ಸುಮಾರು ಮೂರು ತಿಂಗಳ ತನಿಖೆಯ ನಂತರ ಪ್ರತಿಧ್ವನಿ ಮತ್ತು TNM ಬಹಿರಂಗಪಡಿಸಿದ ಬೆಂಗಳೂರಿನ ಮತದಾರರ ಡೇಟಾ ಕಳ್ಳತನದಲ್ಲಿ ತೊಡಗಿರುವ ಚಿಲುಮೆ ಶೈಕ್ಷಣಿಕ ಸಾಂಸ್ಕೃತಿಕ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಹಿಂದೆ ಬಿಜೆಪಿ ಇದೆ ಎಂಬ ಆರೋಪಕ್ಕೆ ಪೂರಕ ಎನಿಸುವ ಹಲವು ಮಾಹಿತಿಗಳು ಹೊರಹೊಮ್ಮಿವೆ.
ಚಿಲುಮೆ ಟ್ರಸ್ಟ್ ಬಳಿ ಉದ್ಯೋಗಾಕಾಂಕ್ಷಿಯಾಗಿ ಸಂಪರ್ಕಿಸಿದ ನಮ್ಮ ಮೂಲವು, ಹೊಂಗಸಂದ್ರದ ಬಿಜೆಪಿ ವಾರ್ಡ್ ಕಚೇರಿಯಲ್ಲಿಯೇ ನಕ್ಷೆ ಮಾಡುವುದು ಮತ್ತು ಮತದಾರರ ಡೇಟಾವನ್ನು ಹೇಗೆ ಸಂಗ್ರಹಿಸುವುದು ಎಂಬುದರ ಕುರಿತು ಏಜೆಂಟ್‌ಗಳಿಗೆ ತರಬೇತಿ ನೀಡುತ್ತಿದೆ ಎಂದು ಕಂಡುಹಿಡಿದಿದೆ. ಸೆಪ್ಟೆಂಬರ್ 2020 ರವರೆಗೆ, ವಾರ್ಡ್‌ನ ಕೌನ್ಸಿಲರ್ ಬಿಜೆಪಿಯ ಭಾರತಿ ರಾಮಚಂದ್ರ ಈ ಕಚೇರಿಯನ್ನು ಬಳಸಿದ್ದರೆ, ಪ್ರಸ್ತುತ ಕಚೇರಿಯನ್ನು ಶಾಸಕ ಸತೀಶ್ ರೆಡ್ಡಿ ಹೆಸರಿನಲ್ಲಿ ನಡೆಸಲಾಗುತ್ತಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತಮ್ಮ ಕಾರ್ಯಾಚರಣೆಯನ್ನು ನಿಲ್ಲಿಸುವಂತೆ ಆದೇಶಿಸಿದ ನಂತರವೂ ಚಿಲುಮೆಯ ಕ್ಷೇತ್ರ ಏಜೆಂಟರು ಅಕ್ರಮ ಮತದಾರರ ಡೇಟಾ ಸಂಗ್ರಹಣೆಯನ್ನು ಮುಂದುವರೆಸುತ್ತಿದ್ದಾರೆ ಎಂಬ ಹೇಳಿಕೆಗಳನ್ನು ಪರಿಶೀಲಿಸಲು ನಮ್ಮ ಮೂಲವು ರಹಸ್ಯವಾಗಿ ಅಲ್ಲಿಗೆ ಹೋಯಿತು. ಈ ಕುರಿತು ಈ ಹಿಂದೆ ವರದಿ ಮಾಡುತ್ತಿದ್ದಂತೆ, BBMP ತರಾತುರಿಯಲ್ಲಿ ಚಿಲುಮೆಗೆ ನೀಡಿದ್ದ ಅನುಮತಿಯನ್ನು ರದ್ದುಗೊಳಿಸಿತ್ತು. ಅದಾಗ್ಯೂ, ಕನಿಷ್ಠ ನವೆಂಬರ್ 17 ರವರೆಗೆ ಚಿಲುಮೆಯ ಕಾರ್ಯಾಚರಣೆಯು ಯಾವುದೇ ಬದಲಾವಣೆಯಿಲ್ಲದೆ ಮುಂದುವರಿದಿದೆ ಎಂದು ನಮ್ಮ ಮೂಲಗಳಿಗೆ ಖಚಿತವಾಗಿ ಮಾಹಿತಿ ದೊರೆತಿದೆ.
