ಕಳೆದ ಕೆಲವು ದಿನಗಳಿಂದ ರಾಜಕೀಯ ಹೈಡ್ರಾಮಗಳಿಗೆ ಪಂಜಾಬ್ ಸಾಕ್ಷಿಯಾಗಿತ್ತು. ಆಡಳಿತರೂಢ ಕಾಂಗ್ರೆಸ್‌ನ ಒಳ ಜಗಳದ ಪರಿಣಾಮ ಮುಖ್ಯಮಂತ್ರಿ ಸ್ಥಾನದಿಂದ ಅಮರೀಂದರ್ ಸಿಂಗ್ ಕೆಳಗಿಳಿದಿದ್ದರು.
ಅಮರೀಂದರ್ ತೆರವಿನಿಂದ ಖಾಲಿಯಾದ ಮುಖ್ಯಮಂತ್ರಿ ಪಟ್ಟಕ್ಕೆ ಕೊನೆಗೂ ಒಬ್ಬರನ್ನು ಹೈಕಮಾಂಡ್ ಆಯ್ಕೆ ಮಾಡಿದೆ. ಚರಣಜಿತ್ ಸಿಂಗ್ ಚನ್ನಿಯನ್ನುಪಂಜಾಬ್ ನೂತನ ಮುಖ್ಯಮಂತ್ರಿಯನ್ನಾಗಿ ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಿದೆ. ಆ ಮೂಲಕ ಪಂಜಾಬ್‌ನ ಮೊದಲ ದಲಿತ ಮುಖ್ಯಮಂತ್ರಿಯಾಗಿ ಚರಣಜಿತ್ ಸಿಂಗ್ ಚನ್ನಿ ಆಯ್ಕೆಯಾಗಿದ್ದಾರೆ..
ಪಂಜಾಬ್: ಮುಖ್ಯಮಂತ್ರಿ ಸ್ಥಾನಕ್ಕೆ ʼಕ್ಯಾಪ್ಟನ್ ಅಮರೀಂದರ್ ಸಿಂಗ್ʼ ರಾಜೀನಾಮೆ
ಭಾರತದಲ್ಲಿಯೇ ಶೇಕಡಾವರು ಅತಿ ಹೆಚ್ಚು (ಪಂಜಾಬ್‌ನ ಶೇ.35) ದಲಿತರನ್ನು ಹೊಂದಿರುವ ಪಂಜಾಬ್ ರಾಜ್ಯದಲ್ಲಿ ಇದೇ ಮೊದಲ ಬಾರಿ ದಲಿತ ಸಮುದಾಯಕ್ಕೆ ಸಿಎಂ ಪಟ್ಟ ಒಲಿದಿದೆ.
ಪಂಜಾಬ್‌ನ ಮೊದಲ ದಲಿತ ಮುಖ್ಯಮಂತ್ರಿಯಾಗಿರುವ 58 ವರ್ಷದ ಚರಣಜಿತ್ ಸಿಂಗ್ ಚನ್ನಿ ಅಮರಿಂದರ್ ಸಿಂಗ್ ಸಂಪುಟದಲ್ಲಿ ತಾಂತ್ರಿಕ ಶಿಕ್ಷಣ ಸಚಿವರಾಗಿದ್ದರು. ಅವರು ಚಮಕೌರ್ ಸಾಹಿಬ್ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿದ್ದಾರೆ.
ಪಂಜಾಬ್ ಸಿಎಂ ರಾಜೀನಾಮೆ: ಹಳೆಯ ಬಿಕ್ಕಟ್ಟಿನ ಅಂತ್ಯವೋ? ಹೊಸ ಬಿಕ್ಕಟ್ಟಿನ ಆರಂಭವೋ?
2015 ರಿಂದ 2016 ರವರೆಗೆ ಪಂಜಾಬ್ ವಿಧಾನಸಭೆಯಲ್ಲಿ ಚನ್ನಿ ವಿರೋಧ ಪಕ್ಷದ ನಾಯಕರಾಗಿದ್ದರು. ಅವರನ್ನು ಮಾರ್ಚ್ 2017 ರಲ್ಲಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಸರ್ಕಾರದಲ್ಲಿ ಮಂತ್ರಿಯನ್ನಾಗಿ ಮಾಡಲಾಯಿತು.
“ಪಂಜಾಬಿನ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಚರಣಜಿತ್ ಸಿಂಗ್ ಚನ್ನಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಲು ನನಗೆ ತುಂಬಾ ಸಂತೋಷವಾಗಿದೆ” ಎಂದು ಪಂಜಾಬ್ ಕಾಂಗ್ರೆಸ್ ಉಸ್ತುವಾರಿ ಹರೀಶ್ ರಾವತ್ ಟ್ವೀಟ್ ಮಾಡಿದ್ದಾರೆ.
ಅಮರೀಂದರ್ ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ಕಾಂಗ್ರೆಸ್ ಹಿರಿಯ ನಾಯಕ ಸುಖಜಿಂದರ್ ಸಿಂಗ್ ರಾಂಧವಾ ಸಿಎಂ ಹುದ್ದೆ ಏರಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿರುವುದಾಗಿ ರಾಷ್ಟ್ರೀಯ ಸುದ್ದಿ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ, ಕೊನೆ ಕ್ಷಣಕ್ಕಾಗುವಾಗ ಹೈಕಮಾಂಡ್ ಅಚ್ಚರಿಯ ಘೋಷಣೆ ಮಾಡಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಸುಖಜಿಂದರ್ ಸಿಂಗ್ ರಾಂಧವಾ, “ಇದು ಹೈಕಮಾಂಡ್ ನಿರ್ಧಾರ, ನಾನು ಅದನ್ನು ಸ್ವಾಗತಿಸುತ್ತೇನೆ. ಚನ್ನಿ ನನ್ನ ಕಿರಿಯ ಸಹೋದರನಂತೆ … ನನಗೆ ಯಾವುದೇ ನಿರಾಶೆ ಇಲ್ಲ” ಎಂದು ಹೇಳಿದ್ದಾರೆ.