
ಸಾಮಾಜಿಕ ಅನ್ಯಾಯ ದೌರ್ಜನ್ಯ ತಾರತಮ್ಯಗಳಿಗೆ ಸ್ಪಂದಿಸುವುದು ನಾಗರಿಕತೆಯ ಲಕ್ಷಣ
ನಾ ದಿವಾಕರ
ಜಗತ್ತಿನ ಇತಿಹಾಸದಲ್ಲಿ ಸಂಭವಿಸಿರುವ ಬಹುತೇಕ ವಿಪ್ಲವಗಳಲ್ಲಿ ಪ್ರಧಾನ ಪಾತ್ರ ವಹಿಸಿರುವುದು ಆಯಾ ಸಮಾಜಗಳಲ್ಲಿ ಕ್ರಿಯಾಶೀಲವಾಗಿ, ಶ್ರೀಸಾಮಾನ್ಯರ ಜಟಿಲ ಸಮಸ್ಯೆಗಳಿಗೆ ಸ್ಪಂದಿಸುವ ಹಾಗೂ ತಳಸಮಾಜದಲ್ಲಿ ನಿರಂತರ ಅನ್ಯಾಯಗಳನ್ನು ಎದುರಿಸುತ್ತಲೇ ಇರುವ ಸಮುದಾಯಗಳೊಂದಿಗೆ ಸಂವೇದನಾಶೀಲತೆಯಿಂದ ಗುರುತಿಸಿಕೊಂಡು, ಅವರ ನಿತ್ಯ ಬದುಕಿನ ಸಂಕಟ-ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ನಾಗರಿಕ ಸಮಾಜದ ಗುಂಪುಗಳು/ಸಂಘಟನೆಗಳು (Civil Society Groups). ವಿಶಾಲ ನೆಲೆಯಲ್ಲಿ ಇದನ್ನು ನಾಗರಿಕ ಸಮಾಜ (Civil Society) ಎಂದು ಪರಿಗಣಿಸಿದರೂ ಈ ಸಮಾಜವನ್ನು ಪ್ರತಿನಿಧಿಸುವ ಎಲ್ಲ ಸ್ತರಗಳಲ್ಲೂ ಸಮಾನ ಸೂಕ್ಷ್ಮತೆ, ಸಂವೇದನೆ ಮತ್ತು ಕ್ರಿಯಾಶೀಲತೆಯನ್ನು ಗುರುತಿಸಲಾಗುವುದಿಲ್ಲ.
ಭಾರತದ ಸಂದರ್ಭದಲ್ಲಿ ನಾಗರಿಕ ಸಮಾಜ ಎನ್ನುವುದರ ಹಂದರ (Canvas) ಸವಿಸ್ತಾರವಾಗಿದ್ದು ಅಷ್ಟೇ ವೈವಿಧ್ಯಪೂರ್ಣವೂ ಆಗಿದೆ. ತಾತ್ವಿಕ ಅಥವಾ ಸೈದ್ಧಾಂತಿಕ ತಳಹದಿಯ ಮೇಲೆ ರೂಪುಗೊಂಡಿರುವ ಈ ಸಮಾಜದೊಳಗಿನ ನಾಗರಿಕ ಸಮಾಜದ ಸಂಘಟನೆಗಳು (Civil Society Organisations) ತಮ್ಮದೇ ಆದ ಕಾರ್ಯಸೂಚಿ, ಗುರಿ ಮತ್ತು ಉದ್ದೇಶಗಳನ್ನು ಹೊಂದಿದ್ದರೂ, ಸಾಮಾಜಿಕವಾಗಿ ಒಂದು ಸಮುದಾಯ, ಗುಂಪು ಅಥವಾ ನಿರ್ದಿಷ್ಟ ಜಾತಿ-ಧರ್ಮಗಳ ಜನರು ಸಮಸ್ಯೆಗೊಳಗಾದಾಗ, ಎಲ್ಲ ಸಂಘಟನೆಗಳೂ ಒಂದು ವೇದಿಕೆಯಲ್ಲಿ ನಿಂತು, ಹೋರಾಡುವ ಪರಂಪರೆಯನ್ನೂ ಸ್ವತಂತ್ರ ಭಾರತ ರೂಢಿಸಿಕೊಂಡಿದೆ. ಇಲ್ಲಿಯೂ ಸಹ ನಿರ್ಲಿಪ್ತತೆ, ನಿಷ್ಕ್ರಿಯತೆ, ಮೌನ (ಸಮ್ಮತಿ), ಅಸ್ಮಿತೆಯಾಧಾರಿತ ಸ್ಪಂದನೆ ಇವೆಲ್ಲವೂ ಇರುವುದಾದರೂ, ಬಹುಮಟ್ಟಿಗೆ ಇವುಗಳನ್ನು ಮೀರಿದ ಸ್ಪಂದನೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಾಣುತ್ತಿದೆ.
