ವೋಟುಗಳ ಬೇಟೆಯಲ್ಲಿ ಎಲ್ಲ ಪಕ್ಷಗಳು ಸಮಾನಮನಸ್ಕರರೇ? ಎಂಬ ಪ್ರಶ್ನೆ ಈಗ ಜನರನ್ನು ಕಾಡತೊಡಗಿದೆ. ಹೈಕೋರ್ಟ್, ಸುಪ್ರೀಂಕೋರ್ಟ್‍ಗಳ ಆದೇಶದ ಪ್ರಕಾರ, ಸಾರ್ವಜನಿಕ ಸ್ಥಳಗಳಲ್ಲಿ, ಅದರಲ್ಲೂ ರಸ್ತೆಗೆ ಹೊಂದಿಕೊಂಡ ಜಾಗಗಳಲ್ಲಿ ಧಾರ್ಮಿಕ ಕಟ್ಟಡಗಳಿದ್ದರೆ ಅವನ್ನು ತೆರವುಗೊಳಿಸಬೇಕು. ಇದಕ್ಕೆ ಆಯಾ ಜಿಲ್ಲೆಯ ಡಿಸಿಗಳೇ ಜವಾಬ್ದಾರರು. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅದರ ಉಸ್ತುವಾರಿ ನೋಡಿಕೊಳ್ಳಬೇಕು.
ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಮಹಾನಗರಗಳಲ್ಲಿ ಸಾರ್ಚಜಬಿಕ ಆಸ್ತಿ ಕಬಳಿಸಲೆಂದೇ ಏರಿಯಾಗಳಲ್ಲಿ ನಾಗರಿಕ ಸೇವಾ ಸಮಿತಿಗಳು ಹುಟ್ಟಿಕೊಂಡಿವೆ. ಮೇಲ್ವರ್ಗ , ಮೇಲ್ಜಾತಿ ಪ್ರತಿನಿಧಿಸುವ ನಿವೃತ್ತ ಸರ್ಕಾರಿ ನೌಕರರು, ಅಲ್ಲಿನ ರಿಯಲ್ ಎಸ್ಟೇಟ್ ಕುಳಗಳು ಈ ಸಮಿತಿಗಳ ಪ್ರಮುಖ ಪದಾಧಿಕಾರಿಗಳು. ಸ್ಥ:ಳೀಯ ಜನಪ್ರತಿನಿಧಿಗಳನ್ನು ಓಲೈಸುತ್ತ ತಮ್ಮ ಬೇಳೆ ಬೇಯಿಸಿಕೊಳ್ಳುವ ಹುನ್ನಾರ ಇದರ ಹಿಂದಿದೆ. ಶಾಸಕಾಂಗ, ಕಾರ್ಯಾಂಗ ಮ ತ್ತು ನ್ಯಾಯಾಂಗಗಳ ನಡುವಿನ ಅಸಮತೋಲಿತ ಸಂಬಂಧವನ್ನು ಇಲ್ಲಿ ಗಮನಿಸಬೇಕು.
ಈ ಕುರಿತು ನಿಮ್ಮ ‘ಪ್ರತಿಧ್ವನಿ’ ಹಲವರೊಂದಿಗೆ ಮಾತನಾಡಿ ಈ ಬರಹವನ್ನು ನಿಮ್ಮ ಮುಂದೆ ಇಡುತ್ತಿದೆ. ಇಲ್ಲಿ ರಾಮ ಮಂದಿರ ನಿರ್ಮಾಣದ ತೀರ್ಪಿನಿಂದ ಹಿಡಿದು ಸಿಎಂ ಬೊಮ್ಮಾಯಿ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕುಮಾರಸ್ವಾಮಿ, ಸಂಸದ ಪ್ರತಾಪಸಿಂಹ ಹೇಳಿಕೆಗಳ ಬಗ್ಗೆಯೂ ಬೆಳಕು ಚೆಲ್ಲಲಾಗಿದೆ.

ನಂಜನಗೂಡು ತಾಲೂಕಿನ ಒಂದು ಇಂತಹ ದೇವಸ್ಥಾನವನ್ನು ತೆರವು ಮಾಡಿದ ಕೂಡಲೇ, ಸಂಸದ ಪ್ರತಾಪಸಿಂಹ ಚರ್ಚ್, ಮಸೀದಿಗಳನ್ನು ಬೇಕಾದರೆ ಕೆಡವಬಹುದು, ದೇವಸ್ಥಾನಗಳನ್ನಲ್ಲ’ ಎಂದು ಸುದ್ದಿಗೋಷ್ಠಿ ಮಾಡಿದರು. ಇದಕ್ಕೆ ಪ್ರತಿಕ್ರಿಯೆ ಎಂಬಂತೆ ಮಾತನಾಡಿದ ಸಿದ್ದರಾಮಯ್ಯ ಆ ದೇವಸ್ಥಾನವನ್ನು ಬೇರೆ ಕಡೆ ಪುನರ್ ನಿರ್ಮಾಣ ಮಾಡಿ ಎಂದಿದರು.