ಬಿಜೆಪಿ ನಾಯಕ ಮತ್ತು ಮಾಜಿ ಶಾಸಕ ನಂದೀಶ ರೆಡ್ಡಿ ಮತ್ತು ಎನ್‌ಜಿಒ ನಡುವಿನ ಹಣಕಾಸಿನ ವಹಿವಾಟುಗಳ ಬಗೆಗಿನ ಮತ್ತೊಂದು ವರದಿ ಬಹಿರಂಗಪಡಿಸಿದ ಬೆನ್ನಲ್ಲೇ ಈ ಅಂಶ ಬಹಿರಂಗವಾಗಿದೆ. ಮತದಾರರಿಗೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡುವ ಬಿಬಿಎಂಪಿ ಆದೇಶವನ್ನು ಚಿಲುಮೆ ಹೇಗೆ ದುರುಪಯೋಗಪಡಿಸಿಕೊಂಡಿದೆ ಎಂಬುದನ್ನು ನಮ್ಮ ತನಿಖಾ ವರದಿಯು ಬಹಿರಂಗಪಡಿಸಿದ ಬಳಿಕ ಈ ಒಟ್ಟಾರೆ ಪ್ರಕ್ರಿಯೆಯು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.
ಬಿಬಿಎಂಪಿ ರದ್ದತಿ ಆದೇಶವನ್ನು ನೀಡಿದ್ದರೂ, ಅದನ್ನು ಧಿಕ್ಕರಿಸಿ ಚಿಲುಮೆ ಹೊಸ ಫೀಲ್ಡ್ ಏಜೆಂಟರನ್ನು ನೇಮಿಸಿಕೊಳ್ಳುತ್ತಿದೆ ಎಂಬ ಸುಳಿವು ಆಧರಿಸಿ, ನಮ್ಮ ಮೂಲವು ನವೆಂಬರ್ 12 ರಂದು ಮೊದಲ ಬಾರಿಗೆ ಕೆಲಸ ಹುಡುಕುವ ನೆಪದಲ್ಲಿ ಚಿಲುಮೆಯ ಮಲ್ಲೇಶ್ವರಂ ಕಚೇರಿಗೆ ಭೇಟಿ ನೀಡಿತ್ತು. ಕೆಲವು ಮೂಲಭೂತ ಪ್ರಶ್ನೆಗಳ ನಂತರ ಕೆಲಸಕ್ಕೆ ಆಯ್ಕೆ ಮಾಡಲಾಗಿದೆ ಎಂದು ಸಂದರ್ಶನ ಮಾಡಿದ ಮಹಿಳೆ, ನಮ್ಮ ಮೂಲದ ಬಳಿ ಹೇಳಿದ್ದಾಳೆ.