ಇದಕ್ಕೆ ಕಾರಣ ಡಿಜಿಟಲ್ ಭಾರತದಲ್ಲಿ ಹೆಚ್ಚಾಗುತ್ತಿರುವ ಅಸಮಾನತೆಗಳು, ದೌರ್ಜನ್ಯಗಳು ಮತ್ತು ತಳಸಮಾಜವನ್ನು ಬಾಧಿಸುತ್ತಿರುವ ಆರ್ಥಿಕ ಸಂಕಟಗಳು. ಈ ಸನ್ನಿವೇಶದಲ್ಲಿ ನಾವು ನಾಗರಿಕ ಸಮಾಜ ಅಥವಾ ನಾಗರಿಕ ಸಮಾಜದ ಸಂಘಟನೆಗಳ ರೂಪ, ಮಾದರಿ, ತಾತ್ವಿಕ ನೆಲೆಗಳು, ಆದ್ಯತೆ ಮತ್ತು ಆಯ್ಕೆಗಳು ಹಾಗೂ ಭವಿಷ್ಯದ ಹಾದಿಗಳನ್ನು ಮರುವಿಮರ್ಶೆ ಮಾಡಬೇಕಿದೆ. ಪ್ರತಿಭಟನೆ, ಹೋರಾಟ ಹಾಗೂ ಪ್ರತಿಕ್ರಿಯಾತ್ಮಕ ಚಟುವಟಿಕೆಗಳನ್ನೂ ದಾಟಿ ನೋಡುವ ಮೂಲಕ, ಸಂಘಟನೆಗಳು ತಮ್ಮ ನೈತಿಕ ಜವಾಬ್ದಾರಿಗಳನ್ನು ಮರು ನಿರ್ವಚನೆಗೊಳಪಡಿಸಬೇಕಿದೆ. ವರ್ತಮಾನದ ಸನ್ನಿವೇಶದಲ್ಲಿ ನಾಗರಿಕ ಸಮಾಜವನ್ನು ಪ್ರತಿನಿಧಿಸುವ ಎಲ್ಲ ಗುಂಪು-ಸಂಘಟನೆಗಳೂ ವಿಶಾಲ ಸಮಾಜದ ದೃಷ್ಟಿಯಿಂದ ಕ್ರಿಯಾಶೀಲವಾಗಿಲ್ಲ ಎನ್ನುವ ವಾಸ್ತವವನ್ನು ಒಪ್ಪಿಕೊಂಡೇ ಈ ಮರುವಿಮರ್ಶೆಯತ್ತ ಸಾಗಬೇಕಿದೆ.
ನಾಗರಿಕ ಸಮಾಜ- ಕಲ್ಪನೆ-ವ್ಯಾಪ್ತಿ
ಏಕೆಂದರೆ, ನಾಗರಿಕ ಸಮಾಜದ (Civil Society) ಪ್ರಧಾನ ಭಾಗವಾಗಿರುವುದು ಸಮಾಜದ ಹಿತವಲಯದ ಒಂದು ಜನಸಂಖ್ಯೆ. ಸಾಂವಿಧಾನಿಕ ಸವಲತ್ತುಗಳ ಫಲಾನುಭವಿಗಳಾಗಿ, ಆರ್ಥಿಕ ಉನ್ನತೀಕರಣ-ಸಾಮಾಜಿಕ ಮೇಲ್ ಚಲನೆಯ ಅನುಕೂಲತೆಗಳನ್ನು ಗಳಿಸಿಕೊಂಡಿರುವ ಒಂದು ವರ್ಗ ನಮ್ಮ ನಡುವೆ ಜೀವಂತವಾಗಿದೆ. ಇಲ್ಲಿ ಕಾಣುವ ವ್ಯಕ್ತಿ-ಸಂಘಟನೆಗಳ ಬತ್ತಳಿಕೆಯಲ್ಲಿ ಹಣಕಾಸು ಬಲ, ಆರ್ಥಿಕ ಸಂಪನ್ಮೂಲ, ಭೌತಿಕ ಸಂಪತ್ತು, ಸಾಮಾಜಿಕ ಅಂತಸ್ತು ಹಾಗೂ ಜಾತಿ-ಧರ್ಮಗಳಿಂದಾಚೆಗಿನ ಅಸ್ತಿತ್ವ ಮತ್ತು ಅಸ್ಮಿತೆಗಳು, ತಳಸಮಾಜದ ನೋವು-ಯಾತನೆಗಳಿಗೆ ಅಗತ್ಯ ಪ್ರಮಾಣದಲ್ಲಿ ಸ್ಪಂದಿಸುತ್ತಿಲ್ಲ. ಅಥವಾ ತಮ್ಮದೇ ಆದ ಸೀಮಿತ ಚೌಕಟ್ಟಿನಲ್ಲಿ, ಅನುಕೂಲತೆಗಳಿಗೆ ಅನುಗುಣವಾಗಿ, ಸಾಂಕೇತಿಕವಾಗಿ ಸ್ಪಂದಿಸುತ್ತಿರುವುದನ್ನು ಅಲ್ಲಲ್ಲಿ ಗುರುತಿಸಬಹುದು. ಹಿತವಲಯದ ವಾತಾವರಣದಲ್ಲಿ ಇದು ಸಹಜವಾಗಿ ಕಾಣಬಹುದಾದ ಸಾಮಾಜಿಕ ಲಕ್ಷಣ. ತಾವು ನಡೆದುಬಂದ ಹಾದಿಯನ್ನು ಹಿಂತಿರುಗಿ ನೋಡುವ ವಿವೇಕ-ಸಂಯಮವನ್ನು ಕಳೆದುಕೊಂಡಾಗಲೂ, ಸಮಾಜದಲ್ಲಿ ಇಂತಹ ವೈರುಧ್ಯಗಳು ಕಾಣುತ್ತವೆ.

