ಹದಿನಾಲ್ಕು ತಿಂಗಳ ಬಾಕಿ ವೇತನಕ್ಕೆ ಆಗ್ರಹಿಸಿ ಪೌರ ಕಾರ್ಮಿಕರಿಬ್ಬರು ಮೈ ಮೇಲೆ ಮಲ ಸುರಿದುಕೊಂಡು ಪ್ರತಿಭಟಿಸಿರುವ ಘಟನೆ ಮಂಗಳವಾರ (ಆಗಸ್ಟ್ 22) ಕನಕಪುರ ತಾಲೂಕಿನಲ್ಲಿ ನಡೆದಿದೆ.
ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಕಸಬಾ ಹೋಬಳಿಯ ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಮಂಗಳವಾರ ಮಧ್ಯಾಹ್ನ ಘಟನೆ ನಡೆದಿದ್ದು, ಇದಾದ ಒಂದೇ ತಾಸಿನಲ್ಲಿ ಇಬ್ಬರ ವೇತನವನ್ನು ಪಾವತಿಸಲಾಗಿದೆ.
ಪಂಚಾಯಿತಿಯಲ್ಲಿ ಸ್ವಚ್ಛಗಾರರಾಗಿ ಕೆಲಸ ಮಾಡುತ್ತಿದ್ದ ಎನ್. ಸುರೇಶ್ ಮತ್ತು ವಿ. ರಂಗಯ್ಯ ಪ್ರತಿಭಟನೆ ನಡೆಸಿದ ಪೌರ ಕಾರ್ಮಿಕರು. 2020ರಿಂದ ಕೆಲಸ ಮಾಡುತ್ತಿದ್ದ ಇಬ್ಬರಿಗೂ ಒಂದೂವರೆ ವರ್ಷದ ಹಿಂದಿನ ತಲಾ 31.60 ಲಕ್ಷ ವೇತನ ಬಾಕಿ ಇತ್ತು.
ವೇತನಕ್ಕಾಗಿ ಪಂಚಾಯಿತಿ ಅಧಿಕಾರಿಗಳನ್ನು ಕೇಳಿ ಬೇಸತ್ತ ಕಾರ್ಮಿಕರು, ಮಧ್ಯಾಹ್ನ ಬಿಂದಿಗೆಯಲ್ಲಿ ಮಲ ತೆಗೆದುಕೊಂಡು ಬಂದು ಪಂಚಾಯಿತಿ ಎದುರು ಮೈ ಮೇಲೆ ಸುರಿದುಕೊಂಡಿದ್ದಾರೆ. ಬಳಿಕ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಅಧ್ಯಕ್ಷರು ಇಬ್ಬರ ವೇತನವನ್ನು ಲೆಕ್ಕಾಚಾರ ಮಾಡಿ, ಚೆಕ್ ಮತ್ತು ನಗದು ಮೂಲಕ ಪಾವತಿಸಿದ್ದಾರೆ.
“ಬಾಕಿ ವೇತನ ಕುರಿತು ನನಗೂ ತಿಳಿಸದ ಪೌರ ಕಾರ್ಮಿಕರು, ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆ ಕಾರ್ಯಕರ್ತರೊಂದಿಗೆ ಪಂಚಾಯಿತಿಗೆ ಬಂದು ಮಲ ಸುರಿದುಕೊಂಡು ಪ್ರತಿಭಟಿಸಿದ್ದಾರೆ. ನಂತರ. ಇಬ್ಬರಿಗೆ ತಲಾ 71,10,400 ಮೊತ್ತದ ಚೆಕ್ ಮತ್ತು 750 ಸಾವಿರ ಕೊಟ್ಟು ಬಾಕಿ ಸಂಬಳ ಪಾವತಿಸಿದ್ದೇವೆ” ಎಂದು ಕನಕಪುರ ತಾಲೂಕಿನ ಕಲ್ಲಹಳ್ಳಿ ಪಿಡಿಒ ಶ್ರೀನಿವಾಸ್ ತಿಳಿಸಿದ್ದಾರೆ.
:ಇಬ್ಬರೂ ಕಾರ್ಮಿಕರಿಗೆ 2021ರಿಂದ 14 ತಿಂಗಳ ಸಂಬಳವನ್ನು ಹಿಂದಿನ ಪಿಡಿಒಗಳು ಬಾಕಿ ಉಳಿಸಿದ್ದರು. ನನ್ನ ಅವಧಿಯಲ್ಲಿ ಯಾವುದೇ ಬಾಕಿ ಇರಲಿಲ್ಲ. ಕಾರ್ಮಿಕರಿಗೆ ತಲಾ 15 ಸಾವಿರ ರೂ. ಸಂಬಳ ನೀಡಲಾಗುತ್ತಿತ್ತು. ಎರಡು ತಿಂಗಳಿಂದ ಕೆಲಸಕ್ಕೆ ಹಾಜರಾಗದ ಕಾರ್ಮಿಕರು, ಕನಕಪುರದಲ್ಲಿ ಕೆಲಸ ಮಾಡುತ್ತಿರುವ ಮಾಹಿತಿ ಬಂದಿತ್ತು’ ಎಂದು ಹೇಳಿದರು.
“ಬಾಕಿ ವೇತನಕ್ಕಾಗಿ ಕಾರ್ಮಿಕರು ಮೈ ಮೇಲೆ ಸುರಿದುಕೊಳ್ಳಬಾರದಿತ್ತು. ವಿಷಯವನ್ನು ನನ್ನ ಗಮನಕ್ಕೆ ತಂದಿದ್ದರೆ, ಕೂಡಲೇ ಪಾವತಿಸಲು ಕ್ರಮ ಕೈಗೊಳ್ಳುತ್ತಿದ್ದೆ” ಎಂದು ಕನಕಪುರ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಭೈರಪ್ಪ ತಿಳಿಸಿದರು.
ಕಾರ್ಮಿಕರು ಮಲ ಸುರಿದುಕೊಳ್ಳುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ಹರಿದಾಡುತ್ತಿದೆ. ಈಗ ಇದು ವೈರಲ್ ಆಗಿದ್ದು ಹಲವು ಟೀಕೆಗಳು ವ್ಯಕ್ತವಾಗಿವೆ.