಯಲ್ಲಿಯೂ ಭ್ರಷ್ಟಾಚಾರ ಮಾಡಿದ್ದಾರೆ. ಎಂ.ಬಿ ಪಾಟೀಲ್, ಕೆ.ಜೆ ಜಾರ್ಚ್, ಮಹದೇವಪ್ಪ ಬಳಿಯಲ್ಲಿ ಸಿದ್ದರಾಮಯ್ಯ ಎಷ್ಟೆಲ್ಲ ಟಾರ್ಗೆಟ್ ಕೊಡ್ತಿದ್ರು ಅಂತಾ ಕೇಳಿ ನೋಡಿ. ಭ್ರಷ್ಟಾಚಾರ ಕೂಪದಲ್ಲಿ ಇರುವವರು ಆಪಾದನೆ ಮಾಡಿದರೆ ಅದು ನಡೆಯೋದಿಲ್ಲ ಅಂತಾ ಸಿಎಂ ಬೊಮ್ಮಾಯಿ ಕಿಡಿಕಾರಿದ್ದಾರೆ.
ದೇಶದಲ್ಲಿ ಕಾಂಗ್ರೆಸ್ ಸಂಪೂರ್ಣ ಬಂದ್ ಆಗುತ್ತಿದೆ. ಹೀಗಿರುವಾಗ ರಾಜ್ಯ ಬಂದ್ ಮಾಡುವುದರಲ್ಲಿ ಅರ್ಥವಿಲ್ಲ. ಕಾಂಗ್ರೆಸ್ ಮಾಡಿರುವ ಕರ್ಮಕಾಂಡಗಳು ಒಂದಾ ಎರಡಾ..? ಬಂದ್ ಮೂಲಕ ತಮ್ಮ ರಾಜಕೀಯ ಭವಿಷ್ಯ ಬೇಯಿಸಿಕೊಳ್ಳಬಹುದು ಅನ್ನೋದು ಮೂರ್ಖತನ ಎಂದು ಸಿಎಂ ಬೊಮ್ಮಾಯಿ ಆಕ್ರೋಶ ಹೊರ ಹಾಕಿದ್ದಾರೆ.
ಬೆಳಗಾವಿ ರಾಜಹಂಸಗಢದಲ್ಲಿ ಕಾಂಗ್ರೆಸ್ನಿಂದ ಶಿವಾಜಿ ಪ್ರತಿಮೆ ಮರು ಉದ್ಘಾಟನೆ ವಿಚಾರವಾಗಿಯೂ ಇದೇ ವೇಳೆ ಪ್ರತಿಕ್ರಿಯಿಸಿದ ಅವರು, ಇದೊಂದು ಹಾಸ್ಯಾಸ್ಪದ ವಿಚಾರವಾಗಿದೆ. ಸರ್ಕಾರವೇ ಮೂರ್ತಿ ಉದ್ಘಾಟನೆ ಮಾಡಿದ ಮೇಲೆ ಕಾಂಗ್ರೆಸ್ ಒಣ ಪ್ರತಿಷ್ಠೆಗಾಗಿ ಈ ಕೆಲಸ ಮಾಡಿದೆ. ರಾಷ್ಟ್ರ ನಾಯಕರ ಮೂರ್ತಿ ವಿಚಾರದಲ್ಲಿ ಈ ರೀತಿ ಮಾಡೋದು ಸರಿಯಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.