ಇತ್ತೀಚಿನ ಉದಾಹರಣೆಯಾಗಿ ಮೈಸೂರಿನ ಹೃದಯ ಭಾಗದಲ್ಲಿ, ಅರಮನೆಯ ಸಮೀಪದಲ್ಲೇ ನಡೆದ ಎರಡು ಆಘಾತಕಾರಿ ಘಟನೆಗಳನ್ನು ನೋಡಬಹುದು. ಅಕ್ಟೋಬರ್ 7ರಂದು ಅಪರಾಹ್ನ 11.45ರ ಹೊತ್ತಿನಲ್ಲಿ ವಸ್ತುಪ್ರದರ್ಶನ ಮೈದಾನದ ಎದುರಿನಲ್ಲೇ ಗಿಲ್ಕಿ ವೆಂಕಟೇಶ್ ಎಂಬ ರೌಡಿ ಷೀಟರ್ ಮೇಲೆ ಹಲ್ಲೆ ನಡೆದು, ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಇದಕ್ಕೆ ವೈಯುಕ್ತಿಕ ಹಣಕಾಸು ವ್ಯವಹಾರ ಮತ್ತು ವೈಷಮ್ಯಗಳೇ ಕಾರಣ ಎನ್ನಲಾಗಿದ್ದು, ಆರು ತಿಂಗಳ ಹಿಂದೆ ಟಿ ನರಸೀಪುರ ರಸ್ತೆಯಲ್ಲಿ ಹೋಟೆಲ್ ಒಂದರ ಎದುರಿನಲ್ಲೇ ಇದೇ ರೀತಿಯಲ್ಲಿ ಹತ್ಯೆಗೀಡಾದ ಕಾರ್ತಿಕ್ ಎಂಬ ರೌಡಿಷೀಟರ್‌ನೊಡನೆ ಸಂಪರ್ಕ ಇತ್ತೆಂದು ಹೇಳಲಾಗಿದೆ. ಈ ಭೀಕರ ದೃಶ್ಯವನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿರುವುದು, ಸಮಾಜವು ಸಾಗುತ್ತಿರುವ ಒಂದು ವಿಕೃತ ದಿಕ್ಕನ್ನು ಸೂಚಿಸುತ್ತದೆ.
ಇದಾದ ಕೆಲವೇ ದಿನಗಳ ನಂತರ̧ ಗುರುವಾರ ಕಲ್ಬುರ್ಗಿಯಿಂದ ತಮ್ಮ ಜೀವನೋಪಾಯದ ಹಾದಿ ಅರಸಿ ತಂದೆ ತಾಯಿಯರೊಡನೆ ಬಂದಿದ್ದ ಬಲೂನು ಮಾರುವ 9 ವರ್ಷದ ಹಸುಳೆಯ ಮೇಲೆ ರಾತ್ರಿ ವೇಳೆ ಅತ್ಯಾಚಾರ ನಡೆದಿದ್ದು, ಈ ಹಸುಳೆಯನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ. ಇದೂ ಅರಮನೆಯ ಸಮೀಪವೇ, ವಸ್ತುಪ್ರದರ್ಶನ ಮೈದಾನದಲ್ಲೇ ಸಂಭವಿಸಿದೆ. ಇಲ್ಲಿ ಅತ್ಯಾಚಾರ ಎಸಗಿದ ವ್ಯಕ್ತಿ, ವೆಂಕಟೇಶ್‌ನನ್ನು ಬಂಧಿಸಲಾಗಿದೆ. ಹಲ್ಲೆ ಮಾಡಿದ ವ್ಯಕ್ತಿಗಳ ನಡುವೆ ಸಮಾನ ಎಳೆಯೊಂದನ್ನು ಕಾಣಬಹುದಾದರೆ ಅದು ಅಮಾನುಷ ಹಂತಕ ಪ್ರವೃತ್ತಿ, ಸಮಾಜಘಾತುಕ ಧೋರಣೆ, ಹಸುಳೆಯನ್ನೂ ಬಿಡದಂತಹ ಕಾಮತೃಷೆಯನ್ನು ಮೈಗೂಡಿಸಿಕೊಂಡಿರುವ ಪುರುಷ ಸಮಾಜದ ಒಬ್ಬ ಪ್ರತಿನಿಧಿ ಮತ್ತು ನಿರ್ಭಿಡೆಯಿಂದ ಇಂತಹ ಪಾತಕ ಕೃತ್ಯಗಳನ್ನು ಹಾಡಹಗಲಲ್ಲೇ ನಡೆಸುವ ಒಂದು ಸಾಮಾಜಿಕ ಪರಿಸರ.

