2023ಕ್ಕೆ ಸ್ವತಂತ್ರ ಸರ್ಕಾರವನ್ನ ಈ ರಾಜ್ಯದಲ್ಲಿ ಅಧಿಕಾರಕ್ಕೆ ತರುತ್ತೇವೆ. ಇಂದು ಜೆಡಿಎಸ್ ನೋಡಿ ಯಾರೇ ನಗಬಹುದು, ಆದರೆ ಜೆಡಿಎಸ್ 30 ಸ್ಥಾನ ಗೆಲುತ್ತದೆ ಎನ್ನುತ್ತಿದ್ದವರು, ಈಗ 50 ಸ್ಥಾನ ಗೆಲ್ಲುತ್ತದೆ ಎನ್ನತ್ತಿದ್ದು, ಮುಂದೆ 113 ಅಂತ ಹೇಳುತ್ತಾರೆ .
ಮಂಡ್ಯ: 2023ರ ಚುನಾವಣೆಯಲ್ಲಿ ಜೆಡಿಎಸ್ಗೆ ಸ್ಪಷ್ಟ ಬಹುಮತ ಬರಲಿದ್ದು, ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗುವುದನ್ನ ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ನಾಗಮಂಗಲ ಶಾಸಕ ಸುರೇಶ್ ಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮದ್ದೂರಿನಲ್ಲಿ ಮಾತನಾಡಿದ ಅವರು, ನಾವು ಈಗಾಗಲೇ ಚುನಾವಣೆ ಸಿದ್ದತೆ ಮಾಡಿಕೊಂಡಿದ್ದೇವೆ. ನಮ್ಮ ಕಾರ್ಯಕರ್ತರು ಎಲ್ಲಾ ಕಡೆ ಅಲರ್ಟ್ ಆಗಿದ್ದಾರೆ. 2023ಕ್ಕೆ ಸ್ವತಂತ್ರ ಸರ್ಕಾರವನ್ನ ಈ ರಾಜ್ಯದಲ್ಲಿ ಅಧಿಕಾರಕ್ಕೆ ತರುತ್ತೇವೆ. ಇಂದು ಜೆಡಿಎಸ್ ನೋಡಿ ಯಾರೇ ನಗಬಹುದು, ಆದರೆ ಜೆಡಿಎಸ್ 30 ಸ್ಥಾನ ಗೆಲುತ್ತದೆ ಎನ್ನುತ್ತಿದ್ದವರು, ಈಗ 50 ಸ್ಥಾನ ಗೆಲ್ಲುತ್ತದೆ ಎನ್ನತ್ತಿದ್ದು, ಮುಂದೆ 113 ಅಂತ ಹೇಳುತ್ತಾರೆ ಎಂದರು.
ಅಲ್ಲದೇ ಪ್ರಾದೇಶಿಕ ಪಕ್ಷದಿಂದ ಮಾತ್ರ ರಾಜ್ಯ ಅಭಿವೃದ್ದಿ ಆಗುತ್ತದೆ ಎಂಬುದು ರಾಜ್ಯದ ಜನತೆಗೆ ಈಗಾಗಲೇ ಗೋತ್ತಾಗಿದೆ. ಹೀಗಾಗಿಯೇ ಜನರು ಎರಡೂ ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿಸಲು ನಿರ್ಧಾರ ಮಾಡಿದ್ದಾರೆ. ಆ ಮೂಲಕ ಪ್ರಾದೇಶಿಕ ಪಕ್ಷ ಜೆಡಿಎಸ್ ಅನ್ನು ಅಧಿಕಾರಕ್ಕೆ ತರಲು ಜನರೇ ತೀರ್ಮಾನಿಸಿದ್ದಾರೆ. ಅಲ್ಲದೇ ಪಂಚರತ್ನ ಯೋಜನೆ ರಾಜ್ಯದಲ್ಲಿ ಸಂಚಲವನ್ನು ಉಂಟು ಮಾಡಿದೆ ಎಂದ ಅವರು, ಅವಕಾಶ ಸಿಕ್ಕಿದರೆ ದಲಿತರಿಗೆ ಡಿಸಿಎಂ ಮಾಡುತ್ತಾರೆ. ಆದರೆ ಕೆಲವರು ಕುಮಾರಸ್ವಾಮಿ ಅವರ ಹೇಳಿಕೆಯನ್ನ ಮಿಸ್ ಯೂಸ್ ಮಾಡಿಕೊಂಡಿದ್ದಾರೆ ಎಂದು ಹೇಳಿದರು.
ಇದೇ ವೇಳೆ ಮಹಾರಾಷ್ಟ್ರ-ಕರ್ನಾಟಕ ಗಡಿವಿವಾದದ ಬಗ್ಗೆ ಮಾತನಾಡಿದ ಅವರು, ಹೊರ ರಾಜ್ಯಗಳು ನಮ್ಮ ಜಿಲ್ಲೆಗಳನ್ನ ಕಿತ್ತುಕೊಳ್ಳಲು ಪ್ರಯತ್ನ ಮಾಡುತ್ತಿವೆ. ಕುಮಾರಸ್ವಾಮಿ ಅವರು ಅಂದು ಬೆಳಗಾವಿಯಲ್ಲಿ ಸುವರ್ಣ ಸೌಧ ಕಟ್ಟಿಸದಿದ್ದರೆ ಇಂದು ಬೆಳಗಾವಿ ಮಹಾರಾಷ್ಟ್ರ ಪಾಲಾಗುತ್ತಿತ್ತು. ಕನ್ನಡದ ಪರ ಹೋರಾಟ ಮಾಡಿದ್ದು ಜೆಡಿಎಸ್ ಪಕ್ಷ ಎಂದರು.
ಆದಿಚುಂಚನಗಿರಿ ಮಠದ ಶ್ರೀ ನಿರ್ಮಾಲಾನಂದನಾಥ ಸ್ವಾಮಿ ಅವರನ್ನ ಸಿಎಂ ಮಾಡುತ್ತಾರೆ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಿರ್ಮಲಾನಂದನಾಥ ಸ್ವಾಮೀಜಿ ಅವರು ಮುಖ್ಯಮಂತ್ರಿ ಸ್ಥಾನಕ್ಕಿಂತ ದೊಡ್ಡ ಪಟ್ಟದಲ್ಲಿದ್ದಾರೆ. ಅವರನ್ನ ಏಕೆ ಕೆಳಗಿಳಿಸುತ್ತೀರಿ? ದೇಶದ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಇವರಿಗೆ ಶರಣಾಗತಿಯಾಗಿದ್ದಾರೆ. ಹೀಗಾಗಿ ಅವರು ಮುಖ್ಯಮಂತ್ರಿಯಾಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಉತ್ತರಿಸಿದರು.