“ನಾನು ಬಿ.ಕಾಂ ಡ್ರಾಪ್ಔಟ್ ಎಂದು ಅವಳಿಗೆ ಹೇಳಿದೆ. ನನ್ನ ಬಳಿ ಸ್ಮಾರ್ಟ್‌ಫೋನ್, ಮೋಟಾರ್ ಬೈಕ್ ಮತ್ತು ಡ್ರೈವಿಂಗ್ ಲೈಸೆನ್ಸ್ ಇದೆಯೇ ಎಂದು ಕೇಳಿದಳು. ನಾನು ಇದೆ ಎಂದು ಹೇಳಿದಾಗ, ನನ್ನನ್ನು ಆಯ್ಕೆ ಮಾಡಲಾಗಿದೆ ಎಂದು ಆಕೆ ಹೇಳಿದಳು, ”ಎಂದು ಮೂಲ ತಿಳಿಸಿವೆ. ಅವರಿಗೆ ಮಾಸಿಕ 23,000 ರೂಪಾಯಿ ವೇತನ ಜೊತೆಗೆ 2,000 ರೂಪಾಯಿ ಇಂಧನ ಭತ್ಯೆ ನೀಡುವುದಾಗಿ ಮಹಿಳೆ ತಿಳಿಸಿದ್ದಾಳೆ.
ನಂತರ ಅದೇ ಮಹಿಳೆಯಿಂದ ನವೆಂಬರ್ 16 ರಂದು ಫೋನ್ ಕರೆ ಬಂದಿದ್ದು, ಮರುದಿನ ತರಬೇತಿಗೆ ಹೊಸ ಬ್ಯಾಚ್‌ಗೆ ಸೇರುವಂತೆ ತಿಳಿಸಿದ್ದಾಳೆ. ದೂರವಾಣಿ ಕರೆಯಲ್ಲಿ ಚಿಲುಮೆ ಕಾರ್ಯನಿರ್ವಾಹಕ ‘ಸರ್ವೇ ಕೆಲಸ’ ಮಾಡಬೇಕಾಗಿದೆ ಎಂದು ತಮ್ಮ ಕೆಲಸದ ಬಗ್ಗೆ ವಿವರಿಸಿದ್ದಾರೆ (ಫೋನ್ ಕರೆ ರೆಕಾರ್ಡಿಂಗ್ ನಮ್ಮ ಬಳಿ ಇದೆ). ಬಳಿಕ ಅವರು ವಿಷಯಗಳನ್ನು ಮುಂದುವರಿಸುವ ಮೇಲ್ವಿಚಾರಕರನ್ನು ಸಂಪರ್ಕಿಸಲು ಕೇಳಿಕೊಂಡಿದ್ದಾರೆ. ದಕ್ಷಿಣ ಬೆಂಗಳೂರಿನ ಹೊಂಗಸಂದ್ರ ಪ್ರದೇಶದಲ್ಲಿ ತರಬೇತಿ ಕೇಂದ್ರದ ಸ್ಥಳವನ್ನು ಕಳುಹಿಸಿದ್ದು, ಮರುದಿನ ಸ್ಥಳಕ್ಕೆ ಆಗಮಿಸಿದಾಗ ಬಿಜೆಪಿಯ ಶಾಸಕ ಸತೀಶ್ ರೆಡ್ಡಿ ಅವರ ಕಚೇರಿಯಲ್ಲಿ ತರಬೇತಿ ನಡೆಯುತ್ತಿರುವುದು ಕಂಡು ಅಚ್ಚರಿಯಾಗಿದೆ. ಅವರು ಕಚೇರಿಯ ಒಳಗೆ ಮತ್ತು ಹೊರಗೆ ಫೋಟೋಗಳನ್ನು ತೆಗೆದುಕೊಂಡಿದ್ದು, ಕಚೇರಿಯ ಮುಖ್ಯ ಕಿಟಕಿಯ ಮೇಲೆ ಸತೀಶ್ ರೆಡ್ಡಿ ಅವರ ಚಿತ್ರವಿರುವ ದೊಡ್ಡ ಪೋಸ್ಟರ್ ಆ ಫೋಟೋಗಳಲ್ಲಿ ಸ್ಪಷ್ಟವಾಗಿ ಕಾಣಬಹುದು.
30 ಮಂದಿ ಹೊಸದಾಗಿ ಸೇರ್ಪಡೆಗೊಂಡ ಬ್ಯಾಚ್‌ಗೆ ನ.17ರಂದು ಬಿಜೆಪಿ ವಾರ್ಡ್ ಕಛೇರಿಯಲ್ಲಿ ಭೂಪಟ ತಯಾರಿಕೆಯಲ್ಲಿ ತರಬೇತಿ ನೀಡಲಾಗಿದೆ.