ಬಿಜೆಪಿ, ಜೆಡಿಎಸ್ ಇತರ ಯಾವುದೇ ವಿರೋಧ ಪಕ್ಷಗಳಿಗೆ ಈ ಎರಡೂ ಘಟನೆಗಳಲ್ಲಿ ಕಾಣುವುದು ಸರ್ಕಾರದ ಆಡಳಿತ ವೈಫಲ್ಯ, ಕಾನೂನು ಸುವ್ಯವಸ್ಥೆಯ ದುರವಸ್ಥೆ, ಪೊಲೀಸ್ ಇಲಾಖೆಯ ವೈಫಲ್ಯ ಇತ್ಯಾದಿ. ಇವೆಲ್ಲವೂ ಒಪ್ಪುವಂತಹುದೇ . ಆದರೆ ಮೊದಲನೆ ಘಟನೆಯ ಬಗ್ಗೆ ನಮ್ಮ ವಿಶಾಲ ಸಮಾಜದ (Broader Society) ಪ್ರತಿಕ್ರಿಯೆಯನ್ನು ಗಮನಿಸಿದಾಗ, ʼ ಹತ್ಯೆಗೀಡಾದವನು ರೌಡಿ ಷೀಟರ್ ಅಲ್ಲವೇ ʼ ಎಂಬ ನಿರ್ಲಿಪ್ತತೆ ಕಾಣುತ್ತದೆ. ಎರಡನೆ ಘಟನೆಯನ್ನು ಖಂಡಿಸಿ ನ್ಯಾಯಕ್ಕಾಗಿ ಆಗ್ರಹಿಸುವ ಜವಾಬ್ದಾರಿ ಕೇವಲ ಮಹಿಳಾ ಸಂಘಟನೆಗಳ ಪಾಲಾಗುತ್ತದೆ. ನಿನ್ನೆ ಪ್ರತಿಭಟನೆಯನ್ನೂ ನಡೆಸಲಾಗಿದೆ. ಹಸುಳೆಯ ಅತ್ಯಾಚಾರ- ಮತ್ತು ಎರಡೂ ಹತ್ಯೆಗಳಲ್ಲಿ ಬಿಜೆಪಿ ನಾಯಕರಿಗೆ ಜಿಹಾದ್ ಕಾಣಲು ಅವಕಾಶವಿಲ್ಲದ ಕಾರಣ, ಅದು ಸಾಮಾಜಿಕ ಕ್ಷೋಭೆಯ ವಿಷಯವಾಗಿ ಕಾಣುವುದಿಲ್ಲ. ತಪ್ಪು ಯಾರದು ಎಂದು ಬೆಟ್ಟು ಮಾಡಿ, ಸರ್ಕಾರದ ಉತ್ತರದಾಯಿತ್ವವನ್ನು ಪ್ರಶ್ನಿಸುವುದು ಸಹಜವಾಗಿ ಕಾಣುತ್ತದೆ. ವಿರೋಧ ಪಕ್ಷವಾದ್ದರಿಂದ ಸರ್ಕಾರದ ದೋಷಿಯಾಗುತ್ತದೆ, ಸಮಾಜ ತಪ್ಪಿಸಿಕೊಂಡುಬಿಡುತ್ತದೆ.
ನಾಗರಿಕ ಸಮಾಜದ ವ್ಯಾಪ್ತಿ-ಆದ್ಯತೆ
ಮೈಸೂರಿನಲ್ಲಿ ಇಂತಹ ಘಟನೆಗಳು ಸಂಭವಿಸುತ್ತಲೇ ಇವೆ. ರಾಜಧಾನಿ ಬೆಂಗಳೂರಿನಲ್ಲಿ ಇದು ಸುದ್ದಿಯೇ ಆಗದಷ್ಟು ಮಟ್ಟಿಗೆ ಸಾಮಾನ್ಯ ವಿಷಯವಾಗಿದೆ. ಆದರೆ ಇಲ್ಲಿ ಕ್ರಿಯಾಶೀಲವಾಗಿ ಯೋಚಿಸಬೇಕಾದ ನಾಗರಿಕ ಸಮಾಜ (Civil Society) ಏನು ಮಾಡುತ್ತಿದೆ. ಈ ಪ್ರಶ್ನೆಗೆ ಪ್ರತಿಭಟನೆ ನಡೆಸಿ, ನ್ಯಾಯ ಕೋರುವ ಶಾಂತಿ ಸೌಹಾರ್ದತೆಗಾಗಿ ಅಹರ್ನಿಶಿ ಹೋರಾಡುತ್ತಲೇ ಬಂದಿರುವ ಪ್ರಗತಿಪರ-ಮಹಿಳಾ ಸಂಘಟನೆಗಳ ಕಡೆ ಬೆಟ್ಟು ಮಾಡಲಾಗುತ್ತದೆ. ಈ ಸಂಘಟನೆಗಳು ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ, ಪ್ರಾಮಾಣಿಕವಾಗಿ ಮಾಡುತ್ತಲೇ ಬಂದಿವೆ. ಆದರೆ ಇದನ್ನು ದಾಟಿ ನೊಡಿದಾಗ ನಾಗರಿಕ ಸಮಾಜವನ್ನು ವಿಶಾಲ ಹಂದರದಲ್ಲಿಟ್ಟು (Broader Canvas) ನೋಡಿದಾಗ, ಈ ಸಮಾಜವನ್ನು ಪ್ರತಿನಿಧಿಸುವ ಇನ್ನಿತರ ಸಂಘ-ಸಂಸ್ಥೆಗಳ ಜವಾಬ್ದಾರಿ ನೆನಪಾಗಬೇಕಲ್ಲವೇ ?
ಧರ್ಮಸ್ಥಳದಿಂದ ಕೋಲಾರದವರೆಗೂ, ಬೀದರ್‌ನಿಂದ ಮೈಸೂರಿನವರೆಗೂ ದೃಷ್ಟಿ ಹರಿಸಿದಾಗ, ಸಮಾಜದಲ್ಲಿ ನಿರಂತರವಾಗಿ ಸಂಭವಿಸುತ್ತಲೇ ಇರುವ, ವ್ಯವಸ್ಥಿತವಾಗಿ ಹರಡಿರುವ ಪಾತಕ ಜಗತ್ತು ದಿನದಿಂದ ದಿನಕ್ಕೆ ಅನಾಗರಿಕತೆಯ ಪರಾಕಾಷ್ಠೆ ತಲುಪುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ. ಈ ಎಲ್ಲ ಘಟನೆಗಳಿಗೂ ಕೂಡಲೇ ಪ್ರತಿಕ್ರಿಯಿಸಿ ನೊಂದವರಿಗೆ, ಹತ್ಯೆಗೀಡಾದವರಿಗೆ, ಸಂತ್ರಸ್ತರಿಗೆ ನ್ಯಾಯ ಕೋರುತ್ತಲೇ ಬಂದಿರುವುದು ನಾಗರಿಕ ಸಮಾಜದ ಕೆಲವೇ ಸಂಘಟನೆಗಳು ಮಾತ್ರ. ದಲಿತ, ಮಹಿಳೆ, ಕಾರ್ಮಿಕ, ಬುಡಕಟ್ಟು ಸಮುದಾಯಗಳ ಪರ ಕಾಳಜಿ, ಕಳಕಳಿ ಇರುವ ಸಂಘಟನೆಗಳು. ಆದರೆ ನಾಗರಿಕ ಸಮಾಜದ ಹಂದರದಲ್ಲಿ ಇನ್ನೂ ಹಲವು ರೂಪದ, ಆಯಾಮದ ಸಂಸ್ಥೆಗಳು, ಸಂಘಟನೆಗಳು ಇರುವುದು ವಾಸ್ತವ ಅಲ್ಲವೇ ?
