ಭಾರತ ಮತ್ತು ಚೀನಾದ ಗಡಿ ಪ್ರದೇಶವಾದ ಯಾಂಗ್ಸ್ಟೆನಲ್ಲಿ ಎರಡು ದೇಶಗಳ ಸೈನಿಕರ ಮಧ್ಯೆ ಗಡಿಯಲ್ಲಿ ಘರ್ಷಣೆ ಉಂಟಾಗಿದೆ. ಈ ಹಿನ್ನೆಲೆ ಗಡಿಯಲ್ಲಿ ಮತ್ತೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು,
ಡಿಸೆಂಬರ್ 9 ರಂದು ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್ ನಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಘರ್ಷಣೆ ನಡೆದಿರುವ ಮಾಹಿತಿ ತಡವಾಗಿ ಲಭ್ಯವಾಗಿದೆ.
ಚೀನೀ ಸೈನಿಕರು ಕಲ್ಲು ದೊಣ್ಣೆಗಳೊಂದಿಗೆ ತವಾಂಗ್ ಸೆಕ್ಟರ್ ಗೆ ದಿಢೀರನೆ ನುಗ್ಗಿ ಭಾರತೀಯ ಸೈನಿಕರ ಮೇಲೆರಗಿದ್ದರು ಎಂದು ಹೇಳಲಾಗಿದೆ. ಇದನ್ನು ಕಂಡ ಭಾರತೀಯ ಸೇನೆ, ಚೀನೀ ಸೈನಿಕರನ್ನು ಹತ್ತಿಕ್ಕಲು ಶಕ್ತಿ ಮೀರಿ ಹೋರಾಟ ನಡೆಸಿದರು. ಈ ಹೋರಾಟದಲ್ಲಿ ಕೆಲವು ಭಾರತೀಯ ಸೈನಿಕರು ಗಾಯಗೊಂಡಿದ್ದಾರೆ ಎನ್ನಲಾಗಿದ್ದು, ಅವರಿಗೆ ಯಶಸ್ವಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ತಿಳಿದು ಬಂದಿದೆ.
ಕೆಲ ಸಮಯದ ಹೋರಾಟದ ನಂತರ ಚೀನೀ ಸೈನಿಕರು ಘಟನೆಯ ಸ್ಥಳದಿಂದ ಕಾಲ್ಕಿತ್ತಿದ್ದು, ಉಭಯ ದೇಶಗಳ 30ಕ್ಕೂ ಹೆಚ್ಚು ಯೋಧರು ಗಾಯಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಹಿಂದೆಯೂ ಇದೇ ಪ್ರದೇಶದಲ್ಲಿ ಭಾರತ-ಚೀನಾ ಸೈನಿಕರ ಮಧ್ಯೆ ಮುಖಾಮುಖಿ ಉಂಟಾಗಿತ್ತು. 2021ರ ಅಕ್ಟೋಬರ್‌ನಲ್ಲಿ ತವಾಂಗ್‌ನಿಂದ ಈಶಾನ್ಯ ಭಾಗಕ್ಕೆ 35 ಕಿ.ಮೀ ದೂರದಲ್ಲಿರುವ ಯಾಂಗ್ಸ್ಟೆನ 17000 ಅಡಿ ಎತ್ತರದ ಶಿಖರವನ್ನು ಏರಲು ಚೀನಾ ಸೈನಿಕರು ವಿಫಲ ಯತ್ನ ನಡೆಸಿದ್ದರು. ಗಡಿ ದಾಟಲು ಬಂದಿದ್ದ ಚೀನೀ ಸೈನಿಕರನ್ನು ಭಾರತೀಯ ಸೈನಿಕರು ಹಿಮ್ಮೆಟ್ಟಿಸಿದ್ದರು. ಸದ್ಯ ಈ ಪ್ರದೇಶ ಹಿಮದಿಂದ ಕೂಡಿದ್ದು, ಮಾರ್ಚ್‌ವರೆಗೂ ಈ ಪ್ರದೇಶ ಹಿಮಪಾತದಿಂದ ತುಂಬಿರುತ್ತದೆ.