ಮರುದಿನ ಸಿಎಂ ಬೊಮ್ಮಾಯಿಯವರು , ‘ದೇವಸ್ಥಾನ ತೆರವಿಗೆ ಅವಸರ ಬೇಡ’ ಎಂದು ಜಿಲ್ಲಾಧಿಕಾರಿಗಳಿಗೆ ಮೌಖಿಕ ಸೂಚನೆ ನೀಡಿದರು. ಬಿಜೆಪಿ ಇದರಲ್ಲಿ ರಾಜಕೀಯ ಲಾಭಕ್ಕೆ ಯತ್ನಿಸುತ್ತಿದೆ ಎಂದು ಕುಮಾರಸ್ವಾಮಿ ಹೇಳಿದರಾದರೂ, ರಿಯಲ್ ಎಸ್ಟೇಟ್ ದಂಧೆಯೂ ಈ ಪ್ರಕ್ರಿಯೆಯಲ್ಲಿ ಪಾಲುದಾರನಾಗಿದೆ ಎಂಬ ಬಗ್ಗೆ ಮಾತನಾಡಲೇ ಇಲ್ಲ.
ಇದೆಲ್ಲ ಸೂಚಿಸುವುದು ಏನನ್ನು? ಕೋಮುವಾದ ಅಥವಾ ಹಿಂದೂತ್ವವಾದದಿಂದ ಬಿಜೆಪಿ ಲಾಭ ಗಳಿಸುತ್ತ ಹೊರಟಿದ್ದರೆ ವಿಪಕ್ಷಗಳು ಸಾಫ್ಟ್ ಹಿಂದೂತ್ವವಾದದ ಹಿಂದೆ ಬಿದ್ದು ಕೌಂಟರ್ ಮಾಡುವುದನ್ನು ಎಂದೋ ಬಿಡಲಾಗಿದೆ ಎಂಬುದನ್ನು ಅಲ್ಲವೇ?
ಬಾಬರಿ ಮಸೀದಿಯಿಂದ……
’ಇಟ್ಟಿಗೆ ಪವಿತ್ರವಲ್ಲ ಜೀವ ಪವಿತ್ರ’ ಎಂಬ ಟೀಕೆಟಿಪ್ಪಣಿಯ ಮೂಲಕ ಪಿ. ಲಂಕೇಶರು ಅಡ್ವಾನಿಯವರ ರಥಯಾತ್ರೆಯನ್ನು, ಬಾಬ್ರಿ ಮಸೀದಿ ವಿವಾದದ ಹಿಂದಿನ ಸತ್ಯವನ್ನು ಸರಳವಾಗಿ ತೆರೆದಿಟ್ಟಿದ್ದರು. ಆದರೆ, ರಾಜ್ಯದ ವಿವಿಧ ಸಂಘಟನೆಗಳಿಗೆ ಅಂದು ಇದು ಬಹುಮುಖ್ಯ ಪ್ರಶ್ನೆಯೇ ಆಗಿರಲಿಲ್ಲ.
ಈಗಲೂ ಅಷ್ಟೇ, ದೇವರ ಹೆಸರಿನಲ್ಲಿ ನಡೆಯುವ ಅನಾಚಾರಗಳ ವಿರುದ್ಧ ರಾಜಕೀಯ ಪಕ್ಷಗಳು ಮೌನ ವಹಿಸುತ್ತಿವೆ.
ಅಂದಿನ ಪ್ರಧಾನಿ ರಾಜೀವ್ ಗಾಂಧಿ ಬಾಬ್ರಿ ಮಸೀದಿ ಬಾಗಿಲು ತೆರೆಸುವ ಮೂಲಕ ವಿವಾದ ಬಿಚ್ಚಿಕೊಳ್ಳಲು ನೆರವಾದರು. ಮುಂದೆ ಪ್ರಧಾನಿ ನರಸಿಂಹರಾವ್ ಕರಸೇವೆ, ರಥಯಾತ್ರೆ ತಡೆಯಲು ಅಂತಹ ಆಸಕ್ತಿಯನ್ನೇ ತೋರಲಿಲ್ಲ. ಬಾಬ್ರಿ ಮಸೀದಿ ನೆಲಸಮವಾಯಿತು.