ಸಾಮಾನ್ಯ ಪರಿಭಾಷೆಯಲ್ಲಿ ಸಮಾಜವನ್ನು ನಾಗರಿಕತೆಯತ್ತ ಕೊಂಡೊಯ್ಯಲು ಶ್ರಮಿಸುವ, ಅದರೊಳಗಿನ ಅನಾಗರಿಕ ಮನೋಧೋರಣೆಗಳನ್ನು ಹೋಗಲಾಡಿಸಲು ಪ್ರಯತ್ನಿಸುವ, ಈ ಸಮಾಜದಲ್ಲಿ ನಡೆಯುವ ಸಾಮೂಹಿಕ/ವ್ಯಕ್ತಿಗತ ಅತ್ಯಾಚಾರ-ಹತ್ಯೆ, ಅಸ್ಪೃಶ್ಯತೆ ಮತ್ತು ಇನ್ನಿತರ ಸಮಾಜಘಾತುಕ, ಅಮಾನವೀಯ ದುಷ್ಕೃತ್ಯಗಳನ್ನು ತಡೆಗಟ್ಟಲು ಯೋಚಿಸುವ (ಶ್ರಮಿಸುವ) ಎಲ್ಲ ಸಂಘ ಸಂಸ್ಥೆಗಳೂ ಸಹ ʼ ನಾಗರಿಕ ಸಮಾಜ ʼದ ವ್ಯಾಪ್ತಿಗೆ ಒಳಗಾಗುತ್ತವೆ. ಹಾಗೆ ನೋಡಿದಾಗ ನಮಗೆ ಆರ್ಥಿಕವಾಗಿ ಸದೃಢವಾದ ಸ್ಥಾಪಿತ ಕಾರ್ಮಿಕ ಸಂಘಟನೆಗಳು, ಸಾಹಿತ್ಯಿಕ ಸಂಘ-ಸಂಸ್ಥೆಗಳು, ಸಾಂಸ್ಕೃತಿ ಸಂಘಟನೆಗಳು, ಜನರ ಹಕ್ಕುಗಳಿಗಾಗಿ ಶ್ರಮಿಸುವ ಮಾನವ ಹಕ್ಕುಗಳ, ಪರಿಸರ ರಕ್ಷಣೆಯ ಸಂಘಟನೆಗಳು, ಇವೆಲ್ಲವೂ ಸಹ ನಾಗರಿಕ ಸಮಾಜದ ಗುಂಪುಗಳಾಗಿಯೇ (Civil Society Groups) ಕಾಣುತ್ತವೆ.

ವ್ಯಕ್ತಿ ನೆಲೆಯಿಂದಾಚೆ ನೋಡಿದಾಗ
ಈ ಸಂಘಟನೆಗಳು, ಸಂಘ ಸಂಸ್ಥೆಗಳು, ಸಮಾಜಘಾತುಕ ಕೃತ್ಯಗಳಾಗಲೀ , ಹಸುಳೆಯ ಅತ್ಯಾಚಾರದಂತಹ ಹೀನ ಕೃತ್ಯಗಳಾಗಲೀ ಸಂಭವಿಸಿದಾಗ, ಏಕೆ ಪ್ರತಿಕ್ರಿಯಿಸುವುದಿಲ್ಲ ? ನೇರವಾಗಿ ಹೇಳುವುದಾದರೆ ಬ್ಯಾಂಕ್, ಜೀವ ವಿಮೆ, ರೈಲ್ವೆ, ಕಾರ್ಖಾನೆಗಳು, ಇನ್ನಿತರ ಉದ್ಯಮಗಳಲ್ಲಿ ಕ್ರಿಯಾಶೀಲವಾಗಿರುವ ಕಾರ್ಮಿಕ ಸಂಘಟನೆಗಳು ಏಕೆ ಪ್ರತಿಕ್ರಿಯಿಸುವುದಿಲ್ಲ ? ಈ ಕಾರ್ಮಿಕರನ್ನು ಪ್ರತಿನಿಧಿಸುವ ಎಡಪರ ಸಂಘಟನೆಗಳು ಸಹಜವಾಗಿ ರಾಜಕೀಯ ಆದ್ಯತೆಯಾಗಿ ಇಲ್ಲಿ ಕ್ರಿಯಾಶೀಲವಾಗಿ ಕಾಣುತ್ತವೆ. ಆದರೆ ಇದನ್ನೂ ದಾಟಿ ತಮ್ಮ ಸ್ವಂತ ಸಾಂಘಿಕ ಅಸ್ತಿತ್ವದ ನೆಲೆಯಲ್ಲಿ ನಿಂತು ಸಾರ್ವಜನಿಕವಾಗಿ ಒಂದು ಪತ್ರಿಕಾ ಹೇಳಿಕೆ ನೀಡುವುದನ್ನೂ ಕಾಣಲಾಗುವುದಿಲ್ಲ. ಇನ್ನು ಸಾಹಿತ್ಯ, ಸಾಂಸ್ಕೃತಿಕ ವಲಯದಲ್ಲೂ ಸಹ ಕಾಳಜಿ ಇರುವ ವ್ಯಕ್ತಿಗಳು ಥಟ್ಟನೆ ಪ್ರತಿಕ್ರಿಯಿಸಿ, ಪ್ರತಿರೋಧ ವ್ಯಕ್ತಪಡಿಸುವುದು ಸಾಮಾನ್ಯ ದೃಶ್ಯ.
