ರಾಜ್ಯ ವಿಧಾನಸಭೆ ಚುನಾವಣೆಗೆ ಹತ್ತಿರ ಬರುತ್ತಿದ್ದಂತೆ, ಪಕ್ಷಗಳು ಪ್ರಚಾರ ಮಾಡಲು ಶುರುಮಾಡಿದ್ದಾರೆ. ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾದ ಬೆನ್ನಲ್ಲೇ ಸಿಎಂ ಬಸವರಾಜ ಬೊಮ್ಮಾಯಿ ಟೆಂಪಲ್ ರನ್ ಶುರುಮಾಡಿದ್ದಾರೆ. ಇಂದು ಕೊಲ್ಲೂರು ಮೂಕಾಂಬಿಕಾ ದೇಗುಲಕ್ಕೆ ಸಿಎಂ ಭೇಟಿ ನೀಡಿದ್ದಾರೆ. ಈ ವೇಳೆ ಸ್ಯಾಂಡಲ್‌ವುಡ್ ನಟ ರಿಷಬ್ ಶೆಟ್ಟಿ ಕೂಡ ದೇವಸ್ಥಾನದಲ್ಲಿದ್ದು, ಬೊಮ್ಮಾಯಿ ರಿಷಬ್‌ರನ್ನ ಭೇಟಿ ಮಾಡಿದ್ದಾರೆ.

ಸಿಎಂ ಬೊಮ್ಮಾಯಿ ದೇಗುಲ ಪ್ರವೇಶಿಸುತ್ತಿದ್ದಂತೆ ರಿಷಬ್ ಶೆಟ್ಟಿ, ಅವರ ಕಾಲು ಮುಟ್ಟಿ ನಮಸ್ಕರಿಸಿರೋ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಇತ್ತೀಚೆಗೆ ನಟ ಕಿಚ್ಚ ಸುದೀಪ್ ಪತ್ರಿಕಾಗೋಷ್ಠಿ ನಡೆಸಿ ಸಿಎಂ ಬಸವರಾಜ ಬೊಮ್ಮಾಯಿ ಪರ ಪ್ರಚಾರ ಮಾಡುವುದಾಗಿ ಘೋಷಿಸಿದ್ದರು. ನಾನು ಹೇಳಿದವರ ಪರ ಸುದೀಪ್ ಪ್ರಚಾರ ಮಾಡಲಿದ್ದಾರೆ ಎಂದು ಬೊಮ್ಮಾಯಿಯೂ ಹೇಳಿದ್ದರು.

ಈ ಎಲ್ಲಾ ಬೆಳವಣಿಗೆಗಳ ನಡುವೆ ರಿಷಬ್ ಬೊಮ್ಮಾಯಿಯನ್ನು ಭೇಟಿಯಾಗಿದ್ದಾರೆ. ರಿಷಬ್ ಶೆಟ್ಟಿ ಬಿಜೆಪಿ ಪರ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳಲಿದ್ದಾರೆಯೇ ಎಂಬ ವದಂತಿಗಳು ಹರಿದಾಡಿವೆ. ಆದರೆ, ಇದಕ್ಕೆ ಪ್ರತಿಕ್ರಿಯಿಸಿರುವ ಸಿಎಂ ಬೊಮ್ಮಾಯಿ ರಿಷಬ್ ಪ್ರಚಾರ ಮಾಡುವ ಬಗ್ಗೆ ಯಾವುದೇ ತೀರ್ಮಾನ ಸದ್ಯಕ್ಕೆ ಆಗಿಲ್ಲ. ಇದೊಂದು ಆಕಸ್ಮಿಕ ಭೇಟಿಯಷ್ಟೇ ಎಂದಿದ್ದಾರೆ.
