ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಗೆಲುವಿನ ಅಲೆಯಲ್ಲಿ ತೇಲುತ್ತಿದೆ. ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆ ಆಗುವುದೂ ಕಟ್ಟಿಟ್ಟ ಬುತ್ತಿ. ಅಧಿಕಾರದಲ್ಲಿರುವ ಕಾಂಗ್ರೆಸ್ 20ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯುವ ಲೆಕ್ಕಾಚಾರ ನಡೆಯುತ್ತಿದೆ. ಇದೇ ಕಾರಣಕ್ಕೆ ಬಹುತೇಕ ಅನ್ಯ ಪಕ್ಷದ ನಾಯಕರು ಕಾಂಗ್ರೆಸ್ ಕಡೆಗೆ ಮುಖ ಮಾಡುವ ಸಾಧ್ಯತೆಗಳೂ ದಟ್ಟವಾಗುತ್ತಿವೆ. ಈ ನಡುವೆ ಕಾಂಗ್ರೆಸ್ ಪಕ್ಷದ ಒಳಗೆ ಈಗಾಗಲೇ ಟಿಕೆಟ್‌ಗಾಗಿ ಪೈಪೋಟಿ ಶುರುವಾಗುತ್ತಿದ್ದು, ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಟಿಕೆಟ್ ಪೈಪೋಟಿ ಶುರುವಾಗಿದೆ. ಮಾಜಿ ಸಂಸದ ವೀರಪ್ಪಮೊಯ್ಲಿ ವಿರುದ್ದ ಮಾಜಿ ಸಚಿವ ಎಂ.ಆರ್ ಸೀತಾರಾಂ ಗುಡುಗಿದ್ದಾರೆ.

ಎಂ.ಆರ್ ಸೀತಾರಾಂ ಸಂಸತ್ ಟಿಕೆಟ್ ಬಗ್ಗೆ ಹೇಳಿದ್ದೇನು..?
2009ರಲ್ಲಿ ನಾನು ಅಧಿಕೃತ ಅಭ್ಯರ್ಥಿ ಆಗಿ ಪ್ರಚಾರ ಪ್ರಾರಂಭ ಮಾಡಿದ್ದೆ. ಆದರೆ ವೀರಪ್ಪ ಮೊಯ್ಲಿ ಬಂದಿದ್ದರಿಂದ ನನಗೆ ಟಿಕೆಟ್ ಕೈ ತಪ್ಪಿತು. 2014ರಲ್ಲಿಯೂ ಅನಿವಾರ್ಯ ಕಾರಣಗಳಿಂದ ವೀರಪ್ಪ ಮೊಯ್ಲಿಗೆ ಬೆಂಬಲ ಕೊಟ್ಟಿದ್ದೇವೆ. ಮುಂದಿನ ಚುನಾವಣೆಯಲ್ಲಿ ಎಂ.ಆರ್ ಸೀತಾರಾಂ ಅಭ್ಯರ್ಥಿ ಅಂತ ಹೇಳಿದ್ರು. ಮತ್ತೆ 2018ರ ಚುನಾವಣೆಗೆ ಮತ್ತೆ ವೀರಪ್ಪ ಮೊಯ್ಲಿ ಬಂದು ಸೋತರು. ಮೊಯ್ಲಿ ಮತ್ತೆ ಮತ್ತೆ ಬಂದು ನಿಲ್ತಿದ್ದಾರೆ. ಎಲ್ಲಿಯಾದ್ರೂ ಹೋಗಲಿ ಸಾಯೋತನಕ ಅವನೇ ಆಗಲಿ ಅಂತ ಬಿಟ್ಟಿದ್ವಿ. ಆದ್ರೆ ಈ ಬಾರಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ಆದ ಹಾಗೆಯೇ ಲೋಕಸಭೆ ಕ್ಷೇತ್ರವೂ ಆಗುತ್ತದೆ. ಅವಕಾಶ ಕೊಟ್ರೆ ನನ್ನ ಮಗ ಲೋಕಸಭೆ ಕ್ಷೇತ್ರಕ್ಕೆ ಅಭ್ಯರ್ಥಿಯಾಗ್ತಾರೆ. ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ನನ್ನ ಮಗ ಸೇವೆ ಮಾಡಲಿ ಎನ್ನುವ ಮೂಲಕ ಸ್ವಪಕ್ಷದ ನಾಯಕ ವೀರಪ್ಪ ಮೊಯ್ಲಿ ವಿರುದ್ದ ಮಾಜಿ ಸಚಿವ ಎಂ ಆರ್ ಸೀತಾರಾಂ ವಾಗ್ದಾಳಿ ಮಾಡಿದ್ದಾರೆ.

