ಕಳೆದ ವರ್ಷ ಜೂನ್ 15 ರಂದು ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಸೇನಾಪಡೆಯೊಂದಿಗೆ ನಡೆದ ಸಂಘರ್ಷದಲ್ಲಿ ಸಾವು ನೋವು ಉಂಟಾಗಿರುವುದನ್ನು ಇದೇ ಮೊದಲ ಬಾರಿಗೆ ಚೀನಾ ಒಪ್ಪಿಕೊಂಡಿದೆ.
ಪೂರ್ವ ಲಡಾಕ್ ನ ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಸೇನಾ ಪಡೆಯೊಂದಿಗೆ ನಡೆದ ಸಂಘರ್ಷದಲ್ಲಿ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯ (ಪಿಎಲ್‌ಎ) 5 ಮಿಲಿಟರಿ ಅಧಿಕಾರಿಗಳು ಮತ್ತು ಸೈನಿಕರು ಮೃತಪಟ್ಟಿರುವದಾಗಿ ಅಧಿಕೃತವಾಗಿ ಪಿಎಲ್‌ಎ ಒಪ್ಪಿಕೊಂಡಿದೆ.

ಒಪ್ಪಂದವನ್ನು ಉಲ್ಲಂಘಿಸಿ ಚೀನಾದ ಕಡೆಗೆ ದಾಟಿ ಬಂದ ಭಾರತೀಯ ಸೈನ್ಯದ ವಿರುದ್ಧದ ತೀವ್ರ ಹೋರಾಟದಲ್ಲಿ ಚೆನ್ ಹಾಂಗ್‌ಜುನ್, ಚೆನ್ ಕ್ಸಿಯಾಂಗ್‌ರಾಂಗ್, ಕ್ಸಿಯಾವೋ ಸಿಯುವಾನ್ ಮತ್ತು ವಾಂಗ್ ಝೌರಾನ್ ಮೃತಪಟ್ಟಿದ್ದಾರೆ ಎಂದು ಚೀನಾದ ಪತ್ರಿಕೆ ದ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.
ಗಾಲ್ವಾನ್ ಕಣಿವೆಯಲ್ಲಿ ಕಳೆದ ವರ್ಷ ಜೂನ್ 15ರಂದು ನಡೆದ ಸಂಘರ್ಷದಲ್ಲಿ ಭಾರತದ ಒಟ್ಟು 20 ಮಂದಿ ಯೋಧರು ಹುತಾತ್ಮರಾಗಿದ್ದರು. ಚೀನಾದ ಕಡೆಯಿಂದಲೂ ಸರಿಸುಮಾರುಯ ಇಷ್ಟೇ ಪ್ರಮಾಣದ ಅಥವಾ ಇದಕ್ಕಿಂತಲೂ ಹೆಚ್ಚು ಸೈನಿಕರ ಮರಣ ಸಂಭವಿಸಿರಬಹುದೆಂದು ಹೇಳಲಾಗಿತ್ತು. ಅದಾಗ್ಯೂ, ಚೀನಾ ಇದುವರೆಗೂ ಗಾಲ್ವಾನ್ ಕಣಿವೆ ಸಂಘರ್ಷದಲ್ಲಿ ತನ್ನ ಕಡೆಯಲ್ಲಿ ಆಗಿರುವ ಸಾವು ನೋವುಗಳನ್ನು ಒಪ್ಪಿಕೊಂಡಿರಲಿಲ್ಲ. ಇತ್ತೀಚೆಗಷ್ಟೇ ರಷ್ಯಾದ ಸುದ್ದಿ ಸಂಸ್ಥೆ ಟಾಸ್ ಗಲ್ವಾನ್ ಕಣಿವೆಯಲ್ಲಿ 45 ಮಂದಿ ಚೀನಾದ ಸೈನಿಕರು ಮೃತಪಟ್ಟಿದ್ದಾರೆ ಎಂದು ಹೇಳಿರುವುದನ್ನು ಭಾರತದ ಸೇನಾ ಕಮಾಂಡರ್ ಉಲ್ಲೇಖಿಸಿದ ನಂತರ ಚೀನಾ ಬಹಿರಂಗವಾಗಿ ಇಂದು ಒಪ್ಪಿಕೊಂಡಿದೆ.