“ಇಂಟರ್‌ನೆಟ್‌ನಿಂದ ನೆರೆಹೊರೆಗಳ ಔಟ್‌ಲೈನ್ ನಕ್ಷೆಗಳನ್ನು ಹೇಗೆ ಡೌನ್‌ಲೋಡ್ ಮಾಡುವುದು ಮತ್ತು ಅವುಗಳನ್ನು ಹೇಗೆ ಭರ್ತಿ ಮಾಡುವುದು ಎಂದು ನಮಗೆ ತೋರಿಸಲಾಗಿದೆ. ಪ್ರತಿಯೊಂದು ರೀತಿಯ ಆಸ್ತಿಯು ಖಾಲಿಯಾಗಿದೆಯೇ ಅಥವಾ ನಿರ್ಮಾಣ ಹಂತದಲ್ಲಿದೆಯೇ, ಮಾಲೀಕರು ಅಥವಾ ಬಾಡಿಗೆದಾರರು ಇದ್ದಾರೆಯೇ ಎಂಬುದನ್ನು ಆಧರಿಸಿ ನಮಗೆ ಕೋಡ್‌ಗಳನ್ನು ನೀಡಲಾಗಿದೆ, ”ಎಂದು ಮೂಲ ಹೇಳಿದೆ. ಅವರಿಗೆ ನಿವಾಸಿಗಳ ಡೇಟಾವನ್ನು ಫಾರ್ಮ್‌ನಲ್ಲಿ ಭರ್ತಿ ಮಾಡಬೇಕಾಗಿತ್ತು. ನಾವು ಮೊದಲ ಹಗರಣವನ್ನು ತನಿಖೆ ಮಾಡಿದಾಗ ಇದೇ ರೀತಿಯ ನಕ್ಷೆಗಳು ಮತ್ತು ಪುಸ್ತಕಗಳನ್ನು ಪತ್ತೆಯಾಗಿತ್ತು.
ಹೊಸದಾಗಿ ನೇಮಕಗೊಂಡವರಿಗೆ ತರಬೇತಿ ನೀಡುತ್ತಿದ್ದಂತೆ, ಸುಮಾರು 20 ಜನರ ಮತ್ತೊಂದು ಬ್ಯಾಚ್ ಶಾಸಕರ ಕಚೇರಿಗೆ ಬಂದಿತು. “ಅವರು ಈಗಾಗಲೇ ತರಬೇತಿ ಪಡೆದ ಏಜೆಂಟ್ ಗಳಾಗಿದ್ದರು. ಅವರು ಬೆಳಿಗ್ಗೆ 10 ಗಂಟೆ ಸುಮಾರಿಗೆ ಬ್ರೀಫಿಂಗ್‌ಗೆ ಬಂದಿದ್ದು, ನಂತರ ಸಮೀಕ್ಷೆಗೆ ತೆರಳಿದರು, ”ಎಂದು ಅವರು ಹೇಳಿದರು.
