ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆ ಮತ್ತೊಮ್ಮೆ ಹಿಂದೂ ಮತ್ತು ಮುಸ್ಲಿಂ ಕಲಹಕ್ಕೆ ನಾಂದಿ ಹಾಡಿದೆ. ಚಿಕ್ಕಮಗಳೂರು ತಾಲೂಕಿನ ಮಹಜಿದ್ ಗ್ರಾಮದಲ್ಲಿರುವ ಪುರಾತನ ದರ್ಗಾ ಇದೀಗ ಚರ್ಚಾ ವಿಷಯವಾಗಿ ಮಾರ್ಪಾಡಾಗಿದೆ. ಚಿಕ್ಕಮಗಳೂರು ತಾಲೂಕಿನ ಜನತೆ ಇದು ದರ್ಗಾ ಅಲ್ಲ, ಚಂದ್ರಮೌಳೇಶ್ವರ ದೇವಸ್ಥಾನ ಎಂದು ಪ್ರತಿಪಾದಿಸುತ್ತಿದ್ದು ಧರ್ಮ ದಂಗಲ್ ಆರಂಭಗೊಂಡಿದೆ.
ಕೆಲವೇ ಕೆಲವು ದಿನಗಳ ಹಿಂದೆ ಬಾಬಾ ಬುಡನ್ ಗಿರಿಯಲ್ಲಿಯೂ ಇದೇ ರೀತಿ ಧರ್ಮ ದಂಗಲ್ ನಡೆದಿತ್ತು. ಚಂದ್ರದೋಣ ಪರ್ವತ ಶ್ರೇಣಿಯಲ್ಲಿರುವ ಶ್ರೀಗುರು ದತ್ತಾತ್ರೇಯ ಬಾಬಾ ಬುಡನ್ ಗಿರಿ ಸ್ವಾಮಿ ದರ್ಗಾ ಚರ್ಚಾ ವಿಷಯವಾಗಿ ಮಾರ್ಪಟ್ಟಿತ್ತು. ಇದೀಗ ಈ ಸಾಲಿಗೆ ಮಹಜಿದ್ ಗ್ರಾಮದ ದರ್ಗಾ ಸೇರಿಕೊಂಡಿದೆ.
ಹಿಂದೂಗಳು ಮಾಡುತ್ತಿರುವ ಆರೋಪಕ್ಕೆ ಪುರಾವೆ ಎಂಬಂತೆ ದರ್ಗಾದ ಒಳಗೆ ಕಲ್ಲಿನ ಕಂಬಗಳಲ್ಲಿ ಹೂವಿನ ಚಿತ್ರಗಳ ಕೆತ್ತನೆಯಿದೆ. ಅಲ್ಲದೇ ದರ್ಗಾದ ಒಳಗೆ ನೋಡಲು ಥೇಟ್ ಹಿಂದೂ ದೇವಾಲಯದಂತೆಯೇ ವಾಸ್ತುವನ್ನು ಹೊಂದಿದೆ. ಇದೆ ಕಾರಣಕ್ಕೆ ದರ್ಗಾಕ್ಕೆ ಗುಂಬಜ್ ನಿರ್ಮಾಣ ಮಾಡಲು ಹಿಂದೂ ಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿವೆ. ಜಿಲ್ಲಾಡಳಿತ ಈ ವಿಚಾರವಾಗಿ ಮಧ್ಯ ಪ್ರವೇಶ ಮಾಡಬೇಕು ಹಾಗೂ ಇದು ಹಿಂದೂ ದೇವಾಲಯವೋ ಅಥವಾ ದರ್ಗಾವೋ ಎಂದು ತಿಳಿದುಕೊಳ್ಳಲು ತನಿಖೆ ಆರಂಭಿಸಬೇಕು. ಅಲ್ಲಿಯವರೆಗೂ ದರ್ಗಾದ ಕಾಮಗಾರಿ ನಡೀಬಾರ್ದು ಅಂತಾ ಆಕ್ರೋಶ ಹೊರ ಹಾಕ್ತಿದ್ದಾರೆ.
ಈ ದರ್ಗಾ ವಕ್ಫ್ ಬೋರ್ಡ್ ಅಧೀನದಲ್ಲಿದ್ದು ದರ್ಗಾದ ನವೀಕರಣ ಕಾರ್ಯಕ್ಕೆ ಸರ್ಕಾರದಿಂದ 8 ಲಕ್ಷ ರೂಪಾಯಿ ಮಂಜೂರಾಗಿದೆ. ಆದರೆ ಹಿಂದೂಗಳು ಹೇಳುವ ಪ್ರಕಾರ ಇಲ್ಲಿ ಚಂದ್ರಮೌಳೇಶ್ವರ ದೇವಸ್ಥಾನವಿದ್ದು ಅದನ್ನು ಟಿಪ್ಪು ಸುಲ್ತಾನ ಕೆಡವಿ ದರ್ಗಾ ನಿರ್ಮಿಸಿದ್ದಾನೆ. ಈ ಗ್ರಾಮಕ್ಕೆ ಮೊದಲು ಕಟ್ಟೆಗದ್ದೆ ಅಂತಾ ಕರೆಯಲಾಗ್ತಿತ್ತು. ಬಳಿಕ ಇದನ್ನು ಮಹಜಿದ್ ಗ್ರಾಮ ಅಂತಾ ಮರು ನಾಮಕಾರಣ ಮಾಡಲಾಗಿದೆ ಎಂದು ಆರೋಪಿಸುತ್ತಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ದರ್ಗಾದ ಸುತ್ತ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.