ಆದರೆ ಸಾಂಘಿಕವಾಗಿ, ಸಾಂಸ್ಥಿಕವಾಗಿ ಈ ನಾಗರಿಕ ಸಮಾಜದ ಗುಂಪುಗಳು, ವ್ಯಕ್ತಿಗತ ನೆಲೆಯನ್ನು ದಾಟಿ, ಸಾಂಘಿಕ-ಸಾಂಸ್ಥಿಕ ನೆಲೆಯಲ್ಲಿ ಪ್ರತಿಸ್ಪಂದಿಸುವುದು ಅಪರೂಪದ ಸಂಗತಿ. ಈ ಆವರಣದಲ್ಲಿ ಸೂಕ್ಷ್ಮವಾಗಿ ಗಮನಿಸಬೇಕಾದ ಮತ್ತೊಂದು ಸಾಂಸ್ಥಿಕ ವಲಯ ಎಂದರೆ ಶಿಕ್ಷಕ-ಬೋಧಕ ವರ್ಗ, ವಿಶ್ವವಿದ್ಯಾಲಯದ ಬೌದ್ಧಿಕ ವಲಯ ಮತ್ತು ಸಾಂವಿಧಾನಿಕ ಫಲಾನುಭವಿಗಳು. ನೈತಿಕತೆಯ ದೃಷ್ಟಿಯಿಂದ ನೋಡಿದಾಗ, ಈ ವಲಯದಿಂದಲೇ ಸಮಾಜಘಾತುಕ ಬೆಳವಣಿಗೆಗಳಿಗೆ ತೀಕ್ಷ್ಣ ಪ್ರತಿಕ್ರಿಯೆ ಬರಬೇಕಲ್ಲವೇ ? ಏಕೆಂದರೆ ಈ ರೀತಿಯ ಅನ್ಯಾಯಗಳಿಂದ ಮುಕ್ತರಾಗಿ ಬದುಕುವ ಅವಕಾಶಗಳನ್ನು ಸಂವಿಧಾನ ಇಲ್ಲಿ ಕಲ್ಪಿಸಿದೆ ಈ ವರ್ಗಗಳಲ್ಲಿ ನಡೆದುಬಂದ ಹಾದಿಯನ್ನು ಹಿಂತಿರುಗಿ ನೋಡುವ ವಿವೇಕ ಮತ್ತು ವರ್ತಮಾನದ ಜನಸಂಕಟಗಳಿಗೆ ಸ್ಪಂದಿಸುವ ಸಂಯಮ ಇರಬೇಕಲ್ಲವೇ ?

ವ್ಯಕ್ತಿನಿಷ್ಠವಾಗಿ ನೋಡಿದಾಗ, ವ್ಯಕ್ತಿಗತ ನೆಲೆಯಲ್ಲಿ ಈ ವಲಯಗಳ ಅನೇಕರು ಇಂದು ಪುರೋಗಾಮಿ ಹೋರಾಟಗಳಲ್ಲಿ ನಿರಂತರವಾಗಿ ಗುರುತಿಸಿಕೊಂಡು, ತಮ್ಮ ಸಾಂಸ್ಥಿಕ ತಡೆಗೋಡೆಗಳನ್ನೂ ದಾಟಿ, ಸ್ಪಂದಿಸುವುದನ್ನು ಕಾಣುತ್ತಿದ್ದೇವೆ. ಈ ಕೆಲವೇ ವ್ಯಕ್ತಿಗಳು ಇಡೀ ಸಮಾಜದ ಪ್ರತಿನಿಧಿಗಳಾಗಿ ಕಾಣುತ್ತಾರೆ. ಆದರೆ ವಸ್ತುನಿಷ್ಠವಾಗಿ, ಸಮಷ್ಟಿ ನೆಲೆಯಲ್ಲಿ ನೋಡಿದಾಗ, ಈ ಸಂಘ ಸಂಸ್ಥೆಗಳು ನಿರ್ಲಿಪ್ತವಾಗಿರುವುದು ಅಥವಾ ನಿಷ್ಕ್ರಿಯವಾಗಿರುವುದು, ಅನ್ಯಮನಸ್ಕರಾಗಿರುವುದು ಸಾಮಾನ್ಯವಾಗಿ ಕಾಣಬಹುದಾದ ದೃಶ್ಯ. ಏಕೆ ಹೀಗೆ ? ಇದಕ್ಕೆ ಉತ್ತರಿಸಬೇಕಿರುವುದು ಸ್ಥಾಪಿತ ಸಂಘ-ಸಂಘಟನೆ-ಸಂಸ್ಥೆಗಳು. ಜಗತ್ತಿನ ಇತಿಹಾಸದಲ್ಲಿ ಈ ರೀತಿಯ ನಾಗರಿಕ ಸಮಾಜದ ಗುಂಪುಗಳೇ ಅನೇಕ ವಿಪ್ಲವಕಾರಿ ಹೋರಾಟಗಳಿಗೆ, ಕ್ರಾಂತಿಕಾರಿ ಬದಲಾವಣೆಗೆ ಕಾರಣವಾಗಿರುವುದನ್ನು ಚರಿತ್ರೆಯುದ್ದಕ್ಕೂ ಗಮನಿಸಬಹುದು. ಆದರೆ ಭಾರತದಲ್ಲಿ ಇದಕ್ಕೆ ವ್ಯತಿರಿಕ್ತವಾದ ಸನ್ನಿವೇಶವನ್ನು ಕಾಣುತ್ತಿದ್ದೇವೆ.