ನಾನು ಚಿಕ್ಕಾಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧೆ ಖಚಿತ..!
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ನಾನು ಚುನಾವಣೆಗೆ ಸ್ಪರ್ಧಿಸೋದು ಖಚಿತ ಎಂದು ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಮಖಂಡ ರಕ್ಷಾರಾಮಯ್ಯ ಹೇಳಿದ್ದಾರೆ. ಮಾಜಿ ಸಚಿವ ಡಾ. ಕೆ. ಸುಧಾಕರ್ ನನ್ನ ವಿರುದ್ಧ ಸ್ಪರ್ಧಿಸಿದ್ರು ಪರವಾಗಿಲ್ಲ. ಸುಧಾಕರ್ ಬಂದ್ರೂ ಒಳ್ಳೆಯದೇ ಅಥವಾ ಬೇರೆ ಯಾರೇ ಬಂದ್ರೂ ಒಳ್ಳೆಯದೇ. ನಾನು ಸ್ಪರ್ಧೆ ಮಾಡ್ತೇನೆ. ಕಳೆದ ಹತ್ತು ವರ್ಷದಲ್ಲಿ ಕಾಂಗ್ರೆಸ್‌ನಲ್ಲಿ ಎಲ್ಲವನ್ನು ಕಳೆದುಕೊಂಡಿದೆ. ಇನ್ನು ಮುಂದಿನ ದಿನಗಳಲ್ಲಿ ಎಲ್ಲವನ್ನೂ ಪಡೆದುಕೊಳ್ಳೋದ್ರಲ್ಲಿ ಎರಡು ಮಾತಿಲ್ಲ ಎಂದಿದ್ದಾರೆ. ರಕ್ಷಾ ರಾಮಯ್ಯ ಹಾಗು ವೀರಪ್ಪ ಮೊಯ್ಲಿ ತಿಕ್ಕಾಟವನ್ನು ಶಾಂತ ಚಿತ್ತದಿಂದ ಉತ್ತರಿಸಿರುವ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಯಾರು ಅನ್ನೋ ಬಗ್ಗೆ ಸುಳಿವು ನೀಡಿದ್ದಾರೆ. ವೀರಪ್ಪ ಮೊಯ್ಲಿ ಹಾಗು ರಕ್ಷಾರಾಮಯ್ಯ ಇಬ್ಬರೂ ಸ್ಪರ್ಧೆ ಮಾಡ್ತಾರೆ. ಇಬ್ಬರೂ ಎರಡು ಬೇರೆ ಬೇರೆ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಾರೆ. ಇಬ್ಬರೂ ಗೆಲುವು ಸಾಧಿಸುತ್ತಾರೆ, ಇವರಿಬ್ಬರ ಗೆಲುವಿಗೆ ನಾನು ಹಗಲಿರುಳು ದುಡಿಯುತ್ತೇನೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

ಕೋಲಾರ, ಚಿಕ್ಕಬಳ್ಳಾಪುರ ಎರಡು ಕ್ಷೇತ್ರಗಳಲ್ಲಿ ಭಾರೀ ಫೈಟ್..!
ರಾಜ್ಯದಲ್ಲಿ 20 ಸಂಸತ್ ಸ್ಥಾನಗಳನ್ನು ಗೆಲ್ಲುವ ಕನಸು ಕಟ್ಟಿಕೊಂಡಿರುವ ಕಾಂಗ್ರೆಸ್, ಕೋಲಾರದಲ್ಲಿ ರಮೇಶ್ ಕುಮಾರ್ ಕೂಡ ಲೋಕಸಭಾ ಚುನಾವಣೆ ಕಡೆಗೆ ಕಣ್ಣು ಹಾಯಿಸುವ ಸಾಧ್ಯತೆಯಿದೆ ಎನ್ನಲಾಗ್ತಿದೆ. ಇನ್ನುಳಿದಂತೆ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಹಾಲಿ ಸಂಸದರಾಗಿರುವ ಬಿಜೆಪಿಯ ಬಚ್ಚೇಗೌಡರು ಕಾಂಗ್ರೆಸ್ ಸೇರಿ ಮತ್ತೆ ಚುನಾವಣೆಗೆ ಸ್ಪರ್ಧೆ ಮಾಡಿದರೂ ಅಚ್ಚರಿಯೇನಿಲ್ಲ ಅನ್ನೋ ಮಾತುಗಳು ಕೇಳಿ ಬಂದಿವೆ. ಒಂದು ವೇಳೆ ಹಾಲಿ ಸಂಸದ ಬಿ.ಎನ್ ಬಚ್ಚೇಗೌಡ ಹಾಗು ರಮೇಶ್ ಕುಮಾರ್ ಸ್ಪರ್ಧೆ ಮಾಡದೆ ಉಳಿದರೆ ವೀರಪ್ಪ ಮೊಯ್ಲಿ ಹಾಗು ರಕ್ಷಾ ರಾಮಯ್ಯ ಕೋಲಾರ ಹಾಗು ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಸಾಧ್ಯತೆ ದಟ್ಟವಾಗಿದೆ. ಲೋಕಸಭಾ ಚುನಾವಣೆ ಇನ್ನೂ ಎಂಟತ್ತು ತಿಂಗಳು ಬಾಕಿ ಇರುವಾಗಲೇ ಕಾಂಗ್ರೆಸ್‌ನಲ್ಲಿ ಪೈಪೋಟಿ ಶುರುವಾಗಿದ್ದು, ಮುಂದಿನ ಕೆಲವೇ ತಿಂಗಳುಗಳಲ್ಲಿ ಚುನಾವಣಾ ಕಾರ್ಯಚಟುವಟಿಕೆ ಗರಿಗೆದರುವ ಸಾಧ್ಯತೆಯಿದೆ.
ಕೃಷ್ಣಮಣಿ