ಮೈಸೂರು: ಸಿದ್ದರಾಮಯ್ಯಗೆ ಸಾಧು ಸಂತರ ಶಾಪ ತಟ್ಟಲಿದೆ. ಸಿದ್ದರಾಮಯ್ಯಗೆ ಸುಳ್ಳು ಹೇಳುವುದರಲ್ಲಿ ನೊಬೆಲ್ ಪ್ರಶಸ್ತಿ ನೀಡಬೇಕು ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ತಿಳಿಸಿದರು. ಮೈಸೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೇ ಐದು ವರ್ಷ ಸಿಎಂ ಅಂದರು. ವಿರೋಧ ವ್ಯಕ್ತವಾದಾಗ ಉಲ್ಟಾ ಹೊಡೆದರು. ಅವರು ಸಿದ್ದರಾಮಯ್ಯ ಅಲ್ಲ ಸುಳ್ಳುರಾಮಯ್ಯ ಎಂದು ಕುಟುಕಿದರು.

ಜಾತಿಗಣತಿ ವಿಚಾರದಲ್ಲೂ ಸುಳ್ಳು ಹೇಳಿದ್ದಾರೆ. ಹಿಂದೆ ವರದಿ ನೀಡಿದ್ದಾಗ ಸಿಎಂ ಆಗಿದ್ದಾಗಲೇ ಜಾರಿಗೆ ತರುವುದಾಗಿ ಹೇಳಿದ್ದರು. ಸ್ವಲ್ಪ ದಿನಗಳ ಹಿಂದೆ ಸಾಧು ಸಂತರು ಭೇಟಿಯಾದಾಗ ನವೆಂಬರ್ ನಲ್ಲಿ ಜಾರಿಗೆ ತರುವುದಾಗಿ ಹೇಳಿದ್ದರು. ಈಗ ಅದನ್ನು ಜಾರಿಗೆ ತರಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ, ಸಾಧು ಸಂತರ ಶಾಪ ಸಿದ್ದರಾಮಯ್ಯಗೆ ತಟ್ಟುತ್ತೆ. ದಲಿತರು ಹಿಂದುಳಿದ ವರ್ಗದವರ ಶಾಪವು ತಟ್ಟುತ್ತದೆ. ಅವರನ್ನು ಬಳಸಿಕೊಂಡು ಸಿಎಂ ಆದವರು ಸಿದ್ದರಾಮಯ್ಯ ಎಂದು ಅವರು ದೂರಿದರು.