ಅರಿವು ಮತ್ತು ಪ್ರಜ್ಞೆಯ ವಿಸ್ತರಣೆ
ಈ ವಾತಾವರಣವನ್ನು, ಪ್ರತಿಭಟನೆ-ಹೋರಾಟಗಳ ಚೌಕಟ್ಟಿನಿಂದ ಹೊರತುಪಡಿಸಿ ನೋಡಿದಾಗ, ಸಮಾಜದಲ್ಲಿ ʼ ನಾಗರಿಕ ಪ್ರಜ್ಞೆ-ಸಾಮಾಜಿಕ ಅರಿವು ʼ ಹಾಗೂ ʼ ಜಾಗೃತಿ ʼ ಯನ್ನು ಮೂಡಿಸುವ ( Civic Consciousness-Social awareness & awakening ) ಜವಾಬ್ದಾರಿ ಇಡೀ ನಾಗರಿಕ ಸಮಾಜದ ಮೇಲಿರುತ್ತದೆ. ಈ ಸಮಾಜವನ್ನು ಪ್ರತಿನಿಧಿಸುವ ಪ್ರತಿಯೊಂದು ಸಂಘ-ಸಂಸ್ಥೆ-ಸಂಘಟನೆಯೂ ಈ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ. ಈ ನೈತಿಕ ಕರ್ತವ್ಯವನ್ನು ನಾಗರಿಕ ಗುಂಪುಗಳು (Civic groups) ಮಾಡುತ್ತಿವೆಯೇ ? ಮಹಿಳಾ ಸಂಘಟನೆಗಳು ಲಿಂಗ ಸೂಕ್ಷ್ಮತೆಯನ್ನು ಬೆಳೆಸುವ, ಲೈಂಗಿಕ ಅರಿವು ಮೂಡಿಸುವ, ಲಿಂಗತ್ವ ಅಸಮಾನತೆ-ತಾರತಮ್ಯಗಳನ್ನು ತಿಳಿಸಿಕೊಡುವ, ಲಿಂಗತ್ವ ದೌರ್ಜನ್ಯಗಳ ಸಾಮಾಜಿಕ ಕಾರಣಗಳದ ಬಗ್ಗೆ ತಿಳುವಳಿಕೆ ಮೂಡಿಸುವ ಪ್ರಯತ್ನಗಳನ್ನು, ಇದು ಮಹಿಳೆಯರದ್ದೇ ಜವಾಬ್ದಾರಿ ಎನ್ನುವ ರೀತಿಯಲ್ಲಿ ಮಾಡುತ್ತಲೇ ಬಂದಿವೆ.
ಈ ಪ್ರಯತ್ನಗಳು ನಡೆಯುತ್ತಿರುವುದು ಸ್ವಾಯತ್ತ ಅಥವಾ ತಾತ್ವಿಕ ತಳಹದಿಯ ಸಂಘಟನೆಗಳ ಮೂಲಕ ಮಾತ್ರ. ಹಿತವಲಯದ ವರ್ಗಗಳು, ವೈಟ್ ಕಾಲರ್ ನೌಕರಿಯಲ್ಲಿರುವ ಕಾರ್ಮಿಕ ಸಂಘಟನೆಗಳು, ಸಾಹಿತ್ಯ-ಸಾಂಸ್ಕೃತಿ ವಲಯದ ಸಂಘಗಳು ಸಾಂಘಿಕ ನೆಲೆಯಲ್ಲಿ ಈ ಜವಾಬ್ದಾರಿಯನ್ನು ಏಕೆ ಹೊರಬಾರದು ? 9 ವರ್ಷದ ಹಸುಳೆ ಮೈಸೂರಿನ ಹೃದಯಭಾಗದಲ್ಲಿ ಅತ್ಯಾಚಾರ-ಹತ್ಯೆಗೀಡಾಗುತ್ತದೆ ಎಂಬ ಆಘಾತ ಈ ಸಂಘಟನೆಗಳನ್ನು ಕಾಡಬೇಕಲ್ಲವೇ ? ಮಾನವ-ಆರ್ಥಿಕ ಸಂಪನ್ಮೂಲಗಳನ್ನು ಹೊಂದಿರುವ, ಸ್ವತಂತ್ರ ಅಭಿಪ್ರಾಯ ತಳೆಯುವ ಬುದ್ಧಿಮತ್ತೆ ಪಡೆದಿರುವ, ಸಂಘಟನಾತ್ಮಕವಾಗಿ ಹೆಚ್ಚಿನ ಅವಕಾಶಗಳನ್ನು ಗಳಿಸಿರುವ ಈ ಸಂಘಟನೆಗಳು, ಇಂತಹ ಸೂಕ್ಷ್ಮ ವಿಚಾರಗಳಲ್ಲಿ ಜನಸಾಮಾನ್ಯರಲ್ಲಿ, ತಳಮಟ್ಟದ ಸಮಾಜದಲ್ಲಿ ಅರಿವು ಮೂಡಿಸುವ ಪ್ರಯತ್ನಗಳನ್ನು ವ್ಯವಸ್ಥಿತವಾಗಿ ಮಾಡಬಹುದಲ್ಲವೇ ?
