ದಾವಣಗೆರೆ: ಆದಿಲ್ ಸಾವನ್ನಪ್ಪಿದ್ದಕ್ಕೆ ಚನ್ನಗಿರಿ ಪೊಲೀಸ್ ಠಾಣೆಯ (Channagiri Police Station) ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ಪೊಲೀಸರು ಇಲ್ಲಿಯವರೆಗೆ 11 ಜನರನ್ನು ಬಂಧಿಸಿದ್ದಾರೆ. ಇನ್ನುಳಿದವರಿಗಾಗಿ ಬಲೆ ಬೀಸಿದ್ದಾರೆ.
ಮೊಬೈಲ್ ವಿಡಿಯೋ, ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆ ಮಾಡಿ ಅರೆಸ್ಟ್ ಮಾಡಲಾಗುತ್ತಿದೆ. ಆದಿಲ್ ನ ಅಂತ್ಯಸಂಸ್ಕಾರ ಮುಗಿಯುತ್ತಿದ್ದಂತೆ ಪೊಲೀಸರು ಈ ಕಾರ್ಯಾಚರಣೆಗೆ ಇಳಿದಿದ್ದಾರೆ. ಈಗಾಗಲೇ ಸುಮಾರು 40ಕ್ಕೂ ಅಧಿಕ ಜನರನ್ನು ಗುರುತಿಸಲಾಗಿದೆ. ಈ ಪೈಕಿ 10 ಜನರನ್ನು ವಶಕ್ಕೆ ಪಡೆಯಲಾಗಿದೆ.
ಚನ್ನಗಿರಿ ಪಟ್ಟಣದ ಟಿಪ್ಪು ನಗರದಲ್ಲಿ ಮಟ್ಕಾ ದಂಧೆ ನಡೆಸುತ್ತಿದ್ದ ಅದಿಲ್ ನನ್ನು ಪೊಲೀಸರು ವಶಕ್ಕೆ ಪಡೆದು ಠಾಣೆಯಲ್ಲಿ ವಿಚಾರಣೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಆದಿಲ್ ಗೆ ಬಿಪಿ ಲೋ ಆಗಿ ಕುಸಿದು ಬಿದ್ದು ಸಾವನ್ನಪ್ಪಿದ್ದ. ಇದಕ್ಕೆ ಆಕ್ರೋಶಗೊಂಡ ಅದಿಲ್ ಕುಟುಂಬಸ್ಥರು ಮೃತದೇಹವನ್ನು ಪೊಲೀಸ್ ಠಾಣೆಯ ಮುಂದಿಟ್ಟು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಕೆಲ ಕಿಡಿಗೇಡಿಗಳ ಗುಂಪು ಏಕಾಏಕಿ ಪೊಲೀಸ್ ಠಾಣೆಯ ಮೇಲೆ ಕಲ್ಲು ತೂರಾಟ ನಡೆಸಿತ್ತು. ಠಾಣೆಯ ಮುಂಭಾಗ ಇರುವ ವಾಹನಗಳು, ಗಿಡ, ಕಿಟಕಿ ಗಾಜುಗಳನ್ನು ಧ್ವಂಸ ಮಾಡಿತ್ತು. ಈ ವೇಳೆ 11 ಜನ ಪೊಲೀಸರಿಗೆ ಗಾಯಗಳಾಗಿವೆ.