ಭ್ರಷ್ಟಾಚಾರದ ವಿಚಾರದಲ್ಲಿ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಹಿಂದಿನ ಯಾವುದೇ ಕಡುಭ್ರಷ್ಟ ಮಾಜಿ ಮುಖ್ಯಮಂತ್ರಿಗಳಿಗಿಂತ ಭಿನ್ನವೇನಿಲ್ಲ…
2016ರಲ್ಲಿ ಕರ್ನಾಟಕ ಲೋಕಾಯುಕ್ತ ಸಂಸ್ಥೆಯನ್ನು ಸರ್ವನಾಶ ಮಾಡಲು ಪ್ರಯತ್ನಿಸಿದ್ದು, ತಮ್ಮನ್ನು ಮತ್ತು ಭ್ರಷ್ಟರನ್ನು ರಕ್ಷಿಸಿಕೊಳ್ಳಲು ಅದಕ್ಷ ಮತ್ತು ನಿರುಪಯುಕ್ತ ACB ರಚಿಸಿದ್ದು, ಅತೀವ ಜನವಿರೋಧದ ನಡುವೆಯೂ KPSCಗೆ ಕಡುಭ್ರಷ್ಟ ಶ್ಯಾಮ್ ಭಟ್’ರನ್ನು ನೇಮಕ ಮಾಡಿದ್ದು, ಅರ್ಕಾವತಿ ಬಡಾವಣೆಯ Re-do, ಹೀಗೆ ಹತ್ತಾರು ಗಂಭೀರ ಹಗರಣಗಳು ಈ ಹಿಂದಿನ ಅವಧಿಯಲ್ಲಿ ಇದ್ದರೂ, ಸಿದ್ದರಾಮಯ್ಯ ಇವುಗಳ ನೇರ ಫಲಾನುಭವಿ ಅಥವ ಈ ಹಗರಣಗಳಲ್ಲಿ ಅವರ ನೇರ ಪಾತ್ರ ಇದೆ ಎನ್ನುವುದನ್ನು ರಾಜ್ಯದ ಜನರಿಗೆ ಮನವರಿಕೆ ಮಾಡಿಕೊಡಲು ಅಂದಿನ ವಿರೋಧ ಪಕ್ಷಗಳು ಸೋತ ಕಾರಣಕ್ಕೆ ಸಿದ್ದರಾಮಯ್ಯ ಗಂಭೀರ ಸಮಸ್ಯೆಗಳಿಂದ ಮತ್ತು ತನಿಖೆಗಳಿಂದ ಬಚಾವ್ ಆಗಿದ್ದರು. ವಿರೋಧ ಪಕ್ಷಗಳ ಈ ಕರ್ತವ್ಯಲೋಪಕ್ಕೆ ಮುಖ್ಯ ಕಾರಣ ಸಿದ್ದರಾಮಯ್ಯನವರಿಗೆ ವಿರೋಧ ಪಕ್ಷಗಳ ಬಹುತೇಕರೊಂದಿಗೆ–ಅದರಲ್ಲಿಯೂ ವಿಶೇಷವಾಗಿ ರಾಜ್ಯ ಬಿಜೆಪಿ ಪಕ್ಷದ ಉನ್ನತ ನಾಯಕರೊಂದಿಗೆ–ಇದ್ದ ಆತ್ಮೀಯ ಸಂಬಂಧಗಳು ಅಥವಾ ಒಳಒಪ್ಪಂದಗಳು.
ಈಗ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು (MUDA) ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಶ್ರೀಮತಿ ಪಾರ್ವತಿಯವರಿಗೆ ಮೈಸೂರಿನ ಪ್ರತಿಷ್ಠಿತ ಬಡಾವಣೆಯಲ್ಲಿ ಸುಮಾರು 30-40 ಕೋಟಿ ರೂಪಾಯಿ ಬೆಲೆಬಾಳುವ ನಿವೇಶನಗಳನ್ನು ಅಕ್ರಮವಾಗಿ ಮಂಜೂರು ಮಾಡಿದೆ ಎನ್ನುವ ವಿಚಾರವು ಸಿದ್ಧರಾಮಯ್ಯನವರು ತಮ್ಮ ಪ್ರಭಾವವನ್ನು ಸ್ವಂತ ಕುಟುಂಬದ ಲಾಭಕ್ಕೆ ಬಳಸಿದ್ದಾರೆ ಎನ್ನುವುದನ್ನು ಜಗಜ್ಜಾಹೀರು ಮಾಡಿದೆ. MUDAದಲ್ಲಿ ನಡೆದಿರುವ ಈ ಸಾವಿರಾರು ಕೋಟಿ ರೂಪಾಯಿಗಳ ಹಗರಣವು ಸಂಪೂರ್ಣವಾಗಿ ನಿಯಮಬಾಹಿರ, ಕಾನೂನುಬಾಹಿರ ಹಾಗೂ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಪಿತೂರಿ ಮತ್ತು ಸಂಚಿನಿಂದ ಕೂಡಿದೆ.
ದಶಕದ ಹಿಂದೆ ಮುಂಬಯಿಯಲ್ಲಿ ನಡೆದಿದ್ದ ಆದರ್ಶ್ ಹೌಸಿಂಗ್ ಸೊಸೈಟಿ ಹಗರಣದಂತೆಯೇ MUDA ಹಗರಣವೂ ಐದಾರು ಸಾವಿರ ಕೋಟಿ ರೂಪಾಯಿಗಳ ಬಹುದೊಡ್ಡ ಹಗರಣವಾಗಿದ್ದು, ಅದರಂತೆಯೇ ರಾಜ್ಯ ಉಚ್ಚ ನ್ಯಾಯಾಲಯದ ನೇತೃತ್ವದಲ್ಲಿ CBI ತನಿಖೆ ನಡೆದರೆ ಮಾತ್ರ ಈ ಹಗರಣದ ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತದೆ. ಹಾಗಾಗಿ ರಾಜ್ಯ ಸರ್ಕಾರವು ಈ ಕೂಡಲೇ ಈ ಹಗರಣದ ತನಿಖೆಯನ್ನು CBIಗೆ ವಹಿಸಬೇಕೆಂದು KRS ಪಕ್ಷವು ಆಗ್ರಹಿಸುತ್ತದೆ.
- ರವಿ ಕೃಷ್ಣಾರೆಡ್ಡಿ
ರಾಜ್ಯಾಧ್ಯಕ್ಷ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