ಸಾಮೂಹಿಕ ಜವಾಬ್ದಾರಿಯ ಕಡೆಗೆ
ಈ ಪ್ರಯತ್ನಗಳನ್ನು ಅಲ್ಲಲ್ಲಿ, ಹಲವಾರು ವ್ಯಕ್ತಿಗಳ ಸಾಮಾಜಿಕ ಬದ್ಧತೆಯ ಕಾರಣ ಕಾಣಬಹುದಾದರೂ, ಸಾಂಘಿಕ ಸ್ವರೂಪದ ಪ್ರಯತ್ನಗಳು ಎಲ್ಲಿಯೂ ಕಂಡುಬರುವುದಿಲ್ಲ. ʼ ಸಾಮಾಜಿಕ ಜವಾಬ್ದಾರಿ ʼ (Social Responsibility ) ಎಂಬ ವಿಶಾಲ ಹಂದರದಲ್ಲಿ ʼ ನಾಗರಿಕ ಜವಾಬ್ದಾರಿʼ ಯನ್ನು (Civic Responsibility) ಪ್ರಧಾನವಾಗಿ ಗುರುತಿಸಬಹುದಾದರೆ, ಈ ಜವಾಬ್ದಾರಿಯನ್ನು ಹೊರಬೇಕಾದ ನೈತಿಕ ಉತ್ತರದಾಯಿತ್ವ ಎಲ್ಲ ʼ ನಾಗರಿಕ ಸಮಾಜದ ಗುಂಪುಗಳಲ್ಲೂ (Civil Society Groups) ಸಮಾನವಾಗಿ ಇರಬೇಕಾಗುತ್ತದೆ. ಆದರೆ ದುರದೃಷ್ಟವಶಾತ್, ಈ ಜವಾಬ್ದಾರಿಯನ್ನು ಈಗ ಎಡಪಂಥೀಯ, ಪುರೊಗಾಮಿ ಸಂಘಟನೆಗಳ, ಮಹಿಳಾ ಗುಂಪುಗಳ ಹೆಗಲಿಗೇರಿಸಲಾಗಿದೆ.

ವರ್ತಮಾನದ ಸಮಾಜದಲ್ಲಿ ಕಾಣದಾಗುತ್ತಿರುವುದು ಮತ್ತು ಬೆಳೆಸಬೇಕಿರುವುದು, ಲಿಂಗತ್ವ ಸೂಕ್ಷ್ಮತೆ, ಮಹಿಳಾ ಸಂವೇದನೆ, ಸಾಮಾಜಿಕ ಪ್ರಜ್ಞೆ, ನೊಂದವರ ಪರ ಅಂತಃಕರಣ ಮತ್ತು ಸಹಾನುಭೂತಿ ಹಾಗೂ ಎಲ್ಲಕ್ಕಿಂತಲೂ ಮುಖ್ಯವಾಗಿ ಸಾರ್ವಜನಿಕ ಅರಿವು ಮತ್ತು ಪ್ರಜ್ಞೆ (Public Awarenesss and Consciuousness ) ̤ ಇದನ್ನು ಆಗುಮಾಡುವ ನೈತಿಕ-ಸಾಂವಿಧಾನಿಕ ಜವಾಬ್ದಾರಿ ಇಡೀ ನಾಗರಿಕ ಸಮಾಜದ ಮೇಲಿದೆ. ಇದರೊಳಗಿನ ಕ್ರಿಯಾಶೀಲ ಗುಂಪುಗಳಿಂದಾಚೆಗೆ ನೋಡಿದಾಗ, ನಮಗೆ ಕಾಣುವುದು ನಿರ್ಲಿಪ್ತತೆ, ನಿಷ್ಕ್ರಿಯತೆ ಅಥವಾ ಅಸ್ಮಿತೆಯಾಧಾರಿತ ಅವಗಣನೆ. ಅಮಾನುಷ ಮನೋಭಾವ, ಸಮಾಜಘಾತುಕ ಮನಸ್ಥಿತಿ ಮತ್ತು ಹಿಂಸೆ-ಕ್ರೌರ್ಯ ಸಮಾಜದಲ್ಲಿ ಹೆಚ್ಚಾಗುತ್ತಿರುವಾಗ, ರಾಜಕೀಯ ಪಕ್ಷಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಈ ವಿದ್ಯಮಾನವನ್ನು ಬಳಸುತ್ತಿರುವಾಗ, ನಾಗರಿಕ ಸಮಾಜದ ಜವಾಬ್ದಾರಿ ತುಸು ಹೆಚ್ಚಾಗಿಯೇ ಕಾಣುವುದು ಸ್ವಾಭಾವಿಕ.
ಈ ನಿಟ್ಟಿನಲ್ಲಿ ಸಾಮಾಜಿಕ ಕಾಳಜಿ-ಕಳಕಳಿ ಇರುವ ಎಲ್ಲ ವ್ಯಕ್ತಿ-ಸಂಘಟನೆ-ಸಂಸ್ಥೆಗಳೂ ಯೋಚಿಸುವಂತಾದರೆ, ಆರೋಗ್ಯಕರ ಸಮಾಜವನ್ನು ಕಟ್ಟಲು ಸಾಧ್ಯವಾದೀತು..
-೦-೦-೦-೦-