ಕನ್ನಡ ಟಿವಿ ಚಾನೆಲ್‌ಗಳು ಆ ದಿನ ಬೆಳಿಗ್ಗೆ ಡೇಟಾ ಕಳ್ಳತನದ ವರದಿಯನ್ನು ಪ್ರಸಾರ ಮಾಡಲು ಪ್ರಾರಂಭಿಸಿದ ನಂತರ ಕಚೇರಿಯಲ್ಲಿ ವಾತಾವರಣವು ಉದ್ವಿಗ್ನಗೊಂಡಿತು. “ಮಧ್ಯಾಹ್ನ 12.30 ರ ಸುಮಾರಿಗೆ, ಸಮೀಕ್ಷೆಗೆ ತೆರಳಿದ್ದ ಎಲ್ಲಾ 20 ಜನರು ಕಚೇರಿಗೆ ಮರಳಿದ್ದು, ಸಂಕ್ಷಿಪ್ತ ಚರ್ಚೆಯ ನಂತರ ಎಲ್ಲರೂ ಚದುರಿ ಹೋಗಿದ್ದಾರೆ. ನಂತರ ನಮ್ಮ ಮೇಲ್ವಿಚಾರಕರು ನಮ್ಮ ಬಳಿಗೆ ಬಂದು ಕೆಲವು ತಾಂತ್ರಿಕ ಸಮಸ್ಯೆಗಳ ಕಾರಣ ಕೆಲಸ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು. ತಮ್ಮ ತರಬೇತಿಯನ್ನು ಯಾವಾಗ ಪುನರಾರಂಭಿಸಬಹುದು ಎಂದು ತಿಳಿಸಲಾಗುವುದು ಎಂದು ತಿಳಿಸಲಾಯಿತು.
ನವೆಂಬರ್ 19 ರಂದು, ನಮ್ಮ ಮೂಲವು ಅವರ ಮೇಲ್ವಿಚಾರಕರಿಗೆ ಮತ್ತೊಂದು ಕರೆ ಮಾಡಿ, ಚಿಲುಮೆ ಕಚೇರಿಗಳ ಮೇಲೆ ಪೋಲೀಸ್ ದಾಳಿಯ ಬಗ್ಗೆ ಕೇಳಿದ್ದೇನೆ ಎಂದು ಕೆಲಸದ ಬಗ್ಗೆ ಕೇಳಿದರು. ಮೇಲ್ವಿಚಾರಕರು ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು ಮತ್ತು ಚಿಂತಿಸಬೇಕಾಗಿಲ್ಲ ಎಂದು ಹೇಳಿದರು. ಸಣ್ಣಪುಟ್ಟ ಸಮಸ್ಯೆಗಳಿದ್ದು, ಶೀಘ್ರದಲ್ಲೇ ಕಾರ್ಯಾಚರಣೆ ಪುನರಾರಂಭಿಸಲಾಗುವುದು ಎಂದು ಮೇಲ್ವಿಚಾರಕರು ತಿಳಿಸಿದ್ದಾರೆ. ಆದರೆ, ಅಂದಿನಿಂದ ಒಂದನ್ನು ಹೊರತುಪಡಿಸಿ ಎಲ್ಲಾ ಮೊಬೈಲ್ ಸಂಖ್ಯೆಗಳು ಸ್ವಿಚ್ ಆಫ್ ಆಗಿವೆ.
ವಾರ್ಡ್ ಕಚೇರಿಯಲ್ಲಿ ತರಬೇತಿ ಕುರಿತು ಸತೀಶ್ ರೆಡ್ಡಿ ಅವರನ್ನು ಕೇಳಿದಾಗ, ಅಂತಹ ಯಾವುದೇ ಚಟುವಟಿಕೆಯ ಬಗ್ಗೆ ನನಗೆ ತಿಳಿದಿಲ್ಲ ಎಂದು ಹೇಳಿದರು. ತರಬೇತಿಗಾಗಿ ತನ್ನ ಅನುಮತಿಯಿಲ್ಲದೆ ಯಾರಾದರೂ ಕಚೇರಿಯನ್ನು ಬಳಸುತ್ತಿದ್ದಾರೆಯೇ ಎಂದು ಪ್ರಶ್ನಿಸಿದಾಗ, ಅನೇಕ ಜನರು ಕಚೇರಿಗೆ ಭೇಟಿ ನೀಡುತ್ತಾರೆ. ಆದರೆ. ತರಬೇತಿಯ ಬಗ್ಗೆ ತನಗೆ ತಿಳಿದಿಲ್ಲ ಎಂದು ಹೇಳಿದರು.