ವಿಚಿತ್ರವೆಂದರೆ, ಕೋರ್ಟಿನಲ್ಲಿ ಸಂಘ ಪರಿವಾರ ಪ್ರತಿಪಾದಿಸುತ್ತಬಂದಿದ್ದ ನಂಬಿಕೆಗಳು, ಪೌರಾಣಿಕ ಘಟನೆಗಳಿಗೇ ಆದ್ಯತೆ ಸಿಕ್ಕಿತು.
‘ಅಲ್ಲಿ ರಾಮ ಮಂದಿರ ನಿರ್ಮಾಣ ಆಗಬೇಕು’ ಎಂಬುದು ಈ ದೇಶದ ಜನರ ಆತ್ಮಪ್ರಜ್ಞೆ’ ಎಂದೂ ಕೋರ್ಟ್ ಹೇಳಿತ್ತು . ಕೊನೆಗೆ ಅದು ವಿವಾದಿತ ಭಾಗವನ್ನು ಮೂರು ತುಂಡುಗಳನ್ನಾಗಿ ಮಾಡಿ, ಮಂದಿರ ನಿರ್ಮಾಣಕ್ಕೆ ಅವಕಾಶ ನೀಡಿತು,
ಆ ತೀರ್ಪಿನ ಕುರಿತು ಸಾರ್ವಜನಿಕ ವಲಯದಲ್ಲಿ ಚರ್ಚೆ ಆಗಲೇ ಇಲ್ಲ. ಆಗ ಯಾವ ಗಲಾಟೆಗಳೂ ಸಂಭವಿಸಲಿಲ್ಲ ಎಂಬ ಆಧಾರದಲ್ಲಿ ಲೇಖನವೊಂದನ್ನು ಬರೆದಿದ್ದ ಖ್ಯಾತ ಚಿಂತಕ ಆಶಿಶ್ ನಂದಿಯವರು, ‘ಇದು ಐತಿಹಾಸಿಕ ತೀರ್ಪು’ ಎಂಬ ಅಭಿಪ್ರಾಯ ಮಂಡನೆ ಮಾಡಿದ್ದರು.
ಇದನ್ನು ಪ್ರಶ್ನಿಸಿದ ಕನ್ನಡದ ಚಿಂತಕ ಶಿವಸುಂದರ್ ಅವರು, ತೀರ್ಪನ್ನು ಎಳೆಎಳೆಯಾಗಿ ವಿಶ್ಲೇಷಣೆ ಮಾಡಿದ್ದರು.
‘ನಮ್ಮ ನ್ಯಾಯಾಲಯಗಳಿಗೆ ಸತ್ಯ ಮತ್ತು ನ್ಯಾಯಗಳು ಸಾಕ್ಷ್ಯಗಳಾಗಬೇಕೆ ವಿನಃ ಜನರ ನಂಬಿಕೆಗಳು, ಪುರಾಣಗಳಲ್ಲ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಒಟ್ಟಿನಲ್ಲಿ, ರಾಮ ಮಂದಿರ ಕುರಿತ ಅಂತಿಮ ತೀರ್ಪು ರಾಜಕೀಯ ತೀರ್ಪು ಆಗಿತ್ತು. ಆಗ ಇದನ್ನು ನಮ್ಮ ವಿಪಕ್ಷಗಳು ವಿರೋಧಿಸಲೇ ಇಲ್ಲ.,
ಕೋಮುವಾದದ ಲಾಭ ಪಡೆದ ಬಿಜೆಪಿ ಗೆಲುವಿನ ನಗೆ ಬೀರಿತು. ಸಾಫ್ಟ್ ಹಿಂದೂತ್ವವಾದದ ಹಿಂದೆ ಬಿದ್ದ ಇತರ ಪಕ್ಷಗಳು ಜನರಲ್ಲಿ ತಿಳುವಳಿಕೆ ಮೂಡಿಸಲಿಲ್ಲ.
ಈಗ ಸುಪ್ರೀಂಕೋರ್ಟ್ ಪೂಜಾ ಸ್ಥಳಗಳು ಎಂದು ಹೇಳಿದ್ದನ್ನು ಕೇವಲ ದೇವಸ್ಥಾನಗಳಿಗೆ ಸಂಬಂಧಿಸಿದ್ದು ಎಂಬಂತೆ ಚರ್ಚೆಯನ್ನು ದಾರಿ ತಪ್ಪಿಸಲಾಗಿದೆ.
ಡಿಸಿಗಳ ಅಸಹಾಯಕತೆ?
ನ್ಯಾಯಾಂಗ ನಿಂದನೆ ಎದುರಿಸಬೇಕಾದ ಭೀತಿಯಲ್ಲಿರುವ ಡಿಸಿಗಳು ಸಾರ್ವಜನಿಕ ಸ್ಥಳಗಳಲ್ಲಿ ಉದ್ಭವವಾದ ಪೂಜಾ ಸ್ಥಳಗಳನ್ನು, ಅದರಲ್ಲೂ ಮುಖ್ಯವಾಗಿ ದೇವಸ್ಥಾನಗಳನ್ನು ಕೆಡವಲು ಹಿಂದೇಟು ಹಾಕುತ್ತಿದ್ದಾರೆ. ಕಾಟಾಚಾರಕ್ಕ ಹಳ್ಳಿ ಕಡೆಯ ಒಂದೋ ಎರಡೋ ಕಾರ್ಯಾಚರಣೆ ಮಾಡಿ ಕೋರ್ಟಿಗೆ ವಿವರ ಸಲ್ಲಿಸುತ್ತಿದ್ದಾರೆ. ಕೋರ್ಟ್ ಕೂಡ ಯಾವುದೇ ಕಾಲಮಿತಿ ಹೇರದೇ ಇರುವುದೂ ಇದಕ್ಕೆ ಕಾರಣ.
ಧಾರವಾಡ ಡಿಸಿ ನಿತೀಶ ಪಾಟೀಲರಿಗೆ ಈ ಕುರಿತು ಪ್ರತಿಧ್ವನಿ ಪ್ರಶ್ನಿಸಿತು. ‘’ತೆರವುಗೊಳಿಸುವ ಕಾರ್ಯಾಚರಣೆ ಸದ್ಯಕ್ಕೆ ತಾತ್ಕಾಲಿಕವಾಗಿ ನಿಂತಿದೆ. ಪಾಲಿಕೆ ಚುನಾವಣೆ ಇತ್ತು, ಈಗ ಗಣೇಶ ಉತ್ಸವದ ಕಾರಣ ತಡೆ ಹಿಡಿದಿದ್ದೇವೆ’ ಎಂದು ತಿಳಿಸಿದರು.

ಬಳ್ಳಾರಿ ಡಿಸಿ ಪವನಕುಮಾರ್ ಅವರು, ‘ಈಗಾಗಲೇ ಬಳ್ಳಾರಿ ಜಿಲ್ಲೆಯಲ್ಲಿ ಎಲ್ಲ ಅಕ್ರಮ ಪೂಜಾಸ್ಥಳನ್ನು ಕೆಡವಲಾಗಿದೆ’ ಎಂದರು. ಆದರೆ ನಾವು ಕ್ರಾಸ್ ಚೆಕ್ ಮಾಡಿದಾಗ ಅದು ಕೂಡ ಅರ್ಧ ಸತ್ಯ ಎಂಬುದು ಸ್ಪಷ್ಟವಾಗಿತು.
ದೇವಸ್ಥಾನಗಳನ್ನು ರಕ್ಷಿಸಲೇಬೇಕು ಎಂಬ ಹಠವಿದ್ದರೆ ರಾಜ್ಯ ಸರ್ಕಾರ ಒಂದು ಮಸೂದೆಯನ್ನು ಅಂಗೀಕಾರ ಮಾಡಲು ಚರ್ಚೆಯನ್ನು ವಿಧಾನಸಭೆಯಲ್ಲಿ ಚರ್ಚೆ ಮಾಡಲಾಗಿದೆ ಆದರೆ ಹಾಗೆ ಮಾಡದೇ ಅಕ್ರಮ ದೇವಸ್ಥಾನಗಳ ತೆರವು ಕಾರ್ಯಾಚರಣಗೆ ಆತುರ ಬೇಡ ಎಂದು ಸಿಎಂ ಮೌಖಿಕ ಸೂಚನೆ ನೀಡಿದ್ದಾರೆ. ಈ ಕುರಿತಾಗಿ ವಿಪಕ್ಷಗಳು ಜಾಣಮೌನ ವಹಿಸಿವೆ.
ಕೋರ್ಟಿನ ಉದ್ದೇಶ ಸಾರ್ವಜನಿಕ ಆಸ್ತಿಗಳನ್ನು ಉಳಿಸಿಕೊಳ್ಳುವುದಾಗಿದೆ. ಆದರೆ, ಇಲ್ಲಿ ಅದು ಆಗುತ್ತಲೇ ಇಲ್ಲ!